ADVERTISEMENT

ಗಂಡನಾಚೆ ಜಿಗಿವ ಹೆಣ್ಣಿನ ಸುಡುವ ಪ್ರಶ್ನೆಗಳು

ಡಾ.ಅರುಣ್ ಜೋಳದ ಕೂಡ್ಲಿಗಿ
Published 2 ಅಕ್ಟೋಬರ್ 2014, 19:30 IST
Last Updated 2 ಅಕ್ಟೋಬರ್ 2014, 19:30 IST

ವೇಶ್ಯಾವಾಟಿಕೆ ಕುರಿತ ಬಹುಪಾಲು ಚರ್ಚೆಯ ನಿರೂ­ಪ­ಣೆಗಳು ಪುರುಷ ಪ್ರಧಾನ ವ್ಯವಸ್ಥೆಯ ಚೌಕಟ್ಟಿ­ನಲ್ಲಿ ಹುಟ್ಟುತ್ತಿವೆ. ಆದರೆ ಮಹಿಳಾ ಪ್ರಧಾನ ವ್ಯವಸ್ಥೆಯನ್ನು ಕಲ್ಪಿಸಿಕೊಂಡು ಈ ಚರ್ಚೆಯ ಮತ್ತೊಂದು ಮಗ್ಗುಲನ್ನು ತೆರೆ­ಯಲು ಸಾಧ್ಯವಿದೆ. ಆಗ ಮರೆತ ಮುಖವೊಂದು ಮಸುಕು ಮಸು­ಕಾಗಿ ಕಾಣ­ತೊಡ­ಗುತ್ತದೆ. ಈ ತನಕದ ಚರ್ಚೆಯಲ್ಲಿ ಈ ಮಸುಕು ಮುಖದ ಎಳೆಗಳು ಅಲ್ಲಲ್ಲಿ ಬಂದಿವೆ. ಆದರೆ ಸ್ಪಷ್ಟವಾಗಿ ಗೋಚರಿಸಿಲ್ಲ.

ಮನುಷ್ಯಜೀವಿಗೆ ಆಹಾರ, ವಸತಿ, ಲೈಂಗಿಕತೆ ಮೂಲಭೂತ ಅವಶ್ಯಕತೆಗಳು. ಇವುಗಳನ್ನು ಕುಟುಂಬದಲ್ಲಿ ಪಡೆಯಬೇಕೆ­ನ್ನುವ ನೆಲೆಯಲ್ಲಿ ಸಾಮಾಜಿಕ ಸಂರಚನೆ ಇತ್ತು. ಈಗ ಈ ಮೂಲಭೂತ ಅವಶ್ಯಕತೆಗಳಾದ ಆಹಾರ, ವಸತಿಯು ಕುಟುಂಬದ ಆಚೆಯೂ ಚಲಿಸಿವೆ. ಹೋಟೆಲ್‌ನಲ್ಲಿ ಆಹಾರ, ವಸತಿಗೃಹಗಳಲ್ಲಿ ವಸತಿಯ ಅವಶ್ಯಕತೆ ಈಡೇರುತ್ತಿದೆ. ಆರಂಭ­ದಲ್ಲಿ ಈ ಎರಡೂ ಟೀಕೆಗೆ ಒಳಗಾಗಿದ್ದವು. ಹಳ್ಳಿಗಳಲ್ಲಿ ಹೋಟೆಲ್‌­ಗಳಿಗೆ ಹೋದ ಮಗ ಕೆಟ್ಟನೆಂದು ಆತಂಕ ವ್ಯಕ್ತ­ಪಡಿ­ಸುತ್ತಿದ್ದರು.

ಇನ್ನು ಹೆಣ್ಣು ಹೋಟೆಲ್ ಪ್ರವೇಶಿಸಿದರೆ ಘನ­ಘೋರ ಅಪರಾಧವಾಗಿತ್ತು. ಹಳ್ಳಿಯಲ್ಲಿ ನಗರ ಕೇಂದ್ರಿತ ಚಾಲಾಕಿ ಹೆಣ್ಣನ್ನು ‘ಅವಳೇನು ಲಾಡ್ಜಲ್ಲಿ ಇದ್ದು ಬಂದವಳು’ ಎಂದು ಹೀಯಾಳಿಸುವುದಿದೆ. ನಗ­ರದ ವಸತಿಗೃಹಗಳಲ್ಲಿ ಉಳಿವ ಪುರುಷರನ್ನೂ ಅನುಮಾನದಿಂದ ನೋಡಲಾಗುತ್ತದೆ. ಈಗಲೂ ಹಲವು ಗ್ರಾಮೀಣರ ಗ್ರಹಿಕೆಯಲ್ಲಿ ಲಾಡ್ಜ್ ಎಂದರೆ ಕುಟುಂಬದಾಚೆಯ ಲೈಂಗಿಕತೆಯ ತಾಣವೆಂಬ ಅಭಿಪ್ರಾಯ ಇದೆ. ಇನ್ನು ಕುಟುಂಬ ಕೇಂದ್ರಿತ ಉದ್ಯೋಗ, ಶಿಕ್ಷಣ ಮುಂತಾದವು ರಾಜ್ಯ, ದೇಶಗಳ ಗಡಿ ದಾಟಿವೆ.

ಹೀಗೆ ಕುಟುಂಬದ ಚೌಕಟ್ಟಿನಾಚೆಗೆ ಆಹಾರ, ವಸತಿ ಒಪ್ಪಿತ­ವಾಗಿವೆ. ಇದು ಕೂಡ ಗಂಡಿನ ಅಗತ್ಯ ಪೂರೈಕೆಗಾಗಿ ಎನ್ನುವು­ದನ್ನು ಮರೆಯು­ವಂತಿಲ್ಲ. ಇವುಗಳನ್ನು ಹೊರತುಪಡಿಸಿದ ಮೂಲ­­ಭೂತ ಅವಶ್ಯಕತೆ ಲೈಂಗಿಕತೆ. ಇದು ಕೂಡ ಸಮಾಜದ ಒಪ್ಪಿತ ವ್ಯವಸ್ಥೆಯಾಗಬೇಕೆಂಬ ಕೂಗು ಎದ್ದಿದೆ. ಅದಕ್ಕೆ ಬೆಂಬ­ಲ­ವಾಗಿಯೋ ವಿರೋಧವಾಗಿಯೋ ಚರ್ಚೆ ನಡೆಯುತ್ತಿದೆ. ಇನ್ನೊಂದೆಡೆ ಲೈಂಗಿಕ ಕಾರ್ಯಕರ್ತೆಯರಿಗೆ ಪರ್ಯಾಯ ಉದ್ಯೋಗ ನೀಡಿ ಈ ಚಟುವಟಿಕೆ­ಯಿಂದ ದೂರ ಇಡ­ಬೇಕೆ­ನ್ನುವಂಥ ಆಯಾ­ಮವೂ ಇದೆ. ಸೂಕ್ಷ್ಮವಾಗಿ ಗಮನಿಸಿದರೆ ಈ ಚರ್ಚೆ ಕುಟುಂಬದಾಚೆಯ ಊಟ, ವಸತಿ­ಗಿರುವ ವ್ಯವಸ್ಥೆಯನ್ನು  ರದ್ದು­ಪಡಿಸಿ ಪರ್ಯಾಯ ಕಲ್ಪಿಸ­ಬೇಕು ಎನ್ನುವಲ್ಲಿಗೆ ಲಗತ್ತಾಗುತ್ತದೆ.

ಇಲ್ಲೊಂದು ಸಂಗತಿಯನ್ನು ಗಮನಿಸಬೇಕು. ಗಂಡು ಕುಟುಂಬದಾಚೆಯ ಲೈಂಗಿ­­ಕತೆಯನ್ನು ಈಡೇರಿಸಿ­ಕೊಳ್ಳಲು ಲೈಂಗಿಕ ಕಾರ್ಯಕರ್ತೆಯ ಬಳಿ ಹೋಗುತ್ತಾನೆ. ಹೀಗೆ ಹೋಗಿಯೂ ಆತ ಅಪ್ಪ, ಅಮ್ಮ, ಹೆಂಡತಿ, ಮಕ್ಕಳ ಜತೆ ಯಾವ ಫರಕಿಲ್ಲದೆ
ಜೀವಿ­ಸು­­ತ್ತಾನೆ. ಆದರೆ ಅತೃಪ್ತ ಗಂಡಸ­ರಿಗೆ ಲೈಂಗಿಕತೆಯನ್ನು ಪೂರೈ­ಸಿದ ಬಹುಪಾಲು ಹೆಣ್ಣುಗಳು ಒಂಟಿಯಾಗುತ್ತಾರೆ ಅಥವಾ ತನ್ನ ಹಾಗೆ ಇರುವವರ ಜತೆ ಬದುಕಬೇಕಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಲೈಂಗಿಕ ಕಾರ್ಯಕರ್ತೆಯರ ಸಮೂಹ ಸೃಷ್ಟಿಯಾಗತೊಡಗುತ್ತದೆ. ಇವರು ಕುಟುಂಬದ ನೆರವಿಲ್ಲದೆ ಅಭದ್ರ­ರಾಗುತ್ತಾರೆ. ಈ ಕಾರ­ಣಕ್ಕೆ ಮತ್ತದೇ ಗಂಡಸರಿಂದ ಶೋಷ­­ಣೆಗೆ ಒಳಗಾಗುತ್ತಾರೆ.

ಒಂದು ವೇಳೆ ಕುಟುಂಬ­ದಾಚೆಯ ಲೈಂಗಿ­ಕತೆಯನ್ನು ಈಡೇರಿಸಿಕೊಂಡೂ ಅಪ್ಪ– ಅಮ್ಮ ಅಥವಾ ಅತ್ತೆ, ಮಾವ, ಗಂಡ, ಮಕ್ಕಳ ಜತೆ ಉಳಿಯುವಂತಾಗಿದ್ದರೆ? ಇದೊಂದು ಸಮಸ್ಯೆಯಾಗಿ ನಮ್ಮ ಮುಂದೆ ಇರುತ್ತಿರಲಿಲ್ಲ. ಇದು ಅಷ್ಟು ಸರಳವೂ ಅಲ್ಲ.
ಗಂಡು ಕುಂಟುಂಬದಾಚೆ ಲೈಂಗಿಕ ಬಯಕೆ­ಯನ್ನು ಈಡೇರಿ­ಸಿ­ಕೊಳ್ಳಲಿಕ್ಕೆ ಕೆಲವು ಕಾರಣ­ಗಳಿವೆ. ಲೈಂಗಿಕ ಅತೃಪ್ತಿ, ಕುಟುಂಬ­ದಿಂದ ದೂರವಿದ್ದ ಬಹು­ದಿನದ ಒಂಟಿತನ, ತಡ­ವಾದ ಮದುವೆ, ಲೈಂಗಿಕ ಚಟು­ವಟಿಕೆಗೆ ಸಹಕರಿಸದ ಅನಾ­ರೋಗ್ಯಕ್ಕೆ ತುತ್ತಾದ ಮಡದಿ, ಹೆಂಡತಿ­ಯಿದ್ದೂ ಬೇರೆಯವ­ರೊಂದಿಗೆ ಲೈಂಗಿಕ ಆಸಕ್ತಿಯನ್ನು ಪೂರೈಸಿಕೊಳ್ಳುವ ವಾಂಛೆ, ವಿಧುರತೆ, ಇನ್ನೂ ಕೆಲ ಕಾರಣ­ಗಳನ್ನು ಜೋಡಿ­ಸಬಹುದು. ಇದನ್ನೇ ತಿರುಗು­­ಮುರುಗು ಮಾಡೋಣ. ಈ ಎಲ್ಲ ಕಾರಣಗಳು ಕುಟುಂಬ­­ದೊಳಗಿನ ಹೆಣ್ಣಿಗೂ ಇವೆ, ಆದರೆ ಅವನ್ನೇ ಮುಂದು ಮಾಡಿ ಅವಳು ಪತಿ­ಯಾ­ಚೆ­­ಗಿನ ಲೈಂಗಿ­ಕತೆ­ಯನ್ನು ಈಡೇರಿಸಿಕೊಳ್ಳು­ವಂತಿಲ್ಲ, ಅದನ್ನು ನಿರ್ಬಂಧಿಸಲಾಗಿದೆ.

ಒಂದು ಪಕ್ಷ ಈ ಕಟ್ಟಳೆ ಇಲ್ಲವಾಗಿದ್ದರೆ ಅಥವಾ ಮಹಿಳಾ ಪ್ರಧಾನ ವ್ಯವಸ್ಥೆಯನ್ನು ಕಲ್ಪಿಸಿ­ಕೊಳ್ಳುವುದಾದರೆ, ಮಹಿಳಾ ವೇಶ್ಯೆ­ಯರ ಹಾಗೆ ಪುರುಷ ವೇಶ್ಯೆಯರು  ದೊಡ್ಡ ಮಟ್ಟ­ದಲ್ಲಿ ಇರು­ತ್ತಿ­ದ್ದರು ಅಥವಾ ಪುರುಷ, ಸ್ತ್ರೀ ಪ್ರಧಾನವಲ್ಲದ ಸಮಸಮಾಜವನ್ನು ಕಲ್ಪಿಸಿ­ಕೊಂಡರೆ ಇಂತಹ­ದ್ದೊಂದು ಸಂಗತಿ ಸಮಸ್ಯೆಯಾಗಿ ಕಾಣುತ್ತಿರ­ಲಿಲ್ಲ. ಅಂದರೆ ಕುಟುಂಬದಾಚೆಯ ಲೈಂಗಿಕತೆಗೆ ಪುರುಷನಂತೆ ಮಹಿಳೆಗೂ ಕಾರಣಗಳಿವೆ. ಆದರೆ ಅದನ್ನು ಪುರುಷರಂತೆ ಈಡೇ­ರಿಸಿಕೊಳ್ಳದೆ ಬಹು­ಪಾಲು ಮಹಿಳೆಯರು ತಟಸ್ಥವಾಗಿ­ದ್ದಾರೆ. ಈಡೇ­ರಿಸಿ­ಕೊಂಡರೂ ಅದು ಅನೈತಿಕತೆಗೆ ಸಿಲುಕಿ ಕುಟುಂಬ ಛಿದ್ರವಾಗುವ ಸಾಧ್ಯತೆಯೇ ಹೆಚ್ಚಿದೆ. ಹೀಗೆ ಛಿದ್ರ­ಗೊಂಡ ಕುಟುಂಬದಿಂದ ಅನಿ­ವಾರ್ಯ­ವಾಗಿ ವೇಶ್ಯಾವಾಟಿಕೆಗೆ ಬಂದವರೂ ಇದ್ದಾರೆ. ಹೀಗೆ ಈ ಸಮಸ್ಯೆ ಒಂದರೊಳಗೊಂದು ತಳಕು ಹಾಕಿಕೊಂಡಿದೆ.

ಹೀಗೆ ಪಾರಂಪರಿಕವಾಗಿ ಬಹುತೇಕ ಮಹಿಳೆ­ಯರು ಕುಟುಂಬಕ್ಕೆ ಬದುಕನ್ನು ಹೊಂದಿಸಿ­ಕೊ­ಳ್ಳಲು ತಮ್ಮ ಲೈಂಗಿಕ ಬಯಕೆ­ಗಳನ್ನು ಹತ್ತಿಕ್ಕಿ­ದ್ದಾರೆ. ಕುಟುಂಬದಾಚೆಯ ಲೈಂಗಿಕತೆ­ಯನ್ನು ಅದುಮಿಟ್ಟುಕೊಂಡ ಗಂಡ­ಸರೂ ಇಲ್ಲ­ವೆಂತಲ್ಲ. ಆ ಸಂಖ್ಯೆ ತೀರಾ ಕಡಿಮೆ. ಕಾರಣ ಗಂಡಿನ ಕುಟುಂಬದಾಚೆಯ ಲೈಂಗಿಕ ಬಯಕೆ­ಯನ್ನು ಅನಿವಾರ್ಯವಾಗಿ ಹತ್ತಿಕ್ಕದಿ­ರಲು ವ್ಯವಸ್ಥೆ ದಾರಿಗಳನ್ನು ಕಲ್ಪಿಸಿದೆ. ಆ ದಾರಿ­ಗಳಿಗೆ ಮಾನ್ಯತೆ ದೊರೆ­ಯಬೇಕೆಂಬ ಕೂಗು ಈಗ ಎದ್ದಿದೆ. ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿ­ಸು­ವು­ದೆಂದರೆ ಪುರುಷರ ಕುಟುಂಬದಾ­ಚೆಯ ಲೈಂಗಿಕತೆಯನ್ನು ಮಾನ್ಯ ಮಾಡಿ­ದಂತೆ. ಹೀಗಾ­ಗುವು­ದಾದರೆ ಕುಟುಂಬದೊಳಗಿದ್ದೂ, ನಾನಾ ಕಾರಣಗಳಿಂದ ಲೈಂಗಿಕವಾಗಿ ಅತೃಪ್ತರಾದ ಹೆಣ್ಣು ಮಕ್ಕಳು ನಾಗರಿಕ ಸಮಾಜದೆದುರು ತಮ್ಮ ಪ್ರಶ್ನೆಗಳನ್ನು ಮುಂದಿ­ಡುತ್ತಾರೆ.

ಅದೇನೆಂದರೆ, ನಮಗೂ ಗಂಡನಾಚೆಯ ಸಂಬಂಧ ಹೊಂದಿ ನಮ್ಮ ಲೈಂಗಿಕ ಬಯಕೆಗಳನ್ನು ಈಡೇರಿಸಿ­ಕೊಳ್ಳುವ ಇಚ್ಛೆ ಇದೆ. ಕೆಲವರು ಕದ್ದುಮುಚ್ಚಿ ಪಡೆದು­ಕೊಂಡರೆ, ಇನ್ನು ಕೆಲವರು ಆಳದ ಆಸೆಯನ್ನು ತಾವೇ ತುಳಿ­ದಿದ್ದಾರೆ. ಈಗ ಆ ಆಸೆಗೆ ಜೀವ ಬಂದಿದೆ. ನಮಗೂ ನ್ಯಾಯ ಕೊಡಿ? ಕುಟುಂಬದಾಚೆಯ ಊಟ, ವಸತಿಯ ಪರ್ಯಾಯ­ಗಳು ಪುರುಷನ ಕಾರಣಕ್ಕೇ ಆರಂಭವಾದರೂ, ಈಗದನ್ನು ನಾವೂ ಬಳಸುತ್ತಿಲ್ಲವೆ?

ಪುರುಷರ ಕಾರಣಕ್ಕೆ ಮಹಿಳಾ ವೇಶ್ಯಾವಾಟಿಕೆ ಹುಟ್ಟಿರ­ಬಹುದು, ಈಗ ನಮಗಾಗಿ ಪುರುಷ ವೇಶ್ಯಾವಾಟಿಕೆ ಹುಟ್ಟಲಿ ಬಿಡಿ, ನಾವೂ ಇದರ ಫಲಾನುಭವಿಗಳಾಗುತ್ತೇವೆ, ನಮ್ಮ ಬಯ­ಕೆಗೂ ಮಾನ್ಯತೆ ನೀಡಿ. ಕುಟುಂಬದ ಚೌಕಟ್ಟಿನಲ್ಲಿ ಬಂಧಿ­ಸಲ್ಪಟ್ಟ ನಮ್ಮ ಆಸೆಗಳನ್ನು ಇನ್ನಾದರೂ ನಾವು ಬಿಡುಗಡೆ­ಗೊಳಿಸಲು ಸಿದ್ಧಗೊಂಡಿದ್ದೇವೆ. ನಿಮ್ಮ ಒಪ್ಪಿಗೆಗಾಗಿ ಕಾಯು­ವಷ್ಟು ಒಳ್ಳೆಯತನವೂ ನಮಗಿಲ್ಲ... ಎಂಬಂತಹ ಮಾತು ಮತ್ತು ಪ್ರಶ್ನೆಗಳು ಸಿಡಿಗುಂಡಿನಂತೆ ಕಿವಿಗೆ ಅಪ್ಪಳಿಸಬಹುದು, ಆದರೂ ಇದೇ ವಾಸ್ತವ. ನಾಗರಿಕ ಸಮಾಜ ಈ ಮಾತು­ಗಳನ್ನು ಕೇಳಿಸಿಕೊಳ್ಳಲೇ­ಬೇಕಾಗಿದೆ. ಇಂತಹ ಸುಡುವ ಪ್ರಶ್ನೆ­ಗಳನ್ನು ಎದುರುಗೊಳ್ಳುವ ನೆಲೆಯಲ್ಲಿ ವೇಶ್ಯಾವಾಟಿಕೆಯನ್ನು ಕಾನೂನು ಬದ್ಧಗೊಳಿಸುವ ಸಂಗತಿಯನ್ನು ತುಂಬಾ ಸೂಕ್ಷ್ಮವಾಗಿ ಪರಿಶೀಲಿಸಬೇಕಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.