ಪ್ರತಿ ಚುನಾವಣೆಯಲ್ಲೂ ಮತದಾನ ಕೇಂದ್ರಗಳಲ್ಲಿ ಚುನಾವಣಾ ಸಿಬ್ಬಂದಿಗಳು ಒಂದಲ್ಲೊಂದು ಎಡವಟ್ಟು ಮಾಡುವ ವರದಿಗಳು ಬರುತ್ತವೆ. ಈ ಬಾರಿಯೂ ಅನೇಕ ಕಡೆಗಳಲ್ಲಿ ತೋರು ಬೆರಳಿಗೆ ಶಾಯಿ ಹಚ್ಚಿದ ಮತ್ತಿತರ ತಪ್ಪುಗಳನ್ನು ಮಾಡಿದ ವರದಿಗಳು ಬಂದಿವೆ.
ಪ್ರತಿ ಸಾರಿಯೂ ಚುನಾವಣಾ ಸಿಬ್ಬಂದಿಗಳಿಗೆ ಸರಿಯಾದ ತರಬೇತಿ ನೀಡುತ್ತಾರೆ. ಅಂತಹ ತರಬೇತಿ ಸಂದರ್ಭದಲ್ಲಿ ಅಧಿಕೃತ ರಾಜಕೀಯ ಪಕ್ಷಗಳ ಪ್ರತಿನಿಧಿಗಳನ್ನೂ ಚುನಾವಣಾಧಿಕಾರಿಗಳು ಆಹ್ವಾನಿಸುತ್ತಾರೆ. ಅಲ್ಲಿ ಅಂತಹ ಪ್ರತಿನಿಧಿಗಳೂ ಸಹ ತಮಗೆ ಅವಶ್ಯವಿರುವ ಸ್ಪಷ್ಟೀಕರಣ ಪಡೆದುಕೊಳ್ಳಲು ಅವಕಾಶವಿರುತ್ತದೆ. ಅಂತಹ ಹಲವಾರು ಸಭೆಗಳಲ್ಲಿ ಪಕ್ಷದ ಪ್ರತಿನಿಧಿಯಾಗಿ ನಾನು ಭಾಗವಹಿಸಿದ್ದೇನೆ. ಅನೇಕ ಸಂದರ್ಭಗಳಲ್ಲಿ ತರಬೇತಿ ಪಡೆಯಬೇಕಾದವರು ಅಲ್ಲಿ ತಿಳಿಸುವ ಮಾಹಿತಿಗಳನ್ನು ಪಡೆಯುವಲ್ಲಿ ನಿರಾಸಕ್ತಿ ತೋರುವುದನ್ನೂ ಕಂಡಿದ್ದೇನೆ.
ಮೊನ್ನೆ ನಡೆದ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ನಡೆದ ಘಟನೆ: ಸೊರಬ ಪಟ್ಟಣದ ಒಂದು ಶಾಲೆಯಲ್ಲಿ ಎರಡು ಮತ ಕೇಂದ್ರಗಳಿದ್ದವು. ಬೆಳಿಗ್ಗೆಯೇ ಮತ ಚಲಾವಣೆ ಮಾಡಲು ಅಲ್ಲಿಗೆ ಹೋದ ಮತದಾರರು ಚುನಾವಣಾಧಿಕಾರಿಗಳು ವಿತರಿಸಿದ್ದ ಮತ ಚೀಟಿಯನ್ನು ಮಾತ್ರ ತೆಗೆದುಕೊಂಡು ಹೋಗಿದ್ದರು. ಆದರೆ ಆ ಎರಡೂ ಮತಕೇಂದ್ರದ ಅಧಿಕಾರಿಗಳು ಆ ಚೀಟಿಯ ಜೊತೆಗೆ ಗುರುತಿನ ಚೀಟಿ ಅಥವಾ ಮತ್ತಾವುದಾದರೂ ಗುರುತಿನ ದಾಖಲೆಯನ್ನು ತರಲೇಬೇಕೆಂದು ಹೇಳಿ ಮತದಾರರನ್ನು ವಾಪಸ್ ಕಳುಹಿಸುತ್ತಿದ್ದಾರೆಂದು ರಾಜಕೀಯ ಪಕ್ಷವೊಂದರ ಮತಗಟ್ಟೆ ಕಾರ್ಯಕರ್ತರ ಉಸ್ತುವಾರಿ ಜವಾಬ್ದಾರಿ ಹೊಂದಿದ್ದ ನನಗೆ ತಿಳಿಯಿತು. ನಾನೂ ಸಹಾ ಅದೇ ಮತಗಟ್ಟೆಯ ಮತದಾರನಾದ್ದರಿಂದ ನೇರವಾಗಿ ಅಲ್ಲಿಗೆ ಹೋಗಿ ವಿಚಾರಿಸಿದೆ. ನನಗೂ ಅದೇ ಉತ್ತರ ದೊರೆಯಿತು. ಅಷ್ಟೇ ಅಲ್ಲ. ನಮಗೆ ತರಬೇತಿಯಲ್ಲಿ ಹೀಗೇ ಹೇಳಿದ್ದಾರೆಂದು ಅಧಿಕಾರಿ ವಾದಿಸಿದರು. ನಾವು ಸಹಾಯಕ ಚುನಾವಣಾಧಿಕಾರಿಗೆ ಫೋನ್ ಮಾಡಿ ವಿಷಯ ತಿಳಿಸಿ, ಅವರೇ ಸ್ಥಳಕ್ಕೆ ಬಂದು ಅಧಿಕಾರಿಗಳಿಗೆ ತಿಳಿಸಿ ಹೇಳಿದ ನಂತರವಷ್ಟೇ ಮತ ಚಲಾಯಿಸಲು ಸಾಧ್ಯವಾಯಿತು. ಮತಗಟ್ಟೆ ಪ್ರಧಾನ ಅಧಿಕಾರಿ ಸಾಕಷ್ಟು ವಿದ್ಯಾವಂತರಿದ್ದು ಜವಾಬ್ದಾರಿ ಸ್ಥಾನದ ಅಧಿಕಾರಿ ಆಗಿರುತ್ತಾರೆ. ಸರ್ಕಾರ ವಿತರಿಸಿದ ಮತಚೀಟಿಯ ಹಿಂಭಾಗದಲ್ಲೇ ಅದನ್ನು ಗುರುತಿನ ಚೀಟಿಯಾಗಿ ಪರಿಗಣಿಸಬಹುದು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಇಷ್ಟು ಸಾಮಾನ್ಯ ಜ್ಞಾನವನ್ನೂ ಅಧಿಕಾರಿಗಳು ಹೊಂದಿರದಿದ್ದರೆ ಮತದಾರ ಏನು ಮಾಡಬೇಕು. ವಿಶೇಷವಾಗಿ ನಗರ ಹಾಗೂ ಪಟ್ಟಣ ಪ್ರದೇಶಗಳ ಮತದಾರರು ಮತ ಚಲಾವಣೆಗೆ ನಿರ್ಲಕ್ಷ್ಯ ತೋರುವ ಈ ದಿನಗಳಲ್ಲಿ ಒಮ್ಮೆ ಮತಕೇಂದ್ರಕ್ಕೆ ಬಂದು ಹೋದ ಮತದಾರನನ್ನು ಪುನಃ ಕರೆತರುವುದು ಕಷ್ಟದ ಸಂಗತಿ.
ಸಾಗರ ತಾಲ್ಲೂಕಿನ ಮತಕೇಂದ್ರವೊಂದರಲ್ಲಿ ಚಾಲೆಂಜ್ ವೋಟ್ ವಿಷಯ ವರದಿಯಾಗಿದೆ.
ಮತ ಚಲಾವಣೆ ಪ್ರಕ್ರಿಯೆಯಲ್ಲಿ ಚಾಲೆಂಜ್ ವೋಟ್ ಮತ್ತು ಟೆಂಡರ್ ವೋಟ್ ಎಂಬ ಎರಡು ವಿಧಗಳಿವೆ. ಇವೆರಡಕ್ಕೂ ಬಹಳ ವ್ಯತ್ಯಾಸವಿದೆ. ಒಬ್ಬ ಮತದಾರ ಮತ ಚಲಾಯಿಸಲು ಬಂದಾಗ ಅವನು ಆ ಮತದಾರ ಅಲ್ಲ ಎಂದು ಯಾವುದಾದರೂ ಏಜೆಂಟ್ ಆಕ್ಷೇಪಿಸಿದರೆ ಆಗ ಅಂತಹ ಏಜೆಂಟನಿಂದ 2 ರೂಪಾಯಿ ಪಡೆದು ಆ ಮತದಾರ ನಿಜವಾದ ಮತದಾರ ಹೌದೋ ಅಲ್ಲವೋ ಅಂತ ವಿಚಾರಣೆ ನಡೆಸುತ್ತಾರೆ. ಆ ಮತದಾರ ನಿಜವಾದ ಮತದಾರ ಎಂದು ಖಚಿತವಾದರೆ ಅವನಿಗೆ ಮತ ಚಲಾಯಿಸಲು ಅವಕಾಶ ಕೊಡುತ್ತಾರೆ. ಆಗ ಎರಡು ರೂಪಾಯಿ ಶುಲ್ಕ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳುತ್ತಾರೆ. ಆ ಮತದಾರ ನಿಜವಾದ ಮತದಾರನಲ್ಲ ಎಂದು ಸಿದ್ಧವಾದರೆ ಅವನಿಗೆ ಮತಹಕ್ಕು ನಿರಾಕರಿಸಿ 2 ರೂ. ಗಳನ್ನು ಆಕ್ಷೇಪಿಸಿದ ಏಜೆಂಟರಿಗೆ ವಾಪಸ್ ಕೊಡುತ್ತಾರೆ. ಇದಕ್ಕೆ ಚಾಲೆಂಜ್ ವೋಟ್ ಅಂತ ಹೆಸರು. ಟೆಂಡರ್ ವೋಟ್ ಎಂದರೆ ನಿಜವಾದ ಮತದಾರ ಬರುವ ಮೊದಲೇ ಮತ್ತೊಬ್ಬ ಅವನ ಹೆಸರಿನಲ್ಲಿ (ಯಾರ ಗಮನಕ್ಕೂ ಬರದೇ) ಮತ ಚಲಾಯಿಸಿದರೆ ನಂತರ ನಿಜವಾದ ಮತದಾರ ಬಂದರೆ ಅವನು ನಿಜವಾದ ಮತದಾರ ಎಂದು ಖಚಿತಪಡಿಸಿಕೊಂಡು ಅವನಿಗೆ ಮತ ಚಲಾವಣೆಗೆ ಅವಕಾಶ ಕೊಡುತ್ತಾರೆ. ಮತ್ತು ಆ ಮತವನ್ನು (ಬ್ಯಾಲೆಟ್) ಪ್ರತ್ಯೇಕ ಲಕೋಟೆಯಲ್ಲಿಟ್ಟು ಸೀಲ್ ಮಾಡುತ್ತಾರೆ. ಇದಕ್ಕೆ ಎರಡು ರೂಪಾಯಿ ಕೊಡಬೇಕಾಗಿಲ್ಲ. ಮತ್ತು ಅದನ್ನು ಎಣಿಕೆಯಲ್ಲಿ ಸೇರಿಸುವುದೂ ಇಲ್ಲ.
ಇಂತಹ ಪ್ರಕರಣದಲ್ಲಿ ಎರಡನೇ ಬಾರಿಗೆ ಬಂದ ಮತದಾರ ನಿಜವಾದ ಮತದಾರ ಎಂದು ಖಚಿತವಾದಾಗ ಅವನಿಗೆ ಟೆಂಡರ್ ವೋಟ್ ಮಾಡಲು ಕೊಡಬೇಕೇ ಹೊರತು ಚಾಲೆಂಜ್ ವೋಟ್ ಅಲ್ಲ. ಇಂತಹ ಸಾಮಾನ್ಯ ಸಂಗತಿಗಳನ್ನೂ ಗಮನಿಸದ ಸಿಬ್ಬಂದಿಗಳಿಂದ ಮತದಾರರಿಗೆ ಆಗುವ ತೊಂದರೆಗಳು ಅದೆಷ್ಟೋ!
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.