ಜಾಗತೀಕರಣದ ಅನುಭವದಿಂದ ಉಂಟಾಗುತ್ತಿರುವ ‘ಡಿಜಿಟಲ್ ನವೋದಯ’ ಕನ್ನಡಕ್ಕೆ ಈಗ ಅಗತ್ಯವಾಗಿ ಬೇಕು.
ಈ ನೈಜ ಸತ್ಯವನ್ನು ಕನ್ನಡಿಗರು ಅರಿಯಬೇಕು.
ಅರ್ಜುನನ ಮಗ ಅಭಿಮನ್ಯು, ಇವನ ಮಗ ಪರೀಕ್ಷಿತ್. ಇವನ ಮಗ ಜನಮೇಜಯ. ಋಷಿ ಶಾಪದಿಂದ ಪರೀಕ್ಷಿತ್ ಸರ್ಪಕಡಿದು ಸತ್ತಾಗ, ಕ್ರೋಧಗೊಳ್ಳುವ ಜನಮೇಜಯ ಸರ್ಪಸಂತಾನವನ್ನೇ ಇಲ್ಲವಾಗಿಸುವ ಸಂಕಲ್ಪದಿಂದ ‘ಸರ್ಪಯಜ್ಞ’ ಕೈಗೊಳ್ಳುತ್ತಾನೆ. ಜೀವಿಗಳಿಗಿರುವ ಬದುಕುವ ಹಕ್ಕನ್ನು ಇಲ್ಲವಾಗಿಸುವ ಈ ಸರ್ಪಯಜ್ಞದ ಅಗ್ನಿಕುಂಡದಲ್ಲಿ ಸರ್ಪಗಳು ತಾವಾಗಿಯೇ ಬಂದು ಬೀಳುತ್ತಾ ಸುಟ್ಟು ಬೂದಿಯಾಗುತ್ತಿರುತ್ತವೆ. ನಿರಪರಾಧಿ ಸರ್ಪಗಳ ಮಾರಣ ಹೋಮದಿಂದಾಗಿ, ಜನಮೇಜಯರಾಯನಿಗೆ ಸರ್ಪರೋಗ ಬಂದು ಉರಿ ತಡೆಯಲಾಗದೆ ಯಜ್ಞ ನಿಂತು ಹೋಗುತ್ತದೆ. ಜನಮೇಜಯನಿಗೆ ಪ್ರಾಪ್ತಿಯಾದ ಅಮಂಗಳ ಪರಿಹಾರಕ್ಕಾಗಿ ಋಷಿಗಳು ಅವನ ಪೂರ್ವಿಕರ ಪುಣ್ಯಕತೆಯನ್ನು ಕೇಳಬೇಕೆಂದು ಹೇಳುತ್ತಾರೆ. ಆಗ ಮಹಾ ಭಾರತದ ಕಥನ ಆರಂಭವಾಗುತ್ತದೆ.
ಇಡೀ ಮಹಾಭಾರತ ಬಾಲದಿಂದ ತಲೆಯ ಕಡೆಗೆ ಸಾಗುವ ‘ಉಲ್ಟ’ ಕಥನ ಕ್ರಮವಾಗಿದೆ. ‘ಕೇಳು ಜನಮೇಜಯ ಧರಿತ್ರೀಪಾಲ’... ಎಂಬ ಸಂಬೋಧನೆಯ ಹಿನ್ನೆಲೆಯಿದು. 21ನೇ ಶತಮಾನದಲ್ಲಿ ಜಾಗತೀಕರಣದ ಭಾಷೆಯಾಗಿರುವ ಇಂಗ್ಲಿಷ್, ಜನಮೇಜಯರಾಯನ ಸ್ಥಾನದಲ್ಲಿದ್ದು ‘ಭಾಷಾಯಜ್ಞ’ವನ್ನು ನಿರ್ವಹಣೆ ಮಾಡುತ್ತಾ ಮೌಖಿಕ ಪರಂಪರೆಯಲ್ಲಿರುವ ‘ತಾಯಿನುಡಿ’ಗಳನ್ನು ವಂಶನಾಶಕ್ಕೆ ತಳ್ಳುತ್ತಿದೆ.
ರಸ್ತೆಗಳ ಅಗಲೀಕರಣವೆಂಬ ಪ್ರಗತಿ ಪಥಕ್ಕೆ ಪೂರಕವಾಗಿ ಸಾಲು ಮರಗಳು – ಗಿಡಗಂಟಿಗಳು ಮಾರಣ ಹೋಮಕ್ಕೆ ಒಳಗಾಗುತ್ತಿರುವಂತೆ ಭಾಷಿಕ ಜಗತ್ತಿನಲ್ಲಿ ರೋಡ್ ಲೆವಲಿಂಗ್ ಮಾಡುತ್ತಿರುವ ಇಂಗ್ಲಿಷ್ ಭಾಷೆಯು ಲಿಂಗ್ವಿಸ್ಟಿಕ್ ಬುಲ್ಡೋಜರ್ ಆಗಿದ್ದು ವಿಶೇಷವಾಗಿ ವಸಾಹತು ದೇಶಗಳಲ್ಲಿ ತಾಯಿನುಡಿಗಳ ಪಾಲಿಗೆ ಮೃತ್ಯುವಾಗಿ ಪರಿಣಮಿಸಿದೆ.
ನಾಡಾಡಿ ಭಾಷೆಯಾಗಿದ್ದ ಇಂಗ್ಲಿಷಿನ ಸಂವರ್ಧನೆ: ಯೂರೋಪಿನಲ್ಲಿ ಮೊದಲಿಗೆ ಶೈಕ್ಷ ಣಿಕ ವ್ಯಾಸಂಗದಲ್ಲಿ ಇಂಗ್ಲಿಷ್ ಬಳಕೆಯಿರಲಿಲ್ಲ. ಫ್ರೆಂಚ್, ಜರ್ಮನ್, ಇಟಾಲಿಯನ್ ಗ್ರೀಕ್, ರೋಮ್ ಭಾಷೆಗಳನ್ನು ಕಲಿಕೆಯಲ್ಲಿ ಅಳವಡಿಸ ಲಾಗಿದ್ದು ಇಂಗ್ಲಿಷ್ ಮೂಲೆಗುಂಪಾಗಿತ್ತು. ಇಂಗ್ಲಿಷ್ ಭಾಷೆಯು ಕಾಲಕ್ರಮೇಣ ಲಿಪಿ ಯೊಂದಿಗೆ, ಆದಿಕವಿ ಶೇಕ್ಸಪಿಯರ್‌ನ ನಾಟಕ ಗಳಿಂದ ಆರಂಭಗೊಂಡು 500 ವರ್ಷಗಳ ಸಾಹಿತ್ಯ ಪರಂಪರೆಯನ್ನು ಒಳಗೊಂಡು ಪ್ರಮಾಣ ಭಾಷೆಯಾಗುವುದರೊಂದಿಗೆ 20ನೇ ಶತಮಾನದ ಹೊತ್ತಿಗೆ ರವಿಮುಳುಗದ ಸಾಮ್ರಾಜ್ಯ ಭಾಷೆಯಾಗಿ 21ನೇ ಶತಮಾನದಲ್ಲಿ ಜಾಗತಿಕ ನೀತಿ ಮತ್ತು ವಿಶ್ವ ವಾಣಿಜ್ಯ ಒಪ್ಪಂದಗಳಿಂದ ಐಟಿ – ಬಿಟಿ ಭಾಷೆಯಾಗಿ ತನ್ನ ವಿರಾಟ್ ಸ್ವರೂಪವನ್ನು ತೆರೆದು ತೋರುತ್ತಿದೆ.
(1) ಲಿಪಿಯ ಉಗಮ ಮತ್ತು ವಿಕಾಸಗಳು, (2) ಆದಿ ಕವಿಯ ಆಗಮನ, (3) ಸಾಹಿತ್ಯ ಪರಂಪರೆಯ ಸಾಧನೆ, (4) ಪ್ರಮಾಣ ಭಾಷೆಯ ಅವತಾರ, (5) ಸಾಮ್ರಾಜ್ಯ ಭಾಷೆಯಾಗಿ ಪ್ರತಿಷ್ಠಾಪನೆ, (6) ಐಟಿ– ಬಿಟಿ ಭಾಷೆಯಾಗಿ ವಿಶ್ವಮನ್ನಣೆ – ಹೀಗೆ ಕಾಲಕ್ರಮೇಣ ಇಂಗ್ಲಿಷ್ ಭಾಷೆಯು ಸಂವರ್ಧನೆಗೊಂಡು ಭಾಷಿಕ ಸಬಲೀಕರಣದ ಪ್ರಕ್ರಿಯೆಗೆ ಪ್ರತ್ಯಕ್ಷ ಸಾಕ್ಷಿ ಯಾಗಿದೆ. ಇಂಗ್ಲಿಷ್ ಭಾಷೆಯ ಈ ಕ್ರಮ ಪರಿಣಾಮ ಪ್ರಕ್ರಿಯೆಯನ್ನು ಲಕ್ಷ್ಯದಲ್ಲಿಟ್ಟು ಕೊಂಡು ನಾವಿಂದು ದೇಶ ಭಾಷೆಗಳ ಜಾಗತೀ ಕರಣವೆಂಬ ಯೋಜನೆಯನ್ನು ಕೈಗೆತ್ತಿಕೊಳ್ಳು ವುದು ಅಗತ್ಯವಾಗಿದೆ. ಇಂಗ್ಲಿಷಿನ ಮಾದರಿ ಯಲ್ಲೇ ಕನ್ನಡ, ತೆಲುಗು, ತಮಿಳು, ಮರಾಠಿ ಮುಂತಾದ ದೇಶ ಭಾಷೆಗಳು ‘ಭಾಷಾಭಿ
ವೃದ್ಧಿ’ಯನ್ನು ಅನುಷ್ಠಾನಗೊಳಿಸ ಬೇಕಾಗಿದೆ.
ದೇಶ ಭಾಷೆಗಳ ಜಾಗತೀಕರಣ: ದೇಶ ಭಾಷೆಗಳ ಪೈಕಿ ಕನ್ನಡಕ್ಕೆ ವಿಶಿಷ್ಟವಾದ ಸ್ಥಾನವಿದೆ. ರಾತ್ರಿಯ ವೇಳೆ ಬಾನಂಗಳದಲ್ಲಿ ಕಾಣಿಸುವ ಕೃತ್ತಿಕಾ ನಕ್ಷತ್ರಪುಂಜವನ್ನು ಕೋಲಾರ ಜಿಲ್ಲೆಯಲ್ಲಿ ‘ಪಿಲ್ಲಲ ಕೋಡಿ’ (= ಮರಿಗಳ ಕೋಳಿ) ಎಂದು ಕರೆಯುತ್ತಾರೆ. ತಾಯಿ ಕೋಳಿಯು ತನ್ನ ಮಡಿಲಿನಲ್ಲಿ ಮರಿಗಳನ್ನು ಹುದುಗಿಸಿಕೊಂಡು ಕಾಪಾಡಿಕೊಳ್ಳುವಂತೆ ಕನ್ನಡವು ತುಳು, ಕೊಡವ, ಕೊಂಕಣಿ, ಬ್ಯಾರಿ ಭಾಷೆಗಳನ್ನು ತನ್ನ ಮಡಿಲಿನಲ್ಲಿಟ್ಟುಕೊಂಡು ಪೋಷಿಸುತ್ತಿದೆ. ಅಂದರೆ, ಈ ಭಾಷೆಗಳು ತಮ್ಮ ಅಸ್ತಿತ್ವಕ್ಕಾಗಿ ಕನ್ನಡ ಲಿಪಿಯನ್ನೇ ಬಳಸುತ್ತಿವೆ.
ಕೋಲಾರ ಜಿಲ್ಲೆಯಲ್ಲಿ ತೆಲುಗು ಮಾತನಾಡುವವರು ಕೂಡ ತೆಲುಗು ಭಾಷೆಯ ಅಭಿವ್ಯಕ್ತಿಗಾಗಿ ಕನ್ನಡ ಲಿಪಿಯನ್ನೇ ಬಳಸುತ್ತಿದ್ದಾರೆ. ಉದಾಹರಣೆಗೆ ಕೈವಾರದ ತಾತಯ್ಯ, ಗಟ್ಟಹಳ್ಳಿ ಆಂಜನಪ್ಪ, ಮಾಲೂರಿನ ದೊಡ್ಡಿ ವೆಂಕಟಗಿರೆಪ್ಪನವರ ತತ್ವಪದಗಳು ಪ್ರಕಟಗೊಂಡಿರುವುದು ಕನ್ನಡದ ಲಿಪಿಯಲ್ಲೇ. ಕರ್ನಾಟಕದಲ್ಲಿರುವ ಅನ್ಯ ಭಾಷೆ– ಉಪಭಾಷೆಗಳು ಕನ್ನಡ ಲಿಪಿಯನ್ನು ಬಳಸುತ್ತಿರುವ ಬಗೆ ಅನನ್ಯವಾದುದು. ಇಂಥ ಬಳಕೆಯು ಬೇರೆ ರಾಜ್ಯಗಳಲ್ಲಿ ಕಂಡು ಬರುವುದಿಲ್ಲ. ಆದ್ದರಿಂದಲೇ, ಕನ್ನಡವನ್ನು ನಾನು ‘ಪಿಲ್ಲಲ ಕೋಡಿ’ ಎಂದು ಕರೆದಿದ್ದೇನೆ.
ಈ ಸಂದರ್ಭದಲ್ಲಿ ನನಗೆ ಡಿ.ಆರ್. ನಾಗರಾಜ್ ಅವರು ಬರೆದಿರುವ ‘ಕನ್ನಡ ಸಂವರ್ಧನೆ’ ಎಂಬ ಲೇಖನ ನೆನಪಾಗುತ್ತಿದೆ. ಇಲ್ಲಿ ಡಿ.ಆರ್. ಅವರು ಕನ್ನಡ ಭಾಷೆಯ ಸಬಲೀಕರಣದ ಚಿಂತನೆಯನ್ನು ನಡೆಸಿದ್ದಾರೆ. ನೃಪತುಂಗನ ಕಾಲದಲ್ಲಿ ‘ಸಾಮ್ರಾಜ್ಯ ಭಾಷೆ’ ಯಾಗಿದ್ದು ಕನ್ನಡನಾಡಿನಲ್ಲಿ ಪ್ರತಿಷ್ಠಾಪನೆ ಗೊಂಡಿದ್ದ ಕನ್ನಡ ಭಾಷೆಯು ಇಂದು ಸಾಮಂತ ಭಾಷೆಯಾಗಿ ತಲೆತಗ್ಗಿಸಿಕೊಂಡಿದೆ. ಲಿಪಿ, ಆದಿಕವಿ, ಸಾಹಿತ್ಯ ಪರಂಪರೆ, ಪ್ರಮಾಣ ಭಾಷೆ, ಸಾಮ್ರಾಜ್ಯ ಭಾಷೆ, ಐ.ಟಿ. – ಬಿಟಿ ಭಾಷೆ– ಎಂಬ ಕ್ರಮಪರಿಣಾಮ ಪ್ರಕ್ರಿಯೆಯಲ್ಲಿ ಹಾದುಬಂದಿ ರುವ ಕನ್ನಡ ಭಾಷೆಯು ಪ್ರಸ್ತುತ, ಸಾಮಂತ ಭಾಷೆಯಾಗಿರುವುದೊಂದು ದುರಂತ. ಇದು ಸಾಲದು ಎಂಬಂತೆ, ಐಟಿ – ಬಿಟಿ ಭಾಷೆಯಾಗಿ ಜಾಗತೀಕರಣಗೊಳ್ಳುವ ಲಭ್ಯ ಅವಕಾಶಗಳಿಗೆ ಬೆನ್ನು ಮಾಡಿಕೊಂಡಿದ್ದು ಭಾಷಾಭಿವೃದ್ಧಿಗೆ ಎಳ್ಳುನೀರು ಬಿಡುತ್ತಿದೆ. ಇದಕ್ಕೆ ಉದಾಹರಣೆ ಯಾಗಿ ಗೂಗಲ್ ಟ್ರಾನ್ಸಲೇಷನ್ ಭಾಷೆಗಳ ಪಟ್ಟಿಯನ್ನು ಪರಿಶೀಲಿಸಬಹುದು. ಇದರೊಳಗೆ ಅರವತ್ತಕ್ಕೂ ಹೆಚ್ಚು ಭಾಷೆಗಳನ್ನು ಅಳವಡಿಸ ಲಾಗಿದ್ದು ಇವುಗಳ ನಡುವೆ ಆವಕ – ಜಾವಕ ಅಥವಾ ಇಂಟರ್ ಕಾಮ್ ವ್ಯವಸ್ಥೆಯನ್ನು ಬಲಪಡಿಸಬೇಕು. ಈ ದಿಸೆಯಲ್ಲಿ ಹಿಂದಿ, ತಮಿಳು, ತೆಲುಗು, ಬಂಗಾಳಿ ಮುಂತಾದ ದೇಶ ಭಾಷೆಗಳು ಡಬ್ಬಿಂಗ್ ತಂತ್ರಜ್ಞಾನದ ಮೂಲಕ ‘ಟು ವಾಕ್ ವಿತ್ ಇಂಗ್ಲಿಷ್’ ಎಂಬ ಭಾಷಿಕ ನೀತಿಯನ್ನು ಅಳವಡಿಸಿಕೊಂಡಿವೆ.
ವಿಶ್ವಮಟ್ಟದಲ್ಲಿ ಜನತಾ ವಿಶ್ವವಿದ್ಯಾಲಯ ವೆಂಬ ಮನ್ನಣೆ ಪಡೆದಿರುವ ಸಿನಿಮಾ ಜಗತ್ತು ಡಬ್ಬಿಂಗ್ ತಂತ್ರಜ್ಞಾನದ ಮೂಲಕ ಜಾಗತೀಕರಣದ ಭಾಷೆಯಾಗಿರುವ ಇಂಗ್ಲಿಷ್ ನೊಂದಿಗೆ ಗುರುತಿಸಿಕೊಳ್ಳುತ್ತಿದೆ. ಈ ದಿಸೆಯಲ್ಲಿ ನಮ್ಮ ದೇಶ ಭಾಷೆಗಳು ಕೂಡ ಜಾಗತೀಕರಣ ಗೊಳ್ಳುತ್ತಿರುವುದು ಉತ್ತಮ ಬೆಳವಣಿಗೆ. ಒಂದು ಕಾಲದಲ್ಲಿ ಇಂಗ್ಲಿಷಿನ ಸಬ್‌ಟೈಟಲ್‌ಗಳೊಂದಿಗೆ ಪ್ರಸಾರವಾಗುತ್ತಿದ್ದ ಹಾಲಿವುಡ್ ಸಿನಿಮಾಗಳನ್ನು ನಾವು ಇಂದು, ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ಕೇಳಿಸಿಕೊಳ್ಳಲು ಸಾಧ್ಯವಾಗಿದೆ. ಈಗ ಮಾರುಕಟ್ಟೆಯಲ್ಲಿ ಲಭ್ಯವಿರುವ ಡಿಜಿಟಲ್ ವಿಡಿಯೊ ಪ್ಯಾಕೇಜ್‌ನಲ್ಲಿ ಇಂಗ್ಲಿಷ್, ಹಿಂದಿ, ತಮಿಳು, ತೆಲುಗು ಎಂಬ ನಾಲ್ಕು ಭಾಷೆಗಳ ಆಯ್ಕೆಯುಳ್ಳ ಡಿವಿಡಿಗಳು ಸಿಗುತ್ತಿವೆ. ಉದಾ ಹರಣೆಗೆ ‘ಟೆನ್ ಕಮಾಂಡ್‌ಮೆಂಟ್‌್ಸ’ ಎಂಬ ಸಿನಿಮಾವನ್ನು ಸಿಸ್ಟಮ್‌ನಲ್ಲಿಟ್ಟು ಲಾಂಗ್ವೇಜ್ ಆಪ್ಷನ್‌ಗೆ ಹೋಗಿ ‘ಓ.ಕೆ.’ ಮಾಡಿದರೆ ಇಂಗ್ಲಿಷ್, ಹಿಂದಿ, ತಮಿಳು, ತೆಲುಗು ಈ ನಾಲ್ಕು ಭಾಷೆಗಳಲ್ಲಿ ಬೇಕಾದುದನ್ನು ಕೇಳಿಸಿಕೊಳ್ಳ ಬಹುದು. ಇದು ಸಾಧ್ಯವಾಗಿರುವುದು ಡಬ್ಬಿಂಗ್ ತಂತ್ರಜ್ಞಾನದ ಅಳವಡಿಕೆಯಿಂದ. ಇದೇ ಮಾದರಿಯಲ್ಲೇ ಇಂಗ್ಲಿಷಿನ ಸುಪ್ರಸಿದ್ಧ 3 ಡಿ ಆನಿಮೇಷನ್‌ಗಳು, ಕಾಮಿಕ್ಸ ಮಾಲೆಗಳು, ವಿಡಿಯೊ ಚಾನೆಲ್ಲುಗಳು ಮುಂತಾದುವನ್ನು ನಾಲ್ಕು ಭಾಷೆಗಳ ಆಯ್ಕೆಯಲ್ಲಿ ಸ್ವೀಕರಿಸ ಬಹುದು. ಆದರೆ, ಡಬ್ಬಿಂಗ್ ತಂತ್ರಜ್ಞಾನವನ್ನು ವಿರೋಧಿಸುತ್ತಿರುವ ಕನ್ನಡದ ಹಠಮಾರಿ ಧೋರಣೆಯಿಂದ ಕನ್ನಡ ಭಾಷೆಗೆ ತೀವ್ರವಾದ ಹಿನ್ನಡೆ ಉಂಟಾಗಿದೆ.
ಹಿಂದಿ ಭಾಷಿಕರು, ತಮಿಳರು, ತೆಲುಗರು ತಮ್ಮದೇ ತಾಯಿನುಡಿಯಲ್ಲಿ ‘ನಾಲೆಡ್ಜ್ ಅಂಡ್ ಕಿಡ್‌್ಸ’ ವಿಭಾಗದಲ್ಲಿ ಪ್ರಸಾರವಾಗುವ ಅನಿಮಲ್ ಪ್ಲಾನೆಟ್, ನ್ಯಾಷನಲ್ ಜಿಯಾಗ್ರಾಫಿಕ್, ಡಿಸ್ಕ ವರಿ, ಪೊಗೊ ಮುಂತಾದ ಚಾನೆಲ್ಲುಗಳನ್ನು ನೋಡುವ ಅವಕಾಶವನ್ನು ಪಡೆದುಕೊಂಡಿರು ವುದು ಡಬ್ಬಿಂಗ್ ತಂತ್ರಜ್ಞಾನದಿಂದಲೇ! ಇಂಗ್ಲಿಷಿ ನಂತೆ ನಮ್ಮ ದೇಶ ಭಾಷೆಗಳು ಐಟಿ–ಬಿಟಿ ಭಾಷೆ ಯಾಗುವ ಗುರಿಯನ್ನು ಮುಂದಿಟ್ಟು ಕೊಂಡು ಮುನ್ನಡೆಯಬೇಕು. ದೇಶ ಭಾಷೆಗಳ ಜಾಗತೀ ಕರಣವಾಗದಿದ್ದರೆ ಭಾಷಾಭಿವೃದ್ಧಿ ಸಾಧ್ಯವಿಲ್ಲ.
ರಾಜಕೀಯ ಪ್ರಜಾಪ್ರಭುತ್ವವುಳ್ಳ ನಮ್ಮ ದೇಶದಲ್ಲಿ ಭಾಷಿಕ ಪ್ರಜಾಪ್ರಭುತ್ವ ಜಾರಿಗೆ ಬರುವುದು ಅಪೇಕ್ಷಣಿಯ. ಡಬ್ಬಿಂಗ್ ತಂತ್ರ ಜ್ಞಾನವು ಭಾಷಿಕ ಪ್ರಜಾಪ್ರಭುತ್ವದ ಉಸಿರಾಟ ವಾಗಿದೆ. ಇದನ್ನರಿಯದ ಪಟ್ಟಭದ್ರ ಹಿತಾಸಕ್ತಿ ಗಳು ಭಾಷಿಕ ಸರ್ವಾಧಿಕಾರ ಧೋರಣೆಯಿಂದ ಡಬ್ಬಿಂಗ್ ತಂತ್ರಜ್ಞಾನವನ್ನು ವಿರೋಧಿಸುತ್ತಾ ಕನ್ನಡ ಜಗತ್ತನ್ನು ಪ್ರತ್ಯೇಕ ದ್ವೀಪವನ್ನಾಗಿ ಮಾಡಿ, ಕನ್ನಡಕ್ಕೆ ಕಂಟಕಪ್ರಾಯರಾಗಿದ್ದಾರೆ.
ಇತ್ತೀಚೆಗೆ, ಇಂಗ್ಲೆಂಡಿನಲ್ಲಿ ಶೇಕ್ಸಪಿಯರ್ ಸಾಹಿತ್ಯಕ್ಕೆ ಜೆನೆಟಿಕ್ ಸ್ಟೋರೇಜ್ ಡಿವೈಸ್ ಅಳವಡಿಸಲಾಗಿದೆ. ಇದನ್ನು ಕನ್ನಡದಲ್ಲಿ ‘ವಂಶವಾಹಿ ತಂತ್ರಜ್ಞಾನದ ಪಠ್ಯ ನಿರ್ಮಾಣ’ ಎಂದು ಕರೆಯಬಹುದು. ಡಿ.ಎನ್.ಎ. ಯುಗಳ ಸುರುಳಿಯಲ್ಲಿ ನಮ್ಮ ದೇಹಪಠ್ಯದ ದತ್ತಾಂಶವು ಹುದುಗಿರುವುದು ಸರಿಯಷ್ಟೇ! ಇದನ್ನಾಧರಿಸಿ, ಡಿಎನ್‌ಎ ಯುಗಳ ಸುರುಳಿಯಲ್ಲಿ ಶೇಕ್ಸ ಪಿಯರ್ ಪಠ್ಯವನ್ನು ಎನ್ ಕೋಡಿಂಗ್ ಮಾಡಿ ಮಾಹಿತಿಯನ್ನು ತುಂಬುವುದು. ನಂತರ, ದತ್ತಾಂಶವನ್ನು ಡಿ– ಕೋಡಿಂಗ್ ಮಾಡಿ ಶೇಕ್ಸ ಪಿಯರ್ ಪಠ್ಯವನ್ನು ಪುನರ್ ಸೃಷ್ಟಿಸುವುದು. ಇದೊಂದು ರೀತಿಯಲ್ಲಿ ಜೆನೆಟಿಕ್ ತಂತ್ರಜ್ಞಾನದ ಗ್ರಂಥ ಸಂಪಾದನೆ. ಒಟ್ಟಿನಲ್ಲಿ ಇಂಗ್ಲಿಷ್ ಭಾಷೆಯು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನದ ಫಲಾನುಭವಿಯಾಗುತ್ತಾ ನಿಜ ವಾದ ಅರ್ಥದಲ್ಲಿ ಜಾಗತೀಕರಣದ ಭಾಷೆ ಯಾಗುತ್ತಿದೆ. ಆದರೆ, ಡಬ್ಬಿಂಗ್ ವಿರೋಧಿ ಯಾಗಿರುವ ಕನ್ನಡ ಭಾಷೆಯು ಮಾಹಿತಿ ತಂತ್ರಜ್ಞಾನದ ಬಾಗಿಲುಗಳನ್ನು ತೆರೆಯದೆ, ಕಗ್ಗವಿಯಲ್ಲಿ ಕುಳಿತುಕೊಂಡು ರವಿಯ ಕನಸು ಕಾಣುತ್ತಾ ಇಲ್ಲ! ಇಲ್ಲ! ಏನೊಂದನು ಮಾಡಲಿಲ್ಲ ಇವನು ಎಂಬಂತೆ ಇರುವುದು ಸರಿಯೆ?
ಎರಡು ಸಹಸ್ರಮಾನಗಳಷ್ಟು ಸುದೀರ್ಘ ಪರಂಪರೆ ಹೊಂದಿರುವ ಕನ್ನಡ ಭಾಷೆ – ಬದುಕು – ಸಾಹಿತ್ಯಾದಿ ಕಲೆಗಳು ಮತ್ತೆ ಮತ್ತೆ ಹುಟ್ಟು–ಮರುಹುಟ್ಟುಗಳನ್ನು ಪಡೆದು ಹೊಸ ದಾಗುತ್ತಾ ಬರುತ್ತಿವೆ. ಇದನ್ನು ಕುವೆಂಪು ಅವರು ‘ಗದುಗಿನ ಭಾರತ’ದ ತೋರಣ ನಾಂದಿಯಲ್ಲಿ ಪ್ರಥಮ ನವೋದಯ, ದ್ವಿತೀಯ ನವೋದಯ, ತೃತೀಯ ನವೋದಯ ಎಂದು ಕರೆದಿದ್ದಾರೆ. ವಸಾಹತುಶಾಹಿ ಅನುಭವದಿಂದ ಉಂಟಾದ ನವೋದಯವನ್ನು ‘ಕಲೊನಿಯಲ್ ನವೋ ದಯ’ ಎಂದು ಕರೆಯಬಹುದು. ಹಾಗೆಯೇ ಜಾಗತೀಕರಣದ ಅನುಭವದಿಂದ ಉಂಟಾಗು ತ್ತಿರುವ ನವೋದಯವನ್ನು ‘ಡಿಜಿಟಲ್ ನವೋ ದಯ’ ಎಂದು ಕರೆಯಬಹದು. ಹೀಗೆ ನವೋ ದಯಗಳ ಒಂದು ವಿಶಿಷ್ಟ ಸರಣಿಯೇ ಕನ್ನಡ ಸಂಸ್ಕೃತಿಯ ಲ್ಲಿರುವುದನ್ನು ಮನಗಾಣಬಹುದು. ಇದಿಷ್ಟು ಹಿನ್ನೆಲೆಯಲ್ಲಿ ಕನ್ನಡಕ್ಕೆ ಬೇಕು ಡಿಜಿಟಲ್ ನವೋದಯ ಎಂಬ ನೈಜ ಸತ್ಯವನ್ನು ಕನ್ನಡ ಸಹೃದಯರ ಮುಂದೆ ನಿವೇದಿಸುತ್ತಿದ್ದೇನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.