ADVERTISEMENT

ದಾರ ಬದಲಿಸುವುದೋ ದಾರಿ ಬದಲಾಯಿಸುವುದೋ?

ಡಾ.ಶಿವಮೂರ್ತಿ ಮುರುಘಾ ಶರಣರು
Published 4 ನವೆಂಬರ್ 2013, 19:30 IST
Last Updated 4 ನವೆಂಬರ್ 2013, 19:30 IST

ದಾರಗಳನ್ನು ಬದಲಿಸಿಕೊಳ್ಳುವುದಕ್ಕಿಂತ ದಾರಿಯನ್ನು ಬದಲಿಸಿಕೊಳ್ಳಬೇಕು. ಕುರುಬರನ್ನು  ಅವರಂತೆಯೇ ಇರಲು ಬಿಡಿ. ಅವರ ಉದ್ಧಾರವನ್ನು ಅವರೇ ಮಾಡಿಕೊಳ್ಳುವಷ್ಟು ಸಮರ್ಥರಿದ್ದಾರೆ...

೨೦೦೪ನೇ ಇಸವಿ ಮೇ ೧, ೨ ಮತ್ತು ೩ರಂದು ಕೂಡಲಸಂಗಮದಲ್ಲಿ ಬಸವ ಧರ್ಮ ಸಮಾವೇಶ. ಈ ಸಂದರ್ಭದಲ್ಲಿ ಮಾಂಸಾಹಾರಿಗಳು ಬಸವಧರ್ಮವನ್ನು ಅನುಸರಿಸಬಹುದೆಂಬ ನಿರ್ಣಯವನ್ನು ಕೈಗೊಳ್ಳಲಾಗಿತ್ತು. ಆ ಸಂದರ್ಭದಲ್ಲಿ ಪೇಜಾವರ ಶ್ರೀಗಳು ಪ್ರತಿಕ್ರಿಯಿಸಿ ‘ಬಸವಾದಿ ಶರಣರು ಮಾಂಸಾಹಾರವನ್ನು ಒಪ್ಪುವುದಿಲ್ಲ’ ಎಂಬ ಅರ್ಥದ ಹೇಳಿಕೆ ಕೊಟ್ಟಿದ್ದರು.

ಅದಾಗಿ ಹತ್ತಾರು ವರ್ಷಗಳು ಗತಿಸಿವೆ. ಅದೇ ಶ್ರೀಗಳು ಈ ನಡುವೆ ಮಾದಿಗ ಜನಾಂಗಕ್ಕೆ ತಾವು ಮಾಧ್ವದೀಕ್ಷೆ ಕೊಡುವುದಾಗಿ ಪತ್ರಿಕಾ ಹೇಳಿಕೆ ನೀಡಿದರು. ಇವರ ಹೇಳಿಕೆಯನ್ನು ಒಪ್ಪಿ ಯಾರೂ ಮಾಧ್ವದೀಕ್ಷೆ ಪಡೆಯಲು ಮುಂದೆ ಬರಲಿಲ್ಲ. ಈಗ ಅದೇ ಮಠಾಧೀಶರಿಂದ, ಕುರುಬರಿಗೆ ವೈಷ್ಣವ ದೀಕ್ಷೆ ಕೊಡಲಾಗುವುದು ಎಂಬ ಹೇಳಿಕೆ ಹೊರಬಿದ್ದಿದೆ. ಈ ಸಂಬಂಧ ಮಾಧ್ಯಮ ಗಳಲ್ಲಿ ಚರ್ಚೆ ಆರಂಭವಾಗಿದೆ.

ಸಿದ್ದರಾಮಯ್ಯನವರು ಈಗ ರಾಜ್ಯದ ಮುಖ್ಯಮಂತ್ರಿಗಳಾಗಿರುವುದರಿಂದ ಇದು ಮತ್ತಷ್ಟು ಕಾವೇರಿದೆ. ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ‘ಕುರುಬರು ಶಿವೋ ಪಾಸಕರು. ಅವರಿಗೆ ವೈಷ್ಣವ ದೀಕ್ಷೆಯ ಅಗತ್ಯವಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಉಡುಪಿಯ ಸ್ವಾಮಿಗಳ ಹೇಳಿಕೆಯನ್ನು ಕನಕಪೀಠದ ಶಾಖೆಯಾದ ತಿಂಥಿಣಿ ಹತ್ತಿರದ ಸಿದ್ಧರಾಮಾನಂದ ಸ್ವಾಮಿಗಳು ವಿರೋಧಿಸಿದ್ದಾರೆ. ಕನಕ ಪೀಠದ ನಿರಂಜನಾನಂದ ಸ್ವಾಮಿಗಳು, ಭಗೀರಥ ಪೀಠದ ಶ್ರೀಗಳು ಮತ್ತಿತರರು ಈ ಸಂಬಂಧ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಉಳಿದವರಿಂದಲೂ ನಕಾರಾತ್ಮಕ ಪ್ರಸ್ತಾಪಗಳಾಗಿವೆ.

ಅಂದು ಮಾಂಸಾಹಾರಕ್ಕೆ ಸಂಬಂಧಿಸಿದ ನಿರ್ಣಯವನ್ನು ಅಲ್ಲಗಳೆ ದಿದ್ದ ಸ್ವಾಮಿಗಳು ಇಂದು, ಮಾಂಸಾ ಹಾರಿಗಳಾಗಿದ್ದರೂ ಅಂಥವರಿಗೆ ತಾವು ವೈಷ್ಣವ ದೀಕ್ಷೆಯನ್ನು ಕೊಡುವುದಾಗಿ ಹೇಳಿದ್ದಾರೆ. ಆದರೂ ಆಹಾರದ ವಿಚಾರದಲ್ಲಿ ಇಂದು ಯಾರ ಪ್ರತಿ ಕ್ರಿಯೆಯೂ ಇಲ್ಲ. ಅಂದು ಕೆಲವರು ಆಹಾರಕ್ಕೆ ಸಂಬಂಧಿಸಿದ ವಿಚಾರವನ್ನು ಬಹುವಾಗಿ ಬೆಳೆಸಿದರು. ಯಾರು ಅಂದು ಅದನ್ನು ವಿರೋಧಿಸಿದ್ದರೋ, ಅವರೆಲ್ಲರೂ ಪೇಜಾವರ ಮಠಾಧೀಶರ ಇಂದಿನ ಹೇಳಿಕೆಯನ್ನು ವಿರೋಧಿಸಿಲ್ಲ! ಕಾಲಧರ್ಮವು ಆಹಾರದ ಸಮಸ್ಯೆಯನ್ನು ನಿವಾರಿಸಿದೆ. ಇಂದು ಅದು ಜಟಿಲವಾದ ಸಮಸ್ಯೆ ಅಲ್ಲ ವೆಂಬುದು ಕೆಲವರಿಗಾದರೂ ತಿಳಿದಿದೆ.

ನಾವೆಲ್ಲ ಕೂಡಿಕೊಂಡು ಸಮಾವೇಶ ನಡೆಸಿ, ಸ್ವತಂತ್ರ ಧರ್ಮದ ಪರಿಕಲ್ಪನೆಯ ಬಗ್ಗೆ ಅಂದು ಚಿಂತನೆ ನಡೆಸಿದ್ದೆವು. ಕೆಲವರು ಅದನ್ನು ಗಂಭೀರವಾಗಿ ಪರಿಗಣಿಸಿ, ಪ್ರತ್ಯೇಕ ಧರ್ಮ ಮಾಡಿ, ಸಮಾಜದ ಸಂಘಟನೆ ಒಡೆಯುತ್ತಾರೆಂದು ಬಲವಾಗಿ ಆರೋಪಿಸಿದ್ದರು. ಇಂದು ವೀರಶೈವ ಲಿಂಗಾಯತವು ಸ್ವತಂತ್ರ ಧರ್ಮ ಆಗಬೇಕೆಂಬ ಆಗ್ರಹ ಮುಂದಿಟ್ಟು ಕೊಂಡು ವೀರಶೈವ ಮಹಾಸಭಾ ಹೋರಾಟಕ್ಕೆ ಮುಂದಾಗಿದೆ. ಅಂದು ವಿರೋಧಿಸಿದವರೇ ಇಂದು ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಹೋರಾಡುತ್ತಿ ರುವುದು ಸೋಜಿಗವಾದರೂ ಸತ್ಯ.

ಪೇಜಾವರ ಶ್ರೀಗಳು ಮಾಂಸಾಹಾರಿಗಳಿಗೂ ತಾವು ದೀಕ್ಷೆಯನ್ನು ಅನುಗ್ರಹಿಸುವುದಾಗಿ ಹೇಳಿದರೂ ಅದರ ಬಗ್ಗೆ ವಿರೋಧವಿಲ್ಲ. ಮಡಿವಂತಿಕೆಯ ಬಿಗಿ ಮುಷ್ಟಿ ಸಡಿಲಾಗುತ್ತಿದೆ. ಸಮಕಾಲೀನ ಸಂದರ್ಭವು ಕೆಲವರಲ್ಲಿ ಅರಿವನ್ನು ಮೂಡಿಸುತ್ತಿದೆ ಎಂಬುದು ಸ್ವಾಗತಿಸತಕ್ಕ ವಿಚಾರವೇ.

ಯಾರು ಸಿದ್ಧಾಂತದ ವಿಚಾರದಲ್ಲಿ ಬಗ್ಗುವುದಿಲ್ಲವೋ ಅಂಥವರನ್ನು ಕಾಲವೇ ಬಗ್ಗಿಸುತ್ತದೆ ಎಂಬುದು ನನ್ನ ನಂಬಿಕೆ. ಮಡಿವಂತಿಕೆಯನ್ನೇ ಮಹಾ ಧರ್ಮವೆಂಬಂತೆ ಆಚರಿಸುತ್ತಿದ್ದ ಕಾಲವದು. ಅಸ್ಪೃಶ್ಯತೆಯು ಭಾರತವನ್ನು ವಿಭಜಿಸುತ್ತಿದೆ. ಚಾತುರ್ವರ್ಣ ಪದ್ಧತಿಯು ಭಾರತದಲ್ಲಿ ಗಣನೀಯ ವಾದ ಬಿರುಕನ್ನು ಹುಟ್ಟಿಸಿದೆ. ಮನು ವಾದವು ಲಿಂಗತಾರತಮ್ಯ, ವರ್ಗ–ವರ್ಣ–ಜಾತಿ ಭೇದಕ್ಕೆ ಮೂಲ ವಾಗಿದ್ದು, ಮಾನವರಲ್ಲಿ ಸಂಘರ್ಷಕ್ಕೆ ಕಾರಣವಾಗುತ್ತಿದೆ ಎಂಬುದು ಕೆಲವರಿಗೆ ಅರ್ಥವಾಗಿದೆ.

ಹಿಂದೆ ಉಂಟಾಗಿರುವ ವರ್ಗ ಪ್ರಬೇಧಗಳನ್ನು ತಿದ್ದುಪಡಿ (ಕರೆಕ್ಷನ್‌) ಮಾಡಿಕೊಳ್ಳುವ ಪ್ರಯತ್ನ. ಜಾತಿಯನ್ನು ಆಂತರ್ಯದಲ್ಲಿ ಇಟ್ಟುಕೊಂಡು, ಬಹಿರಂಗದಲ್ಲಿ ಕೂಡುವ ಪ್ರಕ್ರಿಯೆಯು ನಿರರ್ಥಕವಾದುದು.

ಪರಿಶಿಷ್ಟರ ಕೇರಿಯಲ್ಲಿ ಪಾದಯಾತ್ರೆ ಮಾಡುವುದು, ಅಲಕ್ಷಿತ ಗುಂಪಿನ ಸ್ವಾಮಿಗಳ ಪಾದಪೂಜೆ ನೆರವೇರಿಸುವುದು ಪಾಪ ವಿಮೋಚನೆಗಾಗಿಯೋ ಎಂಬ ಸಂದೇಹ ಇದೆ. ಪಾದಯಾತ್ರೆ ಮತ್ತು ಪಾದಪೂಜೆಗಳಿಂದ ಯಾರಿಗೂ ಪ್ರಯೋಜನವಿಲ್ಲ.

ಚಿತ್ರದುರ್ಗದಲ್ಲಿ ನಡೆದ ಬಹಿರಂಗ ಸಂವಾದವೊಂದರಲ್ಲಿ ಪೇಜಾವರ ಶ್ರೀಗಳು, ತಾವು ಸಹಭೋಜನ ಮಾಡುವುದಿಲ್ಲ ಎಂದು ಸ್ಪಷ್ಟೀಕರಿಸಿರುತ್ತಾರೆ. ಸಹಭೋಜನ, ಸಹಜೀವನ ಮತ್ತು ಸಹಚಿಂತನ ಇವು ಸಮಕಾಲೀನ ಧರ್ಮದ ಆಶಯಗಳು. ಅದಕ್ಕೆ ಸ್ಪಂದಿಸ ದಿದ್ದಲ್ಲಿ, ಕಾಲಧರ್ಮವು ಅದನ್ನು ನೆರವೇರಿಸುತ್ತದೆ. ಬಸವಣ್ಣ ಹುಟ್ಟಿನಿಂದ ಬ್ರಾಹ್ಮಣನಾಗಿದ್ದು ಹೊಸಧರ್ಮದ ಉದಯಕ್ಕೆ ಕಾರಣನಾಗಿ, ಅಲಕ್ಷಿತ ರೊಟ್ಟಿಗೆ ಗುರುತಿಸಿಕೊಂಡು, ಜಾತಿಯ ಅಹಮಿಕೆಯನ್ನು ಕಳೆದುಕೊಂಡರು. ವಿಶಾಲ ಹೃದಯದವರು ಬೇಗನೆ ಅರ್ಥ ಮಾಡಿಕೊಳ್ಳುತ್ತಾರೆ. ಅದು ಬಸವ ಬದುಕಿನ ಧನ್ಯತೆ ಮತ್ತು ಸಾರ್ಥಕತೆ.

ಬಸವಣ್ಣನವರಂತೆ ಉತ್ತಮಿಕೆಯನ್ನು ಕಿತ್ತೆಸೆದರೆ, ಅವರಂತೆಯೇ ದೊಡ್ಡವರಾಗಿಬಿಡುತ್ತಾರೆ. ಆದರೆ ಜಾತಿಯ ಅಭಿಮಾನ ಅಡ್ಡಬಂದು ದೊಡ್ಡವರಾಗುವ ಅವಕಾಶದಿಂದ ವಂಚಿತವಾಗಿಸುತ್ತದೆ.

ಇಷ್ಟಕ್ಕೂ ಇಲ್ಲಿ ಒಂದು ಅಂಶ ಚರ್ಚೆ ಆಗಬೇಕಿದೆ. ಏನೆಂದರೆ, ಮಾಧ್ವ ಬ್ರಾಹ್ಮಣ ಅಥವಾ ಮತ್ತಾವ ಬ್ರಾಹ್ಮಣರೇ ಇರಲಿ ಅವರಿಗೆಲ್ಲ ಉಪ ನಯನ ಕಡ್ಡಾಯ. ಪೇಜಾವರ ಶ್ರೀಗಳು ಹೊಸ ಸೂತ್ರ ಕಂಡುಹಿಡಿದಿದ್ದಾರೆಂದು ಕಾಣುತ್ತದೆ. ಅವರ ಹೊಸ ಸೂತ್ರವೆಂದರೆ, ಕುರುಬರಿಗೂ ಮಾಧ್ವದೀಕ್ಷೆ ಮತ್ತು ವೈಷ್ಣವದೀಕ್ಷೆಯನ್ನು ಕೊಡುವುದು. ದೀಕ್ಷೆಯ ಪರಿಕಲ್ಪನೆಯು ಲಿಂಗಾಯತ/ ವೀರಶೈವದಲ್ಲಿ ಪ್ರಸ್ತಾಪಿತವಾಗಿದೆ.

ಶರಣ ಸಂಸ್ಕೃತಿ ಯಲ್ಲಿ ದೀಕ್ಷೆಯು ಸಂಸ್ಕಾರದ ದ್ಯೋತಕ ವಾಗಿದೆ. ದೀಕ್ಷೆಯ ಪರಿಕಲ್ಪನೆಯಂತೆ ಅದೊಂದು ಧಾರ್ಮಿಕ ಸಂಸ್ಕಾರ. ಲಿಂಗ ಸಂಸ್ಕಾರ ಪಡೆದುಕೊಂಡರೆ, ಪೂರ್ವಾ ಶ್ರಮ (ಜಾತಿಯ) ನಿರಸನ. ಆದರೆ ಮಾಧ್ವ, ವೈಷ್ಣವ ಅನುಯಾಯಿಗಳಲ್ಲಿ ಉಪನಯನದ ಪ್ರಕಾರ ಜನಿವಾರ ಧಾರಣೆ ಮಾಡಬೇಕಾಗುತ್ತದೆ. ಅವರ ಪ್ರಕಾರ ಉಪನಯನವು ಕೆಲವರಿಗೆ ಮಾತ್ರ ಸೀಮಿತ. ದೀಕ್ಷೆಯನ್ನು ಯಾರು ಬೇಕಾದರೂ ಪಡೆಯಬಹುದೆಂಬ ಇಂಗಿತವಿರಬಹುದು. ಅವರ ಕಲ್ಪನೆಯ ದೀಕ್ಷೆಯು ಹೇಗಿರುತ್ತೆಂಬುದನ್ನು ಶ್ರೀಗಳವರೇ ಸ್ಪಷ್ಟಪಡಿಸಬೇಕಾಗುತ್ತದೆ.

ಒಂದು ಸಂದರ್ಭ ಇಲ್ಲಿ ಪ್ರಸ್ತುತ.  ಗಾಂಧೀಜಿಯವರನ್ನು ಒಬ್ಬ ವ್ಯಕ್ತಿಯು ಭೇಟಿ ಮಾಡುತ್ತಾನೆ. ಆತ ‘ನಾನು ಒಳ್ಳೆಯ ಹಿಂದೂ ಆಗಬೇಕೆಂದು ಬಯಸುತ್ತೇನೆ, ನೀವು ಆಶೀರ್ವದಿಸಿ’ ಎಂದು ಕೇಳಿಕೊಳ್ಳುತ್ತಾನೆ. ಆಗ ಗಾಂಧೀಜಿಯವರು ಆತನ ಧರ್ಮವನ್ನು ಕೇಳುತ್ತಾರೆ. ಆತನು ತಾನು ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವನೆಂದು ಉತ್ತರಿಸುತ್ತಾನೆ.

‘ಸ್ವತಂತ್ರ ಭಾರತದಲ್ಲಿ ಒಬ್ಬ ಕ್ರಿಶ್ಚಿ ಯನ್ ಉತ್ತಮ ಕ್ರಿಶ್ಚಿಯನ್ ಆದಲ್ಲಿ, ಅವನು ಉತ್ತಮ ಹಿಂದುವೂ ಆಗಿರುತ್ತಾನೆ’ ಎಂದು ಅರ್ಥೈಸುತ್ತಾರೆ. ಒಳ್ಳೆಯ ಮುಸ್ಲಿಂ, ಒಳ್ಳೆಯ ಸಿಖ್, ಒಳ್ಳೆಯ ಜೈನ, ಒಳ್ಳೆಯ ಲಿಂಗಾಯತ ಆಗಲು ಯತ್ನಿಸಿದಲ್ಲಿ ಒಳ್ಳೆಯ ಭಾರತೀಯ. ಉತ್ತಮ ಜಾತಿಯಲ್ಲಿ ಜನಿಸಿದ ಮಾತ್ರಕ್ಕೆ ಉತ್ತಮನಲ್ಲ. ಉತ್ತಮ ಮತ್ತು ಅಧಮತ್ವವನ್ನು ಅಳೆಯುವ ಅಳತೆಗೋಲು ಜಾತಿ ಅಲ್ಲ; ಜೀವನ ಕ್ರಮವೇ ಇಲ್ಲಿ ಅಳತೆಗೋಲು. ಉತ್ತಮನು ಯಾವ ಜಾತಿಗೆ ಸೇರಿದವನಾಗಿದ್ದರೂ ಉತ್ತಮನೇ. ಉತ್ತಮ ವ್ಯಕ್ತಿಯು ಎಲ್ಲ ಕಡೆ ಕಾಣುವಂತಾದರೆ ಭವ್ಯ ಭಾರತ. ಸರ್ವ ಜಾತಿಮತ: ಉಜ್ವಲ ಭಾರತ.

ಈಗ ನಾವುಗಳು ಮಾಡಬೇಕಾದುದು ಏನು? ದಾರಗಳನ್ನು ಬದಲಿಸಿ ಕೊಳ್ಳುವುದಕ್ಕಿಂತ ದಾರಿಯನ್ನು ಬದಲಿಸಿ ಕೊಳ್ಳಬೇಕಾಗುತ್ತದೆ. ಸಾವಿರಾರು ವರ್ಷಗಳಿಂದ ಜಾತಿ-ಮತಗಳು ಅಸ್ತಿತ್ವದಲ್ಲಿವೆ. ಮತದಲ್ಲಿ ಜಡ್ಡುಗಟ್ಟುವಿಕೆ; ಪಥದಲ್ಲಿ ಪರಿವರ್ತಿಸುವಿಕೆ. ಪಥವನ್ನು ಮತವಾಗಿಸಲಾಗಿದೆ. ಮತವನ್ನು ಪರಿವರ್ತನೆಯ ಪಥವನ್ನಾಗಿಸಿ ಕೊಂಡಲ್ಲಿ ಅಂದುಕೊಂಡಂತಹ ಫಲವು ನಿರೀಕ್ಷಿತ. ಧರಿಸಿಕೊಳ್ಳುವ ಬಟ್ಟೆ ಬದಲಾದರೆ ಸಾಲದು. ಬದುಕಿನ ಬಟ್ಟೆಯೂ ಬದಲಾಗಬೇಕು. ಅದಕ್ಕಾಗಿ ವಿದ್ಯೆಬೇಕು. ಕುರುಬರು ವಿದ್ಯಾವಂತರಾಗುತ್ತಿದ್ದಾರೆ. ದುಡಿದು ಗಳಿಸಿ ಅವರು ಕುಬೇರ ರಾಗಲಿ ಎಂಬುದನ್ನು ಕನಕಪೀಠದ ಪ್ರಥಮ ಪೀಠಾರೋಹಣದ ಸಂದರ್ಭ ದಲ್ಲಿ ನಾನು ವ್ಯಕ್ತಪಡಿಸಿದ್ದೆ.

ಕುರುಬರು ಈ ಸಂದರ್ಭದಲ್ಲಿ ಏನಾಗಬೇಕು? ಕುರುಬರು ಉತ್ತಮ ಕುರುಬರಾಗಿ ಉಳಿಯಲಿ. ಕುರುಬರಾಗಲು ಅವರನ್ನು ಅವರ ಪಾಡಿಗೆ ಬಿಟ್ಟುಬಿಡಬೇಕಷ್ಟೇ. ಕುರುಬರ ಬಗೆಗಾಗಲೀ ಇನ್ನುಳಿದ ತಳಮಟ್ಟದವರ ಬಗೆಗಾಗಲೀ ಇಷ್ಟು ಮಾಡಿದರೆ ಸಾಕು. ಅವರ ಉದ್ಧಾರ ವನ್ನು ಅವರೇ ಮಾಡಿಕೊಳ್ಳುವಷ್ಟು ಸಮರ್ಥರಿದ್ದಾರೆ. ನಮ್ಮೊಟ್ಟಿಗೆ ಅವರು, ಅವರೊಟ್ಟಿಗೆ ನಾವು ಕೂಡಿಕೊಂಡು ಹೋಗೋಣ.

ಕುರುಬರನ್ನು ನಮ್ಮವ ರೆಂದು ತಿಳಿದು, ಅವರು ಮುಂದೆ ಬರಲು ಸಹಕರಿಸಿದರೆ, ಅದುವೇ ನಾವು ಅವರಿಗೆ ತೋರಬಹುದಾದ ಗೌರವ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.