ADVERTISEMENT

ರೈತರು ಇಲ್ಲಿ ಆಕ್ರಮಣಕಾರರೆ?

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2011, 19:30 IST
Last Updated 20 ಮಾರ್ಚ್ 2011, 19:30 IST

18.7.1947 ರಲ್ಲಿ ದ.ಕನ್ನಡದ ಜಿಲ್ಲಾಧಿಕಾರಿಯಾಗಿದ್ದ ಜೆ.ಎಫ್. ಸೌಂಡರ್ಸ್ ಅವರ ಆದೇಶದಲ್ಲಿ ಗಿಡ ನೆಡುವ ಚಳವಳಿಯನ್ನು ಹಮ್ಮಿಕೊಳ್ಳಲು ರೈತರಿಗೆ ಪ್ರೋತ್ಸಾಹ ನೀಡಿ, ಸರ್ಕಾರಿ ಭೂಮಿಯಲ್ಲಿ ರೈತರು ಗಿಡ ನೆಟ್ಟು ಬದುಕಿಸಿದರೆ ಗಿಡದ ಫಲವನ್ನು ನೆಟ್ಟವರಿಗೇ ನೀಡಬೇಕೆಂದು ತಿಳಿಸಲಾಗಿತ್ತು.

ಉತ್ತರಕನ್ನಡ ಜಿಲ್ಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಕೆನರಾ ಪ್ರಿವಿಲೇಜ್ ಕಾಯ್ದೆಯ ಪ್ರಕಾರ ರೈತರ ಕೃಷಿಭೂಮಿಯ ವ್ಯಾಪ್ತಿಯಲ್ಲಿರುವ ಸರ್ಕಾರಿ ಭೂಮಿಯನ್ನು ರೈತರು ಕೃಷಿ ಉಪಯೋಗಕ್ಕಾಗಿ ಪಡೆಯುವ ಹಕ್ಕನ್ನು ಊರ್ಜಿತದಲ್ಲಿರಿಸಿತ್ತು. 1979ರಲ್ಲಿ ದೊಡ್ಡೂರು ಮಹಾಬಲೇಶ್ವರ ಗೋವಿಂದ ಹೆಗಡೆ ಪ್ರಕರಣದಲ್ಲಿ ಉಚ್ಚ ನ್ಯಾಯಾಲಯ ಈ ಹಕ್ಕನ್ನು ಎತ್ತಿ ಹಿಡಿದಿತ್ತು.
 

ಅಲ್ಲದೆ 1963ರ ಅರಣ್ಯ ಕಾಯಿದೆಯ 117ನೇ ವಿಧಿ ಹಾಗೂ 1964ರ ಕರ್ನಾಟಕ ಭೂ ಕಂದಾಯ ಕಾಯ್ದೆಯ 79ನೇ ವಿಧಿಗಳು ರೈತನ ಈ ಹೆಚ್ಚುವರಿ ಭೂಮಿಯ ಹಕ್ಕಿಗೆ ಮನ್ನಣೆ ನೀಡಿವೆ.ಇಷ್ಟೆಲ್ಲ ಕಾಯ್ದೆಗಳು ರೈತನ ಪರವಾಗಿದ್ದರೂ ದ.ಕನ್ನಡದ ಜಿಲ್ಲಾಧಿಕಾರಿಗಳ ಪಾಲಿಗೆ ರೈತರು ಟೆರರಿಸ್ಟ್‌ಗಳೆಂಬ ಭಾವನೆ ಬಂದು ಬಿಟ್ಟಿದೆ ಎನ್ನುತ್ತಾರೆ ಅವರ ಆದೇಶದಿಂದ ವಿಚಲಿತರಾದ ರೈತ ಸಮುದಾಯ. ರೈತರ ವಶದಲ್ಲಿ ಐದೋ ಹತ್ತೋ ಎಕರೆ ಭೂಮಿ ಇರಬಹುದು. ಆದರೆ ಇಲ್ಲಿ ಒಂದು ಇಂಚು ಕೂಡ ಸುಮ್ಮನೆ ಉಳಿದಿಲ್ಲ. ರಬ್ಬರು, ತೆಂಗು, ಅಡಿಕೆ ಕೃಷಿಯಿಂದ ಸಂಪನ್ನವಾಗಿದೆ.

ಏಕಾಏಕಿ ಇಂಥ ಭೂಮಿಯನ್ನೆಲ್ಲ ಸ್ವಾಧೀನಪಡಿಸಿ ನಿವೇಶನರಹಿತರಿಗೆ ಹಂಚುತ್ತೇನೆ ಎನ್ನುವ ಜಿಲ್ಲಾಧಿಕಾರಿಗಳ ಆಶಯ ಪ್ರಶ್ನಾತೀತವಾದರೂ ಸಾವಿರಾರು ರೂಪಾಯಿ ಸುರಿದು, ಪರಿಶ್ರಮದಿಂದ ಕೃಷಿ ಮಾಡಿದ್ದಾರೆ ಎನ್ನುವುದಕ್ಕಿಂತ ತಮ್ಮ ಆಯಸ್ಸನ್ನೇ ಅದಕ್ಕಾಗಿ ಸವೆಸಿದ ರೈತರಿಗೆ ಇದು ಮಾಡು ಇಲ್ಲವೇ ಮಡಿ ಎನ್ನುವ ಪ್ರಶ್ನೆ. ಇಷ್ಟೊಂದು ಕೃಷಿಯನ್ನು ಆಕ್ರಮಣದ ಹೆಸರಿನಲ್ಲಿ ಜಿಲ್ಲಾಧಿಕಾರಿ ಸ್ವಾಧೀನ ಮಾಡಿಕೊಳ್ಳಲು ಮುಂದಾದರೆ ರೈತರ ಸಂಕಷ್ಟ ತಿಳಿದು, ರೈತ ಮನೆತನದಿಂದಲೇ ಬಂದಿರುವ ಕರಾವಳಿಯ ಶಾಸಕರೆಲ್ಲ ಕೋಮಾ ಸೇರಿದ ಸ್ಥಿತಿಯಲ್ಲಿರುವುದು ಅಚ್ಚರಿ.
 

ADVERTISEMENT

ಇಂಥ ಸಂದರ್ಭದಲ್ಲಿ ಅವರು ರೈತರ-ಅಧಿಕಾರಿಗಳ ಮುಖಾಮುಖಿ ನಡೆಸಿ ಈ ಹಿಂದಿನ ಕಾಯ್ದೆಗಳೆಲ್ಲವೂ ರೈತರ ಪರವಾಗಿ ಇರುವ ತಥ್ಯವನ್ನು ವಿಮರ್ಶಿಸಬೇಕಿತ್ತು. ಕೃಷಿಯೇ ಬೇಡವೆಂದು ಪಲಾಯನ ಮಾಡುತ್ತಿರುವ ಪರಂಪರಾಗತ ರೈತನೊಬ್ಬನನ್ನು ಅಲ್ಲಿಯೇ ಉಳಿಯುವಂತೆ ಸೌಲಭ್ಯ ಕಲ್ಪಿಸಬೇಕಾದ್ದು ಸರ್ಕಾರದ ಜವಾಬ್ದಾರಿ. ಕೇವಲ ಕೃಷಿ ಬಜೆಟ್‌ನ ಆಮಿಷದಿಂದ ರೈತನನ್ನು ಸಂತುಷ್ಟಿಗೊಳಿಸಲಾಗದು. ಯಾಕೆಂದರೆ ಅದರಲ್ಲಿ ಹೇಳಿಕೊಂಡಿರುವ ಬಹುತೇಕ ಸಬ್ಸಿಡಿ ಅಧಿಕಾರಿಗಳ ಕೈ ದಾಟಿ ತಮ್ಮನ್ನು ತಲಪುವುದಿಲ್ಲ ಎಂದು ತಿಳಿಯದಷ್ಟು ರೈತರು ಹುಂಬರಲ್ಲ.
 

ಮುಂದಿನ ದಿನಗಳಲ್ಲಿ ಆಹಾರ ಸಮಸ್ಯೆ ತೀವ್ರ ಬಾಧಿಸಲಿರುವುದನ್ನು ಈಗಾಗಲೇ ಕೃಷಿ ತಜ್ಞರು ಒತ್ತಿ ಹೇಳಿದ್ದಾರೆ. ಕೈಗಾರಿಕೆಗಳ ಹೆಸರಿನಲ್ಲಿ ರೈತರನ್ನು ಬಡಿಗೆ ಹಿಡಿದು ಓಡಿಸುವ ಕೆಲಸದಲ್ಲಿ ಉದ್ಯಮಪತಿಗಳ ಬೆಂಗಾವಲಿಗೆ ಸರ್ಕಾರವೇ ನಿಂತಿದೆ. ನಾಗಾರ್ಜುನದಂತಹ ಯೋಜನೆಗಳಿಂದ ರೈತರ ಕೃಷಿ ಸರ್ವನಾಶವಾಗುವುದು ಗೊತ್ತಿದ್ದರೂ ಅದನ್ನು ನಿಲ್ಲಿಸುವ ಪ್ರಶ್ನೆ ಇಲ್ಲ ಎನ್ನುತ್ತಾರೆ ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಮುಖ್ಯಮಂತ್ರಿ ಇಂದಲ್ಲ ನಾಳೆ ಕೂಡ ಎಲ್ಲರ ಆಹಾರ ರೈತನೇ ಬೆಳೆದು ಕೊಡಬೇಕು.

ಕಂಪ್ಯೂಟರ್ ಎಂದಿಗೂ ಆಹಾರವಲ್ಲ ಎಂಬುದು ಮುಖ್ಯಮಂತ್ರಿಗೆ ತಿಳಿಯದ್ದೇನಲ್ಲ. ಅಂತಹದರಲ್ಲಿ ರೈತರ ಭೂಮಿ ಸ್ವಾಧೀನಕ್ಕೆ ದ.ಕ. ಜಿಲ್ಲಾಧಿಕಾರಿ ಮುಂದಾಗಿರುವುದು, ಸರ್ಕಾರದ ದಿವ್ಯಮೌನ ಕ್ಷಮಾರ್ಹವಲ್ಲ.ನಗರ ಪ್ರದೇಶಗಳಲ್ಲಿ ಭೂ ಅತಿಕ್ರಮಣವಾದಾಗ ಸರ್ಕಾರ ದಂಡನೆಯ ಶುಲ್ಕ ವಿಧಿಸಿ, ಆಕ್ರಮಿಸಿದವರಿಗೆ ಭೂಮಿಯ ಹಕ್ಕನ್ನು ನೀಡಲಾಗುತ್ತಿರುವುದು ಮಾಮೂಲಿನ ಸಂಗತಿ. ಇದೇ ನ್ಯಾಯ ರೈತನಿಗೂ ಅನ್ವಯವಾಗಬೇಕು.
 

ಕಾಫಿ, ಅಡಿಕೆ, ತೆಂಗು ಯಾವುದು ಬೆಳೆದರೂ ರೈತನಿಗಿಲ್ಲಿ ಬದುಕು ನಿಶ್ಚಿಂತವಾಗಿಲ್ಲ. ನಿಸರ್ಗದೊಂದಿಗೆ ನಿರಂತರ ಹೋರಾಟ, ಬೆಲೆಯ ವಿಷಮ ಸ್ಥಿತಿಗಳಿಂದಾಗಿ ಅವನ ಬದುಕು ಅಸ್ಥಿರವಾಗಿದೆ. ಈ ಹಿಂದಿನ ಯಾವ ಸರ್ಕಾರ ಕೂಡ ರೈತ ಕೃಷಿ ಮಾಡಿದ ಭೂಮಿಯನ್ನು ಸ್ವಾಧೀನಪಡಿಸಿ ನಿವೇಶನರಹಿತರಿಗೆ ಹಂಚುವ ತುಘಲಕ್ ಕೆಲಸ ಮಾಡಿಲ್ಲ. ಜಿಲ್ಲಾಧಿಕಾರಿ ಹೊಸ ಇತಿಹಾಸ ಸೃಷ್ಟಿಗೆ ಉತ್ಸುಕರಾದಂತಿದೆ.
 

ರೈತರು ಸರ್ಕಾರದ ಭೂಮಿಯಲ್ಲಿ ಕೃಷಿ ಮಾಡಿ ಎಲ್ಲಿಂದಲೋ ವಲಸೆ ಬಂದವರ ಆಕ್ರಮಣವನ್ನು ತಡೆದಿದ್ದಾರೆ. ಸರ್ಕಾರದ ತೆರಿಗೆಯ ಖಜಾನೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಸರ್ಕಾರದ ನಿಲುವು ರೈತ ಪರವಾಗಿರುವುದು ಅನಿವಾರ್ಯವೇ. ದ.ಕ. ಜಿಲ್ಲಾಧಿಕಾರಿ ರೈತರ ಆಕ್ರಮಣದ ಭೂಮಿಯಿಂದ ಅವರನ್ನು ಎತ್ತಂಗಡಿ ಮಾಡುವ ಸಾಹಸಕ್ಕೆ ಕೈಯಿಕ್ಕಿ ಸಮೂಹ ಹೋರಾಟದ ಕೆಚ್ಚಿಗೆ ಕಿಚ್ಚು ಕೊಡುವ ಮೊದಲು ಒಂದು ಸಹಾನುಭೂತಿಪರ ವಿಶ್ಲೇಷಣೆ ಬೇಕು ಅನಿಸುವುದು ಅಲ್ಲವೆ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.