ADVERTISEMENT

ಹಣದ ಬೆನ್ನು ಬಿದ್ದವರಿಗೆ ಹೃದಯ ಮಾಯ!

ರವೀಂದ್ರ ಭಟ್ಟ, ಮೈಸೂರು.
Published 3 ಮೇ 2011, 19:30 IST
Last Updated 3 ಮೇ 2011, 19:30 IST

ಲಂಚ ಪಡೆಯುವ ವ್ಯಕ್ತಿಗೆ ದೇವರ ಭಯ ಕೂಡ ಇಲ್ಲ ಎನ್ನುವುದಕ್ಕೆ ಇಲ್ಲೊಂದು ಉದಾಹರಣೆ. ಅಲ್ಲದೆ ಲಂಚ ಬೇಕೇ ಬೇಕು ಎನ್ನುವ ವ್ಯಕ್ತಿಗೆ ಲಜ್ಜೆ, ಮಾನ, ಮರ್ಯಾದೆ, ಕನಿಕರ, ದಯೆ ಯಾವುದೇ ಭಾವನೆ ಇರುವುದಿಲ್ಲ ಎನ್ನುವುದಕ್ಕೂ ಇದು ನಿದರ್ಶನ.

ಕನ್ನಡ ನಾಡಿನ ಅಧಿದೇವತೆ, ಮೈಸೂರಿನ ಆರಾಧ್ಯ ದೈವ, ಮಹಿಷ ಮರ್ದಿನಿ ಚಾಮುಂಡೇಶ್ವರಿ ಬಗ್ಗೆ ಬಹುತೇಕ ಎಲ್ಲರಿಗೂ ಭಯ ಭಕ್ತಿ.  ಚಾಮುಂಡೇಶ್ವರಿ ಯಾವುದೇ ಜಾತಿಗೆ ಸೀಮಿತವಾದ ದೇವರೂ ಅಲ್ಲ. ಈಕೆಗೆ ಅಪಾರ ಮುಸ್ಲಿಂ ಭಕ್ತರೂ ಇದ್ದಾರೆ. ಕ್ರೈಸ್ತರೂ ಇಲ್ಲಿಗೆ ‘ನಡೆದು’ಕೊಳ್ಳುತ್ತಾರೆ. ಆದರೆ ಈ ದೇವಾಲಯದಲ್ಲಿ ಕಾರ್ಯ ನಿರ್ವಹಣಾಧಿಕಾರಿಯಾಗಿದ್ದವರಿಗೆ ಮಾತ್ರ ಲಂಚ ಪಡೆಯಲು ಈ ದೇವಿಯ ಭಯವೂ ಇರಲಿಲ್ಲ. ದೇವರ  ಭಯ ಇರಲಿ, ಕನಿಷ್ಠ ಮಟ್ಟದ ಕರುಣೆ ಕೂಡ ಅವರಿಗೆ ಇರಲಿಲ್ಲ. ಯಾಕೆಂದರೆ ಅವರು ಲಂಚ ಕೇಳಿದ್ದು ದಾಸೋಹ ಭವನದಲ್ಲಿ ಕಸ ಗುಡಿಸುವ ಮಹಿಳೆಯಿಂದ.

ಚಾಮುಂಡಿಬೆಟ್ಟದಲ್ಲಿರುವ ದಾಸೋಹ ಭವನದಲ್ಲಿ ಶಕುಂತಲಾ ಎಂಬ ಮಹಿಳೆ ಕಸ ಗುಡಿಸುವ ಕೆಲಸ ಮಾಡುತ್ತಿದ್ದರು. ಅದು ಹಂಗಾಮಿ ಕೆಲಸ. ಆ ಕೆಲಸವನ್ನೇ ನಂಬಿಕೊಂಡು ಅವರ ಕುಟುಂಬ ಬದುಕುತ್ತಿತ್ತು. ಈ ಕೆಲಸವನ್ನು ಕಾಯಂ ಮಾಡಿ ಎಂದು 2006ರಲ್ಲಿ ಚಾಮುಂಡೇಶ್ವರಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಟಿ.ಡಿ.ನರಸಿಂಹಯ್ಯ ಅವರನ್ನು ಬೇಡಿಕೊಳ್ಳುತ್ತಲೇ ಇದ್ದರು.
 
ತಮ್ಮ ಮನೆಯ ಕಷ್ಟವನ್ನೂ ನಿವೇದಿಸಿಕೊಳ್ಳುತ್ತಿದ್ದರು. ಆದರೂ ನರಸಿಂಹಯ್ಯ ಅವರ ಮನ ಕರಗಲಿಲ್ಲ. 10 ಸಾವಿರ ರೂಪಾಯಿ ನೀಡಿದರೆ ಮಾತ್ರ ಕೆಲಸ ಕಾಯಂ ಮಾಡುವುದಾಗಿ ಹೇಳಿಬಿಟ್ಟರು. ಕಸ ಗುಡಿಸುವ ಮಹಿಳೆಯೊಬ್ಬಳು ಹತ್ತು ಸಾವಿರ ರೂಪಾಯಿ ತಂದು ಕೊಡುವುದು ಹೇಗೆ? ಕೊನೆಗೂ ಆಕೆ ಬೇರೆ ದಾರಿ ಕಾಣದೆ ಲೋಕಾಯುಕ್ತ ಪೊಲೀಸರ ಮೊರೆ ಹೋದರು. ಲೋಕಾಯುಕ್ತ ಪೊಲೀಸರು ಹೊಂಚು ಹಾಕಿ 2006 ಅಕ್ಟೋಬರ್ 5ರಂದು ನರಸಿಂಹಯ್ಯ ಕಸ ಗುಡಿಸುವ ಮಹಿಳೆ ಶಕುಂತಲಾ ಅವರಿಂದ ಲಂಚ ಪಡೆಯುವಾಗ ಬಂಧನಕ್ಕೆ ಒಳಗಾದರು.

ಈ ಬಗ್ಗೆ ವಿಚಾರಣೆ ನಡೆಸಿದ ಮೈಸೂರಿನ 3ನೇ ಹೆಚ್ಚುವರಿ ಮತ್ತು ವಿಶೇಷ ನ್ಯಾಯಾಲಯ ನರಸಿಂಹಯ್ಯ ಅವರಿಗೆ ಒಂದು ವರ್ಷ ಕಠಿಣ ಸಜೆ ಮತ್ತು 10 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ. ನ್ಯಾಯಾಲಯದ ತೀರ್ಪಿನ ನಂತರ ನರಸಿಂಹಯ್ಯ ಅವರಿಗೆ ಕಸ ಗುಡಿಸುವ ಮಹಿಳೆಯೇ  ಚಾಮುಂಡಿ ತರಹ ಕಾಣುತ್ತಿರಬಹುದು. ಆದರೆ ಕಾಲ ಮಿಂಚಿದೆ. ಶಿಕ್ಷೆ ಅನುಭವಿಸುವುದೊಂದೇ ದಾರಿ.

ಸರ್ಕಾರಿ ನೌಕರಿಯಲ್ಲಿ ಇರುವ ವ್ಯಕ್ತಿಗಳು ಯಾರ ಬಳಿಯಾದರೂ ಹಣ ಪಡೆಯುತ್ತಾರೆ ಎನ್ನುವುದಕ್ಕೆ ಇದೊಂದು ನಿದರ್ಶನ ಅಷ್ಟೆ, ಇಂತಹದೆ ಇನ್ನೊಂದು ಘಟನೆ ಕಳೆದ ತಿಂಗಳು ಹಾಸನ ಜಿಲ್ಲೆಯಲ್ಲಿ ನಡೆದಿದೆ. ಹಾಸನ ಜಿಲ್ಲೆಯ ಆಲೂರು ತಾಲ್ಲೂಕು ಕಾರ್ಜುವಳ್ಳಿ ಗ್ರಾಮದ ಕೆ.ಎಂ.ರಘು, ತೊಗಲು ಬೊಂಬೆಯಾಟದ ಕಲಾವಿದ.

ತೊಗಲು ಗೊಂಬೆಯಾಟ ಈಗ ನಶಿಸಿ ಹೋಗುತ್ತಿರುವ ಕಲೆ. ಅಂತಹ ಕಲೆಯನ್ನೇ ನಂಬಿಕೊಂಡಿರುವ ರಘು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳ ಆದೇಶದಂತೆ ಆರೋಗ್ಯ, ಕುಟುಂಬ ಕಲ್ಯಾಣಕ್ಕೆ ಸಂಬಂಧಿಸಿದ ಕಾರ್ಯಕ್ರಮವನ್ನು ತೊಗಲು ಬೊಂಬೆಯಾಟದ ಮೂಲಕ ನೀಡುತ್ತಿದ್ದರು. ಅದರ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿಯನ್ನು ಉಂಟು ಮಾಡಿದ್ದರು.

ಕಲಾವಿದ ರಘು ಅವರಿಗೆ ಒಂದು ಕಾರ್ಯಕ್ರಮಕ್ಕೆ 1250 ರೂಪಾಯಿ ನೀಡುವುದಾಗಿ ಇಲಾಖೆ ಹೇಳಿತ್ತು. ಅದರ ಪ್ರಕಾರ ಅವರಿಗೆ ಇಲಾಖೆಯಿಂದ 15 ಸಾವಿರ ರೂಪಾಯಿ ಬರಬೇಕಾಗಿತ್ತು. ಹೀಗೆ ತಮಗೆ ಬರಬೇಕಿರುವ ಹಣವನ್ನು ನೀಡಿ ಎಂದು ಅವರು ಮನವಿ ಮಾಡಿಕೊಂಡಿದ್ದರು. ಆದರೆ  ಅವರ ಬಾಯಿ ಮಾತಿನ ಮನವಿಗಾಗಲೀ, ಅರ್ಜಿಗಾಗಲೀ ಯಾವುದೇ ಬೆಲೆ ಸಿಗಲಿಲ್ಲ. ತಾವು ನಡೆಸಿಕೊಟ್ಟ ಕಾರ್ಯಕ್ರಮಕ್ಕೆ ಹಣ ಪಡೆಯಲೂ ಅವರಿಗೆ ಸಾಧ್ಯವಾಗಲಿಲ್ಲ.

ಕಲಾವಿದ ರಘು ಅವರಿಗೆ ಹಣದ ಚೆಕ್ ನೀಡಬೇಕಾದವರು ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ. ಅಚರನ್ನು ಸಾಕಷ್ಟು ಬಾರಿ ಭೇಟಿ ಮಾಡಿ ವಿನಂತಿಸಿಕೊಂಡರೂ ರಘು ಅವರಿಗೆ ಹಣ ದೊರೆಯಲಿಲ್ಲ. ಉಪ ಆರೋಗ್ಯ ಶಿಕ್ಷಣಾಧಿಕಾರಿ ತೊಗಲು ಗೊಂಬೆಯಾಟದ ಕಲಾವಿದರಿಗೆ ಹೇಳಿದ್ದು ‘ನಿಮ್ಮ ಚೆಕ್ ಬರಬೇಕು ಎಂದರೆ ಸಾವಿರ ರೂಪಾಯಿ ನೀಡಬೇಕು ಅಷ್ಟೆ’ ಎಂದು.

ಮೊದಲೇ ಬಡ ಕಲಾವಿದ. ಅದರಲ್ಲೂ ತೊಗಲು ಗೊಂಬೆ ಕಲಾವಿದ. ಸರ್ಕಾರದಿಂದ ಬರಬೇಕಾಗಿದ್ದ ಹಣ ಬಂದರೆ ಮರ್ಯಾದೆಯ ಜೀವನ ನಡೆಸಲು ಒಂದಿಷ್ಟಾದರೂ ಸಹಾಯವಾಗಬಹುದು ಎಂದುಕೊಂಡಿದ್ದ ಕಲಾವಿದರಿಗೆ ಇದರಿಂದ ನಿರಾಸೆ ಆಯಿತು. ಅದಕ್ಕೆ ಅವರೂ ಕೂಡ ಲೋಕಾಯುಕ್ತ ಪೊಲೀ ಸರ ಮೊರೆ ಹೋದರು. ಹಾಸನ ಜಿಲ್ಲಾ ಉಪ ಅರೋಗ್ಯ ಶಿಕ್ಷಣಾಧಿಕಾರಿ ಕೂಡ ಕಲಾವಿದ ರಘು ಅವರಿಂದ ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದರು.

ಇಂತಹ ಘಟನೆಗಳು ಪ್ರತಿ ದಿನ ನಮ್ಮ ರಾಜ್ಯದಲ್ಲಿ ಎಷ್ಟೋ ನಡೆಯುತ್ತವೆ. ಆದರೆ ಕೆಲವೇ ಕೆಲವು ಲೋಕಾಯುಕ್ತರ ಗಮನಕ್ಕೆ ಬರುತ್ತವೆ. ಭ್ರಷ್ಟಾಚಾರ ನಿರ್ಮೂಲನೆಗೆ ಅಣ್ಣಾ ಹಜಾರೆ ಹೋರಾಟ ನಡೆಸಿದ್ದಾರೆ. ಆದರೆ ನಮ್ಮಲ್ಲಿ ‘ಅಣ್ಣಾ, ಹಜಾರ್ ಕೊಟ್ಟರೆ ಮಾತ್ರ ಕೆಲಸ’ ಎನ್ನುವವರೇ  ಹೆಚ್ಚಾಗುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ನಮಗೆ ಒಬ್ಬ ಅಣ್ಣಾ ಹಜಾರೆ ಸಾಲದು. ಸಾವಿರ ಸಾವಿರ ಅಣ್ಣಾ ಹಜಾರೆಗಳು ಬೇಕಾಗುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.