ADVERTISEMENT

‘ಬುದ್ಧಿಸಂ-ಭಗವದ್ಗೀತೆ’-ಅಂಬೇಡ್ಕರ್ ಹೋಲಿಕೆ

ದೇವನೂರ ಮಹಾದೇವ
Published 7 ಜನವರಿ 2016, 19:30 IST
Last Updated 7 ಜನವರಿ 2016, 19:30 IST

ಸಿ.ಪಿ. ನಾಗರಾಜರವರು ‘ಭಗವದ್ಗೀತೆ’ಯನ್ನು ಮತ್ತೊಮ್ಮೆ ಓದಿದರೂ ಬುದ್ಧಿಸಂ ಅಂಶಗಳು ಅಲ್ಲಿಲ್ಲ ಎಂದು ಹೇಳಿದ್ದಾರೆ(ವಾ.ವಾ., ಜ. 7). ನಾನೀಗ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು ಸಂಪುಟ-3 ಪರಿಷ್ಕೃತ ಆವೃತ್ತಿ 2010ರಲ್ಲಿನ ಅಂಬೇಡ್ಕರ್ ಅವರ ಭಗವದ್ಗೀತೆಯ ಮೇಲಿನ ಪ್ರಬಂಧಗಳು ಪುಟ-289, 290, 291 ಇವುಗಳಿಂದ ಈ ಕೆಳಗಿನ ಅಂಶಗಳನ್ನು ಅವರ ಗಮನಕ್ಕೆ ತರುತ್ತಿದ್ದೇನೆ:

‘‘...ಈ ದೃಷ್ಟಿಕೋನಗಳ ಅಸಂಬದ್ಧತೆ, ಭಗವದ್ಗೀತೆ ಮತ್ತು ಬೌದ್ಧಸುತ್ತಗಳನ್ನು ತೌಲನಿಕವಾಗಿ ಅಧ್ಯಯನ ಮಾಡಿರುವ ಎಲ್ಲರನ್ನೂ ದಿಗ್ಭ್ರಮೆಗೊಳಿಸುತ್ತವೆ. ಏಕೆಂದರೆ ಸಾಂಖ್ಯತತ್ವದಿಂದ ಭಗವದ್ಗೀತೆ ತುಂಬಿಹೋಗಿದೆ ಎಂದು ಹೇಳುವುದು ನಿಜವಾದರೆ, ಗೀತೆಯು ಬೌದ್ಧಧರ್ಮದ ವಿಚಾರಗಳಿಂದ ತುಂಬಿಹೋಗಿದೆ ಎಂದು ಹೇಳುವುದು ಇನ್ನೂ ಹೆಚ್ಚು ನಿಜವಾಗಿದೆ. (ಈ ವಿಷಯದಲ್ಲಿ ಕಾಶ್ಮೀರದ ಮುಖ್ಯ ನ್ಯಾಯಾಧೀಶರಾದ ಎನ್.ಡಿ.ಬುದ್ಧಿರಾಜ ಅವರು ‘ಭಗವದ್ಗೀತೆ’ಯನ್ನು ತುಲನೆಮಾಡಿ, ಪ್ರತಿಯೊಂದು ಅಂಶದಲ್ಲಿಯೂ ಈ ವಿದ್ವಾಂಸರು ಗೀತೆ ಮತ್ತು ಬೌದ್ಧಧರ್ಮದ ಮೂಲಗ್ರಂಥಗಳ ಸಾಮ್ಯತೆಗಳನ್ನು ತೋರಿಸಲು ಪ್ರಯತ್ನಿಸಿದ್ದಾರೆ.) ಈ ಎರಡರ ನಡುವಣ ಸಾಮ್ಯತೆ ಕೇವಲ ವಿಚಾರದಲ್ಲಷ್ಟೇ ಅಲ್ಲ, ಭಾಷೆಯಲ್ಲಿಯೂ ಇದೆ. ಇದೆಷ್ಟು ನಿಜ ಎಂಬುದನ್ನು ಒಂದೆರಡು ಉದಾಹರಣೆಗಳು ತೋರಿಸುತ್ತವೆ.

ಭಗವದ್ಗೀತೆ ಬ್ರಹ್ಮನಿರ್ವಾಣವನ್ನು ಚರ್ಚಿಸುತ್ತದೆ. (ಮ್ಯಾಕ್ಸ್ ಮುಲ್ಲರ್: ‘ಮಹಾಪರಿನಿಬ್ಬಾಣ ಸುತ್ತ’, ಪುಟ 63) ಬ್ರಹ್ಮನಿರ್ವಾಣವನ್ನು ಗಳಿಸಲು ಇವು ಸೋಪಾನಗಳು: (i) ಶ್ರದ್ಧೆ (ಆತ್ಮವಿಶ್ವಾಸ), (ii) ವ್ಯವಸಾಯ (ದೃಢನಿರ್ಧಾರ); (iii) ಸ್ಮೃತಿ (ಗುರಿಯ ಸ್ಮರಣೆ); (iv) ಸಮಾಧಿ (ಗಂಭೀರ ಧ್ಯಾನ); ಮತ್ತು (v) ಪ್ರಜ್ಞೆ (ನೈಜ ಅರಿವು ಅಥವಾ ಅಂತರ್‌ನೋಟ). ಈ ನಿರ್ವಾಣ ತತ್ವವನ್ನು ಗೀತೆ ಎಲ್ಲಿಂದ ತೆಗೆದುಕೊಂಡಿತು? ಅದು ಉಪನಿಷತ್ತುಗಳಿಂದಲ್ಲ ಎಂಬುದು ಖಚಿತ. ‘ನಿರ್ವಾಣ’ ಶಬ್ದವನ್ನು ಯಾವ ಉಪನಿಷತ್ತೂ ಕೂಡ ಬಳಸುವುದಿಲ್ಲ.

ಈ ಇಡೀ ವಿಚಾರವೇ ವಿಶಿಷ್ಟವಾಗಿ ಬೌದ್ಧಧರ್ಮದ್ದು; ಅದನ್ನು ಬೌದ್ಧಧರ್ಮದಿಂದ ತೆಗೆದುಕೊಳ್ಳಲಾಗಿದೆ. ಈ ವಿಷಯದಲ್ಲಿ ಯಾರಿಗಾದರೂ ಏನೇ ಅನುಮಾನವಿದ್ದರೂ ಅವರು ಭಗವದ್ಗೀತೆಯ ಬ್ರಹ್ಮನಿರ್ವಾಣದ ಜೊತೆ ಮಹಾಪರಿನಿಬ್ಬಾಣ ಸುತ್ತದಲ್ಲಿ ಪ್ರತಿಪಾದಿಸಿರುವ ಬೌದ್ಧಕಲ್ಪನೆಯ ನಿರ್ವಾಣವನ್ನು ಹೋಲಿಸಿ ನೋಡಬಹುದು. ನಿರ್ವಾಣಕ್ಕೆ ಬದಲಾಗಿ ಇಡೀ ಬ್ರಹ್ಮನಿರ್ವಾಣ ಕಲ್ಪನೆಯನ್ನು ಗೀತೆ ತೆಗೆದುಕೊಂಡಿರುವುದು ಅದನ್ನು ಬೌದ್ಧಧರ್ಮದಿಂದ ಹರಣ ಮಾಡಿರುವ ವಿಚಾರವನ್ನು ಭಗವದ್ಗೀತೆ ಮರೆ ಮಾಡುವುದಕ್ಕಾಗಿ ಎಂಬ ವಸ್ತುಸ್ಥಿತಿ ಸಾಬೀತಾಗುತ್ತದಲ್ಲವೆ?

ಇನ್ನೊಂದು ಉದಾಹರಣೆಯನ್ನು ತೆಗೆದುಕೊಳ್ಳಿ: ಅಧ್ಯಾಯ 7 ಶ್ಲೋಕ 13–20ರಲ್ಲಿ ಕೃಷ್ಣನಿಗೆ ಯಾರು ಪ್ರಿಯ ಎಂಬ ಚರ್ಚೆಯಿದೆ; ಜ್ಞಾನಯೋಗಿಯೋ? ಕರ್ಮಯೋಗಿಯೋ? ಅಥವಾ ಭಕ್ತನೋ? ಭಕ್ತ ಪ್ರಿಯನೆಂದು ಕೃಷ್ಣ ಹೇಳುತ್ತಾನೆ; ಆದರೆ ಅವನಿಗೆ ಭಕ್ತನ ನೈಜಲಕ್ಷಣಗಳಿರಬೇಕು. ನಿಜಭಕ್ತನ ಲಕ್ಷಣವೇನು? ಕೃಷ್ಣನ ಪ್ರಕಾರ ಯಾರು ಮೈತ್ರಿ, ಕರುಣೆ, ಮುದಿತಾ ಮತ್ತು ಉಪೇಕ್ಷೆಯನ್ನು ಅನುಷ್ಠಾನ ಮಾಡುತ್ತಾನೋ ಅವನೇ ನಿಜವಾದ ಭಕ್ತ. ಪೂರ್ಣ ಭಕ್ತನ ಈ ಲಕ್ಷಣಗಳನ್ನು ಭಗವದ್ಗೀತೆ ಎಲ್ಲಿಂದ ತೆಗೆದುಕೊಂಡಿತು? ಮತ್ತೆ ಇದಕ್ಕೆ ಮೂಲ ಬೌದ್ಧಧರ್ಮ. ಇದಕ್ಕೆ ಆಧಾರ ಬೇಕೆನ್ನುವವರು ಹೃದಯ ಕೃಷಿಗೆ ಅಗತ್ಯವಾದ ಭಾವನೆಗಳನ್ನು ಬುದ್ಧ ಬೋಧಿಸಿರುವ ಮಹಾಪಾದನ ಸುತ್ತ ಮತ್ತು ತೇವಿಜ್ಞ ಸುತ್ತಗಳನ್ನು ಹೋಲಿಸಬಹುದು. ಈ ಇಡೀ ಸಿದ್ಧಾಂತವನ್ನು ಪದಶಃ ಬೌದ್ಧ ಧರ್ಮದಿಂದ ಎತ್ತಿಕೊಂಡಿರುವುದು ತೌಲನಾಕ್ರಮದಿಂದ ಗೊತ್ತಾಗುತ್ತದೆ.

ಮೂರನೆಯ ನಿದರ್ಶನವನ್ನು ತೆಗೆದುಕೊಳ್ಳಿ: ಕ್ಷೇತ್ರ-ಕ್ಷೇತ್ರಜ್ಞನ ವಿಷಯವನ್ನು ಭಗವದ್ಗೀತೆ 13ನೇ ಅಧ್ಯಾಯದಲ್ಲಿ ಚರ್ಚಿಸುತ್ತದೆ; ಮುಂದಿನ ಮಾತುಗಳಲ್ಲಿ ಕೃಷ್ಣ, ಜ್ಞಾನ ಮತ್ತು ಅಜ್ಞಾನವನ್ನು ಹೇಳುತ್ತಾನೆ:

‘ನಿರಹಂಕಾರ, ನಿರಾಡಂಬರತನ, ಅಹಿಂಸೆ, ಕ್ಷಮೆ, ಅರ್ಜವ, ಆಚಾರ್ಯೋಪಾಸನೆ, ಶೌಚ, ಸ್ಥೈರ್ಯ, ಆತ್ಮನಿಗ್ರಹ, ಇಂದ್ರಿಯಗಳ ವಿಷಯಗಳಲ್ಲಿ ವೈರಾಗ್ಯ, ಅನಹಂಕಾರ, ಜನ್ಮ, ಮೃತ್ಯು, ಜರೆ, ವ್ಯಾಧಿ, ದುಃಖ ಇವುಗಳಲ್ಲಿ ದೋಷವನ್ನು ನೋಡುವುದು, ಹೆಂಡತಿ, ಮನೆ, ಮಕ್ಕಳು ಮೊದಲಾದವುಗಳಲ್ಲಿ ಆಸಕ್ತಿ ಮತ್ತು ತನ್ಮಯತೆ ಇಲ್ಲದಿರುವುದು, ಇಷ್ಟಾನಿಷ್ಟಗಳು ಪ್ರಾಪ್ತವಾದಾಗ ಯಾವಾಗಲೂ ಸಮಚಿತ್ತತೆ ಮತ್ತು ನನ್ನಲ್ಲಿ ಅನನ್ಯಯೋಗದ ಮೂಲಕ ಅವ್ಯಭಿಚಾರಿಯಾದ ಭಕ್ತಿ, ನಿರ್ಜನಪ್ರದೇಶವನ್ನು ಸೇವಿಸುವಿಕೆ ಮತ್ತು ಜನಸಮೂಹದಲ್ಲಿ ಪ್ರೀತಿ(ರಾಗ)ಯಿಲ್ಲದಿರುವಿಕೆ, ಅಧ್ಯಾತ್ಮ ಜ್ಞಾನದಲ್ಲಿ ನಿಷ್ಠೆ, ತತ್ವಜ್ಞಾನಾರ್ಥದ ಆಲೋಚನೆ- ಇದು ಜ್ಞಾನವೆಂದು ಹೇಳಲ್ಪಟ್ಟಿದೆ; ಯಾವುದು ಇದಕ್ಕಿಂತ ಭಿನ್ನವಾಗಿರುವುದೋ ಅದು ಅಜ್ಞಾನ’.

ಈ ಶ್ಲೋಕಗಳಲ್ಲಿ ಭಗವದ್ಗೀತೆಯು ಬೌದ್ಧಧರ್ಮದ ಮುಖ್ಯ ತತ್ವಗಳನ್ನು ಪದಶಃ ಪುನರುಕ್ತಿಸಿರುವುದನ್ನು ಬುದ್ಧನ ಉಪದೇಶದ ಪರಿಚಯ ಇರುವ ಯಾರಾದರೂ ನಿರಾಕರಿಸಲು ಸಾಧ್ಯವೆ?... 17ನೇ ಅಧ್ಯಾಯದ 5, 6, 18, 19ನೇ ಶ್ಲೋಕಗಳಲ್ಲಿ ಕೃಷ್ಣ ಹೇಳುವುದು ಬುದ್ಧ ಉಪದೇಶದ ಅಕ್ಷರಶಃ ನಕಲೆಂಬುದನ್ನು ಯಾರಾದರೂ ಅನುಮಾನಿಸಲು ಸಾಧ್ಯವೇ?

ತಾತ್ವಿಕ ಪ್ರಾಧಾನ್ಯತೆಯಲ್ಲಿ ಪ್ರಮುಖವಾದವುಗಳನ್ನು ಮಾತ್ರ ಆರಿಸಿ ನಿದರ್ಶನಗಳನ್ನಾಗಿ ಕೊಟ್ಟಿದ್ದೇನೆ. ಭಗವದ್ಗೀತೆಯ ತನ್ನ ಆವೃತ್ತಿಯ ಅಡಿಟಿಪ್ಪಣಿಗಳಲ್ಲಿ ತೆಲಾಂಗ್ ನೀಡಿರುವ ಉಲ್ಲೇಖಗಳಲ್ಲಿ ಗೀತೆ ಮತ್ತು ಬೌದ್ಧಧರ್ಮಗಳಲ್ಲಿ ಇರುವ ಸಾಮ್ಯತೆಗಳ ವಿಷಯವನ್ನು ಎತ್ತಿಕೊಂಡು ಆಸಕ್ತರು ಮುಂದುವರಿಸಬಹುದು ಹಾಗೂ ತಮ್ಮ ಕುತೂಹಲವನ್ನು ತಣಿಸಿಕೊಳ್ಳಬಹುದು. ಆದರೆ ಬೌದ್ಧವಾದದಿಂದ ಎಷ್ಟು ಬೃಹತ್ತಾಗಿ ಭಗವದ್ಗೀತೆ ತುಂಬಿಹೋಗಿದೆ ಹಾಗೂ ಬೌದ್ಧಧರ್ಮದಿಂದ ಎಷ್ಟನ್ನು ಎತ್ತಿಕೊಂಡಿದೆಯೆಂದು ತೋರಿಸಲು ಈ ನಿದರ್ಶನಗಳು ಸಾಕು. ಸಂಕ್ಷಿಪ್ತವಾಗಿ ಹೇಳುವುದಾದರೆ ಬುದ್ಧ ಸುತ್ತಗಳ ಮೇಲೆಯೇ ಭಗವದ್ಗೀತೆ ಉದ್ದೇಶಪೂರ್ವಕವಾಗಿ ರೂಪಿತವಾಗಿದೆ’’ -ಡಾ.ಬಿ.ಆರ್. ಅಂಬೇಡ್ಕರ್

-ನಾನು ಇಲ್ಲಿ ಡಾ.ಅಂಬೇಡ್ಕರ್‌ರವರ ಅಧ್ಯಯನದ ಆಯ್ದ ಭಾಗವನ್ನಷ್ಟೇ ಮುಂದಿಟ್ಟಿದ್ದೇನೆ. ಆಸಕ್ತರು ಈ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಿರುವವರ ಸಂಶೋಧನೆಗಳನ್ನು ನೋಡಬಹುದು. ಅಂಬೇಡ್ಕರ್ ಹೇಳುವ ‘ಸಂಕ್ಷಿಪ್ತವಾಗಿ ಹೇಳುವುದಾದರೆ ಬುದ್ಧ ಸುತ್ತಗಳ ಮೇಲೆಯೇ ಭಗವದ್ಗೀತೆ ಉದ್ದೇಶಪೂರ್ವಕವಾಗಿ ರೂಪಿತವಾಗಿದೆ’- ಎಂಬ ಕಾಣುವಿಕೆಯ ಮೇಲೆ ನನ್ನ ಗಮನ ಕೇಂದ್ರೀಕರಿಸುತ್ತಿರುವೆ.

ಏನು ಉದ್ದೇಶ ಇರಬಹುದು? ವರ್ಣಸಂಕರ, ಚಾತುರ್‌ವರ್ಣಗಳನ್ನು ನಯನಾಜೂಕಾಗಿ ಸಮಾಜದಲ್ಲಿ ಒಪ್ಪಿತಗೊಳಿಸಲು ಬುದ್ಧಿಸಂನ ಅಂಶಗಳನ್ನೇ ಬಳಸಲ್ಪಟ್ಟಿರುವ ಈ ಸಾಂಸ್ಕೃತಿಕ ದುರಂತವನ್ನು ನಾವು ಕಾಣದವರಾಗಿದ್ದೇವೆ. ಜೊತೆಗೇ ಉನ್ನತ ಮೌಲ್ಯಗಳನ್ನು ಚರ್ಚಿಸುವುದಕ್ಕೆ ಇಲ್ಲಿ ಅವಕಾಶ ಕಲ್ಪಿಸಿಕೊಂಡು ‘ಭಗವದ್ಗೀತೆ  ಹೇಳೋಕೆ ಬದನೇಕಾಯಿ ತಿನ್ನೋಕೆ’ ನಡೆದಿದೆ. ಇದನ್ನು ವೈಚಾರಿಕತೆ, ವಿಶ್ಲೇಷಣೆ, ವಿಮರ್ಶೆ, ಭಾಷ್ಯ ಇತ್ಯಾದಿಗಳಿಂದ ಎದುರಿಸಿದರೆ ವಿಫಲರಾಗುತ್ತೇವೆ; ಸುಸ್ತಾಗುತ್ತೇವೆ. ಅಥವಾ ಪ್ರತಿಮಾನೋಟದಿಂದ ‘ಶೂದ್ರ ತಪಸ್ವಿ’ ಸಂಭವಿಸಿದಂತೆ ನಾವು ಸಾಂಸ್ಕೃತಿಕ ಕಣ್ಣು ಪಡೆದರೆ ಮಾತ್ರ ಅದು ನಮ್ಮನ್ನು ಉಳಿಸಬಲ್ಲುದೆ?....ಹುಡುಕುತ್ತಿರುವೆ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.