ನಾವು ಹೆಚ್ಚು ಚರ್ಚಿಸಬೇಕಿರುವುದು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಒತ್ತಡ ಹಾಗೂ ಸಮಯದ ನಿರ್ವಹಣೆ ಕುರಿತು ತಿಳಿವಳಿಕೆ ಮೂಡಿಸುವುದು ಹೇಗೆ ಎಂದೋ ಅಥವಾ ವಿದ್ಯಾರ್ಥಿಗಳ ಮೇಲೆ ಬಹಳಷ್ಟು ಒತ್ತಡ ಹೇರುವ ಈಗಿನ ಪರೀಕ್ಷಾ ಪದ್ಧತಿಯಲ್ಲಿ ತರಬೇಕಿರುವ ಸುಧಾರಣೆಗಳ ಕುರಿತೋ?
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪರೀಕ್ಷೆಯ ಮೇಲಿನ ಚರ್ಚೆ (ಪರೀಕ್ಷಾ ಪೇ ಚರ್ಚಾ) ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರೊಂದಿಗೆ ಇತ್ತೀಚೆಗಷ್ಟೇ ಮತ್ತೊಂದು ಬಾರಿ ಸಮಾಲೋಚನೆ ನಡೆಸಿದ್ದಾರೆ. ಮೊಬೈಲ್ ಬಳಕೆ ಕಡಿಮೆ ಮಾಡಿ, ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಅಡ್ಡದಾರಿ ತುಳಿಯಬೇಡಿ, ಸಮಯ ನಿರ್ವಹಣೆ ಮಾಡುವುದು ಹೇಗೆಂದು ಅಮ್ಮನಿಂದ ಕಲಿಯಿರಿ, ಟೀಕೆಯನ್ನು ಸಕಾರಾತ್ಮಕವಾಗಿ ಸ್ವೀಕರಿಸಿ, ಪ್ರಾದೇಶಿಕ ಭಾಷೆ ಕಲಿಯಿರಿ ಎನ್ನುವ ಸಲಹೆಗಳನ್ನು ಈ ಬಾರಿಯ ಪರೀಕ್ಷೆಯ ಮೇಲಿನ ಚರ್ಚೆ ವೇಳೆ ವಿದ್ಯಾರ್ಥಿಗಳಿಗೆ ನೀಡಿದ್ದಾರೆ.
ಪರೀಕ್ಷೆ ಎದುರಿಸುವುದು ಹೇಗೆ, ಒತ್ತಡ ನಿಭಾಯಿಸುವುದು ಹೇಗೆ, ವಿದ್ಯಾರ್ಥಿಗಳು ಸಮಯ ನಿರ್ವಹಣೆ ಹೇಗೆ ಮಾಡಬೇಕು ಎಂಬ ವಿಷಯಗಳ ಕುರಿತು ಸಲಹೆಗಳಿಗೇನೂ ನಮ್ಮಲ್ಲಿ ಕೊರತೆ ಇಲ್ಲ. ಈ ಸಲಹೆಗಳಿಗೂ ಪರೀಕ್ಷೆಯೂ ಸೇರಿದಂತೆ ಶಿಕ್ಷಣ ವ್ಯವಸ್ಥೆಯಲ್ಲಿ ತರಬೇಕಾದ ಸುಧಾರಣೆಗಳಿಗೂ ನೇರ ಸಂಬಂಧವೇನೂ ಇಲ್ಲ. ವ್ಯವಸ್ಥೆಯ ಹಂತದಲ್ಲಿ ಸುಧಾರಣೆ ತರುವ ಅಗತ್ಯವಿರುವಾಗ, ಚರ್ಚೆ ನಡೆಯಬೇಕಿರುವುದು ಶಿಕ್ಷಣ ಕ್ಷೇತ್ರದ ಅಸಲಿ ಬಿಕ್ಕಟ್ಟುಗಳ ಸುತ್ತ ಅಲ್ಲವೇ? ಸದ್ಯ ನಾವು ಅಳವಡಿಸಿಕೊಂಡಿರುವ ಪರೀಕ್ಷಾ ಪದ್ಧತಿಯಿಂದ ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿದೆ ಎಂಬುದನ್ನು ಮನಗಂಡ ಮೇಲೆ, ಒತ್ತಡರಹಿತ ಕಲಿಕೆ ಮತ್ತು ಪರೀಕ್ಷಾ ಪದ್ಧತಿಯನ್ನು ಅನ್ವೇಷಿಸುವುದು ಆದ್ಯತೆಯಾಗಬೇಕಲ್ಲವೇ?
ನಮ್ಮಲ್ಲಿ ಬೇರೂರಿರುವ ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆಯು ಶಿಕ್ಷಣ ಕ್ಷೇತ್ರದಲ್ಲೂ ದೊಡ್ಡ ಕಂದಕವನ್ನೇ ಸೃಷ್ಟಿ ಮಾಡಿರುವಾಗ, ಒಂದೇ ಮಾನದಂಡ ಇಟ್ಟುಕೊಂಡು ಎಲ್ಲ ವಿದ್ಯಾರ್ಥಿಗಳನ್ನೂ ಸಮಾನವಾಗಿ ಪರೀಕ್ಷಿಸುವ ಪದ್ಧತಿ ನ್ಯಾಯಯುತ
ವಾದುದೇ ಎಂದೂ ಪರಾಮರ್ಶಿಸಬೇಕಲ್ಲವೇ? ಸೌಲಭ್ಯವಂಚಿತ ವಿದ್ಯಾರ್ಥಿಗಳನ್ನು ಅನುಕೂಲಸ್ಥ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸಲು ಬಿಡುವುದು ಸೂಕ್ತವೇ? ಕಲಿಕಾ ಸಂಪನ್ಮೂಲಗಳ ಲಭ್ಯತೆಯಲ್ಲೇ ಅಸಮಾನತೆ ಏರ್ಪಟ್ಟಿರುವಾಗ, ಈಗಿನ ಪರೀಕ್ಷಾ ಫಲಿತಾಂಶದ ಮೂಲಕವೇ ಎಲ್ಲವನ್ನೂ ನಿರ್ಧರಿಸಲು ಸಾಧ್ಯವೇ?
ಓದುವ ವಿದ್ಯಾರ್ಥಿಗಳನ್ನು ಬಾಧಿಸುತ್ತಿರುವುದು ಪರೀಕ್ಷೆಯ ಒತ್ತಡವಷ್ಟೇ ಅಲ್ಲ. ತಮ್ಮ ಸಾಮಾಜಿಕ ಮತ್ತು ಕೌಟುಂಬಿಕ ಹಿನ್ನೆಲೆಯ ಕಾರಣಕ್ಕೂ ವಿದ್ಯಾರ್ಥಿಗಳು ನಾನಾ ರೀತಿಯ ಒತ್ತಡಗಳನ್ನು ಎದುರಿಸುತ್ತಿದ್ದಾರೆ. ಶಿಕ್ಷಣ ಪಡೆಯಲು ಮತ್ತು ಕಲಿಕೆಗೆ ಅಗತ್ಯವಿರುವ ಸಂಪನ್ಮೂಲಗಳನ್ನು ದಕ್ಕಿಸಿಕೊಳ್ಳಲು ಕೂಡ ಬಹಳಷ್ಟು ಹೆಣಗಾಡಬೇಕಾದ ಪರಿಸ್ಥಿತಿಯಲ್ಲಿ ಹಲವು ವಿದ್ಯಾರ್ಥಿಗಳಿದ್ದಾರೆ. ಶುಲ್ಕ ಕಟ್ಟಲು, ಮುಂದೆ ಓದಿಸಲು ಪೋಷಕರಿಗೆ ಸಾಧ್ಯವಾಗುವುದೋ ಇಲ್ಲವೋ ಎನ್ನುವ ಪ್ರಶ್ನೆಯೂ ಬಡ ವಿದ್ಯಾರ್ಥಿಗಳನ್ನು ಬಾಧಿಸುತ್ತಿದೆ. ಹೆಚ್ಚಿನ ಸರ್ಕಾರಿ ಶಾಲೆಗಳಲ್ಲಿ ಸುಸ್ಥಿತಿಯಲ್ಲಿರುವ ಕಟ್ಟಡ ಹಾಗೂ ಶೌಚಾಲಯದಂತಹ ಮೂಲಭೂತ ಸೌಕರ್ಯಗಳಿಗೂ ಅಭಾವವಿದೆ. ಇಂತಹ ಸೌಕರ್ಯವಂಚಿತ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳ ಅಳಲು ಆಲಿಸುವುದು ಕೂಡ ಆಳುವವರ ಆದ್ಯತೆ ಯಾಗಬೇಕಲ್ಲವೇ?
ಇನ್ನು ಓದಿಗೆ ಲಭ್ಯವಿರುವ ಸಮಯವೂ ಒಬ್ಬೊಬ್ಬ ವಿದ್ಯಾರ್ಥಿಗೆ ಒಂದೊಂದು ರೀತಿಯಲ್ಲಿ ಇರುತ್ತದೆ. ಮನೆಯಲ್ಲಿ ನಾನಾ ರೀತಿಯ ಕೆಲಸಗಳನ್ನು ದಿನನಿತ್ಯ ಮಾಡಿಕೊಂಡೇ ಓದಬೇಕಿರುವ ಕೌಟುಂಬಿಕ ಪರಿಸ್ಥಿತಿಯೂ ಹಲವರದ್ದಾಗಿದೆ. ಕುಟುಂಬ ನಿರ್ವಹಣೆ ಹಾಗೂ ಶಿಕ್ಷಣಕ್ಕೆ ಹಣ ಹೊಂದಿಸುವ ಸಲುವಾಗಿ ಅರೆಕಾಲಿಕ ಕೆಲಸಗಳನ್ನು ನಿರ್ವಹಿಸುತ್ತಲೇ ಓದು ಮುಂದುವರಿಸುತ್ತಿರುವ ವಿದ್ಯಾರ್ಥಿಗಳು ಕಾಣಸಿಗುವುದು ನಮ್ಮಲ್ಲಿ ಅಪರೂಪವೇನಲ್ಲ.
ಸಕಲ ಸೌಲಭ್ಯಗಳುಳ್ಳ ಶಾಲೆಗಳಲ್ಲಿ ಓದುವ ಅನುಕೂಲಸ್ಥರ ಮನೆಯ ಮಕ್ಕಳಿಗೆ ಸಕಲ ರೀತಿಯ ಸಲಹೆಗಳೂ ನೆರವುಗಳೂ ಸಕಾಲಕ್ಕೆ ದೊರಕುತ್ತಲೇ ಇರುತ್ತವೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಶಿಕ್ಷಣ ಸಚಿವಾಲಯ ಕಾಳಜಿ ತೋರಬೇಕಿರುವುದು, ಇಲ್ಲಗಳ ನಡುವೆಯೂ ಓದು ಮುಂದುವರಿಸುತ್ತಿರುವ ಮಕ್ಕಳ ಮೇಲಲ್ಲವೇ?
ವಿದ್ಯಾರ್ಥಿಗಳು ಮತ್ತು ಪೋಷಕರೊಂದಿಗೆ ಪರೀಕ್ಷೆಯ ಮೇಲೆ ಚರ್ಚೆ ನಡೆಸಲು ವ್ಯಯಿಸುವ ಸಮಯ ಹಾಗೂ ಸಂಪನ್ಮೂಲವನ್ನು, ಒಟ್ಟಾರೆ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಸುಧಾರಣೆಗೆ ವ್ಯಯಿಸುವುದು ಆದ್ಯತೆಯಾಗಬೇಕಲ್ಲವೇ? ಪರೀಕ್ಷೆಯ ಮೇಲಿನ ಚರ್ಚೆಯ ಸಂದರ್ಭದಲ್ಲಿ ಪ್ರಧಾನಿಯವರಿಂದ ಹೊರಹೊಮ್ಮುತ್ತಿರುವ ಸಲಹೆಗಳು, ಸೌಲಭ್ಯ ವಂಚಿತ ಮಕ್ಕಳ ಮೇಲಿನ ಒತ್ತಡವನ್ನೇನೂ ಕಡಿಮೆ ಮಾಡುವ ಹಾಗೆ ತೋರುತ್ತಿಲ್ಲ.
ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರಕಿಸುವ ದಿಸೆಯಲ್ಲಿ ಯೋಜನೆಗಳನ್ನು ರೂಪಿಸುವುದು ‘ಪರೀಕ್ಷಾ ಪೇ ಚರ್ಚಾ’ಗಿಂತ ಹೆಚ್ಚು ಅರ್ಥಪೂರ್ಣವಾದುದಲ್ಲವೇ?
ಕೋಚಿಂಗ್ ಸೆಂಟರ್ ಕೇಂದ್ರಿತ ಪರೀಕ್ಷೆಗಳ ಆಧಾರದಲ್ಲಿ ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವುದಕ್ಕೆ ಪರ್ಯಾಯವಾಗಿ, ಸೌಲಭ್ಯವಂಚಿತ ವಿದ್ಯಾರ್ಥಿಗಳನ್ನೂ ಒಳಗೊಳ್ಳುವ ಮಾದರಿಗಳನ್ನು ಅನ್ವೇಷಿಸು ವುದರ ಕುರಿತು ಚರ್ಚೆಗಳು ನಡೆಯಬೇಕಿರುವುದು ವರ್ತಮಾನದ ಅಗತ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.