ADVERTISEMENT

ಮಣ್ಣು ಎಂಬ ಜೀವ ಖಜಾನೆ

ಮಣ್ಣಿನ ಋಣ ತೀರಿಸುವುದಾಗಿ ಪದೇ ಪದೇ ಹೇಳುವ ನಾವು, ಮಣ್ಣಿಗೂ ಜೀವವಿದೆ ಎಂದು ಗ್ರಹಿಸುವುದಿಲ್ಲ!

ಗುರುರಾಜ್ ಎಸ್.ದಾವಣಗೆರೆ
Published 4 ಡಿಸೆಂಬರ್ 2019, 18:30 IST
Last Updated 4 ಡಿಸೆಂಬರ್ 2019, 18:30 IST
   

‘ನಂಬಿ ಕೆಟ್ಟವರಿಲ್ಲವೋ ಮಣ್ಣನ್ನು’ ಎಂದು ದಾಸವಾಣಿ ಹೇಳುತ್ತದೆ. ನಂಬಿ ನಡೆದರೆ ಬದುಕು ಕಟ್ಟಿಕೊಳ್ಳುವ ಕೆಲಸ ಸುಲಭದ್ದಲ್ಲ ಎನ್ನುವುದು ರೈತವಾಣಿ. ಮಣ್ಣಿನ ಸತ್ವ ಮೊದಲಿನಂತಿಲ್ಲ. ಕಳೆದ ಎರಡು ಶತಮಾನಗಳಲ್ಲಿ ಮಣ್ಣಿನ ಸ್ವರೂಪ ಬದಲಾಗಿದೆ. ರೈತರ ಕೈ ಹಿಡಿದು ಕೋಟ್ಯಂತರ ಜನರ ತುತ್ತಿನ ಚೀಲ ತುಂಬಿಸುವ ಕೆಲಸ ಮೊದಲಿನಷ್ಟು ಸಲೀಸಾಗಿ ನಡೆಯುತ್ತಿಲ್ಲ.

ನಿಸರ್ಗ ನಮಗೆ ನೀಡಿರುವ ಅತಿದೊಡ್ಡ ಜೀವ ಖಜಾನೆ ಮಣ್ಣು. ವಾತಾವರಣ ಹಿಡಿದಿಟ್ಟುಕೊಳ್ಳುವುದಕ್ಕಿಂತ ಮೂರು ಪಟ್ಟು ಹೆಚ್ಚಿನ ಇಂಗಾಲವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಮಣ್ಣಿಗಿದೆ. ಮಣ್ಣು ಅಂತರ್ಜಲ ಮಾಲಿನ್ಯಕಾರಕಗಳಿಗೆ ಫಿಲ್ಟರ್‌ನಂತೆ ಕೆಲಸ ಮಾಡುತ್ತದೆ. ವಿಶ್ವದ ಶೇ 10ರಷ್ಟು ಇಂಗಾಲದ ಡೈಆಕ್ಸೈಡ್‍ನ್ನು ಇಂಗಿಸಿಕೊಳ್ಳುತ್ತದೆ. ಒಂದು ಮುಷ್ಟಿ ಮಣ್ಣಿನಲ್ಲಿ 700 ಕೋಟಿ ಬ್ಯಾಕ್ಟೀರಿಯಾಗಳಿರುತ್ತವೆ
ಎಂದು ವಿಜ್ಞಾನ ಹೇಳುತ್ತದೆ. ಕಲ್ಲುಬಂಡೆಗಳ ಪುಡಿಯಾಗುವಿಕೆಯಿಂದ ಆರಂಭವಾಗುವ ಮಣ್ಣಿನ ಸೃಷ್ಟಿ, ಕೆಲವು ಸೆಂಟಿಮೀಟರಿನಷ್ಟು ಎತ್ತರ ಬೆಳೆಯಲು ಸಾವಿರ ವರ್ಷಗಳನ್ನೇ ತೆಗೆದುಕೊಳ್ಳುತ್ತದೆ. ಬಂಡೆಯ ಎಲ್ಲ ಖನಿಜಗಳೂ ಮಣ್ಣಾಗಿ ಬದಲಾಗಿ ತೇವಾಂಶ ಹೀರಿಕೊಳ್ಳುವ ಗುಣ ಪಡೆಯುತ್ತವೆ. ಅಲ್ಲಿ ಸೂಕ್ಷ್ಮಜೀವಿಗಳು ನೆಲೆಸಿ ಮಣ್ಣು ಫಲವತ್ತಾಗುತ್ತದೆ. ಈ ಪ್ರಕ್ರಿಯೆ ಕೋಟ್ಯಂತರ ವರ್ಷಗಳಿಂದ ನಡೆದು ಬಂದಿದೆ.

ಭಾರತದಲ್ಲಿ ಮಣ್ಣಿನ ಭಂಡಾರವೇ ಇದ್ದು, ಪ್ರಮುಖ 10 ಮಾದರಿಗಳಲ್ಲಿ ಅದನ್ನು ವರ್ಗೀಕರಿಸಲಾಗಿದೆ. ಪ್ರತೀ ಐದು ಸೆಕೆಂಡಿಗೆ ಫುಟ್‍ಬಾಲ್ ಆಟದ ಮೈದಾನದಷ್ಟು ದೊಡ್ಡದಾದ ಪ್ರದೇಶದ ಮಣ್ಣು ಸವಕಳಿ ಹೊಂದುತ್ತದೆ. ಭೂಮಿಯ ಮೇಲಿನ ಆರು ಇಂಚು ದಪ್ಪದ ಮೇಲ್ಮಣ್ಣು ಅತ್ಯಂತ ಫಲವತ್ತತೆ ಹೊಂದಿದ್ದು, ರೈತನ ಬೆಳೆಗೆ ಬೇಕಾದ ಎಲ್ಲ ಪೋಷಕಾಂಶಗಳನ್ನೂ ಹೊಂದಿರುತ್ತದೆ. ಗಾಳಿ ಬೀಸುವಾಗ, ನೀರು ಹರಿಯುವಾಗ ಮತ್ತು ಉಳುಮೆ ಮಾಡುವಾಗ ಮಣ್ಣಿನ ಸವಕಳಿ ಸಂಭವಿಸುತ್ತದೆ. ಈಗಾಗಲೇ ಭೂಭಾಗದ ಮೂರನೇ ಒಂದರಷ್ಟು ಪ್ರದೇಶ ಸವಕಳಿ ಹೊಂದಿದ್ದು ಬರಡಾಗಿದೆ. 2050ರ ವೇಳೆಗೆ ಅದರ ಪ್ರಮಾಣ ಶೇ 80ಕ್ಕೆ ತಲುಪಲಿದೆ ಎಂಬ ಆಘಾತಕಾರಿ ಮಾಹಿತಿಯನ್ನು ವಿಶ್ವಸಂಸ್ಥೆಯ ಆಹಾರ ಮತ್ತು ವ್ಯವಸಾಯ ವಿಭಾಗ ಈಗಷ್ಟೇ ಹೊರಹಾಕಿದೆ. ಈ ವರ್ಷದ ವಿಶ್ವ ಮಣ್ಣು ದಿನಾಚರಣೆಯನ್ನು (ಡಿ. 5) ‘ಮಣ್ಣಿನ ಸವಕಳಿ ನಿಲ್ಲಿಸಿ, ನಮ್ಮ ಭವಿಷ್ಯ ರಕ್ಷಿಸಿ’ ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸುವಂತೆ ಎಲ್ಲರಿಗೂ ಹೇಳಿದೆ. ವೈಜ್ಞಾನಿಕವಾಗಿ ಮಣ್ಣಿನ ಸಂರಕ್ಷಣೆಯಾಗಬೇಕೆಂದು ಆಗ್ರಹಿಸಿದೆ.

ADVERTISEMENT

ಮಣ್ಣು ಕೇವಲ ಭೌತಿಕ ವಸ್ತುವಾಗಿರದೆ ಭಾವನಾತ್ಮಕವಾಗಿಯೂ ನಮ್ಮನ್ನು ಆವರಿಸಿದೆ. ಪ್ರಾದೇಶಿಕತೆ, ರಾಷ್ಟ್ರೀಯತೆಯ ಪ್ರಶ್ನೆ ಬಂದಾಗಲೆಲ್ಲ ಮಣ್ಣಿನ ಋಣ ತೀರಿಸುವ ಮಾತನಾಡುತ್ತೇವೆ. ಆದರೆ ಮಣ್ಣಿಗೂ ಜೀವವಿದೆ ಎಂದು ಗ್ರಹಿಸುವುದಿಲ್ಲ. ನಿನ್ನ ತಲೆಯಲ್ಲೇನು ಮಣ್ಣು ತುಂಬಿದೆಯಾ? ನಿನಗೇನು ಬರುತ್ತೆ ಮಣ್ಣು ಎಂಬ ಮಾತಿನ ಧಾಟಿಯನ್ನು ಗಮನಿಸಿದರೆ ಸಾಕು, ನಾವು ಮಣ್ಣಿಗೆ ಕೊಟ್ಟಿರುವ ಸ್ಥಾನ ಥಟ್ಟನೆ ಅರಿವಾಗುತ್ತದೆ! ಕೃಷಿಯ ವಿಪರೀತ ವಿಸ್ತರಣೆಯಾಗಿ ಮಣ್ಣು ಸಾರ ಕಳೆದುಕೊಳ್ಳತೊಡಗಿತು. ಸಾರ ಹೆಚ್ಚಿಸಲು ಕೃತಕ ಪೋಷಕಾಂಶ ನೀಡಿ ಮಣ್ಣನ್ನು ಮಲಿನಗೊಳಿಸಲಾಯಿತು. ಬಹುಕಾಲದಿಂದಲೂ ಮಣ್ಣಿಗೆ ತಮ್ಮ ಕೊಳೆತ ಎಲೆಗಳ ಮೂಲಕ ಪೋಷಕಾಂಶ ಒದಗಿಸುತ್ತಿದ್ದಗಿಡ-ಮರಗಳನ್ನು ಕಡಿದದ್ದರಿಂದ ತೇವಾಂಶ ಸಿಗದೆ ಸವಕಳಿಯೂ ಜೋರಾಯಿತು.

ವಿಶ್ವಸಂಸ್ಥೆ ಪ್ರಕಾರ, ಭಾರತದ ಭೂಪ್ರದೇಶದಶೇ 55ರಷ್ಟು ಭಾಗ ಬರಡಾಗಿದೆ. ಸವಕಳಿಯಿಂದಾಗಿ ಪ್ರತೀ ವರ್ಷ 750 ಕೋಟಿ ಟನ್‍ನಷ್ಟು ಮೇಲ್ಮಣ್ಣು ನದಿಗಳ ಮೂಲಕ ಅಣೆಕಟ್ಟು ಇಲ್ಲವೇ ಸಮುದ್ರ ಸೇರುತ್ತಿದೆ. ಹೀಗೆ ಅಪವ್ಯಯವಾಗುವ ಮಣ್ಣಿನಲ್ಲಿ ಲಕ್ಷ ಲಕ್ಷ ಟನ್ ಪೋಷಕ ಸತ್ವಗಳು ಸೋರಿಹೋಗುತ್ತಿವೆ. ಹಸಿರು ಕ್ರಾಂತಿಯ ಫಲವಾಗಿ ಹೆಚ್ಚಿನ ಬೆಳೆಯನ್ನು ಕಂಡ ನಾವು, ಭೂಮಿಯ ಸಾರವನ್ನು ಅಷ್ಟೇ ದೊಡ್ಡ ಪ್ರಮಾಣದಲ್ಲಿ ಧ್ವಂಸ ಮಾಡಿದ್ದೇವೆ. ಬೆಳೆ ಕಸ ಸುಡುವುದು, ಒಂದರ ಮೇಲೊಂದು ಬೆಳೆ ತೆಗೆಯುವುದು ಮತ್ತು ಅತಿಯಾದ ಕೃತಕ ಗೊಬ್ಬರದ ಬಳಕೆಯಿಂದಾಗಿ ಶೇ 71ರಷ್ಟು ಕೃಷಿ ಜಮೀನು ಮುಂದಿನ ದಶಕಗಳಲ್ಲಿ ನಿಸ್ಸಾರಗೊಳ್ಳಲಿದೆ
ಎಂದು ಭಾರತೀಯ ವ್ಯವಸಾಯ ಸಂಶೋಧನಾ ಒಕ್ಕೂಟ ತಿಳಿಸಿದೆ. ವಾಯುಗುಣ ತುರ್ತುಸ್ಥಿತಿ ಮತ್ತು ಜಾಗತಿಕ ಹಸಿವೆಯನ್ನು ನಿಯಂತ್ರಿಸಲು ಮಣ್ಣಿನ ಸವಕಳಿ ನಿಲ್ಲಬೇಕು. ಪುನರುತ್ಪಾದಕ ಮತ್ತು ವಾಯುಗುಣಸ್ನೇಹಿ ಕೃಷಿ ನಮ್ಮದಾಗಬೇಕು.

ವಿಶ್ವದ ಸಾವಯವ ಕೃಷಿ ಉತ್ಪಾದಕರ ಪೈಕಿ ಶೇ 30ರಷ್ಟು ಜನ ಭಾರತದಲ್ಲಿದ್ದಾರೆ. ಸಾವಯವ ಮತ್ತು ಭೂಸ್ನೇಹಿ ಕೃಷಿ ಹೇಳಿಕೊಟ್ಟ ಫುಕುವೋಕಾ, ಶೂನ್ಯ ಬೇಸಾಯ ಪದ್ಧತಿಯ ಸುಭಾಷ್‌ ಪಾಳೇಕರ್, ಪ್ರಯೋಗ ಪರಿವಾರದ ಶ್ರೀಪಾದ್ ದಾಭೋಲ್ಕರ್ ಅವರನ್ನು ಅನುಸರಿಸುವವರ ಸಂಖ್ಯೆ ನಮ್ಮಲ್ಲಿ ಹೆಚ್ಚಾಗುತ್ತಿರುವುದು ಸಂತಸದ ಸಮಾಚಾರ. ಆದರೆ ಅದರ ಪ್ರಯತ್ನಕ್ಕೆ ಸೂಕ್ತ ಫಲ ಇನ್ನೂ ಸಿಕ್ಕಿಲ್ಲ ಮತ್ತು ಅದಿನ್ನೂ ಸದೃಢವಾಗಿಲ್ಲ ಎಂಬ ಕೊರಗಿದೆ. ಪರಿಸರ ರಕ್ಷಣೆಯ ಮಾತನಾಡುವ ಎಲ್ಲರೂ ನದಿ, ಪರ್ವತ, ಅರಣ್ಯಗಳ ಜೊತೆ ಮಣ್ಣಿನ ಕುರಿತೂ ಯೋಚಿಸಿ ಕೆಲಸ ಮಾಡಬೇಕಾಗಿದೆ. ಮಣ್ಣು ದಿನಾಚರಣೆಯು ಈ ಕಾರ್ಯಕ್ಕೆ ಸುಸಂದರ್ಭವಾಗಿ ಒದಗಿಬರಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.