ADVERTISEMENT

ಸಂಗತ | ಧೂಮಪಾನ: ಮುದ್ದು ಪ್ರಾಣಿಯೂ ಒದ್ದಾಡೀತು

ತಂಬಾಕು ಕೃಷಿ ಕುರಿತಾದ ಕೃಷಿಕರ ಮನಃಸ್ಥಿತಿಯನ್ನು ಬದಲಾಯಿಸಬೇಕಾಗಿದೆ

ಡಾ.ಮುರಳೀಧರ ಕಿರಣಕೆರೆ
Published 1 ಜೂನ್ 2023, 21:29 IST
Last Updated 1 ಜೂನ್ 2023, 21:29 IST
   

‘ಡಾಕ್ಟ್ರೇ, ನಾಯಿಗೆ ಸಿಗರೇಟಿಂದ ತೊಂದ್ರೆ ಉಂಟಾ?’ ಆ ಮಹಿಳೆಯ ಪ್ರಶ್ನೆ ಅರ್ಥವಾಗದೆ ಸುಮ್ಮನೆ ದಿಟ್ಟಿಸಿದೆ. ‘ನಮ್ ಯಜಮಾನ್ರು ಸಿಕ್ಕಾಬಟ್ಟೆ ಸಿಗರೇಟ್ ಸೇದ್ತಾರೆ. ನಾಯಿ ಜೊತೆ ಆಡ್ತಾ ಆಡ್ತಾ ಧಮ್ ಎಳೆಯೋ ಚಾಳಿ. ಎಷ್ಟೇ ಹೇಳಿದ್ರೂ ಈ ದುರಭ್ಯಾಸ ಬಿಡಿಸೋಕೆ ಆಗ್ತಿಲ್ಲ. ಅವರ ಆರೋಗ್ಯವಂತೂ ಹಾಳಾಗುತ್ತೆ, ನಾಯಿಗೂ ಸಮಸ್ಯೆ ಆಗುತ್ತಾ?’ ಆತಂಕದಿಂದ ಕೇಳಿದಳು.

ಪಶುವೈದ್ಯಕೀಯ ವೃತ್ತಿಯಲ್ಲಿ ಈ ತರಹದ ವಿಚಾರಣೆ ತುಂಬಾ ಅಪರೂಪ. ‘ನಿಮ್ ನಾಯಿಗೆ ಕೆಮ್ಮು, ಉಬ್ಬಸದಂತಹ ಸಮಸ್ಯೆ ಕಾಣಿಸಿಕೊಳ್ತಿದ್ಯಾ?’ ತಿರುಗಿ ಪ್ರಶ್ನಿಸಿದೆ. ‘ಕೆಮ್ಮು ಅಂತ ಇಲ್ಲ, ಆದ್ರೆ ಇತ್ತೀಚೆಗೆ ಸ್ವಲ್ಪ ಓಡಾಡಿದ್ರೂ ಉಬ್ಬಸ ಬರುತ್ತೆ. ಆ ಟೈಮಲ್ಲಿ ಉಸಿರಾಡಕ್ಕೆ ಸ್ವಲ್ಪ ಒದ್ದಾಡುತ್ತೆ. ಅದಕ್ಕಿನ್ನೂ ಆರು ತಿಂಗಳು. ಇಷ್ಟು ಬೇಗ್ನೆ ಇಂಥದ್ದೊಂದು ಪ್ರಾಬ್ಲಂ ಶುರುವಾಗಿದೆ. ಇದಕ್ಕೂ ಸಿಗರೇಟಿಗೂ ಸಂಬಂಧ ಉಂಟಾ?’ ಆಕೆಯ ಪ್ರಶ್ನೆಗೆ ಹೌದೆಂದು ತಲೆಯಾಡಿಸಿದೆ. ತಂಬಾಕು, ತಂಬಾಕಿನ ಹೊಗೆಯಿಂದ ಮುದ್ದು ಪ್ರಾಣಿಗಳ ಮೇಲಾಗುವ ದುಷ್ಪರಿಣಾಮಗಳನ್ನು ವಿವರಿಸಿದಾಗ, ಆ ಮಹಿಳೆಯ ಮೊಗದಲ್ಲಿ ಆತಂಕ, ಗಾಬರಿ ಎದ್ದು ಕಾಣಿಸುತ್ತಿತ್ತು!

ಧೂಮಪಾನದಿಂದ ಮಾನವನಿಗಷ್ಟೇ ಅಲ್ಲ, ಸಂಪರ್ಕಕ್ಕೆ ಬರುವ ಪ್ರಾಣಿಗಳಿಗೂ ಸಮಸ್ಯೆಯಾಗುತ್ತದೆ. ಬೀಡಿ, ಸಿಗರೇಟು, ಹುಕ್ಕಾಗಳ ಹೊಗೆ ಪಶುಗಳ ಆರೋಗ್ಯಕ್ಕೂ ಅನಾಹುತಕಾರಿ. ಧೂಮ ಸೇವನೆಯಿಂದ ಅಲರ್ಜಿ, ಕೆಮ್ಮು, ದಮ್ಮು, ಉಸಿರಾಟಕ್ಕೆ ತೊಂದರೆಯಾಗುವುದು, ಗಾಬರಿಗೊಳ್ಳುವುದು, ವರ್ತನೆಯಲ್ಲಿ ಬದಲಾವಣೆ, ಹಸಿವು ಮಂದವಾಗುವಂತಹ ಸಮಸ್ಯೆಗಳ ಜೊತೆಗೆ ದೀರ್ಘ ಕಾಲ ತಂಬಾಕಿನ ಹೊಗೆಗೆ ತೆರೆದುಕೊಂಡಾಗ ಶ್ವಾಸನಾಳದ ಉರಿಯೂತ, ಶ್ವಾಸಕೋಶದಲ್ಲಿ ತೀವ್ರ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಮುಂದೆ ಕ್ಯಾನ್ಸರ್‌ಗೂ ತಿರುಗುವ ಅಪಾಯವುಂಟು!

ADVERTISEMENT

ಇನ್ನು ಬಳಸಿ ಎಸೆದ ಸಿಗರೇಟ್, ಬೀಡಿಯ ತುಂಡುಗಳು, ಬೂದಿ, ತಂಬಾಕಿನ ಉತ್ಪನ್ನಗಳನ್ನು ಪ್ರಾಣಿಗಳು ತಿಂದಾಗ ನಿಕೋಟಿನ್ ವಿಷಬಾಧೆ ಕಾಣಿಸಬಹುದು. ವಾಂತಿ, ಭೇದಿ, ಸೆಳೆತ, ಅಪಸ್ಮಾರದಂತಹ ಸಮಸ್ಯೆಗಳಲ್ಲದೆ ಸೂಕ್ಷ್ಮ ಪ್ರಾಣಿಗಳ ಜೀವಕ್ಕೂ ಅಪಾಯವಾಗಬಹುದು! ಹಾಗಾಗಿ ನಾಯಿ, ಬೆಕ್ಕಿನಂತಹ ಮುದ್ದು ಪ್ರಾಣಿಗಳು, ಪಕ್ಷಿಗಳು ತಂಬಾಕಿನ ಸಂಪರ್ಕಕ್ಕೆ ಬರದಂತೆ ನೋಡಿಕೊಳ್ಳುವುದು ಮಾಲೀಕರ ಜವಾಬ್ದಾರಿ. ಅದರಲ್ಲೂ ಧೂಮಪಾನಿಗಳು ತಮ್ಮ ಸಾಕುಪ್ರಾಣಿಗಳು ಈ ಹೊಗೆ ಸೇವಿಸದಂತೆ ಎಚ್ಚರ ವಹಿಸಬೇಕು.

ಒಳಾಂಗಣದಲ್ಲಿ ಧೂಮಪಾನ ಮಾಡಿದಾಗ ಬಹಳ ಹೊತ್ತಿನವರೆಗೂ ಹೊಗೆಯ ಕಣಗಳು ಗಾಳಿಯಲ್ಲಿ ತೇಲುತ್ತಿರುತ್ತವೆ. ಇವು ಮಕ್ಕಳು, ಮನೆಯ ಇತರ ಸದಸ್ಯರು, ಮುದ್ದು ಪ್ರಾಣಿಗಳ ಮೇಲೆ ಪರೋಕ್ಷ ಧೂಮಪಾನದ ರೂಪದಲ್ಲಿ ದುಷ್ಪರಿಣಾಮ ಬೀರುವುದರಿಂದ ಜಾಗ್ರತೆ ವಹಿಸುವುದು ಅತ್ಯಗತ್ಯ.

ಹೌದು, ಗುಟ್ಕಾ, ಖೈನಿ, ಕಡ್ಡಿಪುಡಿ, ಹೊಗೆಸೊಪ್ಪು, ನಶ್ಯ, ಬೀಡಿ, ಸಿಗರೇಟ್, ಸಿಗಾರ್, ಪೈಪ್, ಚುಟ್ಟಾ, ಹುಕ್ಕಾ ಎಂದೆಲ್ಲಾ ವಿವಿಧ ರೂಪದಲ್ಲಿರುವ ತಂಬಾಕು ಸೇವನೆ ಆ ವ್ಯಕ್ತಿಯ ಆರೋಗ್ಯಕ್ಕಷ್ಟೇ ಅಲ್ಲ, ಸಂಪರ್ಕಕ್ಕೆ ಬರುವ ಎಲ್ಲ ಜೀವಿಗಳಿಗೂ ಅಪಾಯಕಾರಿ. ಕೆಮ್ಮು, ಉಬ್ಬಸದಂತಹ ತೊಂದರೆಗಳಲ್ಲದೆ ತುಟಿ, ಬಾಯಿ, ಗಂಟಲು, ಅನ್ನನಾಳ, ಉದರ, ಶ್ವಾಸಕೋಶದ ಕ್ಯಾನ್ಸರ್, ರಕ್ತನಾಳಗಳಲ್ಲಿ ತಡೆ, ಹೃದಯಾಘಾತ, ಲಕ್ವ, ಮೂಳೆ ಸವೆತ, ದೃಷ್ಟಿ ಸಮಸ್ಯೆ, ಲೈಂಗಿಕ ದೌರ್ಬಲ್ಯ, ಕುಂಠಿತ ಫಲವತ್ತತೆ, ಗರ್ಭಪಾತ, ಕಡಿಮೆ ತೂಕದ ಶಿಶುಗಳ ಜನನ... ಕೆಡುಕುಗಳ ಪಟ್ಟಿ ತುಂಬಾ ಉದ್ದವಿದೆ.

ನಮ್ಮ ದೇಶವೊಂದರಲ್ಲೇ 30 ಕೋಟಿಗೂ ಅಧಿಕ ಜನ ಒಂದಲ್ಲ ಒಂದು ರೂಪದಲ್ಲಿ ತಂಬಾಕು ಬಳಸುತ್ತಿದ್ದಾರೆ. ಇದರ ಪ್ರತ್ಯಕ್ಷ, ಪರೋಕ್ಷ ಪರಿಣಾಮದಿಂದಾಗಿ ವರ್ಷಕ್ಕೆ 15 ಲಕ್ಷದಷ್ಟು ಸಾವು ಸಂಭವಿಸುತ್ತಿದೆ ಎನ್ನುತ್ತಿವೆ ಅಂಕಿಅಂಶಗಳು. ಅಸಾಂಕ್ರಾಮಿಕ ಕಾಯಿಲೆಗಳು ಮತ್ತು ತತ್ಸಂಬಂಧದ ಸಾವುಗಳಲ್ಲಿ ಸಿಂಹಪಾಲು ಈ ಸೊಪ್ಪಿನ ಖಾತೆಯದ್ದೇ! ಹೊಗೆಸೊಪ್ಪಿನ ನಾಗಾಲೋಟದ ನಡುವೆಯೇ ‘ನಮಗೆ ಆಹಾರ ಬೇಕು, ತಂಬಾಕು ಅಲ್ಲ’ ಎಂಬ ಘೋಷಣೆಯೊಂದಿಗೆ ‘ವಿಶ್ವ ತಂಬಾಕುರಹಿತ ದಿನ’ (ಮೇ 31) ಆಚರಿಸಿದ್ದೇವೆ.

ತಂಬಾಕು ಕೃಷಿ ಕುರಿತಾದ ಕೃಷಿಕರ ಮನಃಸ್ಥಿತಿಯನ್ನು ಬದಲಾಯಿಸುವುದು ಪ್ರಮುಖ ಉದ್ದೇಶ. ನಮ್ಮಲ್ಲಿ ಅಂದಾಜು 4.5 ಲಕ್ಷ ಹೆಕ್ಟೇರ್‌ನಷ್ಟು ಕೃಷಿ ಭೂಮಿಯನ್ನು ಹೊಗೆಸೊಪ್ಪು ಬೆಳೆಯಲು ಬಳಸಲಾಗುತ್ತಿದೆ. ಆಹಾರ ಉತ್ಪಾದನೆಯ ಪ್ರದೇಶ ಕುಗ್ಗುತ್ತಿರುವ ಈ ಹೊತ್ತಿನಲ್ಲಿ, ತಂಬಾಕು ಬೆಳೆಗಾರರ ಮನವೊಲಿಸಿ ಅನ್ನದ ಬೆಳೆಗಳಿಗೆ ಹೊರಳಿಸುವತ್ತ ಪ್ರಯತ್ನಗಳು ಸಾಗಬೇಕಿದೆ.

ತಂಬಾಕು ಬೆಳೆಗೆ ಉಪಯೋಗಿಸುತ್ತಿರುವ ರಸಗೊಬ್ಬರ, ಕೀಟನಾಶಕಗಳಿಂದ ಪರಿಸರ ಕಲುಷಿತವಾಗುತ್ತಿದೆ. ದೊಡ್ಡ ಪ್ರಮಾಣದಲ್ಲಿ ನೀರೂ ಅಪವ್ಯಯವಾಗುತ್ತಿದೆ. ಬೆಳೆಯ ವಿಸ್ತರಣೆಗೆ ಅರಣ್ಯ ನಾಶವೂ ನಡೆದಿದೆ. ಇದಕ್ಕೆಲ್ಲಾ ತಡೆ ಹಾಕಿ ಆಹಾರ ಧಾನ್ಯಗಳ ಉತ್ಪಾದನೆಗೆ ಉತ್ತೇಜನ ನೀಡುವುದು ಸರ್ಕಾರದ ಆದ್ಯತೆಯಾಗಬೇಕು.

ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆ ಆದಾಯಕ್ಕಿಂತಲೂ ಆರೋಗ್ಯಕ್ಕಾಗಿ ಖರ್ಚು ಮಾಡಬೇಕಾದ ಹಣದ ಹಿಸ್ಸೆಯೇ ದೊಡ್ಡದಿದೆ. ಅಕಾಲಿಕ ಸಾವು, ಅಂಗವೈಕಲ್ಯದಂತಹ ಮಾನವ ಸಂಪನ್ಮೂಲದ ನಷ್ಟವನ್ನು ಪರಿಗಣಿಸಿದಾಗ, ಆರೋಗ್ಯದ ಜೊತೆಗೆ ಆರ್ಥಿಕತೆಯ ಮೇಲಾಗುತ್ತಿರುವ ದುಷ್ಪರಿಣಾಮಗಳು ಢಾಳಾಗಿ ಕಾಣಿಸುತ್ತವೆ. ತಂಬಾಕಿನಿಂದಾಗುವ ಹಾನಿಯ ಬಗ್ಗೆ ಬೆಳೆಗಾರರು ಮತ್ತು ಬಳಕೆದಾರರಲ್ಲಿ ನಿರಂತರವಾಗಿ ಅರಿವು ಮೂಡಿಸುವುದು ಅಗತ್ಯ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.