ADVERTISEMENT

ಪಾಂಡಿತ್ಯಕ್ಕೂ ಧರ್ಮಕ್ಕೂ ತಳಕು...

ಪರಿಶ್ರಮ, ವಿದ್ಯಾರ್ಹತೆಯ ಮೂಲಕ ಪಡೆದ ಕೆಲಸವನ್ನು ಧರ್ಮದ ನೆಲೆಯಲ್ಲಿ ಕಸಿದುಕೊಳ್ಳುವ ಪ್ರಯತ್ನಕ್ಕೆ ಏನೆನ್ನಬೇಕು?

ಡಾ.ಜ್ಯೋತಿ
Published 21 ನವೆಂಬರ್ 2019, 20:15 IST
Last Updated 21 ನವೆಂಬರ್ 2019, 20:15 IST
ಸಂಗತ
ಸಂಗತ   

ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಸಾಹಿತ್ಯ ಕಲಿಸಲು ನಿಯುಕ್ತರಾದ ಫಿರೋಜ್ ಖಾನ್ ಎನ್ನುವ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯ ವಿರುದ್ಧ ಹದಿನೈದು ದಿನಗಳಿಂದ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಯು ಭಾರತದ ಪ್ರಜಾಪ್ರಭುತ್ವದ ಆಶಯಕ್ಕೆ ತಕ್ಕುದಲ್ಲ. ಹುದ್ದೆಗೆ ಬೇಕಾಗಿರುವ ಎಲ್ಲಾ ವಿದ್ಯಾರ್ಹತೆಯನ್ನು ಪಡೆದು ನಿಯಮಾನುಸಾರ ಆಯ್ಕೆಯಾಗಿರುವ ಒಬ್ಬ ಅಧ್ಯಾಪಕರ ವಿರುದ್ಧ, ಧರ್ಮದ ನೆಲೆಯಲ್ಲಿ ಸಾರ್ವಜನಿಕವಾಗಿ ಪ್ರತಿಭಟಿಸುತ್ತಿರುವುದು ಮತ್ತು ಅವರ ನೇಮಕವನ್ನು ರದ್ದುಪಡಿಸಿ ಎಂದು ಆಗ್ರಹಿಸುತ್ತಿರುವುದು ಒಂದು ಆಘಾತಕಾರಿ ಬೆಳವಣಿಗೆ.

ಇದು, ಫಿರೋಜ್ ಖಾನ್ ಅವರ ಮೂಲಭೂತ ಹಕ್ಕಿನ ಪ್ರಶ್ನೆ. ಅಲ್ಲದೆ, ಬನಾರಸ್ ಹಿಂದೂ ವಿಶ್ವ
ವಿದ್ಯಾಲಯವು ಸಂವಿಧಾನದ 14ನೇ ವಿಧಿಗೆ ಬದ್ಧವಾಗಿದೆ. ಈ ವಿಧಿಯು ಜಾತಿ, ಧರ್ಮ ಅಥವಾ ಲಿಂಗ ಆಧಾರದ ತಾರತಮ್ಯವನ್ನು ನಿಷೇಧಿಸುತ್ತದೆ.

ಮೊದಲನೆಯದಾಗಿ, ಭಾಷೆ ಯಾವುದೇ ಒಂದು ಧರ್ಮದ ಸ್ವತ್ತಲ್ಲ. ಅದನ್ನು ಅಭ್ಯಸಿಸಿ ಪಾಂಡಿತ್ಯ ಪಡೆದು, ಅದರಲ್ಲಿ ಉದ್ಯೋಗ ಕಂಡುಕೊಳ್ಳುವ ಹಕ್ಕು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಸಮಾನವಾಗಿ ಇದೆ. ಇದಕ್ಕೆ ನಮ್ಮ ದೇಶದ ಇತಿಹಾಸದಲ್ಲಿಯೇ ಬಹಳಷ್ಟು ಉದಾಹರಣೆಗಳಿವೆ. ಬ್ರಿಟಿಷರ ಕಾಲದಲ್ಲಿ ಹಿಂದೂ ಧರ್ಮ ಮತ್ತು ಸಂಸ್ಕೃತ ಸಾಹಿತ್ಯವನ್ನು ಎಷ್ಟೋ ಮಂದಿ ಪಾಶ್ಚಾತ್ಯ ವಿದ್ವಾಂಸರು ಅಭ್ಯಸಿಸಿ ಅದನ್ನು ವಿಶ್ವದಾದ್ಯಂತ ಪಸರಿಸಿದ್ದಾರೆ. ಇದನ್ನು ನಾವು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ ಕೂಡ. ಹೊರದೇಶಗಳಲ್ಲಿ ಇಂದಿಗೂ ಹಿಂದೂ ಧರ್ಮದ ಭಾಗವೆಂದು ಪರಿಗಣಿತವಾಗಿರುವ ಯೋಗವನ್ನು ಕರಗತ ಮಾಡಿಕೊಂಡು, ಅದನ್ನು ವೃತ್ತಿಯಾಗಿಸಿಕೊಂಡ ವಿದೇಶಿಯರಿದ್ದಾರೆ.

ADVERTISEMENT

ವಿಶ್ವಮಾನವ ದೃಷ್ಟಿಕೋನ ಹೊಂದಬೇಕಿರುವ 21ನೇ ಶತಮಾನದಲ್ಲಿ ಭಾಷೆಗೂ ಧರ್ಮಕ್ಕೂ ಮಧ್ಯೆ ಸಂಬಂಧ ಇನ್ನೂ ಮುಂದುವರಿಯಬೇಕೆಂಬ ಸಂಕುಚಿತ ಮನೋಭಾವ ಇಂದಿನ ಯುವಪೀಳಿಗೆಗೆ ಹಿತವಲ್ಲ. ಇಂತಹ ಕ್ಷುಲ್ಲಕ ವಿಚಾರಕ್ಕಾಗಿ ಇಷ್ಟು ದಿನ ಪ್ರತಿಭಟನೆ ಮುಂದುವರಿಯಲು ಕಾರಣಕರ್ತರಾಗಿರುವವರು ಯಾರು ಮತ್ತು ಅವರ ಹಿಂದಿರುವ ಶಕ್ತಿಗಳು ಯಾವುವು ಎಂದು ಕಂಡುಕೊಳ್ಳಬೇಕಾಗಿದೆ.

ಹಾಗೆ ನೋಡಿದರೆ, ಇದೊಂದು ಆಧುನಿಕ ಏಕಲವ್ಯ ಪ್ರಕರಣವೆಂದು ಹೇಳಬಹುದು. ಜಾತಿ, ಧರ್ಮದ ನೆಪದಲ್ಲಿ ಅವಕಾಶ ವಂಚಿತರನ್ನಾಗಿಸುವ ರಾಜಕೀಯದ ಒಂದು ಭಾಗ. ಯಾಕೆಂದರೆ, ಈ ಮುಸ್ಲಿಂ ಪ್ರಾಧ್ಯಾಪಕರ ತಂದೆ ಇಂದಿಗೂ ಹಿಂದೂ ಮಂದಿರಗಳಲ್ಲಿ ಭಜನೆ ಮಾಡಿಸಿ ಜೀವನ ಸಾಗಿಸುತ್ತಿದ್ದಾರೆ (ಅದು, ಫಿರೋಜ್ ಖಾನ್ ಉದ್ಯೋಗ ಖಾತರಿಗೆ ಅಗತ್ಯವೆಂದೇನೂ ಹೇಳುತ್ತಿಲ್ಲ). ಅಲ್ಲದೆ, ಫಿರೋಜ್ ಖಾನ್ ಸಂಸ್ಕೃತದಲ್ಲಿ ಶೈಕ್ಷಣಿಕ ಉತ್ಕೃಷ್ಟತೆಯನ್ನು ಸಾಧಿಸಿ, ರಾಜಸ್ಥಾನ ಸರ್ಕಾರದ ‘ಸಂಸ್ಕೃತ ಯುವ ಪ್ರತಿಭಾ ಸಮ್ಮಾನ್’ ಪ್ರಶಸ್ತಿ ಸ್ವೀಕರಿಸಿದವರು. ತಮ್ಮ ಜೀವನವನ್ನೆಲ್ಲ ಸಂಸ್ಕೃತ ಸಾಹಿತ್ಯದ ಅಭ್ಯಾಸಕ್ಕೆ ಧಾರೆಯೆರೆದ ಇವರಿಗೆ, ತಮ್ಮ ವಿದ್ಯಾರ್ಹತೆಯ ಮೂಲಕ ಪಡೆದ ಉದ್ಯೋಗವನ್ನು, ಧರ್ಮದ ಹೆಸರಿನಲ್ಲಿ ನಿರಾಕರಿಸಬೇಕು ಎನ್ನುವುದು ಎಷ್ಟು ಸಮಂಜಸ? ಇದು ಪ್ರಸ್ತುತ ರಾಜಕೀಯ ವ್ಯವಸ್ಥೆಯ ಧಾರ್ಮಿಕ ಅಸಹಿಷ್ಣುತೆಯನ್ನು ಪ್ರದರ್ಶಿಸುತ್ತದೆ ಅಷ್ಟೆ.

ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ಖಾನ್ ಅವರ ಬೆಂಬಲಕ್ಕೆ ತನ್ನ ಹೇಳಿಕೆಗಳ ಮೂಲಕ ನಿಂತಿದೆ. ಆದರೆ, ಅಷ್ಟಕ್ಕೇ ಅದರ ಕರ್ತವ್ಯ ಮುಗಿಯುವುದಿಲ್ಲ. ಮುಖ್ಯವಾಗಿ, ವಿದ್ಯಾರ್ಥಿಗಳ ಬೇಡಿಕೆ ಅಸಾಂವಿಧಾನಿಕ ಎಂದು ಅವರಿಗೆ ಸ್ಪಷ್ಟಪಡಿಸಿ, ಈ ಪ್ರತಿಭಟನೆಯನ್ನು ಕೊನೆಗಾಣಿಸಲು ಎಲ್ಲ ಬಗೆಯ ಪ್ರಯತ್ನ ನಡೆಸಬೇಕು. ಆಶ್ಚರ್ಯವೆಂದರೆ, ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಈ ವಿಷಯಕ್ಕೆ ಸಂಬಂಧಿಸಿದಂತೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ!

ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಸಣ್ಣಪುಟ್ಟ ಕ್ರಿಯೆಗೂ ಪದೇ ಪದೇ ಪ್ರತಿಕ್ರಿಯೆ ನೀಡುವ ನಮ್ಮ ಕೇಂದ್ರ ಸಚಿವರು, ಬನಾರಸ್‌ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಸಂಬಂಧಿಸಿದಂತೆ ಮೌನ ವಹಿಸಿರುವುದು ಏಕೆ? ಸಂದೇಹ ಮೂಡುವುದು ಇಲ್ಲೇ! ಸೂಕ್ಷ್ಮವಾಗಿ ಗಮನಿಸಿದರೆ, ಇಡೀ ವ್ಯವಸ್ಥೆಯು ಜಾಣ ನಿದ್ರೆಗೆ ಜಾರಿ, ಆ ಮೂಲಕ ಪರೋಕ್ಷವಾಗಿ ಈ ವಿದ್ಯಾರ್ಥಿಗಳನ್ನು ಬೆಂಬಲಿಸುತ್ತಿದೆ ಎಂದು ಯಾರಲ್ಲಾದರೂ ಶಂಕೆ ಮೂಡಿದರೆ, ಅದಕ್ಕೆ ನಮ್ಮನ್ನು ಆಳುವವರು ಅನುಸರಿಸುವ ಇಂತಹ ಇಬ್ಬಗೆಯ ಧೋರಣೆಗಳೇ ಕಾರಣ. ತನ್ನ ಪರಿಶ್ರಮ, ವಿದ್ಯಾರ್ಹತೆಯ ಮೂಲಕ ಪಡೆದ ಕೆಲಸವನ್ನು ಧರ್ಮದ ನೆಲೆಯಲ್ಲಿ ಕಸಿದುಕೊಳ್ಳಲು ಹವಣಿಸುವ ಹುನ್ನಾರಗಳ ಬಗ್ಗೆ ಖಾನ್‌ ಅವರಿಗೆ ಹೇಗೆ ಅನ್ನಿಸಿರಬಹುದು?

ಬನಾರಸ್ ಹಿಂದೂ ವಿಶ್ವವಿದ್ಯಾಲಯವು ಪ್ರಧಾನಿ ನರೇಂದ್ರ ಮೋದಿಯವರು ಪ್ರತಿನಿಧಿಸುವ ವಾರಾಣಸಿ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ಇತ್ತೀಚೆಗಷ್ಟೇ, ಅಯೋಧ್ಯೆಯ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಹೊರಬಿದ್ದ ನಂತರ, ಕೋಮು ಸೌಹಾರ್ದದ ಅಗತ್ಯದ ಬಗ್ಗೆ ಮೋದಿ ಅವರು ದೇಶಕ್ಕೆ ಕರೆ ನೀಡಿದ್ದರು.ಪ್ರತಿಭಟನೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೂ ಅವರು ಹಿತವಚನ ನೀಡುವ ಅಗತ್ಯ ಇದೆ.

ಲೇಖಕಿ: ಸಹಾಯಕ ಪ್ರಾಧ್ಯಾಪಕಿ, ಇಂಗ್ಲಿಷ್‌ ವಿಭಾಗ, ಯೂನಿವರ್ಸಿಟಿ ಕಾಲೇಜ್‌ ಆಫ್‌ ಸೈನ್ಸ್‌,
ತುಮಕೂರು ವಿಶ್ವವಿದ್ಯಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.