ADVERTISEMENT

ಸಂಗತ | ಸಮೀಕ್ಷೆ: ಪ್ರಶ್ನೆ ಕೇಳುತ್ತ, ಎದುರಿಸುತ್ತ...

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಸಮೀಕ್ಷಾದಾರರು ಪ್ರಶ್ನೆ ಕೇಳುವುದರ ಜೊತೆಗೆ ತಾವೂ ಪ್ರಶ್ನೆಗಳನ್ನೂ ಎದುರಿಸಬೇಕಾಗುತ್ತದೆ. ಅದರಲ್ಲೂ, ಜಾತಿಯ ಪ್ರಶ್ನೆ!

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 23:30 IST
Last Updated 30 ಸೆಪ್ಟೆಂಬರ್ 2025, 23:30 IST
   

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಭಾಗವಾಗಿ, ಮೊದಲ ದಿನ ಒಂದು ಮನೆಯ ಮುಂದೆ ಬೆಳಗ್ಗೆಯೇ ನಿಂತೆ. ನನ್ನ ಉಡುಗೆ ತೊಡುಗೆ, ಸಮೀಕ್ಷಾದಾರರಿಗೆ ನೀಡಿರುವ ಬಿಳಿ ಟೋಪಿ, ಗುರುತಿನ ಕಾರ್ಡ್, ಇದೆಲ್ಲ ನೋಡಿ ಮನೆಯವರು ಒಳಗೆ ಕರೆದರಾದರೂ, ಕುರ್ಚಿಯನ್ನು ಆಚೆಯೇ ಹಾಕಿ, ಮಾಹಿತಿ ನೀಡಿ, ಕಳುಹಿಸಿದರು. ಬನ್ನಿ, ತಿಂಡಿ ತಿನ್ನೋಣವೆಂದು ಮಾತಿಗೆ ಕರೆದರಾದರೂ ಬಲವಂತಪಡಿಸಲಿಲ್ಲ.

ಎರಡನೇ ದಿನ ಮತ್ತೊಂದು ಮನೆಗೆ ಹೋದೆ. ಆ ಮನೆಗೆ ಹೋಗುವ ಮುಂಚೆಯೇ ಆ ಮನೆಯ ಹಿರಿಯ ಸದಸ್ಯರು, ಬೇರೆ ಮನೆಯ ಬಾಗಿಲಲ್ಲಿ ಕೂತು ಸಮೀಕ್ಷೆ ಮಾಡುತ್ತಿದ್ದ ನನ್ನನ್ನು ‘ನಮ್ಮ ಮನೆಗೂ ಬನ್ನಿ ಸರ್’ ಎಂದು ಸ್ವಾಗತಿಸಿದ್ದರು. ಒಂದೆರಡು ಮನೆ ಮುಗಿಸಿ ಆ ಮನೆಗೆ ಹೋದೆ. ವಯಸ್ಸಾದ ದಂಪತಿ, ಮಗ–ಸೊಸೆ, ಮೊಮ್ಮಗ ಎಲ್ಲ ಇದ್ದ ತುಂಬು ಕುಟುಂಬ. ‘ಆಚೆ ಕುರ್ಚಿ ಹಾಕಿ ಸಾಕು, ಇಲ್ಲೇ ಗಾಳಿ-ಬೆಳಕು, ನೆಟ್‌ವರ್ಕ್‌ ಎಲ್ಲಾ ಇದೆ’ ಎಂದರೂ ಬಿಡದೆ, ‘ಒಳಗೆ ಬನ್ನಿ’ ಎಂದು ನಡುಮನೆಯ ಕುರ್ಚಿ ಮೇಲೆ ಕೂರಿಸಿದರು.

ಮನೆಯ ಮುಖ್ಯಸ್ಥನ ತಂದೆಯ ವಿವರ, ಮಕ್ಕಳು ಮೊಮ್ಮಕ್ಕಳು, ವಿವಾಹವಾದಾಗಿನ ವಯಸ್ಸು, ಜಾತಿ, ಉಪಜಾತಿ, ಯಾಕೆ ಓದಲಿಲ್ಲ, ಆಡು– ಕುರಿ– ಕೋಳಿ ಎಷ್ಟಿವೆ, ಶೌಚಾಲಯ ಒಳಗಿದೆಯಾ, ಹೊರಗಿದೆಯಾ, ಸೌಲಭ್ಯಗಳು ಯಾಕೆ ಸಿಗಲಿಲ್ಲ, ರೋಗಗಳು ಇವೆಯಾ, ಆಸ್ತಿ ಕಳೆದುಕೊಂಡಿದ್ದೀರಾ, ಪರಿಹಾರ ಸಿಕ್ಕಿದೆಯಾ, ಇತ್ಯಾದಿ ಖಾಸಗಿಯೂ ಆಪ್ತವೂ ಆದ ಪ್ರಶ್ನೆಗಳಿಗೆ ಉತ್ತರ ಕೇಳಿ ಪಡೆಯುವಷ್ಟರಲ್ಲಿ ಸಮೀಕ್ಷಾದಾರನಾದ ನನಗೂ, ಸಮೀಕ್ಷೆಗೆ ಒಳಪಡುವವರ ನಡುವೆಯೂ ಅವಿನಾಭಾವ ಸಂಬಂಧ ಉಂಟಾಗಿರುತ್ತದೆ; ಒಬ್ಬರ ಗೋಳು ಇನ್ನೊಬ್ಬರು ಕೇಳುವಂತೆ. ಆ ಮನೆಯ ಒಡತಿ ‘ಯಾಕೆ ಕೇಳ್ತೀರ ಸಾ, ನಮ್ಮವ ಅಕ್ಕಿ ಕಾರ್ಡ್ ಕಿತ್ತಾಕ್ತರೆ, ಅವರು ಕೊಡೋದು ಬೇಡ ಕಿತ್ಕೊಣೋದು ಬೇಡ’ ಎಂದು ಆಗಿಂದಾಗ್ಗೆ ತಮ್ಮ ಆತಂಕವನ್ನು ಪ್ರಕಟಿಸುತ್ತಲೇ ಇದ್ದರು. ಇವೆಲ್ಲದ್ದರ ನಡುವೆ ಆ ಮನೆಯ ಸೊಸೆ, ನಾನು ಬೇಡ ಎಂದರೂ, ತಿಂಡಿ ತಂದುಕೊಟ್ಟರು. ಮನೆಯ ಯಜಮಾನರೂ ‘ತಿನ್ನಿ ಸರ್, ಬೆಳಗ್ಗೇನೆ ಬಂದಿದೀರಿ’ ಎಂದು ಪ್ರೀತಿಯಿಂದ ಒತ್ತಾಯಿಸಿದರು. ಅವರ ಪ್ರೀತಿ–ಆದರಕ್ಕೆ ಸೋಲಲೇಬೇಕಾಯಿತು. ಆ ವೇಳೆಗೆ ಸಮೀಕ್ಷೆಯ ಅಂತಿಮ ಹಂತ ತಲಪಿಯಾಗಿತ್ತು. ಪ್ರೀತಿ, ವಿಶ್ವಾಸ ತುಂಬಿರುವ ಅವರ ಕೂಡುಕುಟುಂಬದ ಬಗ್ಗೆ ನಾನೂ ಮೆಚ್ಚುಗೆಯ ಮಾತಾಡಿದೆ.

ADVERTISEMENT

ನನ್ನ ಅರವತ್ತೂ ಪ್ರಶ್ನೆಗಳಿಗೆ ತನ್ಮಯತೆಯಿಂದ ಉತ್ತರಿಸಿದ ಅವರು, ನನ್ನನ್ನು ಒಂದಾದರೂ ಪ್ರಶ್ನೆ ಕೇಳಲೇಬೇಕಲ್ಲವೆ? ಅವಿನಾಭಾವ ಸಂಬಂಧ ಏರ್ಪಟ್ಟ ನಂತರವೂ ಅವರು ಕೇಳದಿದ್ದರೆ, ನಾನು ಹೇಳದಿದ್ದರೆ ಹೇಗೆ? ‘ನಿಮ್ದು ಯಾವ ಜಾತಿ ಸರ್?’ ಎಂಬ ಪ್ರಶ್ನೆ ಬಂದೇ ಬಿಟ್ಟಿತು. ಸಮೀಕ್ಷೆ ಸಂದರ್ಭದಲ್ಲಿ ಇಂಥ ಪ್ರಶ್ನೆಯನ್ನು ಎದುರಿಸಬೇಕಾದ ಸಂದರ್ಭ ಸಾಮಾನ್ಯವಾಗಿ ಬಂದಿತ್ತಾದರೂ, ಆಗೆಲ್ಲ ನಾನು ಮನೆಯ ಆಚೆ ಇರುತ್ತಿದ್ದೆ. ಇಲ್ಲಿ ಪ್ರಶ್ನೆ ಬಂದಾಗ ನಾನು ಅವರ ಮನೆಯೊಳಗಿದ್ದೆ. ಅಲ್ಲೇ ತಿಂಡಿ ತಿಂದು ಕೈತೊಳೆದಿದ್ದೆ.

‘ನನ್ನದು ಸರ್ಕಾರಿ ಕೆಲಸ. ಇದನ್ನೆಲ್ಲ ನೀವು ಕೇಳುವಂತಿಲ್ಲ’ ಎಂದು ಕಾನೂನಾತ್ಮಕ ಪರಿಹಾರ ಹುಡುಕಿಕೊಳ್ಳಬಹುದಾದರೂ, ಅವರ ಜಾತಿ– ಉಪಜಾತಿಯನ್ನೆಲ್ಲ ಕೇಳಿ ಬರೆದುಕೊಳ್ಳುವ ಸಮೀಕ್ಷಾದಾರನಿಗೆ ಅಷ್ಟರಲ್ಲಾಗಲೇ ಸಂಬಂಧ ಕಾನೂನು ಕಟ್ಟಳೆ ಮೀರಿ ಬೆಳೆದಿರುತ್ತದೆ. ಆ ಪ್ರಶ್ನೆಗೆ ಉತ್ತರಿಸುವ ನೈತಿಕತೆ ಉದ್ಭವವಾಗಿರುತ್ತದೆ. ನನಗೆ ತಳಮಳ ಶುರುವಾಯಿತು. ಅವರ ಅಷ್ಟೂ ಹೊತ್ತಿನ ಸಂತೋಷ, ನಿರುಮ್ಮಳತೆಯನ್ನು ಹಾಗೇ ಉಳಿಸುವ ಒಂದು ಜಾತಿಯ ಹೆಸರು ಹೇಳಿ ಕೈತೊಳೆದುಕೊಳ್ಳಲೆ? ನನ್ನ ನಿಜ ಜಾತಿಯನ್ನು ಬಹಿರಂಗಗೊಳಿಸಿ ಅವರ ಆದರ ಆತಿಥ್ಯಕ್ಕೆ ಅವರಲ್ಲೇ ಪಶ್ಚಾತ್ತಾಪ ಉಂಟಾಗುವಂತೆ ಮಾಡಲೆ? ಆತ್ಮಸಾಕ್ಷಿಗೆ ವಿರುದ್ಧವಾಗಿ ಸುಳ್ಳು ಹೇಳಿ ಅವರನ್ನು ಸಿಹಿಯಲ್ಲಿ ಇರಿಸಲೇ ಅಥವಾ ನಿಜವನ್ನೇ ಹೇಳಿ ಕಹಿಯಾಗಿಸಲೆ? ಗೊಂದಲಕ್ಕೆ ಬಿದ್ದೆ.

ಆ ಮನೆಯಿಂದ ಆಚೆ ಬರುವಾಗ... ಒಂದು ಘಟನೆ ನೆನಪಾಗುತ್ತಿತ್ತು: ಶುಭ್ರ ಬಟ್ಟೆ ಧರಿಸಿ ನಡೆದು ಹೋಗುತ್ತಿದ್ದ ಬಾಲಕ ಅಂಬೇಡ್ಕರ್ ಮತ್ತು ಆತನ ಸೋದರನನ್ನು ದಾರಿಯಲ್ಲಿ ಹೋಗುತ್ತಿದ್ದ ಎತ್ತಿನ ಗಾಡಿಯಾತ ಬಂಡಿಯಲ್ಲಿ ಕೂರಿಸಿಕೊಂಡು ಹೋಗುವಾಗ, ಮಾತಿನ ಮಧ್ಯೆ ಜಾತಿ ಸ್ಫೋಟಗೊಂಡು ಬಂಡಿಯ ಮೂಕು ಎತ್ತಿ ಕಸದ ಗೊಬ್ಬರದಂತೆ ಉರುಳಿಸಿದ ಘಟನೆ...

ಜಾತಿ ಜಿಜ್ಞಾಸೆಯನ್ನೇ ತಲೆಯಲ್ಲಿ ತುಂಬಿಕೊಂಡು ಸಾಗುತ್ತಿದ್ದ ನನ್ನನ್ನು ಮತ್ತೆ ಹಿಡಿದು ನಿಲ್ಲಿಸಿದ್ದು, ನಾನು ಸಮೀಕ್ಷೆ ನಡೆಸಿದ ಮೊದಲ ಮನೆಯಲ್ಲಿ ಸಿಕ್ಕ ಯುವಕ. ಆತನಿಗೆ ಆ ವೇಳೆಗಾಗಲೇ ಹೇಗೋ ನನ್ನ ಜಾತಿ ಪತ್ತೆಯಾಗಿ, ‘ನಿಮ್ಮ ಉಡುಗೆ ತೊಡುಗೆ ನೋಡಿ, ನೀವ್ಯಾರೋ ಮೇಲ್ಜಾತಿಯವರೆನಿಸಿ ತಿಂಡಿಗೆ ಕರೆಯಲಿಲ್ಲ ಸರ್. ನಮ್ಮ ಮನೆ ಅಷ್ಟೊಂದು ಚೆನ್ನಾಗಿಯೂ ಇರಲಿಲ್ಲ. ಹಾಗಾಗಿ, ಒಳಗೂ ಕರೆಯದೆ ಆಚೆಯೇ ಕೂರಿಸಿದೆವು. ಇವತ್ತಾದರೂ ಬನ್ನಿ ಸರ್’ ಎಂದು ಒತ್ತಾಯಿಸತೊಡಗಿದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.