ಸಂಗತ
ವಿಜಯಪುರದ ಖಾಸಗಿ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳ ಹೊಡೆದಾಟದಲ್ಲಿ ಗಾಯಗೊಂಡ ಐದನೇ ತರಗತಿಯ ವಿದ್ಯಾರ್ಥಿ ಮೃತಪಟ್ಟ ವರದಿ ಓದಿ ದಿಗ್ಭ್ರಮೆಯಾಯಿತು. ಮಕ್ಕಳ ಭವಿಷ್ಯವನ್ನು ರೂಪಿಸುವ ಕಲಿಕಾ ಕೇಂದ್ರಗಳಲ್ಲಿ ಹಿಂಸಾತ್ಮಕ ಘಟನೆಗಳು ನಡೆಯುವುದು ಆತಂಕದ ಸಂಗತಿ.
ಮನೋವಿಜ್ಞಾನಿಗಳು ಹೇಳುವಂತೆ, ಸಾಮಾಜಿಕ ಮಾಧ್ಯಮಗಳ ವ್ಯಸನ ಮತ್ತು ಶೈಕ್ಷಣಿಕವಾಗಿ ಪಾಲಕರ ಅತಿಯಾದ ನಿರೀಕ್ಷೆ ಮಕ್ಕಳಲ್ಲಿ ಹೆಚ್ಚುತ್ತಿರುವ ಹಿಂಸಾಪ್ರವೃತ್ತಿಗೆ ಮುಖ್ಯ ಕಾರಣಗಳಾಗಿವೆ. ಸಮೀಕ್ಷೆಯೊಂದರ ಪ್ರಕಾರ, ಪ್ರತಿ ಹತ್ತರಲ್ಲಿ ಆರು ಮಕ್ಕಳು ದಿನದಲ್ಲಿ ಮೂರು ಗಂಟೆಗಳಷ್ಟು ಸಮಯವನ್ನು ಸಾಮಾಜಿಕ ಮಾಧ್ಯಮದ ಉಪಯೋಗಕ್ಕೆ ವಿನಿಯೋಗಿಸುತ್ತಿದ್ದಾರೆ.
ಕುಟುಂಬದ ಸದಸ್ಯರೆಲ್ಲ ಒಂದೇ ಸೂರಿನಡಿ ವಾಸಿಸುವ ಚಿತ್ರಣ ಈಗ ನೋಡಲು ಸಿಗುವುದು ಕಷ್ಟ. ಸಣ್ಣ ಕುಟುಂಬಗಳಲ್ಲಿ ಪತಿ–ಪತ್ನಿ ಇಬ್ಬರೂ ಸಾಮಾನ್ಯವಾಗಿ ಉದ್ಯೋಗಿಗಳಾಗಿರುತ್ತಾರೆ. ಅಂಥ ಸಂದರ್ಭದಲ್ಲಿ, ಶಾಲಾ ಅವಧಿಯ ನಂತರ ಮನೆಯಲ್ಲಿ ಮಕ್ಕಳನ್ನು ಒಂಟಿತನ ಬಾಧಿಸುತ್ತಿದೆ. ಮಕ್ಕಳ ಒಂಟಿತನವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಪಾಲಕರೇ ಮುಂದಾಗಿ ಮಕ್ಕಳ ಕೈಗೆ ಮೊಬೈಲ್ ಕೊಡುತ್ತಿದ್ದಾರೆ. ಆದರೆ, ಅಂತರ್ಜಾಲದಲ್ಲಿ ಮಕ್ಕಳು ಏನನ್ನು ವೀಕ್ಷಿಸಬೇಕು ಎನ್ನುವುದು ಪಾಲಕರ ನಿಯಂತ್ರಣಕ್ಕೆ ಒಳಪಟ್ಟಿಲ್ಲ.
ಭವಿಷ್ಯದಲ್ಲಿ ಉತ್ತಮ ಬದುಕಿ ಗಾಗಿ ಮಕ್ಕಳು ಸ್ಪರ್ಧಾತ್ಮಕವಾದ ವರ್ತಮಾನದಲ್ಲಿ ಬದುಕಬೇಕಾಗಿದೆ. ಸದ್ಯದ ಸಂದರ್ಭದಲ್ಲಿ ಮಕ್ಕಳ ಕಲಿಕೆಯನ್ನು ಸ್ಪರ್ಧೆಯಾಗಿ ನೋಡಲಾಗುತ್ತಿದೆ. ಸ್ಪರ್ಧಾತ್ಮಕ ಬೆಳವಣಿಗೆಗೆ ಅಗತ್ಯವಾದ ಎಲ್ಲ ಅವಶ್ಯಕತೆಗಳನ್ನು ಮಕ್ಕಳಿಗೆ ಒದಗಿಸಲಾಗುತ್ತಿದೆ. ಪಾಲಕರ ಮಹತ್ವಾಕಾಂಕ್ಷೆಯ ಪರಿಣಾಮ, ಮಕ್ಕಳು ಸ್ಪರ್ಧಾತ್ಮಕ ಜಗತ್ತಿಗೆ ತಮ್ಮನ್ನು ಒಡ್ಡಿಕೊಳ್ಳಲೇಬೇಕು. ಈ ಸ್ಪರ್ಧಾತ್ಮಕ ಓಟದಲ್ಲಿ ಹಿಂದೆ ಬೀಳುವ ಮಕ್ಕಳು ಸಹಜವಾಗಿಯೇ ಸಮಾಜದ ಬಗ್ಗೆ ಕಹಿ ಬೆಳೆಸಿಕೊಳ್ಳುವ ಸಾಧ್ಯತೆಯಿದೆ. ಗೆಲುವು ಸಾಧಿಸಿದ ಮಕ್ಕಳು ಪ್ರೀತಿ, ವಾತ್ಸಲ್ಯಗಳಿಲ್ಲದೆ ಯಂತ್ರದಂತಾಗುತ್ತಾರೆ.
ಶಾಲೆ–ಕಾಲೇಜುಗಳಲ್ಲಿನ ವಾತಾವರಣವೂ ಮಕ್ಕಳಲ್ಲಿ ಹೆಚ್ಚುತ್ತಿರುವ ಹಿಂಸೆಯ ಪ್ರವೃತ್ತಿಗೆ ಕಾರಣವಾಗುತ್ತಿದೆ. ವಿದ್ಯಾರ್ಥಿಗಳನ್ನು ಅಜ್ಞಾನದ ಕತ್ತಲೆಯಿಂದ ಜ್ಞಾನದ ಬೆಳಕಿನೆಡೆಗೆ ಕೈಹಿಡಿದು ಕರೆದೊಯ್ದು ಮಾದರಿಯಾಗಬೇಕಾದ ಶಿಕ್ಷಕರಲ್ಲಿ ಕೆಲವರು ಕ್ರೌರ್ಯ ಮೆರೆದು, ಇಡೀ ಶಿಕ್ಷಕ ಸಮೂಹಕ್ಕೆ ಕಳಂಕ ತರುತ್ತಿದ್ದಾರೆ. ಜಾತಿ, ಧರ್ಮ ಆಧರಿಸಿ ತರಗತಿಗಳಲ್ಲಿ ವಿದ್ಯಾರ್ಥಿಗಳ ನಡುವೆ ತಾರತಮ್ಯದ ಗೋಡೆ ಕಟ್ಟುತ್ತಿರುವ ಶಿಕ್ಷಕರ ಸಂಖ್ಯೆ ಕಡಿಮೆಯಿಲ್ಲ. ತರಗತಿಯ ಕೋಣೆಯಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡುವುದು, ಮಕ್ಕಳನ್ನು ಲೈಂಗಿಕವಾಗಿ ಶೋಷಣೆಗೆ ಒಳಪಡಿಸುವುದು ಇತ್ಯಾದಿ ದುರ್ವರ್ತನೆಗಳು ಶಿಕ್ಷಕರಲ್ಲಿ ಕಂಡುಬರುತ್ತಿವೆ. ಶಿಕ್ಷಕರ ಇಂಥ ಅಸಂಗತ ವರ್ತನೆ ವಿದ್ಯಾರ್ಥಿಗಳನ್ನು ಕ್ರೌರ್ಯಕ್ಕೆ ಪ್ರೇರೇಪಿಸುತ್ತಿದೆ.
ಯಶವಂತ ಚಿತ್ತಾಲರು ಹೇಳಿದಂತೆ, ಹಣಕ್ಕಾಗಿ ಅಧಿಕಾರವನ್ನು, ಅಧಿಕಾರಕ್ಕಾಗಿ ಹಣವನ್ನು ಹೀಗೆ ಒಂದು ಇನ್ನೊಂದನ್ನು ಬೆನ್ನಟ್ಟುವಂಥ ಆತ್ಮಹೀನವೂ ಅರ್ಥಶೂನ್ಯವೂ ಆದ ಕ್ರಿಯೆಯಲ್ಲಿ ತೊಡಗಿಸಿಕೊಂಡಿರುವ ನಮ್ಮನ್ನು ಆಗೀಗಲಾದರೂ ಮನುಷ್ಯರಾಗಿ ಉಳಿಸುವ ಬಲ ಬಹುಶಃ ಕಲೆಗಳಿಗಷ್ಟೇ ಇದೆಯೇನೋ. ಈ ಕಲೆಗಳಲ್ಲಿ ಸಿನಿಮಾ ಮಾಧ್ಯಮವೂ ಒಂದು. ಆತಂಕದ ಸಂಗತಿ ಎಂದರೆ, ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಉತ್ತಮ ಆಸಕ್ತಿ ಮತ್ತು ಅಭಿರುಚಿಯನ್ನು ಉತ್ತೇಜಿಸುವ ಸಿನಿಮಾಗಳ ಸಂಖ್ಯೆ ಕ್ಷೀಣಿಸುತ್ತಿದೆ. ಸಿನಿಮಾಗಳು ಮನರಂಜನೆಯ ಹೆಸರಿನಲ್ಲಿ ಮಕ್ಕಳನ್ನು ದಾರಿತಪ್ಪಿಸುತ್ತಿವೆ; ಅತಿಯಾದ ಹಿಂಸಾತ್ಮಕ ದೃಶ್ಯಗಳು ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ. ಮಕ್ಕಳ ಸಿನಿಮಾಗಳ ನಿರ್ಮಾಣ ಕನ್ನಡ ಚಿತ್ರರಂಗದಲ್ಲಿ ಹೆಚ್ಚೂ ಕಡಿಮೆ ಸ್ಥಗಿತಗೊಂಡಿದೆ.
ಮನೆಗಳಲ್ಲಿ ಕಡಿಮೆಯಾಗುತ್ತಿರುವ ಪುಸ್ತಕಗಳ ಓದು, ಶಾಲೆಗಳಲ್ಲಿ ನೀತಿ ಶಿಕ್ಷಣದ ಕೊರತೆ, ಸಾಮಾಜಿಕ ಮಾಧ್ಯಮವಾದ ಸಿನಿಮಾ ಮಾಧ್ಯಮದ ಬೇಜವಾಬ್ದಾರಿತನ, ಈ ಎಲ್ಲ ಕಾರಣಗಳಿಂದಾಗಿ ಮಕ್ಕಳಲ್ಲಿ ನೀತಿ ಮತ್ತು ಮೌಲ್ಯಗಳನ್ನು ಬೆಳೆಸಲು ಸಾಧ್ಯವಾಗುತ್ತಿಲ್ಲ. ಪಾಲಕರು ತಮ್ಮ ಮಕ್ಕಳು ಪಠ್ಯಕ್ರಮದಾಚೆ ಸಾಹಿತ್ಯ ಕೃತಿಗಳನ್ನು ಓದಲು ಆದ್ಯತೆ ನೀಡುತ್ತಿಲ್ಲ. ಶಾಲೆಗಳಲ್ಲಾದರೂ ಮಕ್ಕಳ ಪುಸ್ತಕಗಳನ್ನು ಸಂಗ್ರಹಿಸಿಟ್ಟು ಓದಲು ಅವಕಾಶ ಮಾಡಿಕೊಡಬೇಕು. ಭಾಷೆ, ಗಣಿತ, ವಿಜ್ಞಾನದಂತೆ ನೀತಿ ಶಿಕ್ಷಣಕ್ಕೂ ತರಗತಿಯ ವೇಳಾಪಟ್ಟಿಯಲ್ಲಿ ಮಹತ್ವ ನೀಡಬೇಕು. ಸಿನಿಮಾಗಳಲ್ಲಿ ನೀತಿಗೆ ಆದ್ಯತೆ ನೀಡುವ ದಿಸೆಯಲ್ಲಿ ಸಿನಿಮಾ ಮಾಧ್ಯಮದವರಿಗೆ ಸಾಮಾಜಿಕ ಜವಾಬ್ದಾರಿಯ ಅರಿವು ಮೂಡಿಸುವುದು ಅಗತ್ಯವಾಗಿದೆ.
ಶಿವರಾಮ ಕಾರಂತರು ತಮ್ಮ ‘ಹುಚ್ಚು ಮನಸ್ಸಿನ ಹತ್ತು ಮುಖಗಳು’ ಆತ್ಮಕಥನದಲ್ಲಿ, ‘ನಾವು ಭೂಮಿಗೆ ಬಂದ ದಿನ ನಮ್ಮ ಸುತ್ತಣ ಬದುಕು ಇದ್ದುದಕ್ಕಿಂತ ಒಂದಿಷ್ಟು ಹೆಚ್ಚು ಚಂದವಾಗುವಂತೆ ಮಾಡಿ ಇಲ್ಲಿಂದ ಹೊರಡಬೇಕು ಎಂಬ ಭಾವನೆ ನನ್ನದು. ಜಾತ್ರೆಗೆ ಬಂದವರು ಜಾತ್ರೆ ಮುಗಿಸಿ ಹೊರಡುವಾಗ ತಾವು ನಲಿದು ಉಂಡುಹೋದ ನೆಲದ ಮೇಲೆ ಎಲ್ಲೆಲ್ಲೂ ತಮ್ಮ ಉಚ್ಚಿಷ್ಟವನ್ನು ಚೆಲ್ಲಿ ಹೋದರೆ ಹೇಗಾದೀತು? ಅಲ್ಲಿಗೆ ನಾವು ತಿರುಗಿ ಬಾರದಿದ್ದರೇನಾಯಿತು? ಅಲ್ಲಿಗೆ ಬರುವ ನಮ್ಮ ಮಕ್ಕಳು ಏನೆಂದುಕೊಂಡಾರು? ಅಷ್ಟನ್ನಾದರೂ ಯೋಚಿಸುವ ಬುದ್ಧಿ ಈ ದೇಶವನ್ನು ನಡೆಸುವ ಹಿರಿಯರಿಗೆ ಇಲ್ಲದೇ ಹೋದರೆ ಹೇಗೆ?’ ಎಂದಿದ್ದಾರೆ. ಈ ಅರಿವು ನಮ್ಮದಾಗಬೇಕು. ಭವಿಷ್ಯದ ಭರವಸೆಯಾದ ಮಕ್ಕಳಿಗಾಗಿ ನಾವು ಎಂತಹ ವರ್ತಮಾನವನ್ನು ಸೃಷ್ಟಿಸಬೇಕು ಎನ್ನುವುದರ ಬಗ್ಗೆ ಪಾಲಕರು ಮತ್ತು ಶಿಕ್ಷಕರು ಯೋಚಿಸಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.