ADVERTISEMENT

ಕೊರೊನಾ ಎಂಬ ನವ ಜನಪದ

ಭಯದ ನಿವಾರಣೆಗೆ ಸಾಮಾಜಿಕ ಮಾಧ್ಯಮದಲ್ಲಿ ಹುಟ್ಟಿದ ನವ ಜನಪದವು ಜನರಲ್ಲಿ ನಿರಾಳ ಭಾವ ಮೂಡಿಸುತ್ತಿದೆ

ಅರುಣ್ ಜೋಳದ ಕೂಡ್ಲಿಗಿ
Published 23 ಮಾರ್ಚ್ 2020, 19:45 IST
Last Updated 23 ಮಾರ್ಚ್ 2020, 19:45 IST
ಕೊರೊನಾ
ಕೊರೊನಾ   

ಕೊರೊನಾದಂತಹ ಒಂದು ವೈರಸ್‌ ಅನ್ನು ಜನಸಾಮಾನ್ಯರು ಹೇಗೆಲ್ಲಾ ಒಗ್ಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ, ಕೊರೊನಾದ ಬಗ್ಗೆ ಹುಟ್ಟಿಸಿದ ಅನಗತ್ಯ ಭಯವನ್ನು ಹೇಗೆ ನಿವಾರಿಸಿಕೊಳ್ಳಲು ಮುಂದಾಗಿದ್ದಾರೆ, ಇವೆಲ್ಲ ಜನಪದವಾಗಿ ಹೇಗೆ ರೂಪಾಂತರ ಹೊಂದಿವೆ ಎನ್ನುವುದನ್ನು ಗುರುತಿಸಬೇಕಾದ ಅಗತ್ಯವಿದೆ. ಮನುಷ್ಯ ಮನುಷ್ಯರ ನಡುವೆ ಮಾತುಕತೆ ನಿಲ್ಲುವತನಕ ಜನಪದವು ಮರುಹುಟ್ಟು ಪಡೆಯುತ್ತಿರುತ್ತದೆ. ಹಾಗಾಗಿ ಜನಪದವು ಹಳೆಯದರ ಪೊರೆ ಕಳಚಿ ಸದಾ ಹೊಸತಾಗುತ್ತದೆ.

ಯಾವುದು ಅತಿಯಾದ ಭಯ ಹುಟ್ಟಿಸುತ್ತದೆಯೋ ಯಾವುದು ಮೂರ್ತರೂಪಕ್ಕೆ ಗೋಚರಿಸುವುದಿಲ್ಲವೋ ಯಾವುದು ಜನಸಾಮಾನ್ಯರ ನಿಲುವಿಗೆ ದಕ್ಕುವುದಿಲ್ಲವೋ ಅಂತಹ ಸಂಗತಿಯ ಬಗ್ಗೆ ಕತೆ, ಗೀತೆ, ಗಾದೆ ಕಟ್ಟಿಯೋ ವ್ಯಂಗ್ಯ, ಹಾಸ್ಯ, ರಂಜನೆ ಮಾಡಿಯೋ ಜನ ಅವುಗಳ ಕಿವಿ ಹಿಂಡಿ ತಮ್ಮ ಕಲ್ಪನೆಯ ಚೌಕಟ್ಟಿನೊಳಗೆ ತಂದು ಕೂರಿಸುತ್ತಾರೆ. ನಿರಾಕಾರದ ಸಂಗತಿಗಳಿಗೆ ತಮ್ಮದೇ ಆಕಾರ ಕೊಟ್ಟು, ಅದರ ಆಕಾರ ರಹಿತತೆಯ ಅಹಂ ಮುರಿಯುತ್ತಾರೆ. ನಿಲುಕದ್ದನ್ನು ನಾನಾ ರೀತಿಯಲ್ಲಿ ನಿಲುಕಿಸಿಕೊಳ್ಳುತ್ತಾ, ಎದೆಸೆಟೆಸಿ ನಡೆಯುತ್ತಿದ್ದುದನ್ನು ತಗ್ಗಿಬಗ್ಗಿ ನಡೆಯುವಂತೆ ಮಾಡುತ್ತಾರೆ.

ಆಕಾಶ, ಸೂರ್ಯ, ಚಂದ್ರ, ನಕ್ಷತ್ರಗಳನ್ನು ಒಳಗೊಂಡಂತೆ ನಿಸರ್ಗದ ಎಲ್ಲ ಬಗೆಯ ಕೌತುಕಗಳನ್ನು, ವಿಜ್ಞಾನದ ಎಲ್ಲ ಬಗೆಯ ಅಚ್ಚರಿಗಳನ್ನು ಜನ ಕಟ್ಟಿಕೊಂಡಿರುವುದು ಹೀಗೆಯೆ. ಯಾವುದೇ ಒಂದು ಸಂಗತಿಯು ಲೋಕದಲ್ಲಿ ವ್ಯಾಪಕವಾಗಿ ಹರಡಿದಾಗ, ಅದು ಜನರೊಳಗೆ ಕೆಲಕಾಲ ನೆಲೆಸಿ ಮರುಹುಟ್ಟು ಪಡೆಯುತ್ತದೆ. ಹಾಗಾಗಿ ಇಂದಿರಾ ಗಾಂಧಿಯವರ ಬಗೆಗೂ ಈಗಿನ ನರೇಂದ್ರ ಮೋದಿಯವರ ಬಗೆಗೂ ಇದೀಗ ಕೊರೊನಾದ ಬಗೆಗೂ ಅದರದ್ದೇ ಜನಪದ ಹುಟ್ಟಿದೆ. ಮೊದಲಾದರೆ, ಲೋಕದ ಸಂಗತಿಗಳು ಜನರ ಮಧ್ಯೆ ಪರಸ್ಪರ ಮುಖಾಮುಖಿಯಾಗುತ್ತಿದ್ದವು. ಈಗ ಜನ ತಾವಿರುವಲ್ಲಿಯೇ ಜಗದ ಜತೆ ಸಂಪರ್ಕಿಸಲು ಸಾಮಾಜಿಕ ಮಾಧ್ಯಮವಿದೆ.

ADVERTISEMENT

ಕೊರೊನಾ ವೈರಸ್ ಬಗೆಗೂ ಸಹಜವಾಗಿ ಇದೇ ರೀತಿಯಲ್ಲಿ ಜನರ ಸೃಜನಶೀಲತೆ ವ್ಯಕ್ತವಾಗಿದೆ. ಈಗ್ಗೆ ಒಂದು ತಿಂಗಳಿನಿಂದ ಕೊರೊನಾ ಬಗ್ಗೆ ಭಯಭೀತ ಸಂಗತಿಗಳಿಗಿಂತ ಅದರ ಬಗೆಗೆ ಹಾಸ್ಯ, ವ್ಯಂಗ್ಯ, ನುಡಿಗಟ್ಟು, ಚಿತ್ರ, ದೃಶ್ಯ ಮುಂತಾದವು ಹಂಚಿಕೆಯಾದದ್ದೇ ಹೆಚ್ಚು. ಕೊರೊನಾ ವೈರಸ್‍ನ ಆಕಾರವು ಕಿರೀಟದಂತಿದೆ ಎನ್ನುವ ಕಾರಣಕ್ಕೆ ಈ ಹೆಸರು ಬಂದಿದೆಯಂತೆ. ಈ ವೈರಸ್ಸಿನ ಚಿತ್ರವೇ ನಾನಾ ಆಕಾರಗಳಲ್ಲಿ ಮರುರೂಪ ಪಡೆದಿದೆ. ಈ ರೂಪಗಳಲ್ಲಿ ಹಾಸ್ಯ ಇರುವಂತೆ ಕೆಲವು ಮುನ್ನೆಚ್ಚರಿಕೆಯ ಅಂಶಗಳೂ ಸೇರಿದ್ದವು. ಕೊರೊನಾವು ಚೀನಾದಿಂದ ಬಂದ ಬಗ್ಗೆಯೂ ಜೋಕುಗಳು ಹುಟ್ಟಿದವು. ಟಿ.ವಿ ಚಾನೆಲ್‍ಗಳು ಅನಗತ್ಯ ಭಯ ಹುಟ್ಟಿಸುತ್ತಿವೆ ಎಂಬ ಭಾವನೆಯ ಪ್ರತಿರೋಧದಂತೆ ಹಾಸ್ಯ ಹುಟ್ಟಿದೆ. ನೀವು ಚಾನೆಲ್ ನೋಡುವುದರಿಂದಲೇ ಕೊರೊನಾ ಹರಡುತ್ತದೆಂತಲೂ, ಟಿ.ವಿ ಡಿಬೇಟಿನಲ್ಲಿ ಪಾಲ್ಗೊಳ್ಳಲು ಕೊರೊನಾ ತೆರಳಿರುವುದರಿಂದ ಹೊರಗೆಲ್ಲೂ ಹರಡುವುದಿಲ್ಲವೆಂತಲೂ ಥರಾವರಿ ಟ್ರೋಲ್‌ಗಳು ಬಂದವು.

ಇದೇ ಸಂದರ್ಭವನ್ನು ಸನಾತನಿಗಳು ಗೋಮೂತ್ರದ ಪ್ರಚಾರಕ್ಕೆ ಬಳಸಿಕೊಂಡರೆ, ಪ್ರಜ್ಞಾವಂತರು ಸಲ್ಲದ ಚಿಕಿತ್ಸೆಗಳ ಬಗೆಗಿನ ಅಜ್ಞಾನದ ಬಗ್ಗೆ ಜೋಕುಗಳನ್ನು ಹುಟ್ಟಿಸಿ ಅರಿವು ಮೂಡಿಸಿದರು. ಅಂತೆಯೇ ದೇವಸ್ಥಾನಗಳು ಬಾಗಿಲು ಮುಚ್ಚುತ್ತಿರುವ ಈ ಸಂದರ್ಭದಲ್ಲಿ, ದೇವರ ಇಲ್ಲದಿರುವಿಕೆ ಬಗೆಗೆ, ವೈದ್ಯರೇ ದೇವರು ಎನ್ನುವ ರೀತಿಯಲ್ಲಿ ವೈಚಾರಿಕ ಜೋಕುಗಳೂ ಹುಟ್ಟಿದವು. ಕೊರೊನಾ ಹೆಣ್ಣೋ ಗಂಡೋ ಎನ್ನುವಲ್ಲಿಂದ ಶುರುವಾದ ಜೋಕುಗಳು, ಒಂಟಿಯಾದ ಹುಡುಗಿಯೊಬ್ಬಳನ್ನು ಚುಡಾಯಿಸುವಾಗ ಅವಳು ಕೆಮ್ಮಿದ ತಕ್ಷಣ ಆ ಹುಡುಗರು ಓಡುವುದರತನಕ ಸಾಗಿದವು. ಹೀಗೆ ಕೊರೊನಾ ವೈರಸ್‌ನ ಲಕ್ಷಣವನ್ನೇ ಮಹಿಳೆ ತನ್ನ ರಕ್ಷಣೆಯ ತಂತ್ರವಾಗಿ ಬಳಸುವ ರೀತಿಯತನಕ ಹಾಸ್ಯ ಹುಟ್ಟಿತು.

ಹೊರಗಡೆ ಎಲ್ಲೂ ಹೋಗುವಂತಿಲ್ಲ ಎನ್ನುವುದನ್ನೇ ಗಂಡಸರು ನಿಟ್ಟುಸಿರುಬಿಟ್ಟು, ಹೆಂಡತಿಯ ಶಾಪಿಂಗ್ ಕಾಟ ತಪ್ಪಿದ್ದಕ್ಕೆ ಕೊರೊನಾಕ್ಕೆ ಥ್ಯಾಂಕ್ಸ್ ಹೇಳಿದ್ದಾರೆ. ಟಿಕ್ ಟಾಕ್‌ನಲ್ಲಂತೂ ಕೊರೊನಾ ಟ್ರೆಂಡ್‌ನ ಸಾವಿರಾರು ವಿಡಿಯೊಗಳು ಹುಟ್ಟಿವೆ.

ಕೊರೊನಾ ವೈರಸ್ ಹುಟ್ಟಿಸಿದ ಅತಿಯಾದ ಭಯದ ನಿವಾರಣೆಗಾಗಿಯೇ ಇಂತಹದ್ದೊಂದು ಕೊರೊನಾ ಜನಪದ ಹುಟ್ಟಿದೆ. ಇದು ಜನರಲ್ಲಿ ಒಂದು ಬಗೆಯ ನಿರಾಳ ಭಾವವನ್ನೂ ಭಯ ಮುಕ್ತತೆಯನ್ನೂ ಅರಿವನ್ನೂ ಮೂಡಿಸುತ್ತಿದೆ. ಪ್ರಧಾನಿ ಕರೆ ಕೊಟ್ಟ ಜನತಾ ಕರ್ಫ್ಯೂ ಟೀಕೆ, ಪ್ರಶಂಸೆ ಎರಡಕ್ಕೂ ಒಳಗಾಯಿತು. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೊರೊನಾ ನಿಯಂತ್ರಣದ ಸಲುವಾಗಿ ಜಾರಿಗೊಳಿಸಿದ ಯೋಜನೆಗಳ ಬಗ್ಗೆ ಕೇಂದ್ರ ಸರ್ಕಾರದ ಟೀಕೆಯೂ ಕೇಳಿಬಂತು. ಒಂದೆಡೆ ಈ ಬಗೆಯ ಹಾಸ್ಯಗಳಲ್ಲಿ ಕೆಲವು ಮೂಢನಂಬಿಕೆ ಬಿತ್ತರಿಸುವಂತಿದ್ದರೆ ಮತ್ತೆ ಕೆಲವು ಕೊರೊನಾ ಬಗೆಗೆ ಮುನ್ನೆಚ್ಚರಿಕೆಯ ಬಹುರೂಪಿ ತಿಳಿವಳಿಕೆಯನ್ನೂ ನೀಡುವಂತಿವೆ. ಈ ಮಧ್ಯೆ, ವೈದ್ಯರ ಹೇಳಿಕೆಗಳೂ ವ್ಯಾಪಕವಾಗಿ ಹಂಚಿಕೆಯಾದವು. ಹೀಗೆ ಯಾವುದೇ ಪ್ರಚಲಿತ ವಿದ್ಯಮಾನವನ್ನು ಅದು ಜನರಲ್ಲಿ ಹುಟ್ಟಿಸುವ ಬಹುರೂಪಿ ಕಥನಗಳ ಕಣ್ನೋಟದಿಂದ ವಿಶ್ಲೇಷಿಸುವ ಅಗತ್ಯವಿದೆ. ಇದನ್ನು ನವ ಜನಪದ ಎಂತಲೋ, ನವ ಮೌಖಿಕತೆ ಎಂತಲೋ ಕರೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.