ADVERTISEMENT

ಸಂಗತ: ಕಬ್ಬು ಬಾಕಿ ಪಾವತಿಗೆ ಡಿಜಿಟಲ್ ಪರಿಹಾರ

ಕಬ್ಬು ಬೆಳೆಗಾರರ ಸಂಕಷ್ಟ ಪರಿಹಾರಕ್ಕೆ ಡಿಜಿಟಲ್ ತಂತ್ರಜ್ಞಾನದ ಅಳವಡಿಕೆಯು ಪರಿಣಾಮಕಾರಿ ವಿಧಾನ

ಮಲ್ಲಿಕಾರ್ಜುನ ಹೆಗ್ಗಳಗಿ
Published 8 ಅಕ್ಟೋಬರ್ 2021, 18:53 IST
Last Updated 8 ಅಕ್ಟೋಬರ್ 2021, 18:53 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ರೈತರು ವರ್ಷವಿಡೀ ಕಷ್ಟಪಟ್ಟು ಬೆಳೆದ ಕಬ್ಬನ್ನು ಸಕ್ಕರೆ ಕಾರ್ಖಾನೆಗಳಿಗೆ ಉದ್ರಿ ಮಾರಾಟ ಮಾಡುವ ಕೆಟ್ಟ ಸಂಪ್ರದಾಯ ಜಾರಿಯಲ್ಲಿದೆ. ಕಬ್ಬು ಪೂರೈಸಿದ 14 ದಿನಗಳ ಒಳಗಾಗಿ ಬಾಕಿ ಹಣ ಪಾವತಿಸಬೇಕು, ಇದಕ್ಕೆ ತಪ್ಪಿದಲ್ಲಿ ಶೇ 15ರಷ್ಟು ಬಡ್ಡಿ ಕೊಡಬೇಕು ಎಂಬ ಕಾನೂನನ್ನು, ರೈತರು ಹೋರಾಟ ಮಾಡಿದ ಮೇಲೆ ರೂಪಿಸಲಾಯಿತು. ಯಾವ ಸಕ್ಕರೆ ಕಾರ್ಖಾನೆಯೂ ಈ ನಿಯಮ ಪಾಲಿಸುವುದಿಲ್ಲ. ವರ್ಷ, ಎರಡು ವರ್ಷ ಬಾಕಿ ಉಳಿಸಿಕೊಂಡರೂ ಆ ಹಣಕ್ಕೆ ಬಡ್ಡಿ ಸೇರಿಸಿ ಕೊಟ್ಟ ಉದಾಹರಣೆ ಇಲ್ಲ.

‘ಉದ್ರಿ ಕೊಟ್ಟವನು ಕೋಡಂಗಿ ಪಡ್ಕೊಂಡವನು ವೀರಭದ್ರ’ ಎಂಬ ಮಾತೊಂದಿದೆ. ಮುಧೋಳದ ರನ್ನ ಸಹಕಾರಿ ಕಾರ್ಖಾನೆ ಮತ್ತು ತೇರದಾಳದ ಸಾವರಿನ್ ಕಾರ್ಖಾನೆಯು ಎರಡು ವರ್ಷಗಳಿಂದ ಬಾಗಿಲು ಮುಚ್ಚಿವೆ. ಈ ಕಾರ್ಖಾನೆಗಳಿಗೆ ಕಬ್ಬು ಪೂರೈಸಿದ ರೈತರು ಹಣ ಬರದೇ ಪರಿತಪಿಸುತ್ತಿದ್ದಾರೆ.

ಕಬ್ಬಿನಿಂದ ಬೆಲ್ಲ, ಸಕ್ಕರೆ ಅಷ್ಟೇ ಅಲ್ಲ ಇಥೆನಾಲ್, ಆಲ್ಕೊಹಾಲ್, ವಿದ್ಯುತ್, ಸಾವಯವ ಗೊಬ್ಬರ, ಔಷಧ ಹೀಗೆ ಬೆಲೆಯುಳ್ಳ ಉತ್ಪನ್ನಗಳು ಉತ್ಪಾದನೆಯಾಗುತ್ತವೆ. ಇಥೆನಾಲ್ ಮತ್ತು ಆಲ್ಕೊಹಾಲ್ ಸಕ್ಕರೆಗಿಂತ ಹೆಚ್ಚು ಆದಾಯ ತರುವ ಉತ್ಪಾದನೆಗಳಾಗಿವೆ. ಸಕ್ಕರೆ ಹಾಗೂ ಇತರ ಉತ್ಪನ್ನಗಳ ಮಾರಾಟದಿಂದ ಬರುವ ಒಟ್ಟು ಆದಾಯದಲ್ಲಿ ಶೇ 70ರಷ್ಟು ಭಾಗ ಕಬ್ಬಿನ ಬೆಲೆಯಾಗಿ ಪಾವತಿ ಮಾಡಬೇಕು ಎಂದು ತಜ್ಞರ ಸಮಿತಿಯ ವರದಿ ಆಧರಿಸಿ ಕಾನೂನು ರಚಿಸಲಾಗಿದೆ. ಇದು ಕಾರ್ಖಾನೆಗಳು ಕಬ್ಬಿಗೆ ಕೊಡಬೇಕಾದ ಕನಿಷ್ಠ ಬೆಲೆಯ ಸೂತ್ರವಾಗಿದೆ.

ADVERTISEMENT

ರೈತರು ಪ್ರಸಕ್ತ ಮತ್ತು ವಾಸ್ತವ ಸಂಗತಿಗಳನ್ನು ಪರಿಗಣಿಸಿ ನ್ಯಾಯಸಮ್ಮತ ಹಾಗೂ ಪ್ರೋತ್ಸಾಹದಾಯಕ (ಎಫ್.ಆರ್.ಪಿ) ಬೆಲೆಯನ್ನು ಚರ್ಚಿಸುವ ಮೂಲಕ ಪಡೆಯಲು ಅವಕಾಶವಿದೆ. ಕಬ್ಬಿನ ಬಿಲ್ ಪಾವತಿಗೆ ಹಳೆಯ ವಿಧಾನಗಳನ್ನೇ ಅನುಸರಿಸಲಾಗುತ್ತಿದೆ. ಈ ವ್ಯವಹಾರವೆಲ್ಲ ಮಾಲೀಕರ ಮರ್ಜಿಯ ಮೇಲೆ ನಡೆಯುತ್ತದೆ. ರೈತರು ಕಾಡಿ ಬೇಡಿ ಬಿಲ್ ಪಡೆದುಕೊಳ್ಳುವ ಸ್ಥಿತಿ ಇದೆ.

ಡಿಜಿಟಲ್ ತಂತ್ರಜ್ಞಾನವು ಪರಿಣಾಮಕಾರಿಯಾಗಿ ಬೆಳೆದಿದೆ. ಕೇಂದ್ರ ಸರ್ಕಾರದ ಪರಿಹಾರಧನ
ಕ್ಷಣಾರ್ಧದಲ್ಲಿ ದೇಶದಾದ್ಯಂತ ರೈತರ ಬ್ಯಾಂಕ್ ಖಾತೆಗೆ ಜಮಾ ಆಗಿ ಸಂದೇಶ ಕೂಡ ಬರುತ್ತದೆ. ಸಕ್ಕರೆ ಕಾರ್ಖಾನೆಗಳು ಸಕ್ಕರೆ ಹಾಗೂ ಇತರ ಉತ್ಪನ್ನಗಳ ಮಾರಾಟದಿಂದ ಬಂದ ಆದಾಯದಲ್ಲಿ ಶೇ 70ರಷ್ಟನ್ನು ಡಿಜಿಟಲ್ ತಂತ್ರಜ್ಞಾನದ ಮೂಲಕ ಕಬ್ಬು ಬೆಳೆಗಾರರಿಗೆ ಕಡ್ಡಾಯವಾಗಿ ಪಾವತಿಸಬೇಕು. ಈ ವಿಧಾನವನ್ನು ತಂತ್ರಜ್ಞರ ಸಹಾಯದಿಂದ ಅಭಿವೃದ್ಧಿಪಡಿಸುವುದು ಸುಲಭ. ಆದರೆ ಇದಕ್ಕೆ ಮುಖ್ಯವಾಗಿ ಸರ್ಕಾರದ ದಿಟ್ಟ ನಿಲುವು ಬೇಕು. ಈ ಬಗ್ಗೆ ರೈತರು ಕೂಡ ಆಗ್ರಹ ಪಡಿಸಬೇಕು. ಇದು ಗಂಭೀರ ಹೋರಾಟವಾಗಿ ರೂಪುಗೊಳ್ಳಬೇಕು.

ಡಿಜಿಟಲ್ ನಿಯಂತ್ರಣ ಅಳವಡಿಸಿದರೆ ರೈತರಿಗೆ ಮಾತ್ರವಲ್ಲ ಸಕ್ಕರೆ ಕಾರ್ಖಾನೆಗಳಿಗೂ ಇದು ವರದಾನವಾಗುತ್ತದೆ. ಸರಿಯಾಗಿ ಹಣ ಬಂದರೆ ರೈತರು ಚೆನ್ನಾಗಿ ಕಬ್ಬು ಬೆಳೆಯುತ್ತಾರೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಸಕ್ಕರೆ ಕಾರ್ಖಾನೆಗಳಲ್ಲಿ ಹಣಕಾಸಿನ ಶಿಸ್ತು ಬರುತ್ತದೆ. ದುಂದುಗಾರಿಕೆಗೆ ಕಡಿವಾಣ ಬೀಳುತ್ತದೆ.

ಆಸ್ಟ್ರೇಲಿಯಾದಲ್ಲಿ ಕಬ್ಬಿನ ಬಿಲ್ ಪಾವತಿಗೆ ಕಾರ್ಖಾನೆಗಳು ಪ್ರತಿದಿನದ ಸಕ್ಕರೆ ಹಾಗೂ ಇತರ ಉತ್ಪಾದನೆಗಳನ್ನು ಶೇ 70 ಮತ್ತು 30 ಅನುಪಾತವಾಗಿ ವಿಂಗಡಿಸಿ, ರೈತರ ಶೇ 70 ಭಾಗವನ್ನು ಅದೇ ದಿನದ ಕೊನೆಯಲ್ಲಿ ರೈತ ಸಂಸ್ಥೆಗಳಿಗೆ ವರ್ಗಾಯಿಸುತ್ತವೆ. ರೈತ ಸಂಸ್ಥೆಗಳು ಮಾರುಕಟ್ಟೆ ಹುಡುಕಿ ಮಾರಾಟ ಮಾಡಿ ಬೆಳೆಗಾರರಿಗೆ ಹಣ ಪಾವತಿಸುತ್ತವೆ. ಇದರಿಂದಾಗಿ ರೈತರ ಸಹಭಾಗಿತ್ವಕ್ಕೆ ದೊಡ್ಡ ಅವಕಾಶ ದೊರೆಯುತ್ತದೆ. ಬ್ರೆಜಿಲ್, ಕೆನ್ಯಾ ಇದೇ ವಿಧಾನ ಅನುಸರಿಸತೊಡಗಿವೆ.

ಉದ್ರಿ ಕಬ್ಬು ಪೂರೈಕೆ ಒಂದು ವಿಷವರ್ತುಲ. ರೈತರು ಸಕ್ಕರೆ ಕಾರ್ಖಾನೆಯ ಬೆನ್ನೆಲುಬು. ಅವರು ಕಾರ್ಖಾನೆಗೆ ಬೇಕಾಗುವ ಮುಖ್ಯ ವಸ್ತು ಕಬ್ಬನ್ನು ಪೂರೈಸುತ್ತಾರೆ. ಅವರ ಹಿತರಕ್ಷಣೆಯಲ್ಲಿಯೇ ಕಾರ್ಖಾನೆಯ ಹಿತ ಅಡಗಿದೆ.

ರಾಷ್ಟ್ರಮಟ್ಟದಲ್ಲಿ ಹಾಗೂ ರಾಜ್ಯಮಟ್ಟದಲ್ಲಿ ಸಕ್ಕರೆ ಲಾಬಿ ಬಹಳ ಶಕ್ತಿಶಾಲಿಯಾಗಿದೆ. ಸಕ್ಕರೆ ಕಾರ್ಖಾನೆಗಳ ಮಾಲೀಕರು, ಅಧ್ಯಕ್ಷರು ಸಕ್ರಿಯ ರಾಜಕಾರಣಿಗಳಾಗಿದ್ದಾರೆ. ಅವರನ್ನು ಎದುರು ಹಾಕಿಕೊಳ್ಳುವುದಕ್ಕೆ ಸರ್ಕಾರ ಮತ್ತು ಅಧಿಕಾರಿಗಳು ಗಟ್ಟಿಮನಸ್ಸು ಮಾಡು ವುದಿಲ್ಲ. ಡಿಜಿಟಲ್ ತಂತ್ರಜ್ಞಾನದ ಅಳವಡಿಕೆಯೊಂದೇ ಪರಿಣಾಮಕಾರಿ ವಿಧಾನವಾಗಿದೆ.

ಕಬ್ಬಿನಿಂದ ನೇರವಾಗಿ ಇಥೆನಾಲ್ ಉತ್ಪಾದನೆಗೆ ಹಾಗೂ ಶೇ 20ರಷ್ಟು ಇಥೆನಾಲ್ ಅನ್ನು ಪೆಟ್ರೋಲ್‍ನಲ್ಲಿ ಮಿಶ್ರಣ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಕಾರ್ಖಾನೆಗಳ ಸಕ್ಕರೆ ಸಂಗ್ರಹದ (ಬಫರ್ ಸ್ಟಾಕ್) ಮೇಲೆ ಬಡ್ಡಿರಹಿತ ಸಾಲವನ್ನು ನೀಡುತ್ತಿದೆ. ಕಬ್ಬು ಬೆಳೆಗಾರರ ಹಿತ ಕಾಪಾಡುವ ಉದ್ದೇಶದಿಂದ ಈ ಯೋಜನೆಗಳನ್ನು ಜಾರಿ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ಎಲ್ಲ ಯೋಜನೆಗಳ ಪೂರ್ಣ ಲಾಭ ರೈತರಿಗೆ ದೊರೆಯಲು ಡಿಜಿಟಲ್ ನಿಯಂತ್ರಣ ಅವಶ್ಯವಾಗಿದೆ.

ಲೇಖಕ: ಬೆಳಗಾವಿಯ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ತಂತ್ರಜ್ಞರ ಮಹಾಮಂಡಳದ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.