ADVERTISEMENT

ಸಂಗತ: ಗೊತ್ತೇ ‘ಉಡುಗೊರೆ ಸಾಕ್ಷರತೆ?’

ಸ್ವಾಭಾವಿಕವಾದ ಮತ್ತು ಸ್ಥಳೀಯ ಮೂಲದ ಉಡುಗೊರೆಗಳನ್ನು ನೀಡುವುದು ಪ್ರಕೃತಿಗೆ ನಮ್ಮ ಬದ್ಧತೆಯನ್ನು ಸಾಕಾರಗೊಳಿಸುತ್ತದೆ

ಯೋಗಾನಂದ
Published 16 ಡಿಸೆಂಬರ್ 2024, 19:30 IST
Last Updated 16 ಡಿಸೆಂಬರ್ 2024, 19:30 IST
.
.   

ಬೆಂಗಳೂರಿನ ಮಾರುಕಟ್ಟೆಯೊಂದರಲ್ಲಿ ಪರಿಚಿತ ದೈಹಿಕ ಶಿಕ್ಷಣ ಶಿಕ್ಷಕರೊಬ್ಬರು ಸಿಕ್ಕರು. ತಮ್ಮ ಶಾಲೆಯಲ್ಲಿ ಏರ್ಪಡುವ ಕ್ರೀಡಾಸ್ಪರ್ಧೆಗೆ ಅವರು, ‘ಬಳಸಿದ’ ಪದಕ, ಪಾರಿತೋಷಕಗಳ ಹುಡುಕಾಟದಲ್ಲಿದ್ದರು. ಅವರ ಪ್ರಾಮಾಣಿಕತೆಯನ್ನು ಮೊದಲು ಅನುಮಾನಿಸಿದ್ದೆ. ಆದರೆ ಆ ನಡೆ ಸರಿ ಎಂದು ನಂತರವೇ ನನಗೆ ಗೊತ್ತಾದದ್ದು. ಪರಿಸರದ ಹಿತದೃಷ್ಟಿಯಿಂದ ‘ತಗ್ಗಿಸುವಿಕೆ, ಪುನರ್ಬಳಕೆ, ನವೀಕೃತ’ (ರೆಡ್ಯೂಸ್‌, ರೀಯೂಸ್‌, ರೀಸೈಕಲ್) ಮಹಾಮಂತ್ರದ ವ್ಯಾಪ್ತಿಗೆ, ಸಾಂಕೇತಿಕವಾಗಿ ನೀಡುವ ಬಹುಮಾನ ಮತ್ತು ಉಡುಗೊರೆಗಳನ್ನೂ ಸೇರಿಸಬಹುದು.

ಪುನರ್ಬಳಕೆಯಾದ ಕಚ್ಚಾ ಸಾಮಗ್ರಿಗಳಿಂದ ತಯಾರಾದ ಉತ್ಪನ್ನಗಳನ್ನೇ ಬಳುವಳಿಯಾಗಿ ನೀಡುವುದು ಮಹತ್ತರ ಹೆಜ್ಜೆ. ಅಗತ್ಯವಿರುವ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳ ಹಳೆಯ ಪ್ರತಿಗಳನ್ನು ಕೊಡುವುದರಿಂದ ಎರಡು ಪ್ರಯೋಜನಗಳಿವೆ. ಆರ್ಥಿಕವಾಗಿ ನೆರವಾಗುವುದು ಮತ್ತು ಒಂದು ಪುಸ್ತಕದ ಪ್ರತಿಯ ತಯಾರಿಕೆ ಕಡಿಮೆಯಾಗಿ ಅಷ್ಟರಮಟ್ಟಿಗೆ ಕಾಗದದ ಉಳಿತಾಯವಾಗುತ್ತದೆ. ಇದರಿಂದ ಆ ಕಚ್ಚಾ ವಸ್ತುಗಳು ಕಸ ಸೇರುವುದು ತಪ್ಪುತ್ತದೆ. ಶಾಲೆಯಲ್ಲಿ ವಿವಿಧ ಸ್ಪರ್ಧೆಗಳ ವಿಜೇತರಿಗೆ ಪುನರ್ಬಳಸಬಹುದಾದ ನೀರಿನ ಬಾಟಲಿಯನ್ನು ಬಹುಮಾನವಾಗಿ ಇತ್ತರೆ ನಿಜಕ್ಕೂ ಯುಕ್ತ. ಒಟ್ಟಾರೆ, ನೀಡುವವರಿಗೂ ಸ್ವೀಕರಿಸುವವರಿಗೂ ಭೂಗ್ರಹಕ್ಕೂ ಹಿತವೆನ್ನಿಸುವ ಉಡುಗೊರೆಗಳು ಇಂದಿನ ತುರ್ತು.

ನಿಘಂಟು ತಜ್ಞ ಜಿ.ವೆಂಕಟಸುಬ್ಬಯ್ಯ ಅವರ ಮನೆಗೆ ಬಂದಿದ್ದ ಸಂದರ್ಶಕರೊಬ್ಬರು, ಪಡಸಾಲೆಯಲ್ಲಿ ಒಪ್ಪವಾಗಿ ಇರಿಸಿದ್ದ ನೆನಪಿನ ಕಾಣಿಕೆಗಳು, ರುಮಾಲುಗಳು ಹಾಗೂ ಗಂಧದ ಹಾರಗಳನ್ನು ಕಂಡು ಅಚ್ಚರಿಪಟ್ಟರು. ಅದಕ್ಕೆ ವೆಂಕಟಸುಬ್ಬಯ್ಯನವರು ‘ಇದರಲ್ಲಿ ಅತಿಶಯವೇನಿಲ್ಲ. ಯಾರೋ ಒಬ್ಬರು ಒಂದು ತಪ್ಪು ಮಾಡಿದರು. ಅದನ್ನೇ ಹಲವರು ಮುಂದುವರಿಸಿದರು’ ಎಂದರು. ಉಡುಗೊರೆಯು ಶಾಲೊ, ಹೂದಾನಿಯೊ ಅಥವಾ ಕನ್ನಡಿಯೊ... ಅಂಥವನ್ನು ಮನೆಯಲ್ಲಿ ಎಷ್ಟು ದಿನ ಅಂತ ಇಟ್ಟುಕೊಳ್ಳುವುದು? ಶಲ್ಯ, ಬಟ್ಟೆಬರೆಗಳು ಬಣ್ಣಗೆಡುತ್ತವೆ. ಪದಕ, ಪಾರಿತೋಷಕಗಳು ಬಹುತೇಕ ಮರ, ಲೋಹದಿಂದ ತಯಾರಾದವು. ಮರಕ್ಕೆ ಗೆದ್ದಲು ಹತ್ತುವುದು, ಲೋಹಕ್ಕೆ ಕಿಲುಬು ಹಿಡಿಯುವುದು ಸಾಮಾನ್ಯ. ಎಷ್ಟು ದಿನ ಅವು ಹುಳ ಹುಪ್ಪಟೆ ಮುತ್ತದೆ ಇದ್ದಾವು? ಇನ್ನು ಅವನ್ನೆಲ್ಲ ಸಂಗ್ರಹಿಸಿ ಇಡಲು ಒಂದು ಪ್ರತ್ಯೇಕ ಕೊಠಡಿಯೇ ಬೇಕು. ಕಾಲಾಂತರದಲ್ಲಿ ಇಡೀ ಕೊಠಡಿ ಜಿರಲೆ, ಹಲ್ಲಿಗಳ ಆವಾಸ ಆಗುತ್ತದೆ. ಅತಿಥಿಗಳಿಗೆ, ಗಣ್ಯರಿಗೆ ಹೊರಲಾಗದ ಹೊರೆ ಹೊರಿಸಿ ಕಳಿಸುವುದೇ ಸಮಾರಂಭ, ಸಭೆಯ ಯಶಸ್ಸಲ್ಲ. ಜೈವಿಕ ವಿಘಟನೆ ಆಗದ ಸ್ಮರಣಿಕೆಗಳ ಸಂಗ್ರಹ ನಿಜಕ್ಕೂ ಉಪಟಳವೆ.

ADVERTISEMENT

ಹಬ್ಬ, ಹರಿದಿನಗಳಲ್ಲಿ ಬಾಗಿನವಾಗಿ ನೀಡುವ ಹಣ್ಣು ಹಂಪಲು ಒಬ್ಬರಿಂದೊಬ್ಬರಿಗೆ ವಿತರಿಸುವಾಗ ಬಾಡುವ ಉದಾಹರಣೆಗಳೇ ಹೆಚ್ಚು. ಸಸಿಯಿರುವ ಕುಂಡವನ್ನು ನೀಡಿದರೆ ಪೋಷಿಸಿ ಬೆಳೆಸಬಹುದು. ಬೀಜದ ಉಂಡೆಗಳನ್ನು ಕೊಟ್ಟರೆ ಬಿತ್ತಿ ಗಿಡವಾಗಿಸಬಹುದು. ನೀರಿನ ಕ್ಯಾನ್‌ ಅಥವಾ ಕೈದೋಟ ಮಾಡುವ ಸಣ್ಣ ಪುಟ್ಟ ಉಪಕರಣಗಳೂ ಉತ್ತಮ ಉಡುಗೊರೆಗಳು. ಪುಸ್ತಕಗಳಿಗಿಂತ ಸಮಂಜಸವಾದ ಬಳುವಳಿ ಮತ್ತೊಂದಿಲ್ಲ. ಇದರಿಂದ ಓದುವವರ ಪಡೆ ಹೆಚ್ಚುತ್ತದೆ. ಪ್ರಕಾಶಕರು, ಲೇಖಕರಿಗೆ ಹಾಕಿದ ಕಾಸು ದಕ್ಕಿ ಮತ್ತಷ್ಟು ಪುಸ್ತಕಗಳನ್ನು ಹೊರತರಲು ಅತೀವ ಉತ್ಸಾಹ ಮೂಡುತ್ತದೆ. ಪ್ರಶಸ್ತಿ ರೂಪದಲ್ಲಿ ನೋಟ್‌ಪುಸ್ತಕ, ಬರೆಯುವ ಸಾಮಗ್ರಿ, ಜ್ಯಾಮಿತಿ ಪೆಟ್ಟಿಗೆಯಿರುವ ಪ್ಯಾಕ್‌ ಕೈಗಿತ್ತು ‘ನಿಮ್ಮ ಮಕ್ಕಳಿಗೆ, ಮೊಮ್ಮಕ್ಕಳಿಗೆ ಕೊಡಿ’ ಎನ್ನುವುದು ಬಹು ಸಮಯೋಚಿತ.

ಮಕ್ಕಳು, ಮೊಮ್ಮಕ್ಕಳ ಹುಟ್ಟಿದಹಬ್ಬವನ್ನು ಅದ್ದೂರಿಯಾಗಿ ಆಚರಿಸುವ ಬದಲು ಅವರ ಹೆಸರಿನಲ್ಲಿ ಮನೆಯ ಹತ್ತಿರದ ಉದ್ಯಾನದಲ್ಲಿ ಗಿಡವನ್ನು ದತ್ತು ತೆಗೆದುಕೊಂಡು, ಅದು ಮರವಾಗುವಂತೆ ಪೋಷಿಸುವುದು ಎಂತಹ ಘನ ಕಾರ್ಯ. ಶಾಲಾ ತರಗತಿಗೆ ಒಂದು ಡೆಸ್ಕ್‌ ಕೊಡುಗೆಯಿತ್ತರಂತೂ ವಿದ್ಯಾರ್ಥಿ ಪೀಳಿಗೆಗಳೇ ನೆನೆಯುತ್ತವೆ. ವಿದ್ಯಾಭ್ಯಾಸಕ್ಕೆ ಸ್ವಾಭಾವಿಕ ಮತ್ತು ಸ್ಥಳೀಯ ಮೂಲದ ಉಡುಗೊರೆಗಳು ಪ್ರಕೃತಿಗೆ ನಮ್ಮ ಬದ್ಧತೆಯನ್ನು ಸಾಕಾರಗೊಳಿಸುತ್ತವೆ. ಇದಕ್ಕೂ ಮುಖ್ಯವೆಂದರೆ ‘ವಿಲ್‌’ನಲ್ಲಿ ಆಸ್ತಿಪಾಸ್ತಿಯ ಜೊತೆಗೆ ತಾವು ಕೈಗೊಂಡಿರುವ ಪರಿಸರ ಕೈಂಕರ್ಯ, ದತ್ತಿಗಳ ಬಗ್ಗೆಯೂ ವಿವರವಾಗಿ ಬರೆದಿಟ್ಟರೆ ವಾರಸುದಾರರಿಗೆ ಅವನ್ನು ಮುಂದುವರಿಸಲು ಸಾಧ್ಯವಾಗುತ್ತದೆ.

ಈ ದಿಸೆಯಲ್ಲಿ ನಾವು ನಮ್ಮ ನಿತ್ಯಜೀವನದಲ್ಲಿ ಅಷ್ಟಾಗಿ ಗಮನಿಸಿರದ ನಿದರ್ಶನಗಳು ಅನೇಕ. ಗ್ರಾಮಗಳಿಂದ ನಗರಗಳಿಗೆ ತರುವ ಬಾಳೆಎಲೆಗಳನ್ನು ಪ್ಲಾಸ್ಟಿಕ್‌ ಹುರಿ, ಹಗ್ಗದಿಂದೇನೂ ಬಿಗಿದಿರುವುದಿಲ್ಲ. ಅವನ್ನು ಬಾಳೆಯ ನಾರುಗಳೇ ಬಂಧಿಸಿರುತ್ತವೆ. ಅಂತೆಯೆ ಎರಡು, ಮೂರು ಎಳನೀರುಗಳನ್ನು ನಾರು ಸೀಳಿ, ಮನೆಗೆ ಸರಾಗವಾಗಿ ಒಯ್ಯುವಂತೆ ನಾಜೂಕಾಗಿ ಕಟ್ಟಿಕೊಡಲಾಗುತ್ತದೆ. ಜಪಾನಿನಲ್ಲಿ ತೆಳುವಾದ, ಮೃದುವಾದ ಹಾಗೂ ಗಂಟುಹಾಕಲು ಸುಲಭವಾದ ಪುರೋಶಿಕಿ ಎಂಬ ಪುನರ್ಬಳಕೆಯ ಬಟ್ಟೆಯನ್ನು ಹುರಿಯಂತೆ ಕಟ್ಟಲು ಉಪಯೋಗಿಸುತ್ತಾರೆ.

ನೆನಪುಗಳು ನೆನಪಾಗಿಯೇ ಇರಬಹುದಲ್ಲ. ‘ಭಾರವಾದ’ ನೆನಪುಗಳು ಏಕೆ? ಅಷ್ಟಕ್ಕೂ ಸಲ್ಲುವ ನೆನಪಿನ ಕಾಣಿಕೆಗಳನ್ನು ನಾವು ಯಾರಿಗೆ ತಾನೆ ತೋರಿಸಿ ಮೆಚ್ಚಿಸಬೇಕಿದೆ. ವಿರಳವೆಂದು ತೋರುವ ಯಾವುದೇ ದೃಶ್ಯ ಕಂಡರೆ ನಮ್ಮ ಮೊಬೈಲ್‌ ಸೆಲ್ಫಿಗೆ ಮುಂದಾಗುತ್ತದೆ. ವಾಸ್ತವವೆಂದರೆ, ಹಾಗೆ ತೆಗೆದ ಫೋಟೊ ನೋಡುವುದು ನಮ್ಮಂತೆಯೆ ಪರರಿಗೂ ಅಪಥ್ಯ. ನಮ್ಮ ಸಮಯದಂತೆ ಮತ್ತೊಬ್ಬರದೂ ಅಲ್ಲವೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.