ADVERTISEMENT

ಸಂಗತ | ವಿದ್ಯಾರ್ಥಿ ಹಿತ ಕಾಯಲೇಕೆ ಹಿಂದೇಟು?

ಎಚ್.ಕೆ.ಶರತ್
Published 1 ನವೆಂಬರ್ 2023, 19:30 IST
Last Updated 1 ನವೆಂಬರ್ 2023, 19:30 IST
   

2023-24ನೇ ಸಾಲಿನಲ್ಲಿ ಲ್ಯಾಟರಲ್ ಎಂಟ್ರಿ ಮೂಲಕ ಎಂಜಿನಿಯರಿಂಗ್ ಪದವಿಯ ಮೂರನೇ ಸೆಮಿಸ್ಟರ್‌ಗೆ ಪ್ರವೇಶ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಮೂಲಕ ಹಂಚಲು ಲಭ್ಯವಿರುವ ಸರ್ಕಾರಿ ಕೋಟಾದ ಸೀಟುಗಳ ವಿವರವನ್ನು ಅಕ್ಟೋಬರ್ 13ರಂದು ಕೆಇಎ ಜಾಲತಾಣದಲ್ಲಿ ಪ್ರಕಟಿಸಲಾಗಿದೆ. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯಿಂದ (ಎಐಸಿಟಿಇ) ಅನುಮೋದಿಸಲ್ಪಟ್ಟಿರುವ ಒಟ್ಟಾರೆ ಸೀಟುಗಳ ಶೇಕಡ 10ರಷ್ಟನ್ನು ಹೆಚ್ಚುವರಿಯಾಗಿ ಲ್ಯಾಟರಲ್ ಎಂಟ್ರಿ ಮೂಲಕ ಲಭ್ಯವಾಗಿಸಲು ಅವಕಾಶವಿದೆ. ಉದಾಹರಣೆಗೆ, ಎಂಜಿನಿಯರಿಂಗ್ ಕಾಲೇಜಿನ ವಿಭಾಗವೊಂದರಲ್ಲಿ 60 ಸೀಟುಗಳಿದ್ದರೆ, ಮೊದಲ ಸೆಮಿಸ್ಟರ್‌ಗೆ ಪಿಯು ಮುಗಿಸಿದ 60 ವಿದ್ಯಾರ್ಥಿಗಳನ್ನು ಸೇರಿಸಿಕೊಂಡರೆ, ಆನಂತರ ಮೂರನೇ ಸೆಮಿಸ್ಟರ್‌ಗೆ ಹೆಚ್ಚುವರಿಯಾಗಿ ಡಿಪ್ಲೊಮಾ ಮುಗಿಸಿರುವ 6 ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಬಹುದಾಗಿದೆ. ಈ 6 ಸೀಟುಗಳು ಕೂಡ ಸರ್ಕಾರಿ ಕೋಟಾಗೆ ಒಳಪಟ್ಟಿರುತ್ತವೆ. ಹಿಂದಿನ ಶೈಕ್ಷಣಿಕ ವರ್ಷದ ಮೊದಲ ಸೆಮಿಸ್ಟರ್‌ನಲ್ಲಿ ಭರ್ತಿಯಾಗದೆ ಉಳಿದ ಸೀಟುಗಳಿಗೆ ಮಾತ್ರ ಕಾಲೇಜು ಹಂತದಲ್ಲೇ ಶುಲ್ಕ ನಿಗದಿಪಡಿಸಿ, ಮೂರನೇ ಸೆಮಿಸ್ಟರ್‌ಗೆ ಪ್ರವೇಶ ನೀಡಬಹುದಾಗಿದೆ.

ಬೇಡಿಕೆಗಿಂತ ಹೆಚ್ಚು ಎಂಜಿನಿಯರಿಂಗ್ ಸೀಟುಗಳು ಲಭ್ಯವಿರುವುದರಿಂದ ಪಿಯು ಮೂಲಕ ಮೊದಲ ಸೆಮಿಸ್ಟರ್‌ಗೆ ದಾಖಲಿಸಿಕೊಳ್ಳಬೇಕಿರುವ ಸೀಟುಗಳು ಕೂಡ ಗಣನೀಯ ಪ್ರಮಾಣದಲ್ಲಿ ಉಳಿಯುತ್ತಿವೆ. ಹೀಗೆ ವಿದ್ಯಾರ್ಥಿಗಳು ದಾಖಲಾಗಲು ಆಸಕ್ತಿ ತೋರದ ಕಾರಣದಿಂದ ಉಳಿಯುವ ಸಿಟುಗಳನ್ನು ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಮೂರನೇ ಸೆಮಿಸ್ಟರ್‌ಗೆ ಲ್ಯಾಟರಲ್ ಎಂಟ್ರಿ ಮೂಲಕ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ನೀಡಲು ಅವಕಾಶವಿದೆ. ಆದರೆ, ಡಿಪ್ಲೊಮಾ ಪೂರೈಸಿದ ಬಹುತೇಕ ವಿದ್ಯಾರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸೀಟು ಹಂಚಿಕೆ ಪ್ರಕ್ರಿಯೆಯ ಮೂಲಕವೇ ಎಂಜಿನಿಯರಿಂಗ್‍ಗೆ ಪ್ರವೇಶ ಪಡೆಯುವುದರಿಂದ, ಹಿಂದಿನ ಶೈಕ್ಷಣಿಕ ವರ್ಷದ ಮೊದಲ ಸೆಮಿಸ್ಟರ್‌ನಲ್ಲಿ ಉಳಿದಿರುವ ಸೀಟುಗಳನ್ನು ಕಾಲೇಜುಗಳ ಮಟ್ಟದಲ್ಲಿ ಭರ್ತಿ ಮಾಡಿಕೊಳ್ಳುವುದು ಕಷ್ಟಸಾಧ್ಯ. ತೀರಾ ಹೆಸರುವಾಸಿಯಾಗಿರುವ ಹಾಗೂ ತುಂಬಾ ಬೇಡಿಕೆ ಇರುವ ಬೆರಳೆಣಿಕೆಯ ಕಾಲೇಜುಗಳು ಹಾಗೂ ಕೋರ್ಸುಗಳನ್ನು ಹೊರತುಪಡಿಸಿ, ಇತರೆಡೆಗಳಲ್ಲಿ ವಿಚಾರಿಸಲು ಕೂಡ ವಿದ್ಯಾರ್ಥಿಗಳು ಆಸಕ್ತಿ ತೋರಲಾರರು.

ಈ ವಾಸ್ತವ ಮನಗಂಡಿರುವ ಖಾಸಗಿ ಕಾಲೇಜುಗಳು, ಕೆಲವು ವರ್ಷಗಳಿಂದ ತಮ್ಮಲ್ಲಿ ಉಳಿದಿರುವ ಸೀಟುಗಳನ್ನು ಕೆಇಎ ಮೂಲಕವೇ ಹಂಚಿ ಎಂದು ಸ್ವಯಂಪ್ರೇರಿತವಾಗಿ ಸರ್ಕಾರಕ್ಕೆ ಹಿಂದಿರುಗಿಸುತ್ತಿವೆ. ಹೀಗೆ ಹಿಂದಿರುಗಿಸಲ್ಪಟ್ಟ ಸೀಟುಗಳನ್ನು ಕಳೆದ ಬಾರಿ ಎರಡನೇ ಸುತ್ತಿನ ಸೀಟು ಆಯ್ಕೆ ವೇಳೆ ಲಭ್ಯವಾಗಿಸಿದ್ದರೆ, 2021ರಲ್ಲಿ ಮೊದಲ ಸುತ್ತಿನಲ್ಲೇ ಸೇರಿಸಲಾಗಿತ್ತು. 2023-24ನೇ ಸಾಲಿನಲ್ಲಿ ಲ್ಯಾಟರಲ್ ಎಂಟ್ರಿ ಮೂಲಕ ಪ್ರವೇಶ ನೀಡಬಹುದಾದ, ಮೊದಲ ಸೆಮಿಸ್ಟರ್‌ನಲ್ಲಿ ಭರ್ತಿಯಾಗದೆ ಉಳಿದ ಬಹಳಷ್ಟು ಸೀಟುಗಳು ಖಾಸಗಿ, ಅನುದಾನಿತ ಹಾಗೂ ಸರ್ಕಾರಿ ಕಾಲೇಜುಗಳ ಬಳಿ ಇವೆ. ಹಿಂದಿನಂತೆ ಈ ಬಾರಿ ಕೂಡ ಸ್ವಯಂಪ್ರೇರಿತವಾಗಿ ಸೀಟುಗಳನ್ನು ಸರ್ಕಾರಕ್ಕೆ ಹಿಂದಿರುಗಿಸಲು ಗಮನಾರ್ಹ ಸಂಖ್ಯೆಯ ಕಾಲೇಜುಗಳು ತಯಾರಿವೆ. ಆದರೆ, ಸರ್ಕಾರ ಈ ಕುರಿತು ಯಾವ ಧೋರಣೆ ತಳೆಯಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ADVERTISEMENT

ಕೆಇಎ ಈಗಾಗಲೇ ತನ್ನ ಜಾಲತಾಣದಲ್ಲಿ ಪ್ರಕಟಿಸಿರುವ ಸೀಟ್ ಮ್ಯಾಟ್ರಿಕ್ಸ್‌ನಲ್ಲಿ ಎಐಸಿಟಿಇ ಅನುಮೋದಿಸಿದ ಸೀಟುಗಳ ಶೇಕಡ 10ರಷ್ಟನ್ನು ಮಾತ್ರ ಪರಿಗಣಿಸಲಾಗಿದೆ. ಕಾಲೇಜುಗಳು ಸ್ವಯಂಪ್ರೇರಿತವಾಗಿ ಹಿಂದಿರುಗಿಸುವ ಸೀಟುಗಳು ಯಾವ ಹಂತದ ಸೀಟು ಆಯ್ಕೆಯಲ್ಲಿ ಲಭ್ಯವಾಗಲಿವೆ ಎನ್ನುವ ಪ್ರಶ್ನೆ ಲ್ಯಾಟರಲ್ ಎಂಟ್ರಿ ಮೂಲಕ ಎಂಜಿನಿಯರಿಂಗ್ ಪದವಿಗೆ ಪ್ರವೇಶ ಪಡೆಯಲು ಆಸಕ್ತರಾಗಿರುವ ವಿದ್ಯಾರ್ಥಿಗಳಲ್ಲಿದೆ. ಸಂಬಂಧಪಟ್ಟವರು ಆದಷ್ಟು ಬೇಗ ಈ ಕುರಿತು ಸ್ಪಷ್ಟನೆ ನೀಡಬೇಕಿದೆ. ಕಾಲೇಜುಗಳೇ ಹಿಂದಿರುಗಿಸಲು ಸಿದ್ಧವಿರುವ ಸೀಟುಗಳನ್ನು ಕೆಇಎ ಮೂಲಕ ಮೊದಲ ಸುತ್ತಿನಲ್ಲೇ ಹಂಚಲು ಹಾಗೂ ಈ ಕುರಿತ ವಿವರಗಳನ್ನು ಮೊದಲೇ ಬಹಿರಂಗಪಡಿಸುವ ಮೂಲಕ ವಿದ್ಯಾರ್ಥಿಗಳ ಹಿತ ಕಾಯುವಲ್ಲಿ ಇರುವ ತೊಡಕುಗಳಾದರೂ ಏನು ಎಂಬುದನ್ನು ಸಂಬಂಧಪಟ್ಟವರು ತಿಳಿಸಬೇಕಿದೆ.

ಲ್ಯಾಟರಲ್ ಎಂಟ್ರಿ ಮೂಲಕ ಹಂಚಲು ಕಾಲೇಜುಗಳು ಹಿಂದಿರುಗಿಸಬಹುದಾದ ಸೀಟುಗಳ ವಿವರವನ್ನು ಸರ್ಕಾರ ಸಾಕಷ್ಟು ಮುಂಚಿತವಾಗಿಯೇ ಪಡೆದುಕೊಳ್ಳಬಹುದಾಗಿದೆ. ಕಳೆದ ಶೈಕ್ಷಣಿಕ ಸಾಲಿನಲ್ಲಿ ಉಳಿದಿರುವ ಸೀಟುಗಳನ್ನು ಹಂಚಲು ಮತ್ತು ಆ ಕುರಿತ ವಿವರಗಳನ್ನು ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ಲಭ್ಯವಾಗಿಸಲು ಕೂಡ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ.

ವಿದ್ಯಾರ್ಥಿಗಳ ಎದುರು ಹೆಚ್ಚು ಆಯ್ಕೆಗಳಿದ್ದರೆ, ಅದರಿಂದ ನಷ್ಟವಾಗುವುದು ಯಾರಿಗೆ ಎಂಬುದನ್ನು ಅರಿಯಲು ಹೆಚ್ಚು ತಿಣುಕಾಡಬೇಕಿಲ್ಲ. ವಿದ್ಯಾರ್ಥಿಗಳು ದಾಖಲಾಗಲು ಬಯಸದ ಮೂಲಸೌಕರ್ಯ ವಂಚಿತ ಕಾಲೇಜುಗಳ ಹಿತ ಕಾಯುವ ಸಲುವಾಗಿ ಈ ಬಾರಿ ಉಳಿಕೆ ಸೀಟುಗಳನ್ನು ಹಂಚದಿರುವ ತೀರ್ಮಾನಕ್ಕೆ ಸರ್ಕಾರ ಬಂದಿದೆಯೇ ಎನ್ನುವ ಅನುಮಾನ ವಿದ್ಯಾರ್ಥಿಗಳ ವಲಯದಲ್ಲಿ ಮೂಡಿದೆ. ಏಕೆಂದರೆ, ಕಾಲೇಜುಗಳು ಹಿಂದಿರುಗಿಸುವ ಸೀಟುಗಳನ್ನು ಲಭ್ಯವಾಗಿಸದೇ ಹೋದಲ್ಲಿ, ಇರುವ ಸೀಮಿತ ಸಂಖ್ಯೆಯ ಆಯ್ಕೆಗಳಲ್ಲೇ ಒಂದರ ಮೊರೆ ಹೋಗುವ ಅನಿವಾರ್ಯ ಎದುರಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.