ADVERTISEMENT

ಸಂಗತ: ಶುದ್ಧ ಗಾಳಿಗಾಗಿ ನಾನಾ ಕಸರತ್ತು

ಮಹಾನಗರಗಳಲ್ಲಿನ ವಾಯುಮಾಲಿನ್ಯ ತಡೆಗೆ ಬೇಕು ಕಠಿಣ ಕ್ರಮ

ಗುರುರಾಜ್ ಎಸ್.ದಾವಣಗೆರೆ
Published 20 ನವೆಂಬರ್ 2020, 19:30 IST
Last Updated 20 ನವೆಂಬರ್ 2020, 19:30 IST
ಸಂಗತ
ಸಂಗತ   

ಅದು 1995. ಸಾರ್ವಜನಿಕ ಹಿತಾಸಕ್ತಿ ಸಂಶೋಧನಾ ಸಂಸ್ಥೆಯಾದ ಸೆಂಟರ್ ಫಾರ್ ಸೈನ್ಸ್ ಆ್ಯಂಡ್‌ ಎನ್ವಿರಾನ್‍ಮೆಂಟ್ (ಸಿಎಸ್‍ಇ), ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ನಮ್ಮ ಮಹಾನಗರಗಳಲ್ಲಿ ಏರುತ್ತಿದ್ದ ವಾಯುಮಾಲಿನ್ಯದ ಕುರಿತುಕೇಂದ್ರ ಸರ್ಕಾರದ ಗಮನ ಸೆಳೆದಿತ್ತು. ಹಲವು ನಗರಗಳ ಗಾಳಿಯ ಗುಣಮಟ್ಟದ ಕುರಿತು ವಿಶ್ಲೇಷಣಾತ್ಮಕ ಪುಸ್ತಕವನ್ನೇ ಪ್ರಕಟಿಸಿ, ಮಾಲಿನ್ಯ ನಿಯಂತ್ರಿಸುವಲ್ಲಿ ಸರ್ಕಾರ ಮತ್ತು ಅದರ ನೀತಿಗಳು ಹೇಗೆ ವಿಫಲವಾಗಿವೆ ಎಂಬುದನ್ನು ಬಯಲಿಗೆಳೆದಿತ್ತು.

ನಿಧಾನವಾಗಿ ಎಚ್ಚೆತ್ತುಕೊಂಡ ಸರ್ಕಾರ, ಗಾಳಿಯ ಶುದ್ಧತೆ ಕಾಪಾಡಲು ಎನ್ವಿರಾನ್‍ಮೆಂಟ್ ಪೊಲ್ಯೂಶನ್ (ಪ್ರಿವೆನ್ಷನ್‌ ಆ್ಯಂಡ್ ಕಂಟ್ರೋಲ್) ಅಥಾರಿಟಿಯನ್ನು (ಇಪಿಸಿಎ) ಸ್ಥಾಪಿಸಿತ್ತು. ಅದು ಸ್ಥಳೀಯ ಮಾಲಿನ್ಯ ನಿಯಂತ್ರಣ ಮಂಡಳಿಗಳಿಂದ ವರದಿ ಪಡೆದು ಕೇಂದ್ರಕ್ಕೆ ಸಲ್ಲಿಸಿತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಸುಪ್ರೀಂ ಕೋರ್ಟ್‌, ದೆಹಲಿ ನಗರದಲ್ಲಿ ಡೀಸೆಲ್ ಬಳಸಿ ಸಂಚರಿಸುವ ಎಲ್ಲ ಬಸ್ಸು ಹಾಗೂ ತ್ರಿಚಕ್ರ ವಾಹನಗಳು ಸಿಎನ್‍ಜಿ (ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್) ಬಳಸಬೇಕೆಂದು ತಾಕೀತು ಮಾಡಿ, ಡೀಸೆಲ್‍ನಿಂದ ಸಿಎನ್‍ಜಿಗೆ ಪರಿವರ್ತನೆ ಹೊಂದಲು ಸಮಯ ನೀಡಿತು. ಅಂತಿಮವಾಗಿ, 2002ರಲ್ಲಿ ಡೀಸೆಲ್ ವಾಹನಗಳನ್ನು ಸಂಪೂರ್ಣವಾಗಿ ನಿಷೇಧಿಸಿತು.

ಸಿಎನ್‍ಜಿ ಬಳಕೆಯ ನಂತರ ದೆಹಲಿಯ ಗಾಳಿ ಸ್ವಲ್ಪಮಟ್ಟಿನ ಸುಧಾರಣೆ ಕಂಡಿತ್ತು. ಆದರೆ ಕಾರುಗಳ ಸಂಖ್ಯೆ ಮಿತಿಮೀರಿದ್ದರಿಂದ, ಹದಕ್ಕೆ ಬಂದಿದ್ದ ಗಾಳಿ ಮತ್ತೆ ಕಲುಷಿತಗೊಂಡು, ಪಾರ್ಕಿಂಗ್ ಸೌಲಭ್ಯದ ಕೊರತೆಯೂ ತಲೆದೋರಿತು. ವಾಹನಗಳ ಸಂಖ್ಯೆ ಮತ್ತು ದಟ್ಟಣೆಯನ್ನು ಕಡಿಮೆ ಮಾಡುವಂತೆ ನೋಟಿಸ್ ನೀಡಿದ ಹೈಕೋರ್ಟ್‌, ಪಾರ್ಕಿಂಗ್ ನೀತಿಯನ್ನು ರೂಪಿಸುವಂತೆ ಆದೇಶಿಸಿತು. ಹೆಚ್ಚಿನ ಪಾರ್ಕಿಂಗ್ ಶುಲ್ಕ, ಹೊಸ ಬಸ್‍ಗಳ ಖರೀದಿ ಮತ್ತು ಬಸ್‍ಗಳಿಗಾಗಿ ಪ್ರತ್ಯೇಕ ಮಾರ್ಗ ರೂಪಿಸಿದ ದೆಹಲಿ ಸರ್ಕಾರ, ಕೊನೆಗೆ ಕಾರುಗಳ ಬಳಕೆಯ ವಿಷಯದಲ್ಲಿ ಸರಿ- ಬೆಸ ಸಂಖ್ಯೆಯ ನಿಯಮವನ್ನೂ ಜಾರಿಗೆ ತಂದಿತು. ದೆಹಲಿ ಪ್ರವೇಶಿಸುವ ಡೀಸೆಲ್ ಲಾರಿಗಳಿಗೆ ದುಬಾರಿ ಶುಲ್ಕ ವಿಧಿಸಿ, ಹೊಗೆ ಉಗುಳುವ ಉಷ್ಣಸ್ಥಾವರಗಳಿಗೆ ದುಬಾರಿ ದಂಡದ ಬಿಸಿ ಮುಟ್ಟಿಸಲಾಯಿತು.

ADVERTISEMENT

ಈಗ ಪಕ್ಕದ ಪಂಜಾಬ್, ಹರಿಯಾಣದ ರೈತರು ಭತ್ತದ ಬೆಳೆಯ ಕೂಳೆಯನ್ನು ಸುಡುತ್ತಿರುವುದರಿಂದ ಇಡೀ ದೆಹಲಿಯ ಉಸಿರುಗಟ್ಟುತ್ತಿದೆ.ಪಂಜಾಬ್‍ನ 50,000 ಮತ್ತು ಹರಿಯಾಣದ 6,000 ಹೊಲಗಳಲ್ಲಿ ಈಗಾಗಲೇ ಕೂಳೆ ಸುಡಲಾಗಿದೆ. ಭತ್ತದ ಬೆಳೆಯ ಕಟಾವಿನ ನಂತರ ಗೋಧಿ ಬಿತ್ತನೆಗೆ ಹೆಚ್ಚಿನ ಕಾಲಾವಕಾಶವಿಲ್ಲ, ಕೋವಿಡ್‍ನಿಂದಾಗಿ ಕೂಳೆಯನ್ನು ಕೀಳಲು ಕೂಲಿಕಾರರು ಸಿಗುತ್ತಿಲ್ಲ, ಸುಟ್ಟಾಗ ಸಿಗುವ ಬೂದಿಯೇ ಅತ್ಯುತ್ತಮ ಗೊಬ್ಬರವಾಗಿ ಕೆಲಸ ಮಾಡುತ್ತದೆ ಎಂದು ರೈತರು ಕಾರಣ ನೀಡುತ್ತಾರೆ. ಕೂಳೆಯನ್ನೇ ಗೊಬ್ಬರವನ್ನಾಗಿಸುವ ಕ್ರಮಗಳ ಬಗ್ಗೆ ಎಷ್ಟೇ ತಿಳಿವಳಿಕೆ ಹೇಳಿದರೂ ರೈತರು ಕೇಳುತ್ತಿಲ್ಲ, ಸುಡದೇ ಇರಲು ರೈತರಿಗೆ ಹಣ ನೀಡುವ ಸ್ಕೀಂಗಳೂ ಇವೆ ಎನ್ನುತ್ತಾರೆ ಸರ್ಕಾರಿ ಅಧಿಕಾರಿಗಳು. ಪಂಜಾಬ್ ಸರ್ಕಾರ ಕಳೆದ ವರ್ಷ ಕೂಳೆ ಸುಡದ 30 ಸಾವಿರಕ್ಕೂ ಹೆಚ್ಚು ರೈತರಿಗೆ ₹ 20 ಕೋಟಿಯಷ್ಟು ಹಣ ನೀಡಿತ್ತು. ಆದರೆ ಸುಡುವವರ ಸಂಖ್ಯೆಯೇನೂ ಕಡಿಮೆಯಾಗಿರಲಿಲ್ಲ.

ಅಲ್ಲಿನ ರೈತರು ಸಾಮಾನ್ಯ ಮತ್ತು ಬಾಸ್‍ಮತಿ ಬಗೆಯ ಭತ್ತ ಬೆಳೆಯುತ್ತಾರೆ. ಸಾಮಾನ್ಯ ಭತ್ತಕ್ಕೆ ಬೆಂಬಲ ಬೆಲೆ ನೀಡಿ ಸರ್ಕಾರವೇ ಖರೀದಿಸುತ್ತದೆ. ಬಾಸ್‍ಮತಿ ಭತ್ತ ಖರೀದಿಸುವುದಿಲ್ಲ. ಇದರ ಕೂಳೆ ಮೇವಿನಂತೆ ಬಳಕೆಯಾಗುತ್ತದೆ. ಕೂಳೆಯನ್ನು ನೆಲದೊಳಕ್ಕೆ ಹಿಂತಿರುಗಿ ಹೂತು ಹಾಕುವ ಯಂತ್ರಗಳೂ ಲಭ್ಯವಿವೆ.

ಕೇಂದ್ರ ಸರ್ಕಾರ ಕಳೆದ ವರ್ಷ ಪಂಜಾಬ್ ರಾಜ್ಯಕ್ಕೆ 50,000 ಯಂತ್ರಗಳನ್ನು ನೀಡಿ ಶೇ 80ರ ಸಬ್ಸಿಡಿಯಲ್ಲಿ ರೈತರಿಗೆ ಸರಬರಾಜು ಮಾಡಿ, ಕೂಳೆಯನ್ನು ಹೊಲಕ್ಕೆ ಸೇರಿಸುವ ಯೋಜನೆ ರೂಪಿಸಿತ್ತು. ಬೆಂಬಲ ಬೆಲೆ ಸಿಗುವ ಸಾಮಾನ್ಯ ಭತ್ತವನ್ನೇ ಹೆಚ್ಚು ಬೆಳೆಯುವ ರೈತರು ಕೂಳೆ ಹೂಳುವ ಯಂತ್ರ ಬರುವವರೆಗೂ ಕಾಯುವುದಿಲ್ಲ. ಅದು ಸಬ್ಸಿಡಿಯಲ್ಲಿ ದೊರೆತರೂ ಉಳಿದ ವೆಚ್ಚ ಭರಿಸಲು ತಾವು ಶಕ್ತರಲ್ಲ ಮತ್ತು ಕಟಾವಿನ ನಂತರ ಹತ್ತು - ಹದಿನೈದು ದಿನಗಳಾದರೂ ಯಾವ ಯಂತ್ರವೂ ಬರುವುದಿಲ್ಲ ಎಂದು ಹೇಳಿ ಕೂಳೆಯನ್ನು ಸುಟ್ಟು ಹಾಕುತ್ತಾರೆ. ಕೂಳೆ ಸುಡುವುದನ್ನು ತಡೆಯಲೇಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿರುವ ಪಂಜಾಬ್- ಹರಿಯಾಣ ಹೈಕೋರ್ಟ್, ಆದೇಶ ಪಾಲಿಸದ ರೈತರಿಗೆ ದಂಡ ವಿಧಿಸಿ ಎಂದಿದೆ.

ಬಯೊ ಡಿಕಂಪೋಸರ್ ದ್ರಾವಣ ಚಿಮುಕಿಸಿ ಕೂಳೆಯನ್ನು ಕಂಪೋಸ್ಟ್ ಮಾಡಿ, ಅದನ್ನೇ ಗೊಬ್ಬರವನ್ನಾಗಿ ಬಳಸಬಹುದು. ಕೂಳೆಯಿಂದ ಜೈವಿಕ ಇಂಧನ ಸಿಬಿಜಿ (ಕಂಪ್ರೆಸ್ಡ್ ಬಯೊಗ್ಯಾಸ್) ತಯಾರಿಸಬಹುದು. ಆರ್‌ಬಿಐ ಆದೇಶದಂತೆ ಸಿಬಿಜಿ ಘಟಕ ಸ್ಥಾಪನೆಗೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್‍ಗಳು ಆದ್ಯತೆಯ ಮೇರೆಗೆ ಸಾಲ ನೀಡುತ್ತಿವೆ. ತೈಲ ಕಂಪನಿಗಳು ಒಂದು ಕೆ.ಜಿಗೆ ₹ 46 ನೀಡಿ ಕೂಳೆಯನ್ನು ಕೊಳ್ಳಲು ತಯಾರಿವೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಸಾಧ್ಯವಾದರೆ, ಅಪಾರ ನೀರು ಬೇಡುವ ಭತ್ತ ಬೆಳೆಯುವುದನ್ನು ನಿಲ್ಲಿಸಿ ಬೇರೆ ಬೆಳೆಗಳತ್ತ ಗಮನ ಹರಿಸಬೇಕು. ಇದು, ನಮ್ಮ ಕರ್ನಾಟಕದ ರೈತರಿಗೂ ಮಾದರಿ ಕ್ರಮವಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.