ADVERTISEMENT

ಸಂಗತ: ಅಂತ್ಯಸಂಸ್ಕಾರ– ಬೇಡ ತಾರತಮ್ಯ

ಸ್ತ್ರೀಯರು ಅಂತ್ಯಸಂಸ್ಕಾರ ಮಾಡಬಾರದೆಂಬ ವಾದದ ಹಿನ್ನೆಲೆ ಏನಿರಬಹುದು?

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2025, 0:25 IST
Last Updated 8 ಮಾರ್ಚ್ 2025, 0:25 IST
   

‘ಅಪ್ಪ, ನಿನ್ನ ಎದೆ ಮೇಲೆ ಒಮ್ಮೆ ಒರಗಿಕೊಳ್ಳಲೇ?’ ಎಂದು ಕೇಳಬೇಕೆಂದುಕೊಂಡ ಮಾತು ಗಂಟಲಲ್ಲೇ
ಉಳಿಯಿತು. ಎದೆಗೆ ಒರಗಿದಾಗ ತಲೆ ನೇವರಿಸುತ್ತಾ ಪ್ರೀತಿ ಸೂಸುತ್ತಿದ್ದ ಆ ಜೀವ ಶಾಶ್ವತವಾಗಿ ಮೌನವಾಗಿತ್ತು. ಇತ್ತ, ಉಮ್ಮಳಿಸಿ ಬರುತ್ತಿದ್ದ ದುಃಖದಿಂದ ನನ್ನ ಕಣ್ಣೀರಿನ ಕೋಡಿ ಹರಿಯುತ್ತಿದ್ದರೆ, ಅತ್ತ, ಅಪ್ಪನ ಹೆಣ್ಣುಮಕ್ಕಳ ಇರವೆಯ ಪರಿವೆಯೇ ಇಲ್ಲದಂತೆ, ಅಪ್ಪನಿಗೆ ಕೊಳ್ಳಿ ಇಡಲು ಇನ್ಯಾರನ್ನೋ ಕರೆಸುವ ಮಾತುಕತೆ ನಡೆಯುತ್ತಿತ್ತು!

ಹೌದು! ಅಪ್ಪನ ಅಂತ್ಯಸಂಸ್ಕಾರದ ‘ವ್ಯವಹಾರ’ ಕುದುರಿಸಲು ನೆಂಟರಿಷ್ಟರು ಸಜ್ಜಾಗಿದ್ದರು. ಆ ಕಾರ್ಯ ನೆರವೇರಿಸಿದ ನೆಪದಲ್ಲಿ ಅಪ್ಪನ ಆಸ್ತಿಗೆ ಬೇಡಿಕೆ ಇಡಲು ನಡೆಯುತ್ತಿದ್ದ ಪಿತೂರಿಯನ್ನು ಕಂಡು ತಬ್ಬಿಬ್ಬಾದೆ. ದುಃಖದ ಮಡುವಿನಲ್ಲೂ ನನ್ನೊಳಗೆ ಪ್ರಶ್ನೆಗಳು ಒತ್ತೊತ್ತಿ ಬರುತ್ತಿದ್ದವು. ಮಗಳಾಗಿ ನಾನಿರುವಾಗ ನನ್ನಪ್ಪನ ಅಂತ್ಯಸಂಸ್ಕಾರ ಬೇರೆಯವರು ಮಾಡುವುದೇಕೆ? ಪ್ರೀತಿಪಾತ್ರ ಅಪ್ಪನನ್ನು ಕಡೆಗಾಲದಲ್ಲಿ ಘನತೆಯಿಂದ ಕಳಿಸಿಕೊಡುವ ಹಕ್ಕೂ ನನಗಿಲ್ಲವೇ? ಕಷ್ಟ-ಸುಖಕ್ಕೆಲ್ಲ ಹೆಣ್ಣುಮಕ್ಕಳು ಬೇಕು, ಅಂತ್ಯ ಸಂಸ್ಕಾರಕ್ಕೆ ಮಾತ್ರ ಯಾಕೆ ಬೇಡ? ಇಂತಹದ್ದೊಂದು ಕಟ್ಟುಪಾಡು ಬಂದದ್ದಾದರೂ ಯಾಕೆ? ಆಸ್ತಿಗಾಗಿ ಹೊಂಚು ಹಾಕುವವರಿಂದ ಕೊಳ್ಳಿ ಇಡಿಸಿದರೆ ಅಪ್ಪನ ಆತ್ಮಕ್ಕೆ ನಿಜಕ್ಕೂ ಶಾಂತಿ ಸಿಕ್ಕೀತೇ? ನುಗ್ಗಿಬರುತ್ತಿದ್ದ ಆಲೋಚನೆಗಳು ನನ್ನನ್ನು ಪ್ರೇರೇಪಿಸತೊಡಗಿದವು. ಮನಸ್ಸಿನಲ್ಲಿ ನಿರ್ಧಾರವೊಂದು ಗಟ್ಟಿಯಾಗತೊಡಗಿತು.

ಕಡೆಗೂ ಕುಟುಂಬಸ್ಥರ ಮುಂದೆ ಹೋಗಿ ‘ನನ್ನ ಅಪ್ಪಯ್ಯನ ಅಂತ್ಯಸಂಸ್ಕಾರ ನಾನೇ ಮಾಡುತ್ತೇನೆ’ ಎಂದು ಒಂದೇ ಉಸಿರಿಗೆ ಹೇಳಿ ಮುಗಿಸಿ ನಿರಾಳವಾಗಿದ್ದೆ. ಸಹಜವಾಗಿಯೇ ವ್ಯಕ್ತವಾದ ವಿರೋಧದಿಂದ ಒಮ್ಮೆ ಹಿಮ್ಮೆಟ್ಟಿದರೂ ಗೋಗರೆದು, ಟೀಕೆಗಳನ್ನೆಲ್ಲ ಮೆಟ್ಟಿ ನಿಂತು ಕಡೆಗೂ ಎಲ್ಲರೂ ಒಪ್ಪುವಂತೆ ಮಾಡಿ, ಅಂತ್ಯಸಂಸ್ಕಾರ ನೆರವೇರಿಸಿದ್ದೆ.  

ADVERTISEMENT

ನಾನು ಹತ್ತನೇ ತರಗತಿ ಓದುವಾಗಲೇ ಅಪ್ಪ ಹೃದ್ರೋಗದಿಂದ ಮನೆಯಲ್ಲೇ ಉಳಿಯುವಂತಾಗಿತ್ತು. ಅಂದಿನಿಂದ ನಮ್ಮಿಬ್ಬರು ಹೆಣ್ಣುಮಕ್ಕಳ ಆರೈಕೆಯೆಲ್ಲ ಅಮ್ಮನದೇ ಆದರೂ ಅಪ್ಪನ ಪ್ರೀತಿಗೆ ಮಾತ್ರ ಯಾವುದೇ ಕೊರತೆ ಇರಲಿಲ್ಲ. ಪ್ರತಿ ಹಂತದಲ್ಲೂ ನಮಗೆ ಸ್ವಾಭಿಮಾನದ ಬದುಕನ್ನು ಕಟ್ಟಿಕೊಟ್ಟ ಅಪ್ಪ, ಗಂಡುಮಕ್ಕಳು ಇಲ್ಲವೆಂಬ ಕೊರತೆಯೇ ಇಲ್ಲದಂತೆ ನಮ್ಮನ್ನು ಬೆಳೆಸಿದರು. ಬಹುಶಃ ಅದೇ ಪ್ರೇರಣೆಯಿಂದಲೇ ಇರಬೇಕು ನನ್ನ ಅಪ್ಪನಿಗೆ ಕೊಳ್ಳಿ ಇಡುವ ಧೈರ್ಯ ನನ್ನೊಳಗೆ ಇಮ್ಮಡಿಯಾದದ್ದು.

ಗಂಡುಮಕ್ಕಳೇ ಅಂತ್ಯಸಂಸ್ಕಾರ ಮಾಡಬೇಕೆಂಬ ಸಂಪ್ರದಾಯ ಶತಮಾನಗಳಿಂದ ವಿವಾದಗ್ರಸ್ತ ವಿಷಯ
ವಾಗಿಯೇ ಮುಂದುವರಿದಿದೆ. ಪಿಂಡ ಇಡುವುದಕ್ಕಾದರೂ ಗಂಡುಮಗು ಬೇಕು ಅನ್ನುವ ಕಾರಣದಿಂದಲೇ ಎಷ್ಟೋ ಹೆಣ್ಣುಭ್ರೂಣ ಹತ್ಯೆಗಳು ನಡೆದುಹೋಗಿವೆ. ದಂಪತಿಗೆ ಹೆಣ್ಣುಮಕ್ಕಳು ಮಾತ್ರ ಇದ್ದಾಗ, ಹತ್ತಿರದ ಗಂಡು ಸಂಬಂಧಿ ಅಂತ್ಯಸಂಸ್ಕಾರ ಮಾಡುವುದೇ ಹೆಚ್ಚು. ಇನ್ನು ಗಂಡುಮಕ್ಕಳು ಇದ್ದರಂತೂ ಹೆಣ್ಣುಮಕ್ಕಳಿಂದ ಆ ಕಾರ್ಯ ಮಾಡಿಸುವ ಪ್ರಶ್ನೆಯೇ ಉದ್ಭವಿಸದು. ಇಂತಹ ಪದ್ಧತಿ ಹಿಂದೆಲ್ಲ ಹೆಣ್ಣುಮಕ್ಕಳು ಪಿತ್ರಾರ್ಜಿತ ಸ್ವತ್ತಿನಿಂದ ವಂಚಿತರಾಗಲು ಪ್ರಮುಖ ಕಾರಣವಾಗುತ್ತಿತ್ತು. ಈಗ ಹೆಣ್ಣುಮಕ್ಕಳಿಗೂ ಆಸ್ತಿಯಲ್ಲಿ ಹಕ್ಕು ಕೊಡುವ ಕಾನೂನು ಬಂದಿರುವುದು ಒಂದು ಕ್ರಾಂತಿಕಾರಿ ಬೆಳವಣಿಗೆಯೇ ಸರಿ.

ಅಷ್ಟಕ್ಕೂ ಸ್ತ್ರೀಯರು ಅಂತ್ಯಸಂಸ್ಕಾರ ಮಾಡಬಾರದೆಂಬ ವಾದದ ನಿಜವಾದ ಹಿನ್ನೆಲೆ ಏನಿರಬಹುದು? ಇದರ ಹಿಂದೆ ಸಮಂಜಸ ಎನಿಸುವ ಅರ್ಥ ಇರಲೂಬಹುದು ಮತ್ತು ಕೆಲವು ಮುಖ್ಯ ವಿಷಯಗಳಿಂದ ಮಹಿಳೆಯರನ್ನು ಹಿಂದೆ ಸರಿಸುವ ಉದ್ದೇಶ ಸಹ ಅಡಗಿರಬಹುದು. ಮೃದು ಹೃದಯಿಗಳಾದ ಹೆಣ್ಣುಮಕ್ಕಳು ಭಾವನಾತ್ಮಕವಾಗಿ ದಿಢೀರ್ ಸ್ಪಂದನಶೀಲರಾಗುತ್ತಾರೆ. ಅಂತ್ಯಸಂಸ್ಕಾರದ ವೇಳೆ ಮಿತಿಮೀರಿದ ದುಃಖಾವೇಶದಿಂದ ಕ್ರಿಯೆಗಳನ್ನು ಪೂರ್ಣಗೊಳಿಸುವುದು ಕಷ್ಟವಾಗ
ಬಹುದೆಂಬ ಕಾರಣವೂ ಇರಬಹುದು. ಗರ್ಭಿಣಿಯಾಗಿರುವುದು, ಮಾಸಿಕ ಋತುಚಕ್ರ ಸಹ ಅಂತ್ಯಸಂಸ್ಕಾರ ಕ್ರಿಯೆಗೆ ಅಡ್ಡಿಯಾಗುವ ಕಾರಣಗಳು ಎನ್ನುತ್ತಾರೆ. ಸ್ತ್ರೀ ವಿವಾಹದ ನಂತರ ಗಂಡನ ಕುಟುಂಬಕ್ಕೆ ಸೇರಿ ದವಳಾಗುತ್ತಾಳೆ, ಹಾಗಾಗಿ ಆಕೆ ತಂದೆ-ತಾಯಿಯ ಅಂತ್ಯಸಂಸ್ಕಾರ ಮಾಡಬರುವುದಿಲ್ಲ. ಅವಿವಾಹಿತೆ ಈ ಕ್ರಿಯೆ ನಡೆಸಲು ಅಡ್ಡಿಯಿಲ್ಲವೆಂಬ ವಾದವೂ ಇದೆ.ಆದರೆ ಆರೋಗ್ಯದ ಕಾರಣ ಹೊರತುಪಡಿಸಿ ಉಳಿದ ಕಾರಣಗಳು ಸಮರ್ಥನೀಯ ಎನ್ನಿಸದು.

ನನ್ನಪ್ಪನ ಅಂತ್ಯಸಂಸ್ಕಾರದ ಪ್ರತಿ ಶಾಸ್ತ್ರವೂ ತಿಂಗಳುಗಳು ಕಳೆದ ಬಳಿಕವೂ ನನ್ನನ್ನು ಕಾಡುತ್ತದೆ. ಅಪ್ಪನನ್ನು ತಬ್ಬಿ ಮಲಗುತ್ತಿದ್ದ ಕೈಗಳಿಂದ ಅವರ ದೇಹಕ್ಕೆ ಕೊಳ್ಳಿ ಇಟ್ಟ ಸಂದರ್ಭವಂತೂ ಇಂದಿಗೂ ಅದೆಷ್ಟೋ ರಾತ್ರಿಗಳ ನಿದ್ದೆಗೆಡಿಸುತ್ತದೆ. ಅದೆಲ್ಲದರ ನಡುವೆಯೂ ಮಗಳ ಕೈಯಲ್ಲಿ ಕೊಳ್ಳಿ ಇಡಿಸಿಕೊಂಡ ಕಾರಣಕ್ಕೆ ನನ್ನಪ್ಪನ ಆತ್ಮಕ್ಕೆ ಶಾಂತಿ ಸಿಕ್ಕಿರಬಹುದು ಎಂಬ ಸಣ್ಣ ನಂಬಿಕೆಯೇ ಮನಸ್ಸಿಗೆ ಎಷ್ಟೋ ಸಮಾಧಾನ ತರುತ್ತದೆ!

ಸಂಪ್ರದಾಯವಾದಿಗಳು, ಸುಧಾರಣಾವಾದಿಗಳು, ಆಸ್ತಿಕರು, ನಾಸ್ತಿಕರು... ಹೀಗೆ ಹಲವು ಭಿನ್ನ ಮನೋಭಾವದವರನ್ನೆಲ್ಲ ಒಪ್ಪಿಕೊಂಡು, ಹೊಂದಿಕೊಂಡು (ಕೆಲವು ಅಪವಾದ ಹೊರತುಪಡಿಸಿ) ಸಾಗುತ್ತಿರುವ ಧರ್ಮವೆಂದರೆ ಬಹುಶಃ ಹಿಂದೂ ಧರ್ಮವೊಂದೇ! ಈ ಧರ್ಮದಲ್ಲಿನ ಹಲವು ಸಂಪ್ರದಾಯಗಳನ್ನು ಸಮಾಜವು ಕಾಲೋಚಿತವಾಗಿ ಕೈಬಿಟ್ಟಿದೆ. ಅಂತ್ಯಸಂಸ್ಕಾರ ಮಾಡಲು ಸ್ತ್ರೀಯರಿಗೆ ಅವಕಾಶ ಕಲ್ಪಿಸುವುದನ್ನೂ ಇಂತಹುದೇ ವಿಶಾಲ ಮನೋಭಾವದಿಂದ ನೋಡಬೇಕಾದ ಕಾಲ ಈಗ ಬಂದಿದೆ. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಬರೀ ಆಚರಣೆಯಾಗಿ ಉಳಿಯದಿರಲಿ. ಹೊಸ ದಿಟ್ಟ ಹೆಜ್ಜೆಗಳಿಗೆ ಮುನ್ನುಡಿ ಬರೆಯಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.