ADVERTISEMENT

ಸಂಗತ | ರಸ್ತೆಗಳಿಗೆ ಬೇಡವೆ ಹಸುರು ಆಸರೆ?

ರಸ್ತೆ ಅಭಿವೃದ್ಧಿ ಕಾಮಗಾರಿ ಹೆಸರಲ್ಲಿ ಪ್ರತಿ ವರ್ಷವೂ ಲಕ್ಷಾಂತರ ಮರಗಳನ್ನು ಕತ್ತರಿಸಲಾಗುತ್ತಿದೆ, ಬೆಟ್ಟ– ಗುಡ್ಡಗಳ ಬೆನ್ನುಮುರಿದು ಮಲಗಿಸಲಾಗುತ್ತಿದೆ.

ಸತೀಶ್ ಜಿ.ಕೆ. ತೀರ್ಥಹಳ್ಳಿ
Published 4 ಜುಲೈ 2025, 23:51 IST
Last Updated 4 ಜುಲೈ 2025, 23:51 IST
   

ಹಸುರಿನ ಆಸರೆ ಇಲ್ಲದೆ ಹೋದರೆ ಜೀವಸಂಕುಲಕ್ಕೆ ಅರೆಗಳಿಗೆಯ ಬದುಕೂ ಕಷ್ಟಕರ. ಪ್ರಗತಿಯ ಹಾದಿಯಲ್ಲಿ ಗಿಡ–ಮರಗಳು ಇಲ್ಲವಾದರೆ, ನಮಗೆ ಉಳಿಗಾಲ ಇಲ್ಲ ಎಂದೇ ಅರ್ಥ. ಪರಿಸರದ ಮೂಲಭೂತ ಘಟಕಗಳಾದ ಗಾಳಿ, ನೀರು, ನೆಲವೆಲ್ಲ ಹಸಿಯಾಗಿ ಹಸುರಾಗಿ ಇರದೇ ಹೋದರೆ ಭೂಮಿ ಬಂಜರು. ಹಾಗಾಗಿ, ಇಲ್ಲಿ ಪರಿಸರ ಸಂರಕ್ಷಣೆಗಿಂತ ಮಹತ್ಕಾರ್ಯ ಬೇರೊಂದು ಇರಲಾರದು.

ನಾವೀಗ ಹಣ, ಆಸ್ತಿ, ಒಡವೆ, ವ್ಯವಹಾರಗಳನ್ನು ಮುಂದಿನ ಪೀಳಿಗೆಗೆ ಬಿಟ್ಟು ಹೋದರೆ ಸಾಲದು; ಮುಂದಿನ ತಲೆಮಾರುಗಳ ನೆಮ್ಮದಿಯ ಬದುಕಿಗೆ ವಿಷಮುಕ್ತ ಮಣ್ಣು, ಶುದ್ಧವಾದ ನೀರು- ಗಾಳಿ, ಮರಗಿಡಗಳ ಸಾಂಗತ್ಯವನ್ನೂ ಉಳಿಸಬೇಕು. ಏಕಮುಖ ಅಭಿವೃದ್ಧಿಯಿಂದ ಸುಸ್ಥಿರ ಅಭಿವೃದ್ಧಿಯ ಕಡೆಗೆ ನಮ್ಮ ನಡೆ ಹೊರಳಬೇಕು. ಪ್ರಗತಿ– ಪ್ರಕೃತಿಯ ಚಿಂತನೆ ಏಕಕಾಲದಲ್ಲಿ ಸಾಧ್ಯವಾಗಿ, ಪರಿಸರ ಕಾಳಜಿಯ ಕ್ರಿಯಾಯೋಜನೆಗಳು ರೂಪುಗೊಳ್ಳಬೇಕು. ಅವಸರ, ಆವೇಗಕ್ಕೆ ಒಳಗಾಗದೆ, ಸಂಯಮ ಹಾಗೂ ಸ್ವಯಂನಿಯಂತ್ರಣವನ್ನು ಬದುಕಿನ ಭಾಗ ಆಗಿಸಿಕೊಳ್ಳುವುದು ಸದ್ಯದ ತುರ್ತು.

ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಆಧುನಿಕತೆಯ ಒತ್ತಡ– ಅನಿವಾರ್ಯತೆಗಳಲ್ಲಿ ರಸ್ತೆ ವಿಸ್ತರಣೆ ಪ್ರಕ್ರಿಯೆಯೂ ಒಂದು. ಮೂಲಸೌಕರ್ಯ ಅಭಿವೃದ್ಧಿ, ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸುವುದು, ಸೇತುವೆ, ಕಟ್ಟಡ, ಜಲಾಶಯಗಳ ನಿರ್ಮಾಣ, ಕೈಗಾರಿಕೆಗಳ ಸ್ಥಾಪನೆ, ವಸತಿ ಯೋಜನೆ, ಇವುಗಳೆಲ್ಲವೂ ಅಭಿವೃದ್ಧಿಯ ಮಾಪನವಾಗಿ ಒದಗಲೇಬೇಕಾದ ಜರೂರತ್ತು ಇವತ್ತಿನದು. ಹಾಗಿದ್ದೂ, ನಮ್ಮ ಆರೋಗ್ಯ ಹಾಗೂ ಮುಂದಿನ ತಲೆಮಾರುಗಳ ಹಿತದೃಷ್ಟಿಯಿಂದ ಪ್ರಾಕೃತಿಕ ಸಂಪತ್ತುಗಳ ಸಂರಕ್ಷಣೆಯು ಪ್ರತಿಯೊಬ್ಬರ ಆದ್ಯತೆಯಾಗಬೇಕು. ಆಳುವ ವ್ಯವಸ್ಥೆಗೂ ಈ ಬಗ್ಗೆ ಬದ್ಧತೆ, ಸೂಕ್ಷ್ಮತೆ ಬೇಕು. ಜನಪ್ರಿಯ ಅಭಿವೃದ್ಧಿ ಯೋಜನೆಗಳ ಜೊತೆ ಜೊತೆಗೆ ದೂರಗಾಮಿ ನಿಲುವಿನ ಪರಿಸರ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಸುಸ್ಥಿರ ಹಸಿರು ಹೆದ್ದಾರಿ ನೀತಿಯು ಕಡ್ಡಾಯವಾಗಿ ಜಾರಿಯಾಗಬೇಕು.

ADVERTISEMENT

ಜನಸಂದಣಿ ಮತ್ತು ವಾಹನ ದಟ್ಟಣೆಯ ಒತ್ತಡದಲ್ಲಿ ರಸ್ತೆಗಳು ಕಿರಿದಾಗುತ್ತಿವೆ. ದೇಶದಾದ್ಯಂತ ಪ್ರತಿ ವರ್ಷವೂ ಹೆದ್ದಾರಿಗಳ ನಿರ್ಮಾಣ, ವಿಸ್ತರಣೆ ಹಾಗೂ ತಿರುವು, ತೆರವು, ನೇರಗೊಳಿಸುವಿಕೆಯ ಕಾಮಗಾರಿಗಳು ಜರುಗುತ್ತಿವೆ. ಆದರೆ, 1915ರಲ್ಲಿ ಅನುಷ್ಠಾನಗೊಂಡ ‘ಹಸಿರು ಹೆದ್ದಾರಿ ನೀತಿ’ಯ ಅಳವಡಿಕೆ ಮಾತ್ರ ಈವರೆಗೆ ಎಲ್ಲಿಯೂ ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ. ರಸ್ತೆ ಕಾಮಗಾರಿ ಹೆಸರಲ್ಲಿ ಪ್ರತಿ ವರ್ಷವೂ ಲಕ್ಷಾಂತರ ಮರಗಳನ್ನು ಕತ್ತರಿಸಲಾಗುತ್ತಿದೆ, ಬೆಟ್ಟ–ಗುಡ್ಡಗಳ ಬೆನ್ನುಮುರಿದು ಮಲಗಿಸಲಾಗುತ್ತಿದೆ. ಅಪಾರ ಪ್ರಮಾಣದ ಕೃಷಿ– ಅರಣ್ಯ ಭೂಮಿ, ಕೆರೆಕಟ್ಟೆಗಳು ಅಭಿವೃದ್ಧಿಯ ಹೆಸರಿನಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತಿವೆ.

ಯೋಜನಾ ವೆಚ್ಚದಲ್ಲಿ ನಿರ್ದಿಷ್ಟ ಭಾಗವನ್ನು ಹಸಿರು ನಿಧಿಗೆ ವರ್ಗಾಯಿಸಿ, ಹೆಚ್ಚು ಹೆಚ್ಚು ಸಸಿ ನೆಡುವ ಮೂಲಕ ರಸ್ತೆಗಳ ಬದಿಯನ್ನು ಹಸುರೀಕರಣಗೊಳಿಸುವುದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹೊಣೆ. ಅಗತ್ಯವಾದರೆ ಗಿಡ–ಮರಗಳನ್ನು ಸ್ಥಳಾಂತರಿಸುವ ಮತ್ತು ನೆಡುತೋಪು ನಿರ್ಮಿಸುವ ಕಾರ್ಯ ವ್ಯವಸ್ಥಿತವಾಗಿ ಜರುಗಬೇಕು.

ಪ್ರಗತಿಯ ಮುನ್ನೋಟದಲ್ಲಿ ಜಪಾನ್, ಜರ್ಮನಿ, ಮ್ಯಾನ್ಮಾರ್‌ನಂತಹ ದೇಶಗಳ ಪರಿಸರ ಕಾಳಜಿ ಗಮನಾರ್ಹ. ಮರವೊಂದನ್ನು ಉಳಿಸಲು ಮಹತ್ವಾಕಾಂಕ್ಷೆಯ ಯೋಜನೆಯನ್ನೇ ಬದಲಾಯಿಸುವ ಸಂವೇದನಾಶೀಲ ಆಡಳಿತ ವೈಖರಿಯ ಉದಾಹರಣೆಗಳಲ್ಲಿ ನಾವು ಗಮನಿಸಬೇಕಾದ ಸಂಗತಿಗಳಿವೆ. ಸ್ಥಳೀಯ ಪರಿಸರಕ್ಕೆ ಹೊಂದಿಕೊಂಡು ಬೆಳೆದ ಮರವೊಂದರ ಸುತ್ತ ಹೆಣೆದುಕೊಂಡಿರುವ ಪರಿಸರ ವ್ಯವಸ್ಥೆಯ ಅರಿವು ಆಡಳಿತ ನಡೆಸುವವರಿಗೆ ಅಗತ್ಯ. ಹೊಸ ಗಿಡವನ್ನು ಬೆಳೆಸುವುದಕ್ಕಿಂತಲೂ ನೈಸರ್ಗಿಕವಾಗಿ ಬೆಳೆದ ಗಿಡವೊಂದನ್ನು ಉಳಿಸಿಕೊಳ್ಳುವುದು ಹೆಚ್ಚು ಉಪಯುಕ್ತ ಎಂಬುದನ್ನೂ ನಾವು ಮನಗಾಣಬೇಕು.

ಹೆದ್ದಾರಿ ಪ್ರಾಧಿಕಾರದ ಬೇಜವಾಬ್ದಾರಿತನದ ಬಗ್ಗೆ ಹಸಿರು ನ್ಯಾಯಮಂಡಳಿಯು ಚಾಟಿ ಬೀಸಿರುವುದಿದೆ. ಅಷ್ಟಾದರೂ ಅಭಿವೃದ್ಧಿ ಮಾರ್ಗದಲ್ಲಿ ಪರಿಸರಕ್ಕೆ ಪೂರಕವಾದ ಪರಿಣಾಮಕಾರಿ ಕ್ರಮಗಳಿನ್ನೂ ಜಾರಿಗೊಳ್ಳದಿರುವುದು ಸೋಜಿಗ. ಕಳೆದೊಂದು ದಶಕದ ಅವಧಿಯಲ್ಲಿ ಕೈಗೊಂಡ ಲಕ್ಷಾಂತರ ಕಿ.ಮೀ ರಸ್ತೆ ಕಾಮಗಾರಿಯಲ್ಲಿ ಪರಿಸರ ತೀವ್ರವಾಗಿ ಗಾಸಿಗೊಂಡಿದೆ.

ಪರಿಸರದಲ್ಲಿ ಸ್ಥಿರತೆ ಕಾಪಾಡಿಕೊಳ್ಳಲು ದೇಶದ ಒಟ್ಟು ಭೌಗೋಳಿಕ ವಿಸ್ತೀರ್ಣದ ಕನಿಷ್ಠ ಶೇ 33ರಷ್ಟು ಪ್ರದೇಶವು ಅರಣ್ಯದಿಂದ ಆವೃತವಾಗಿರಬೇಕು ಎಂದು ದೇಶದ ರಾಷ್ಟ್ರೀಯ ಅರಣ್ಯ ನೀತಿ ಹೇಳುತ್ತದೆ. ಆದರೆ, ಅರಣ್ಯ ನೀತಿ ನಿಗದಿಪಡಿಸಿರುವ ಪ್ರಮಾಣಕ್ಕಿಂತಲೂ ಕಡಿಮೆ ಕಾಡು ನಮ್ಮಲ್ಲಿದೆ ಎಂದು ಅಂಕಿ ಅಂಶಗಳು ಹೇಳುತ್ತಿವೆ. ದಿನೇ ದಿನೇ ಉಲ್ಬಣಿಸುತ್ತಿರುವ ಹವಾಮಾನ ವೈಪರೀತ್ಯದಲ್ಲೂ ಕಾಡಿನ ಸವಕಳಿಯ ಪಾತ್ರವಿದೆ.

ಇನ್ನು ಮುಂದಾದರೂ ಅಭಿವೃದ್ಧಿ ಯೋಜನೆಗಳು ಕಡ್ಡಾಯವಾಗಿ ಪರಿಸರಸ್ನೇಹಿ ಆಗಿರಬೇಕು. ನಮ್ಮೆಲ್ಲರ ನಿತ್ಯದ ಬದುಕಿನಲ್ಲಿಯೂ ಪರಿಸರ ಕಾಳಜಿ ಹಾಸುಹೊಕ್ಕಾಗಿ ಇರಬೇಕು. ‘ಕರ್ನಾಟಕ ಮರಗಳ ಸಂರಕ್ಷಣಾ ಕಾಯ್ದೆ’ಯ ಅನುಸಾರ, ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳು ‘ಮರ ಪ್ರಾಧಿಕಾರ’ ರಚಿಸಿಕೊಂಡು ಅರಣ್ಯವನ್ನು ಉಳಿಸಲು ಮುಂದಾಗುವಂತೆ ರಾಜ್ಯದ ಹೈಕೋರ್ಟ್‌ 1976ರಲ್ಲಿ ಮಹತ್ವದ ತೀರ್ಪಿತ್ತಿದೆ. ಸರ್ಕಾರಿ– ಖಾಸಗಿ ಭೂಮಿಯಲ್ಲಿ ಅವಕಾಶವಿರುವ ಎಲ್ಲೆಡೆಯೂ ಇರುವ ಮರಗಳನ್ನು ಉಳಿಸಿ
ಕೊಳ್ಳುವುದು ಮತ್ತು ಹೊಸ ಮರಗಳನ್ನು ಬೆಳೆಸುವುದು ನಮ್ಮೆಲ್ಲರ ಹೊಣೆಗಾರಿಕೆ. ಮರ– ಗಿಡಗಳ ಬೆಳೆಸುವುದಕ್ಕೆ ಮುಂಗಾರಿಗಿಂತಲೂ ಪ್ರಶಸ್ತ ಸಮಯ ಇದೆಯೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.