ADVERTISEMENT

ಸಂಗತ: ಮನೆಯೆಂಬ ಸಂಸ್ಕಾರದ ಪಾಠಶಾಲೆ

ಉತ್ತಮ ಸಂಸ್ಕಾರವನ್ನು ಪೀಳಿಗೆಯಿಂದ ಪೀಳಿಗೆಗೆ ದಾಟಿಸುವುದು ಪೋಷಕರ ಹೊಣೆ

ನಳಿನಿ ಟಿ.ಭೀಮಪ್ಪ
Published 7 ಅಕ್ಟೋಬರ್ 2021, 18:46 IST
Last Updated 7 ಅಕ್ಟೋಬರ್ 2021, 18:46 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

‘ಲೇ... ಈ ಟಿಕೆಟ್ ಹೆಂಗೆ ಸ್ಕ್ಯಾನ್ ಮಾಡ್ತಾರೆ?’ ಅಂತ ಆ ಹುಡುಗಿ, ಸ್ಕ್ಯಾನ್ ಮಾಡಿಕೊಂಡು ಮುಂದೆ ಹೋದ ಗೆಳತಿಯನ್ನು ಕೇಳುತ್ತಾ, ಅಲ್ಲಿಯೇ ತಡವರಿಸುತ್ತ ನಿಂತದ್ದು ಕಂಡುಬಂದಿದ್ದು ಹುಬ್ಬಳ್ಳಿ- ಧಾರವಾಡದ ನಡುವೆ ಸಂಚರಿಸುವ ‘ಚಿಗರಿ’ ಬಸ್‍ಸ್ಟಾಪಿನಲ್ಲಿ. ‘ಆ ಪ್ಲಸ್ ಚಿಹ್ನೆ ಮೇಲೆ ಟಿಕೆಟ್ ಇಡ್ವಾ, ಡೋರ್ ಓಪನ್ ಆಕ್ಕೇತಿ’ ಅಂತ ಗೆಳತಿ ಹೇಳಿದ ಮೇಲೆ, ಅದೇ ತರಹ ಮಾಡಿಬಂದು ಇವಳ ಜೊತೆಯಾದಳು.

‘ನಾ ಎಂದೂ ಬಸ್ಸಿಗೆ ಓಡಾಡೇ ಇಲ್ಲ ಕಣ್ಲೇ, ಏನಿದ್ರೂ ಕಾರ್, ಫ್ಲೈಟ್ ಮಾತ್ರ’ ಎಂದವಳು ಹೇಳಿದಾಗ, ಮತ್ತೊಬ್ಬಳು ‘ಎಲ್ಲಾ ಗೊತ್ತಿರಬೇಕ್ಲೇ’ ಅಂತ ಹೇಳುತ್ತಿದ್ದಳು. ಆ ಕಾಲೇಜು ಹುಡುಗಿಯರ ಮಾತು ನಗು ತರಿಸುತ್ತಿತ್ತು. ಇವೆಲ್ಲಾ ತುಂಬಾ ಸಾಮಾನ್ಯ ಸಂಗತಿಗಳು ಎನಿಸಿದರೂ ಇಂತಹ ಹೊರಗಿನ ಅನುಭವಗಳಿಗೆ ಪೋಷಕರು ಆಗಾಗ ಮಕ್ಕಳನ್ನು ಪಕ್ಕಾ ಮಾಡುತ್ತಿದ್ದರೆ ಒಳಿತು ಎನಿಸಿದ್ದು ಸುಳ್ಳಲ್ಲ.

ಎಷ್ಟೋ ಮನೆಗಳಲ್ಲಿ ಮಕ್ಕಳಿಗೆ ಮನೆಯಲ್ಲಿನ ಸಾಮಾನ್ಯ ವಿಷಯಗಳ ಬಗ್ಗೆ ಗೊತ್ತೇ ಇರುವುದಿಲ್ಲ. ಕರೆಂಟ್ ಚಾರ್ಜ್, ನೀರಿನ ಬಿಲ್ಲು, ಫೋನ್ ಬಿಲ್ಲು, ಬ್ಯಾಂಕಿನ ವ್ಯವಹಾರ, ಸಣ್ಣ ಪುಟ್ಟ ಹಣದ ವ್ಯವಹಾರ, ಮನೆಯ ಖರ್ಚು ವೆಚ್ಚದಂತಹ ಸಂಗತಿಗಳನ್ನು ಪೋಷಕರು ಮಕ್ಕಳಿಗೆ ತಿಳಿಸುವ ಗೋಜಿಗೇ ಹೋಗುವುದಿಲ್ಲ. ಅಷ್ಟೇ ಯಾಕೆ, ಮನೆಯ ಬಾಡಿಗೆ, ಗ್ಯಾಸ್ ಕನೆಕ್ಷನ್‌, ನಳದ ವಾಲ್ವ್, ಸೆಪ್ಟಿಕ್ ಟ್ಯಾಂಕ್, ಬೋರ್‍ವೆಲ್ ಕನೆಕ್ಷನ್‍ಗಳ ಬಗ್ಗೆ... ಊಹ್ಞೂಂ... ಇವುಗಳ ಬಗ್ಗೆಯಂತೂ ಕೇಳಲೇಬೇಡಿ.

ADVERTISEMENT

ಇನ್ನು ತಮ್ಮ ಮನೆಯ ಹೆಬ್ಬಾಗಿಲು ಯಾವ ದಿಕ್ಕಿಗೆ ಇದೆ ಅಂತಾನಾದ್ರೂ ಗೊತ್ತಿದೆಯಾ ಈಗಿನ ಮಕ್ಕಳಿಗೆ? ಸ್ವಿಚ್ ಒತ್ತಿದರೆ ಕರೆಂಟ್, ನಲ್ಲಿ ತಿರುಗಿಸಿದರೆ ಬಿಸಿನೀರು, ಕರೆನ್ಸಿ, ಬ್ಯಾಕಪ್, ಬೇಕಿದ್ದನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿ ತರಿಸಿಕೊಳ್ಳುವ ಸೌಕರ್ಯ, ಪಾಕೆಟ್ ಮನಿ, ಫೋನ್ ಪೇ, ಗೂಗಲ್ ಪೇ, ಎಟಿಎಮ್ ಕಾರ್ಡುಗಳ ಮೂಲಕ ಸರಾಗವಾಗಿ ಹಣ ವರ್ಗಾವಣೆಯ ಸವಲತ್ತು ಸಿಗುವುದರಿಂದ ಅದರ ಮಹತ್ವ ಅರಿತವರು ಕಡಿಮೆ. ದುಡ್ಡು ಕೊಟ್ಟು ಅಂಗಡಿಯಿಂದ ಏನಾದರೂ ತಾ ಎಂದರೆ ತಡವರಿಸುತ್ತವೆ. ಎಷ್ಟು ಬೆಲೆ, ಉಳಿದ ಚಿಲ್ಲರೆಯ ಬಗ್ಗೆಯೆಲ್ಲಾ ತಲೆಕೆಡಿಸಿಕೊಳ್ಳುವುದೇ ಇಲ್ಲ. ‘ಅಂಗಡಿಯವನು ಕೊಟ್ಟ, ನಾ ತಂದೆ’ ಅಷ್ಟೇ.

ಹೊರಗೆ ಹೋಗುವಾಗ ಮಕ್ಕಳಿಗೆ ತಿಳಿಸಿ ಹೋಗದೇ ಇರುವ ತಂದೆ ತಾಯಿ ಎಷ್ಟೋ ಜನ ಇದ್ದಾರೆ. ಅದೆಲ್ಲಾ ಮಕ್ಕಳಿಗ್ಯಾಕೆ ಹೇಳಬೇಕು ಎನ್ನುವ ಉಡಾಫೆ. ಕೆಲವು ಮನೆಗಳಲ್ಲಿ ಮಕ್ಕಳು ಕುತೂಹಲದಿಂದ ವಿಚಾರಿಸಿದರೂ ಹೇಳದಿದ್ದಾಗ ಮಕ್ಕಳೂ ಮುಂದೆ ಹಾಗೇ ನಡೆಯುವ ಸಂಭವವಿರುತ್ತದೆಯಲ್ಲವೇ?

ಇನ್ನು ಮನೆಗೆ ಬಂದ ಅತಿಥಿಗಳಿಗೆ ತಾವೇ ಬಾಗಿಲು ತೆರೆದರೂ ಮುಖ ತಿರುಗಿಸಿಕೊಂಡು ‘ಅಮ್ಮಾ, ಯಾರೋ ಬಂದಿದ್ದಾರೆ’ ಅಂತ ಹೇಳಿ ಒಳಹೋಗಿಬಿಡುತ್ತಾರೆ. ತಂದೆ ತಾಯಿ ಅವರನ್ನು ಆದರಿಸುತ್ತಿ
ದ್ದರೂ ತಮ್ಮ ಪಾಡಿಗೆ ತಾವು ಟಿ.ವಿ. ನೋಡುವುದರಲ್ಲಿಯೋ, ಮೊಬೈಲು ತೀಡುವುದರಲ್ಲಿಯೋ ಮಗ್ನರಾಗಿ
ರುತ್ತಾರೆ. ಅವರೆಡೆಗೆ ಒಂದು ಸ್ನೇಹಪರ ನೋಟ, ಮುಗುಳ್ನಗೆಯ ವಿನಿಮಯ, ಚೆನ್ನಾಗಿದ್ದೀರಾ ಎಂದು ಕೇಳುವ ಔಪಚಾರಿಕತೆ, ಯಾವುದೆಂದರೆ ಯಾವುದೂ ಇಲ್ಲ. ಬಂದವರೇ ಅವರನ್ನು ಮಾತನಾಡಿಸಿದರೂ ಹ್ಞೂಂ, ಉಹ್ಞೂಂ... ಎನ್ನುವುದರಲ್ಲಿಯೇ ಮಾತು ಮುಗಿಸಿಬಿಡುವುದುಂಟು. ಇದು ಅಸಭ್ಯತೆ ಹಾಗೂ ಅನಾಗರಿಕ ನಡವಳಿಕೆ. ವಿಚಿತ್ರ ಎಂದರೆ ಪೋಷಕರ ಗಮನಕ್ಕೆ ಇವೆಲ್ಲಾ ಬರುತ್ತಿದ್ದರೂ ತಿದ್ದುವ ಗೊಡವೆಗೆ ಹೋಗುವುದಿಲ್ಲ. ‘ಅಯ್ಯೋ, ನಮ್ಮ ಮಗ ಹಿಂಗೇ, ಈಗಿನ ಕಾಲದ ಮಕ್ಳು ಯಾರ ಮಾತು ಕೇಳ್ತಾರೆ ಹೇಳಿ’ ಎಂದು ತಿಪ್ಪೆ ಸಾರಿಸಿಬಿಡುವ ಜನರೇ ಹೆಚ್ಚು. ಹೀಗಾದರೆ ಸಾಮಾಜಿಕವಾಗಿ ಎಲ್ಲರೊಡನೆ ಬೆರೆಯುವ ಗುಣ ಕಲಿಯುವುದು ಹೇಗೆ?

ಹಿಂದೆಲ್ಲಾ ಮನೆಗೆ ಅತಿಥಿಗಳು ಬಂದಾಗ, ‘ಚೆನ್ನಾಗಿದ್ದೀರಾ, ಬನ್ನಿ ಒಳಗೆ, ಕುಳಿತುಕೊಳ್ಳಿ, ದೊಡ್ಡವರನ್ನು ಕರೆಯುತ್ತೇವೆ, ನೀರು ಬೇಕಾ’ ಅಂತೆಲ್ಲ ಕೇಳಿಯೇ ಒಳಗೆ ಹೋಗುತ್ತಿದ್ದುದು. ಹಾಗೆ ಮಾಡದಿದ್ದರೆ ಹಿರಿಯರ ಗಮನಕ್ಕೆ ಸಲೀಸಾಗಿ ಬಂದು ‘ಮನೆಗೆ ಬಂದವರನ್ನು ಹೀಗಾ ನೋಡಿಕೊಳ್ಳುವುದು’ ಎಂದು ಅವರು ಹೋದ ಮೇಲೆ ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಮತ್ತೊಬ್ಬರ ಮನೆಗೆ ಹೋದಾಗಲೂ ಆ ಮನೆಯಲ್ಲಿ ಇದ್ದವರನ್ನೆಲ್ಲ ಒಂದು ರೌಂಡ್ ಮಾತನಾಡಿಸಿಯೇ ಮುಂದಿನ ಕೆಲಸ. ಇಲ್ಲದಿದ್ದರೆ ‘ಏನು ಕಲಿಸಿದ್ದೀಯವ್ವಾ ಮಕ್ಕಳಿಗೆ’ ಎನ್ನುವ ಮಾತು ಬಂದುಬಿಡುತ್ತಿತ್ತು. ಅದು ಒಂದು ರೀತಿಯಲ್ಲಿ ಹಿರಿಯರ ಬಗ್ಗೆ ಗೌರವ, ಕಿರಿಯರ ಬಗ್ಗೆ ಪ್ರೀತಿ, ಸಮವಯಸ್ಕರ ಬಗ್ಗೆ ಸ್ನೇಹದ ಭಾವನೆ ಮೂಡಿಸುವಲ್ಲಿ ಸಹಾಯಕವಾಗುತ್ತಿತ್ತು.

ಆಯಾ ವಯಸ್ಸಿಗನುಗುಣವಾಗಿ ಮಕ್ಕಳಿಗೆ ತಿಳಿವಳಿಕೆ ಕೊಡುತ್ತಾ ಹೋಗಬೇಕು. ಚಿಕ್ಕವರಿದ್ದಾಗಿನಿಂದಲೇ ಇದಕ್ಕೆ ಅಡಿಪಾಯ ಹಾಕಬೇಕು. ಉತ್ತಮ ಸಂಸ್ಕಾರವನ್ನು ಪೀಳಿಗೆಯಿಂದ ಪೀಳಿಗೆಗೆ ದಾಟಿಸುವುದಕ್ಕೆ ಈ ರೀತಿಯ ಮನೆಯ ಆಗುಹೋಗುಗಳು, ಸಾಮಾನ್ಯಜ್ಞಾನ, ಸಂವಹನ ಕೌಶಲದ ಬಗ್ಗೆ ಪೋಷಕರು ಎಚ್ಚರ ವಹಿಸಿದರೆ, ಮುಂದಿನ ಭಾವೀ ಪ್ರಜೆಗಳಿಗೆ ಒಳ್ಳೆಯ ಸಂಸ್ಕಾರ ಕೊಟ್ಟ ಸಮಾಧಾನವಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.