ADVERTISEMENT

ಪತಿ– ಪತ್ನಿ ಮತ್ತು ವರ್ಗಾವಣೆ

ಸದಾಶಿವ ಸೊರಟೂರು
Published 16 ಜುಲೈ 2019, 20:15 IST
Last Updated 16 ಜುಲೈ 2019, 20:15 IST
..
..   

ಐದು ಎಕರೆ ಅಡಿಕೆ ತೋಟ ಹಾಳಾಗಿ ಹೋಯಿತು. ಮೊನ್ನೆ ಮೊನ್ನೆ ಬೇಸರದಿಂದ ಮರ ಕಡಿಸಿಹಾಕಿ, ಹೆಂಡತಿ ಕೆಲಸ ಮಾಡುತ್ತಿರುವ ಊರಿಗೆ ಹೊರಟುಹೋದ. ಹೆಂಡತಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿ. ಆಕೆ ಕೆಲಸಕ್ಕೆ ಸೇರಿ ಸುಮಾರು ಹದಿನೆಂಟು ವರ್ಷಗಳು ಕಳೆದಿವೆ. ಊರಿಂದ ನಾಲ್ಕುನೂರು ಕಿಲೊಮೀಟರ್ ದೂರ. ಹಾಗಾಗಿ ಸಂಸಾರವು ಅಲ್ಲಿಗೆ ಸ್ಥಳಾಂತರ. ಇಲ್ಲಿ ಹೊಲ ಪಾಳುಬಿದ್ದಿತು. ಗಂಡ– ಹೆಂಡತಿ ಇಬ್ಬರೂ ಸರ್ಕಾರಿ ನೌಕರಿಯಲ್ಲಿದ್ದರೆ ಮಾತ್ರ ವರ್ಗಾವಣೆಯಲ್ಲಿ ಮೊದಲ ಆದ್ಯತೆ ಎನ್ನುತ್ತದೆ ಸರ್ಕಾರ. ಇಷ್ಟು ವರ್ಷಗಳಾದರೂ ಆ ಆದ್ಯತೆ ದಾಟಿ, ವರ್ಗಾವಣೆ ಭಾಗ್ಯ ಈ ದಂಪತಿಯ ಪಾಲಿಗೆ ಬಂದಿಲ್ಲ.

ಇನ್ನೊಂದು ಪ್ರಕರಣದಲ್ಲಿ, ಹೆಂಡತಿಗೆ ಆಸ್ತಮಾ ವಿಪರೀತ. ‘ಜಾಗ ಬದಲಾಯಿಸಿ, ಮಡಿಕೇರಿಯಲ್ಲಿ ತುಂಬಾ ಥಂಡಿ’ ಅಂದರು ಡಾಕ್ಟರ್‌. ಜಾಗ ಬದಲಾಯಿಸುವುದು ಅಂದರೆ ಶಿಕ್ಷಕನಾಗಿರುವ ಗಂಡ ಕೆಲಸ ಬಿಡಬೇಕು ಅಷ್ಟೆ. ಇಲ್ಲದಿದ್ದರೆ ಹೆಂಡತಿಯನ್ನು ದೂರ ಇಟ್ಟು ಇಲ್ಲಿ ಒಬ್ಬನೇ ಇರಬೇಕು. ಆಸ್ತಮಾ ಗೀಸ್ತಮಾಕ್ಕೆಲ್ಲಾ ವರ್ಗಾವಣೆಯಲ್ಲಿ ಆದ್ಯತೆಯೇನೂ ಸಿಗುವುದಿಲ್ಲ (ಕಾಯಿಲೆ ಮಾರಣಾಂತಿಕ ಆಗಿದ್ದರೆ ಮಾತ್ರ ಅವಕಾಶ). ವರ್ಗಾವಣೆ ಪ್ರಮಾಣವಾದ ಶೇಕಡ 5 ಎಂಬುದು ಸರ್ಕಾರಿ ನೌಕರಿಯಲ್ಲಿರುವ ಗಂಡ– ಹೆಂಡತಿಗೆ ಸಿಗುವ ಮೊದಲ ಆದ್ಯತೆಗೇ ಮುಗಿದು ಹೋಗುತ್ತದೆ. ನಂತರ, ಇವರು ಇರಲೂ ಆಗದೆ ಹೋಗಲೂ ಆಗದೆ ನಿತ್ಯ ಸಾಯುವ ಸ್ಥಿತಿ.

ಆ ಶಿಕ್ಷಕನಿಗೆ ವಯಸ್ಸು 35. ಮದುವೆಯಾಗಿಲ್ಲ. ಸರ್ಕಾರಿ ಕೆಲಸದಲ್ಲಿರುವ ಹುಡುಗಿಯೇ ಬೇಕು ಅವನಿಗೆ. ಏಕೆಂದರೆ ಇಬ್ಬರೂ ಸರ್ಕಾರಿ ಕೆಲಸದಲ್ಲಿದ್ದರೆ ಮಾತ್ರ ಬೇಗ ವರ್ಗಾವಣೆ ಸಿಗುತ್ತದೆ. ಸರ್ಕಾರಿ ಕೆಲಸದಲ್ಲಿ ಇಲ್ಲದವರನ್ನು ಮದುವೆಯಾದರೆ ಸೇವಾ ಅವಧಿಯುದ್ದಕ್ಕೂ ವರ್ಗಾವಣೆ ಕಷ್ಟವೇ. ಊರಲ್ಲಿ ವೃದ್ಧ ತಂದೆ– ತಾಯಿ ಇದ್ದಾರೆ. ಈತನ ಸೇವಾವಧಿ ಎಷ್ಟೇ ಆಗಿದ್ದರೂ ವರ್ಗಾವಣೆ ವಿಷಯದಲ್ಲಿ ಮಾತ್ರ ಆಗತಾನೇ ಸೇರಿದ ಶಿಕ್ಷಕಿಗೆ ಸಿಗುವ ಆದ್ಯತೆಯೂ ಈತನಿಗೆ ಸಿಗದು.

ADVERTISEMENT

ಸರ್ಕಾರ ಕೆಲಸ ನೀಡುವಾಗ ‘ನಿಮಗೆ ವರ್ಗಾವಣೆ ಕೊಡುತ್ತೇನೆ’ ಎಂದು ಷರಾ ಬರೆದು ಕೊಟ್ಟಿರುವುದಿಲ್ಲ. ಕೆಲಸಕ್ಕೆ ಸೇರುವ ಮೊದಲು ‘ಎಲ್ಲೇ ಕೆಲಸ ಸಿಕ್ಕರೂ ಮಾಡ್ತೀನಿ’ ಅಂದೋರು, ಕೆಲಸ ಸಿಕ್ಕ ಮೇಲೆ ‘ಊರಿನ ಹತ್ತಿರವೇ ಬೇಕು’ ಎಂದು ಬಯಸುವುದು ಯಾಕೆ? ಇವು ಕೂಡ ಸರಿಯಾದ ಪ್ರಶ್ನೆಗಳೇ! ಆದರೆ ಯಾರಿಗೂ ವರ್ಗಾವಣೆ ಇಲ್ಲ, ಎಲ್ಲಿದ್ದೀರೋ ಅಲ್ಲೇ ಇದ್ದುಬಿಡಿ ಅಂದರೆ ಅದೊಂದು ರೀತಿ. ಆದರೆ ವರ್ಗಾವಣೆ ಮಾಡಿ ಕೆಲವರಿಗೆ ಅವಕಾಶಗಳನ್ನು ದಕ್ಕಿಸಿ ಮತ್ತೆ ಕೆಲವರಿಗೆ ಗಗನಕುಸುಮ ತೋರಿಸಿದರೆ ಯಾರಿಗಾದರೂ ಬೇಸರವೇ. ನೀಡಲಾಗುವ ಆದ್ಯತೆಗಳು ಎಲ್ಲರಿಗೂ ಸಮಾನವಾಗಿಯೇ ದಕ್ಕಬೇಕುಎನ್ನುವಕೂಗು ಬಹುತೇಕರದ್ದು.

ಸರ್ಕಾರದ ಕಾಳಜಿ ಅರ್ಥವಾಗುತ್ತದೆ. ಇಬ್ಬರೂ ದೂರ ದೂರದಲ್ಲಿ ಕೆಲಸದಲ್ಲಿದ್ದರೆ, ಕೆಲಸ ಬಿಡಲಾಗುತ್ತದೆಯೇ? ಇಲ್ಲ. ಹಾಗಾಗಿ ಅವರಿಗೆ ಹತ್ತಿರ ಹೋಗಲು ಅವಕಾಶ ನೀಡಿ, ಒಟ್ಟಿಗೆ ಇರುವಂತೆ ನೋಡಿಕೊಳ್ಳುತ್ತದೆ. ಇತರರು ಏನೇ ಇದ್ದರೂ ಬಿಟ್ಟು ಬಂದುಬಿಡಬಹುದು ಎಂಬ ಇಂಗಿತ ಇರಬಹುದು ಸರ್ಕಾರದ್ದು. ಎಷ್ಟೋ ಬಾರಿ ಸರ್ಕಾರಿ ನೌಕರಿಗಿಂತ ಮುಖ್ಯವಾದ ವಿಚಾರಗಳಿರುತ್ತವೆ, ವೃತ್ತಿಗಳಿರುತ್ತವೆ. ಒಬ್ಬ ರೈತ, ಕೃಷಿಯನ್ನು ಬಿಡುವುದೆಂದರೆ ಅದು ಅವನತನದ ಸಾವು. ಒಬ್ಬ ಮೇಷ್ಟ್ರಿಗೆ ಕೆಲಸ ಬಿಡಲು ಹೇಗೆ ಸಾಧ್ಯವಿಲ್ಲವೋ ಹಾಗೇ ರೈತನಿಗೆ ತನ್ನ ಭೂಮಿಯನ್ನು ಬಿಟ್ಟಿರಲು ಅದಕ್ಕಿಂತ ಹತ್ತುಪಟ್ಟು ಸಾಧ್ಯವಿಲ್ಲ.

ಒಬ್ಬ ನೌಕರನೆಂದರೆ ಯಾಕೆ ‘ಅವನಷ್ಟೇ’ ಎಂದು ಸರ್ಕಾರ ಯೋಚಿಸಬೇಕು? ಅವನಿಗೆ ತೀರಾ ದುರ್ಬಲರಾದ ತಂದೆ– ತಾಯಿ ಇರುವುದಿಲ್ಲವೇ? ಸ್ಥಳಕ್ಕೆ ಹೊಂದಿಕೆಯಾಗದೇ ಇರುವಂತಹ ದೇಹಸಂಬಂಧಿ ಕಾಯಿಲೆಗಳು ಇರುವುದಿಲ್ಲವೇ? ಅವನನ್ನು ನಂಬಿಕೊಂಡೇ ಇರುವ ಕುಟುಂಬವರ್ಗ ಇರುವುದಿಲ್ಲವೇ? ಹುಟ್ಟೂರಿನ ಬಗ್ಗೆ ಅವನಲ್ಲಿ ಬಿಟ್ಟುಕೊಡಲಾಗದ ಭಾವನೆಗಳು ಇರುವುದಿಲ್ಲವೇ? ಎಲ್ಲವನ್ನೂ ಬಿಟ್ಟು ಅವನು ಅಥವಾ ಅವಳು ಮಾತ್ರ ಸನ್ಯಾಸಿಗಳಂತೆ ಬದುಕಬೇಕು. ಸರ್ಕಾರಿ ನೌಕರಿಯಲ್ಲಿರುವ ಪತಿ-ಪತ್ನಿ ಆದ್ಯತೆ ಪಡೆದುಕೊಂಡು ಊರು ಸೇರಬೇಕು. ಇದು ಯಾವ ನ್ಯಾಯ?

ಮಾಡುವ ನೌಕರಿಯನ್ನು ನೋಡಿಕೊಂಡು ಸಮಸ್ಯೆಗಳು ಅಥವಾ ಸವಾಲುಗಳು ಬರುವುದಿಲ್ಲ. ಮದುವೆಯಾದ ಎಲ್ಲರನ್ನೂ ಪತಿ-ಪತ್ನಿ ಪ್ರಕರಣದಲ್ಲಿ ವರ್ಗಾವಣೆಗೆ ಯಾಕೆ ಪರಿಗಣಿಸಬಾರದು? ಪ್ರತಿವರ್ಷ, ಹೊಸದಾಗಿ ಮದುವೆಯಾದ ನೌಕರರು ಅರ್ಜಿ ಹಾಕುತ್ತಾರೆ, ವರ್ಗಾವಣೆ ಪಡೆದುಕೊಂಡು ಹೋಗುತ್ತಾರೆ. ತಮಗೆ ಆದ್ಯತೆ ಸಿಗದೇ, ದಶಕಗಟ್ಟಲೆ ಕಾದ ಇತರ ದಂಪತಿಗಳು ವರ್ಗಾವಣೆಯಿಂದ ಆಚೆ ಉಳಿಯುತ್ತಾರೆ. ಕೆಲಸ ಸಿಕ್ಕಿದೆ ಎನ್ನುವ ಒಂದೇ ಕಾರಣಕ್ಕೆ ಎಲ್ಲಾ ಆಸೆಗಳನ್ನು ಪಕ್ಕಕ್ಕಿಡುತ್ತಾರೆ. ಸರ್ಕಾರಿ ನೌಕರಿಯಲ್ಲಿರುವ ದಂಪತಿಗಳ ಕಷ್ಟದ ಕೂಗು ಎಷ್ಟಿರುತ್ತದೋ ಇತರ ದಂಪತಿಗಳ ಕೂಗೂ ಅಷ್ಟೇ ಇರುತ್ತದೆ. ಆದರೆ, ಸರ್ಕಾರಿ ನೌಕರ ದಂಪತಿಗಳ ಕೂಗು ಸರ್ಕಾರಕ್ಕೆ ಕೇಳಿಸಿದಷ್ಟು ಸುಲಭವಾಗಿ ಇತರ ದಂಪತಿಗಳದು ಕೇಳಿಸುತ್ತಿಲ್ಲ. ಮದುವೆಯಾದವರೆ ಲ್ಲರೂ ದಂಪತಿಗಳೇ, ಎಲ್ಲರೂ ಸಮಾನರೇ, ಎಲ್ಲವೂ ಸಮಾನವಾಗಿಯೇ ಸ್ವೀಕೃತವಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.