ADVERTISEMENT

ಸಂಗತ: ಸ್ವಚ್ಛತಾ ಸಮರಕ್ಕೆ ಎಳೆಯ ಸೇನಾನಿಗಳು

ನೈರ್ಮಲ್ಯದ ಕುರಿತು ವಯಸ್ಕರಿಗೆ ಹೇಳಿದ್ದನ್ನೇ ಹೇಳುತ್ತಾ ಸಮಯ, ಶ್ರಮ ವ್ಯರ್ಥ ಮಾಡುವುದಕ್ಕಿಂತ ಈ ವಿಚಾರಗಳನ್ನು ಬಿತ್ತಬೇಕಿರುವುದು ಚಿಣ್ಣರ ಹದದ ಮನದಂಗಣದಲ್ಲಿ

ಡಾ.ಮುರಳೀಧರ ಕಿರಣಕೆರೆ
Published 30 ಮೇ 2022, 19:31 IST
Last Updated 30 ಮೇ 2022, 19:31 IST
   

ಆ ಬಾಲಕ ನನ್ನ ಸಮೀಪ ಸಂಬಂಧಿಯ ಮಗ. ವಯಸ್ಸು ಇನ್ನೂ ಐದು ವರ್ಷ. ಉದ್ಯೋಗ ನಿಮಿತ್ತ ಅಮೆರಿಕ
ದಲ್ಲಿರುವ ಕುಟುಂಬ ಕಳೆದ ತಿಂಗಳು ರಜೆಯ ಮೇಲೆ ತವರಿಗೆ ಬಂದಿತ್ತು. ನನಗೆ ತುಂಬಾ ವಿಶೇಷವೆನಿಸಿದ್ದು
ಆ ಪುಟ್ಟನ ನೈರ್ಮಲ್ಯ ಪ್ರಜ್ಞೆ. ಕಸ-ಕಡ್ಡಿ ಬಿದ್ದಿದ್ದರೆ ಚಪ್ಪಲಿ ಮೆಟ್ಟದೆ ಅಂಗಳಕ್ಕೆ ಇಳಿಯುತ್ತಿರಲಿಲ್ಲ. ಯಾವುದಾದರೂ ವಸ್ತುವನ್ನು ತೆಗೆಯುವಾಗ ದೂಳು ಮೆತ್ತಿದರೆ ಮುಖ ಕಿವುಚುತ್ತಾ ಕೈ ತೊಳೆದುಕೊಳ್ಳಲು ನಲ್ಲಿ ಹುಡುಕುತ್ತಿದ್ದ. ಸ್ವಚ್ಛವಾಗಿ ತೊಳೆದುಕೊಂಡ ನಂತರವೇ ಆ ಎಳೆಯ ಮೊಗದಲ್ಲಿ ಸಮಾಧಾನದ ಗೆರೆಗಳು. ಸಣ್ಣ ಪ್ರವಾಸವೊಂದರಲ್ಲಿ ದೇವಸ್ಥಾನದ ಪುಷ್ಕರಿಣಿ ಬಳಿ ಹೋಗಲು ಒಪ್ಪಲೇ ಇಲ್ಲ, ನೀರಿನಲ್ಲಿ ಹಿಂಡು ಹಿಂಡು ಮೀನುಗಳ ಆಕರ್ಷಣೆಯಿದ್ದರೂ! ಕಾರಣ ಆ ಸ್ಥಳ ಸರಿಯಾದ ನಿರ್ವಹಣೆಯಿಲ್ಲದೆ ಗಲೀಜಾಗಿತ್ತು. ದೈವ ಸನ್ನಿಧಿಯಾದ್ದರಿಂದ ಚಪ್ಪಲಿ ಧರಿಸಲು ನಿರ್ಬಂಧವಿತ್ತು. ಎತ್ತಿಕೊಂಡೇ ಇರುತ್ತೇವೆ ಎಂಬ ವಾಗ್ದಾನದ ನಂತರವಷ್ಟೇ ಅವನು ಒಳಬರಲು ಒಪ್ಪಿದ್ದು!

ನನ್ನ ಕಾರಿನ ಸ್ಟಿಯರಿಂಗ್‍ಗೆ ಅಂಟಿಸಿದ್ದ ಸ್ಟಿಕ್ಕರ್ ಗಮ್ ಹೋಗಿ ಎದ್ದಿತ್ತು. ಪಟ್ಟನೆ ಅದನ್ನು ಕಿತ್ತವನೇ ಕಸ ಎಲ್ಲಿ ಹಾಕಬೇಕೆಂದು ತೋಚದೆ ನನ್ನ ಮುಖವನ್ನೇ ದಿಟ್ಟಿಸತೊಡಗಿದ್ದ. ಬೇರೆ ಮಕ್ಕಳಾಗಿದ್ದರೆ
ತಮಾಷೆಗೆಂದು ಎಳೆದರೂ ಕಾರೊಳಗೊ ಇಲ್ಲಾ ರಸ್ತೆಗೊ ಬಿಸಾಡುತ್ತಿದ್ದರು. ನಮ್ಮೊಡನಿದ್ದ ಎರಡು– ಮೂರು ದಿನಗಳಲ್ಲಿ ಸ್ವಲ್ಪವೂ ರಾಜಿಯಾಗದ ಸ್ವಚ್ಛತೆಯ ಆ ಕಾಳಜಿ ಕಂಡು ನಿಜಕ್ಕೂ ಬೆರಗಾಗಿದ್ದೆ!

ಇದೆಲ್ಲಾ ಅಲ್ಲಿನ ಕೆ.ಜಿ ಶಾಲೆಯಲ್ಲಿ ಕಲಿತ ಪಾಠ. ವಿಷಯವನ್ನು ಎಳೆಯರ ಮನಸ್ಸಿಗೆ ನಾಟಿಸಿದರೆ ಫಲಿತಾಂಶ ಹೇಗಿರಬಹುದು ಎಂಬುದಕ್ಕೆ ಸಾಕ್ಷಿಯಾಗಿತ್ತು ಈ ವರ್ತನೆ. ನಮ್ಮ ಶಾಲಾ ಪಠ್ಯದಲ್ಲಿ ಏನಿರಬೇಕು, ಏನಿರಬಾರದು ಎಂದು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಾ ವಿವಾದದ ಕಿಡಿ ಹೊತ್ತಿರುವ ಈ ಹೊತ್ತಿನಲ್ಲಿ, ಬದುಕಿನ ಪಾಠಗಳ ಮಹತ್ವವರಿತು ಪರಿಣಾಮಕಾರಿಯಾಗಿ ಬೋಧಿಸಿದರೆ ಸಕಾರಾತ್ಮಕ ಪರಿವರ್ತನೆ ಸಾಧ್ಯ ಎಂಬುದಕ್ಕೆ ನಿದರ್ಶನ ಸಿಕ್ಕಿದ್ದು ಆ ಬಾಲಕನ ಸಾಂಗತ್ಯದಲ್ಲಿ.

ADVERTISEMENT

ಕಸದ ನಿರ್ವಹಣೆ, ಆರೋಗ್ಯ, ನೈರ್ಮಲ್ಯ, ಸ್ವಚ್ಛತೆಯ ಕುರಿತಾಗಿ ವಯಸ್ಕರಿಗೆ ಪದೇ ಪದೇ ಹೇಳಿದ್ದನ್ನೇ ಹೇಳಿ ಸಮಯ, ಶ್ರಮ ವ್ಯರ್ಥವಾಗಿಸುವುದಕ್ಕಿಂತ ಈ ವಿಚಾರಗಳನ್ನು ಬಿತ್ತಬೇಕಿರುವುದು ಚಿಣ್ಣರ ಹದದ ಮನದಂಗಣದಲ್ಲಿ. ಶಾಲೆಯಲ್ಲಿ ಗುರುಗಳ ಮೂಲಕ ಮನದಟ್ಟು ಮಾಡಿಸಿದ್ದು ಖಂಡಿತವಾಗಿಯೂ ಸಕಾರಾತ್ಮಕ ಫಲಿತಾಂಶ ತರಬಲ್ಲದು. ಈ ಮಕ್ಕಳೇ ತಮ್ಮ ತಮ್ಮ ಮನೆಯಲ್ಲಿ ಶಿಕ್ಷಕರಾಗಿ ಪೋಷಕರಿಗೆ ತಿಳಿಹೇಳುತ್ತಾ ಅವರ ವರ್ತನೆಯನ್ನು ಬದಲಾಯಿಸಬಲ್ಲರು.

ಹವಾಮಾನದ ಏರುಪೇರಿನಿಂದಾಗಿ ಸಾಂಕ್ರಾಮಿಕ ಕಾಯಿಲೆಗಳಿಗೀಗ ಸುಗ್ಗಿ. ರೋಗಾಣುಗಳಿಗಿದು ಸುವರ್ಣ ಕಾಲ. ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯುವ ನಡವಳಿಕೆಯಿಂದಾಗಿ ಸೊಳ್ಳೆ, ನೊಣಗಳಂತಹ ಕೀಟಗಳ ಸಂತಾನೋತ್ಪತ್ತಿ ಹೆಚ್ಚುತ್ತಿದೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಡೆಂಗಿ ಜ್ವರದ ಪ್ರಕರಣಗಳು ದಾಖಲೆಯ ಮಟ್ಟಕ್ಕೆ ಏರುತ್ತಿವೆ. ಚಿಕೂನ್‍ಗುನ್ಯಾ ರೋಗಿಗಳ ಸಂಖ್ಯೆಯೂ ಮೇಲ್ಮುಖವಾಗಿದೆ.

ಎರಡು ವರ್ಷಗಳಿಂದ ಕೊರೊನಾ ಪಿಡುಗಿನ ಕಾರಣ ದೊಡ್ಡ ಸಭೆ, ಸಮಾರಂಭ, ಕಾರ್ಯಕ್ರಮ ಗಳಿಗೆ ತುಸು ಬ್ರೇಕ್ ಬಿದ್ದಿತ್ತು. ಸ್ವಚ್ಛತೆ, ಸರಳ ಜೀವನದ ಜೊತೆಗೆ ಸಾಂಪ್ರದಾಯಿಕ ಆಹಾರಪದ್ಧತಿ, ಮನೆಮದ್ದುಗಳ ಮಹತ್ವವನ್ನು ಸಾಂಕ್ರಾಮಿಕ ಸಾರಿತ್ತು. ಈಗ ಕಾಯಿಲೆ ತುಸು ಹಿಂದೆ ಸರಿಯುತ್ತಿದ್ದಂತೆಯೇ ಎಲ್ಲೆಂದರಲ್ಲಿ ಉಗುಳುವ, ಗಲೀಜು ಮಾಡುವ ಮನಃಸ್ಥಿತಿ ಮರುಕಳಿಸಿದೆ. ಮದುವೆ, ಮುಂಜಿ, ಗೃಹಪ್ರವೇಶ, ನಾಮಕರಣ, ಹರಕೆಯಾಟ, ಹೋಮ, ಹವನ, ಜೀರ್ಣೋದ್ಧಾರವೆಂದೆಲ್ಲ ಸಮಾರಂಭಗಳ ಭರಾಟೆ ಏರಿದೆ. ಕಾರ್ಯಕ್ರಮ ಮುಗಿದ ಮೇಲೆ ಆ ಸ್ಥಳದಲ್ಲಿ ಸಾಕ್ಷಾತ್ ನರಕ ದರ್ಶನ! ಪ್ಲಾಸ್ಟಿಕ್ ಬಾಟಲ್, ಲೋಟ, ಕವರ್‌ಗಳು, ಐಸ್‍ಕ್ರೀಮ್ ಕಪ್‍ಗಳು ಚೆಲ್ಲಾಪಿಲ್ಲಿಯಾಗಿ ಬೀಸುವ ಗಾಳಿಗೆ ಚದುರುವ ದೃಶ್ಯ ಈಗ ಹಳ್ಳಿ ಹಳ್ಳಿಯಲ್ಲೂ ಸಾಮಾನ್ಯ. ಅವಶೇಷಗಳಲ್ಲಿ ಅಳಿದುಳಿದ ಸಿಹಿಯ ಆಸೆಗಾಗಿ ತ್ಯಾಜ್ಯ ನುಂಗುವ ಅಮಾಯಕ ಜಾನುವಾರುಗಳ ಜೀವಕ್ಕೇ ಕುತ್ತು. ನೀರು ಸೇರುವ ಅಪಾಯಕಾರಿ ಕಸದಿಂದಾಗಿ ಜಲಚರಗಳಿಗೂ ಕಂಟಕ.

ಎಷ್ಟೇ ಸ್ವಚ್ಛತಾ ಆಂದೋಲನಗಳನ್ನು ಮಾಡಿದರೂ, ಶುದ್ಧಿ ಕಾರ್ಯಕ್ಕಾಗಿ ಸಾವಿರಾರು ಕೋಟಿಗಳನ್ನು ವ್ಯಯಿಸಿದರೂ, ದಂಡ, ಶಿಕ್ಷೆಯ ಕಾಯ್ದೆಗಳನ್ನು ರೂಪಿಸಿದರೂ ಫಲಿತಾಂಶ ಕಳಪೆಯೇ. ಆಗಬೇಕಿರುವುದು ಮನಃಪರಿವರ್ತನೆ. ಬೆಳೆದವರ ನಡವಳಿಕೆ ಬದಲಾಯಿಸುವುದು ಖಂಡಿತಾ ಕಷ್ಟ. ಬಾಲ್ಯಾವಸ್ಥೆಯಲ್ಲಿಯೇ ಮೌಲ್ಯಗಳನ್ನು ಬಿತ್ತಬೇಕು. ಅಂಗನವಾಡಿ, ನರ್ಸರಿಯಿಂದ ಪ್ರೌಢಶಾಲಾ ಹಂತದವರೆಗೆ ಪ್ರತಿವರ್ಷವೂ ಇಂತಹ ಪಠ್ಯಗಳು ವಿವಿಧ ರೂಪದಲ್ಲಿ ಬರಬೇಕು. ಎಳೆಯ ಮನಗಳಲ್ಲಿ ಬಿತ್ತುವ ಬೀಜಗಳು ಮೊಳಕೆಯೊಡೆದು ಪೈರಾದಾಗ ಮಾತ್ರ ಭವಿಷ್ಯ ಸಹನೀಯವಾದೀತು.

ಹೊಸ ಹೊಸ ಕಾಯಿಲೆಗಳು ಅವತರಿಸುತ್ತಿರುವ, ಹಳೆಯ ಪಿಡುಗುಗಳು ಹೊಸ ರೂಪದಲ್ಲಿ ಕಾಡುತ್ತಿರುವ ಈ ಹೊತ್ತಿನಲ್ಲಿ ಪರಿಸರದ ಶುಚಿತ್ವ ಕಾಪಾಡಿಕೊಳ್ಳುವುದು ಬಲು ಮುಖ್ಯ. ಮಕ್ಕಳನ್ನು ಮುಂದಿಟ್ಟುಕೊಂಡು ಮಾಲಿನ್ಯದ ವಿರುದ್ಧದ ಯುದ್ಧ ಗೆಲ್ಲುವಂತಹ ಅನಿವಾರ್ಯ ಎದುರಾಗಿರುವುದು ನಿಜಕ್ಕೂ ದುರದೃಷ್ಟಕರ.

ಲೇಖಕ: ಮುಖ್ಯ ಪಶುವೈದ್ಯಾಧಿಕಾರಿ
ಸರ್ಕಾರಿ ಪಶು ಆಸ್ಪತ್ರೆ, ತೀರ್ಥಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.