ಒಂದೂವರೆ ತಿಂಗಳಿನಿಂದ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಇಂಟರ್ನ್‌ಶಿಪ್ ಮಾಡುತ್ತಿರುವ ಮೂವರು ವಿದ್ಯಾರ್ಥಿಗಳನ್ನು ‘ಹೇಗಿದೆ ಕೆಲಸ’ ಅಂತ ವಿಚಾರಿಸಿದೆ. ಇಬ್ಬರು, ‘ಚೆನ್ನಾಗಿದೆ, ಕಾಲೇಜಲ್ಲಿ ಕಲಿಯೋದಕ್ಕೂ ಅಲ್ಲಿ ಕಲಿಯೋದಕ್ಕೂ ತುಂಬಾ ವ್ಯತ್ಯಾಸ ಇದೆ’ ಅಂದರು. ಮತ್ತೊಬ್ಬ, ‘ನಂಗಂತೂ ಕೆಲಸ ಮಾಡೋಕೆ ಆಗ್ತಿಲ್ಲ. ಇಂಟರ್ನ್‌ಶಿಪ್ ಮುಗಿಸಿ ವಾಪಸ್ ಬಂದ್ಬಿಡ್ತೀನಿ...’ ಅಂದ.
ಎಂಜಿನಿಯರಿಂಗ್ ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳು ಈ ಬಾರಿ ಕಾಲೇಜಿನ ಬದಲಿಗೆ ಕಂಪನಿಗಳಲ್ಲಿ ಇಂಟರ್ನಿ ಆಗಿ ಕಲಿಯುತ್ತಿದ್ದಾರೆ. ಎಂಟನೇ ಸೆಮಿಸ್ಟರ್‌ನಲ್ಲಿ ಇಂಟರ್ನ್‌ಶಿಪ್ ಮತ್ತು ಆನ್‍ಲೈನ್ ಕೋರ್ಸ್‌ಗಳು ಮಾತ್ರ ಇವೆ. ಹೀಗಾಗಿ ಗಮನಾರ್ಹ ಸಂಖ್ಯೆಯ ವಿದ್ಯಾರ್ಥಿಗಳು ಈಗಾಗಲೇ ಇಂಟರ್ನ್‌ಶಿಪ್ ಸಲುವಾಗಿ ಕಂಪನಿಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಔದ್ಯೋಗಿಕ ವಲಯದ ಸವಾಲುಗಳಿಗೆ ತಮ್ಮನ್ನು ತೆರೆದುಕೊಳ್ಳುವ ಮೂಲಕ, ಪದವೀಧರರಾಗಿ ಹೊರಹೊಮ್ಮುವ ಮೊದಲೇ ವೃತ್ತಿಪರ ಜಗತ್ತಿನ ಆಗುಹೋಗು
ಗಳನ್ನು ಅರಿಯುವ ಅವಕಾಶ ದಕ್ಕಿಸಿಕೊಳ್ಳುತ್ತಿದ್ದಾರೆ. ಕೈಗಾರಿಕಾ ವಲಯದಲ್ಲಿ ವೃತ್ತಿ ಬದುಕು ಕಟ್ಟಿಕೊಳ್ಳಲು ಅಗತ್ಯವಿರುವ ಮನೋಭಾವ ಮೈಗೂಡಿಸಿಕೊಳ್ಳಲು ಆಗುವುದೋ ಇಲ್ಲವೋ ಎಂಬುದನ್ನು ಮನಗಾಣಲು ಕೂಡ ಇಂಟರ್ನ್‌ಶಿಪ್ ನೆರವಾಗುತ್ತಿದೆ.
ತಾಂತ್ರಿಕ ಕಾಲೇಜುಗಳಲ್ಲಿ ಕಲಿಸುವುದಕ್ಕೂ ಎಂಜಿನಿಯರಿಂಗ್ ಪದವೀಧರರು ವೃತ್ತಿ ನಿರ್ವಹಿಸಲು ಅಗತ್ಯವಿರುವ ಜ್ಞಾನ ಮತ್ತು ಕೌಶಲಕ್ಕೂ ಅಜಗಜಾಂತರ ಇದೆ ಎನ್ನುವ ಆಕ್ಷೇಪ ಮೊದಲಿನಿಂದಲೂ ಇದೆ. ಉದ್ಯೋಗ ಮಾರುಕಟ್ಟೆಯ ಅಗತ್ಯಗಳನ್ನು ಪೂರೈಸುವ ಗುರಿ ಹೊಂದಿರುವ ವೃತ್ತಿಪರ ಶಿಕ್ಷಣಕ್ಕೆ ಉದ್ಯೋಗದಾತರ ನಿರೀಕ್ಷೆಗಳಿಗೆ ಪೂರಕವಾಗಿ ವಿದ್ಯಾರ್ಥಿಗಳನ್ನು ರೂಪಿಸಬೇಕಾದ ಹೊಣೆಗಾರಿಕೆ ಇದೆ. ಈ ಜವಾಬ್ದಾರಿ ನಿರ್ವಹಿಸುವಲ್ಲಿ ಶೈಕ್ಷಣಿಕ ವಲಯ ವಿಫಲವಾಗಿದೆ ಎನ್ನುವ ಅಭಿಪ್ರಾಯ ಉದ್ಯಮ ವಲಯದಲ್ಲಿ ಬೇರೂರಿದೆ. ಪ್ರಾಯೋಗಿಕ ಕಲಿಕೆಗೆ ಒತ್ತು ನೀಡಿ, ಉದ್ಯೋಗ ಮಾರುಕಟ್ಟೆಯ ಅಗತ್ಯಕ್ಕೆ ತಕ್ಕಂತೆ ವಿದ್ಯಾರ್ಥಿಗಳನ್ನು ಅಣಿಗೊಳಿಸುವ ಉದ್ದೇಶದಿಂದ ಅಂತಿಮ ಸೆಮಿಸ್ಟರ್‌ನಲ್ಲಿ ವಿದ್ಯಾರ್ಥಿಗಳನ್ನು ಕಾಲೇಜಿನ ಬದಲಿಗೆ ಕಂಪನಿಗಳತ್ತ ಮುಖ ಮಾಡಿಸುವ ಸಲುವಾಗಿ ಕೈಗಾರಿಕಾ ಇಂಟರ್ನ್‌ಶಿಪ್ ಪರಿಚಯಿಸಲಾಗಿದೆ.
ಈ ಬದಲಾವಣೆಗೆ ಸಕಾರಾತ್ಮಕವಾಗಿಯೇ ಸ್ಪಂದಿಸುತ್ತಿರುವ ಉದ್ಯಮ ವಲಯವು ವಿದ್ಯಾರ್ಥಿಗಳಿಗೆ
ಇಂಟರ್ನ್‌ಶಿಪ್ ಕೈಗೊಳ್ಳಲು ಅವಕಾಶ ಕಲ್ಪಿಸುತ್ತಿದೆ. ಕ್ಯಾಂಪಸ್ ಸಂದರ್ಶನದ ಮೂಲಕ ವಿದ್ಯಾರ್ಥಿಗಳನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳುವ ಸಂಸ್ಥೆಗಳು ಕೂಡ, ಎಂಟನೇ ಸೆಮಿಸ್ಟರ್ ಶುರುವಿನಲ್ಲೇ ಆಯ್ಕೆಯಾದ
ವಿದ್ಯಾರ್ಥಿಗಳನ್ನು ಕೆಲಸಕ್ಕೆ ನೇಮಿಸಿಕೊಳ್ಳುತ್ತಿವೆ.
14 ರಿಂದ 20 ವಾರಗಳ ಕಾಲ ಇಂಟರ್ನ್‌ಶಿಪ್ ಮಾಡಬೇಕಿರುವುದು ಕಡ್ಡಾಯವಾಗಿರುವ ಕಾರಣ, ವಿದ್ಯಾರ್ಥಿಗಳು ವೇತನರಹಿತವಾಗಿ ಅಥವಾ ಅತ್ಯಲ್ಪ ವೇತನ ಸಿಕ್ಕರೂ ಕೆಲಸ ನಿರ್ವಹಿಸಲು
ಮುಂದಾಗುತ್ತಿದ್ದಾರೆ.
ಕೋರ್ ಎಂಜಿನಿಯರಿಂಗ್ ಕ್ಷೇತ್ರಗಳೆಂದು ಪರಿಗಣಿಸಲಾಗುವ ಸಿವಿಲ್, ಎಲೆಕ್ಟ್ರಿಕಲ್, ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ತಮ್ಮ ಕಲಿಕಾ ಕ್ಷೇತ್ರಕ್ಕೆ ಸಂಬಂಧಿಸಿದ ನಿರ್ಮಾಣ ಹಾಗೂ ಉತ್ಪಾದನಾ ಕಂಪನಿಗಳಲ್ಲಿ ಅತ್ಯಲ್ಪ ಕಾಲವಾದರೂ ಕೆಲಸ ಮಾಡುವ ಸನ್ನಿವೇಶ ಸೃಷ್ಟಿಯಾಗುತ್ತಿದೆ. ಪದವಿ ನಂತರ ಸಾಫ್ಟ್‌ವೇರ್ ಕ್ಷೇತ್ರಕ್ಕೆ ಹೋಗುವುದು ಸೂಕ್ತವೋ ಅಥವಾ ತಮ್ಮ ಪದವಿಗೆ ಪೂರಕವಾದ ಕ್ಷೇತ್ರದಲ್ಲಿಯೇ ವೃತ್ತಿ ಬದುಕು ಕಟ್ಟಿಕೊಳ್ಳಬಹುದೋ ಎನ್ನುವ ಗೊಂದಲಕ್ಕೆ ಉತ್ತರ ಕಂಡುಕೊಳ್ಳಲು ಕೂಡ ಇಂಟರ್ನ್‌ಶಿಪ್ ವೇಳೆ ಪಡೆದುಕೊಳ್ಳುವ ವೃತ್ತಿ ಅನುಭವ ನೆರವಾಗಲಿದೆ.
ಕೈಗಾರಿಕಾ ಇಂಟರ್ನ್‌ಶಿಪ್ ಮೂಲ ಉದ್ದೇಶಕ್ಕೆ ಅನುಗುಣವಾಗಿ ಕಂಪನಿಗಳಲ್ಲಿ ಪೂರ್ಣಾವಧಿ ಕೆಲಸ ಮಾಡುತ್ತಾ ಕಲಿಯುವ ವಿದ್ಯಾರ್ಥಿಗಳ ಪಾಲಿಗೆ ಇದು ಆಶಾದಾಯಕ ಬೆಳವಣಿಗೆಯಂತೆ ಭಾಸವಾಗುತ್ತಿದೆ. ಕೈಗಾರಿಕಾ ಇಂಟರ್ನ್‌ಶಿಪ್ ಬದಲಿಗೆ ತಾವು ಓದುತ್ತಿರುವ ಕಾಲೇಜು ಅಥವಾ ಯಾವುದಾದರೂ ಸಂಶೋಧನಾ ಕೇಂದ್ರದಲ್ಲಿ ಸಂಶೋಧನಾ ಇಂಟರ್ನ್‌ಶಿಪ್ ಮಾಡಲು ಕೂಡ ಅವಕಾಶ ಇದೆ. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕೈಗಾರಿಕಾ ಇಂಟರ್ನ್‌ಶಿಪ್ ಅನ್ನೇ ಆಯ್ದುಕೊಳ್ಳುತ್ತಿದ್ದಾರೆ. ಈ ಮೊದಲು ಕೂಡ ಎಂಜಿನಿಯರಿಂಗ್ ಪಠ್ಯಕ್ರಮದಲ್ಲಿಇಂಟರ್ನ್‌ಶಿಪ್‌ಗೆ ಅವಕಾಶ ಕಲ್ಪಿಸಲಾಗಿತ್ತಾದರೂ ಅದನ್ನು ಕೈಗಾರಿಕೆಗಳ ಅಗತ್ಯಕ್ಕೆ ತಕ್ಕಂತೆ ವಿನ್ಯಾಸಗೊಳಿ ಸದೇ ಇದ್ದುದರಿಂದ ಅದರ ಆಶಯ ಈಡೇರಿರಲಿಲ್ಲ. ಇದೀಗ ಅಂತಿಮ ಸೆಮಿಸ್ಟರ್ ಅನ್ನು ಇಂಟರ್ನ್‌ಶಿಪ್‌ಗೆ ಮೀಸಲು ಇರಿಸಿರುವುದರಿಂದ ವಿದ್ಯಾರ್ಥಿಗಳು ಹಾಗೂ ಉದ್ಯೋಗದಾತರು ಇಬ್ಬರಿಗೂ ಪೂರಕವಾಗಿದೆ.
ಕೈಗಾರಿಕಾ ವಲಯ ಮತ್ತು ಶೈಕ್ಷಣಿಕ ವಲಯದ ನಡುವೆ ಸಮನ್ವಯ ಸಾಧಿಸಲು ಸಾಧ್ಯವಾದರೆ ಕೈಗಾರಿಕಾ ಇಂಟರ್ನ್‌ಶಿಪ್‌ನ ಮೂಲ ಗುರಿ ಸಾಧಿಸುವುದು ಕಷ್ಟಸಾಧ್ಯವೇನಲ್ಲ. ಕೈಗಾರಿಕಾ ಇಂಟರ್ನ್‌ಶಿಪ್‌ನ ಸಾಧಕ– ಬಾಧಕಗಳನ್ನು ಪರಾಮರ್ಶಿಸಿ, ವಿದ್ಯಾರ್ಥಿ ಸಮೂಹ ಮತ್ತು ಉದ್ಯಮ ವಲಯ ಎರಡಕ್ಕೂ ಪೂರಕವಾಗುವಂತೆ ಈ ಉಪಕ್ರಮವನ್ನು ಮರುವಿನ್ಯಾಸ ಗೊಳಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯಬೇಕಿದೆ. ಎಂಜಿನಿಯರಿಂಗ್ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಗೂ ಲಭ್ಯವಿರುವ ಉದ್ಯೋಗಾವಕಾಶಗಳಿಗೂ ಅಂತರವಿರುವಾಗ ಎಲ್ಲರಿಗೂ ಕೈಗಾರಿಕಾ ಇಂಟರ್ನ್‌ಶಿಪ್ ಅವಕಾಶಗಳು ದೊರೆಯುವಂತೆ ನೋಡಿಕೊಳ್ಳುವುದೇ ಸವಾಲು. ಇದನ್ನು ಮೀರಲು ಇರುವ ಪರ್ಯಾಯಗಳ ಕುರಿತೂ ಚಿಂತಿಸುವ ಅಗತ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.