ಮಗಳನ್ನು ಇತ್ತೀಚೆಗೆ ತೀವ್ರ ಅನಾರೋಗ್ಯದ ಕಾರಣ ರಾಜ್ಯದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದರ ಐಸಿಯುನಲ್ಲಿ ದಾಖಲಿಸಬೇಕಾಯಿತು. ಒಂದು ದಿನ ರಾತ್ರಿ ಒಂಬತ್ತರ ಸುಮಾರಿಗೆ ಪೈಪ್ ಮೂಲಕ ಹಾಕಲು (ಟ್ಯೂಬ್ ಫೀಡಿಂಗ್) ಎಳನೀರು ತಂದುಕೊಡುವಂತೆ ಕೇಳಿದರು. ಅಷ್ಟೊತ್ತಿನಲ್ಲಿ ಸಿಗುವುದೆಲ್ಲಿ? ಆದರೂ ಎಲ್ಲೆಲ್ಲೋ ಹುಡುಕಾಡಿ ತಂದುಕೊಟ್ಟೆ.
ಬೆಳಿಗ್ಗೆ ಸಂದರ್ಶನದ ಸಮಯದಲ್ಲಿ ಮಗುವನ್ನು ನೋಡಲು ಹೋದಾಗ ಅಚಾನಕ್ಕಾಗಿ ಆ ಎಳನೀರು ಡಬ್ಬಿಯ ಕಡೆ ಗಮನ ಹೋಯಿತು. ರಾತ್ರಿ ತಂದುಕೊಟ್ಟ ಎಳನೀರು ಅಲ್ಲೇ ಇತ್ತು. ಅಂದು ಸಂಜೆಯಾದರೂ ಹಾಗೇ ಇತ್ತು! ನರ್ಸ್ ಅವರನ್ನು ಜೋರು ಮಾಡಿ ಕೇಳಲು ಮಾತು ಬರಲಿಲ್ಲ. ಏಕೆಂದರೆ ನನ್ನ ಮಗಳು ಅವರ ಕೈಯಲ್ಲಿದ್ದಳು. ಇನ್ನೊಂದು ದಿನ ಅವರು ತರಿಸಿಕೊಂಡ ಗಂಜಿಯ ಕಥೆಯೂ ಇದಕ್ಕಿಂತ ಭಿನ್ನವಾಗಿರಲಿಲ್ಲ. ಹೆಚ್ಚಾಗಿ ನೋವಾದದ್ದು, ನಮ್ಮ ಪ್ರಾಣವನ್ನು ಅವರ ಕೈಯಲ್ಲಿಟ್ಟು ಅವರ ನಿರ್ಲಕ್ಷ್ಯವನ್ನು ನುಂಗಿಕೊಳ್ಳ ಬೇಕಾದ ಅಸಹಾಯಕತೆಗೆ.
ಇನ್ನೊಂದು ದಿನ ಸಂದರ್ಶನದ ಅವಧಿಯಲ್ಲಿ ಮಗಳನ್ನು ನೋಡಲು ಹೋದಾಗ, ಅವಳಿಗೆ ನೀಡಲಾದ ಔಷಧಿಗಳ ವಿವರ ಬರೆದಿಟ್ಟ ದಾಖಲೆಗಳತ್ತ ಕಣ್ಣು ಹಾಯಿಸುತ್ತಿದ್ದೆ. ಅದನ್ನು ಗಮನಿಸಿದ ಕಿರಿಯ ವೈದ್ಯರ ಸೂಚನೆಯಂತೆ ನರ್ಸ್ ಅದನ್ನು ಮುಚ್ಚಿ ಎತ್ತಿಟ್ಟುಕೊಂಡರು. ಈ ಪ್ರಕರಣವು ಆಸ್ಪತ್ರೆ ವ್ಯವಸ್ಥೆಯಲ್ಲಿ ರೋಗಿಯ ಕುಟುಂಬದವರಿಗೆ ಮಾಹಿತಿ ನೀಡುವಲ್ಲಿನ ಅಪಾರದರ್ಶಕತೆಯನ್ನು ಪ್ರಶ್ನಿಸುತ್ತದೆ.
ಬೆಳಿಗ್ಗೆಯಷ್ಟೇ ಭೇಟಿಗೆ ಬರುತ್ತಿದ್ದ ವೈದ್ಯರು ಒಂದು ನಿಮಿಷಕ್ಕಿಂತ ಹೆಚ್ಚು ಮಾತನಾಡುತ್ತಿರಲಿಲ್ಲ. ಅವರು ಇನ್ನೊಂದು ನಿಮಿಷ ಮಾತನಾಡಲು ಇನ್ನೂ ಹೆಚ್ಚು ಹಣ ಕೇಳಿದ್ದರೆ ಕೊಟ್ಟುಬಿಡುತ್ತಿದ್ದೆ. ಅದೊಂದು ತೀರಾ ಅಸಹಾಯಕ ಸ್ಥಿತಿ. ನಾವು ಅವರೊಡನೆ ಇನ್ನೊಂದು ನಿಮಿಷ ಮಾತನಾಡಬೇಕಾದರೂ ಮರುದಿನದವರೆಗೂ ಕಾಯಬೇಕು. ಇಡೀ ದಿನ ಎಂಥದ್ದೇ ಸಂದರ್ಭ ಇದ್ದರೂ ಅದು ಕಿರಿಯ ವೈದ್ಯರ ಹೆಗಲ ಮೇಲೆ.
ಐಸಿಯು ಒಂದು ಮುಚ್ಚಿಟ್ಟಿರುವ ವೈದ್ಯ ಜಗತ್ತು. ಅಲ್ಲೇನು ನಡೆಯುತ್ತದೆ ಎಂಬುದು ಅಷ್ಟು ಸುಲಭಕ್ಕೆ ತಿಳಿಯುವುದಿಲ್ಲ. ಅದನ್ನು ಡಿಸ್ಚಾರ್ಜ್ ಸಮರಿಯಲ್ಲಷ್ಟೇ ಓದಿಕೊಳ್ಳಬೇಕೇನೊ? ಆದರೆ, ಆ ದಾಖಲೆಗಳನ್ನು ಬರೆಯುವವರು ಆಸ್ಪತ್ರೆಯ ಸಿಬ್ಬಂದಿಯೇ ಆಗಿರುವುದರಿಂದ, ಅವು ಸಂಪೂರ್ಣವಾಗಿ ನಿಖರವಾಗಿ ಇರುತ್ತವೆಯೇ ಎಂಬ ಪ್ರಶ್ನೆ ಉಳಿಯುತ್ತದೆ. ಅದೊಂದು ಅಪರಿಚಿತ ಲೋಕ, ಅಲ್ಲಿ ನಾವು ಸುಮ್ಮನೆ ಒಪ್ಪಿಕೊಳ್ಳಬೇಕಷ್ಟೇ. ಚಿಕಿತ್ಸೆಗೆ ಬೇಕಾದ ಅನುಮತಿ ಪತ್ರಕ್ಕೆ ಸಹಿ ಮಾಡಿಸಿಕೊಳ್ಳುವಾಗಿನ ಆಸಕ್ತಿ, ರೋಗಿಯ ಕಡೆಯವರಿಗೆ ಸ್ಪಷ್ಟ ಮಾಹಿತಿ ಕೊಡುವಾಗ ಇರುವುದಿಲ್ಲ ಎಂಬುದು ನಿಜಕ್ಕೂ ಸೋಜಿಗದ ಸಂಗತಿ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್), ಆಸ್ಪತ್ರೆಗಳು ಮತ್ತು ಆರೋಗ್ಯಸೇವಾ ಪೂರೈಕೆದಾರರ ರಾಷ್ಟ್ರೀಯ ಮಾನ್ಯತಾ ಮಂಡಳಿ (ಎನ್‌ಎಬಿಎಚ್), ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಐಸಿಯು ನಿರ್ವಹಣೆಗೆ ಸಂಬಂಧಿಸಿದಂತೆ ಸ್ಪಷ್ಟವಾದ ನಿಯಮಗಳನ್ನು ರೂಪಿಸಿವೆ. ರೋಗಿಯ
ಕುಟುಂಬಕ್ಕೆ ಪ್ರತಿದಿನ ಚಿಕಿತ್ಸೆಯ ವಿವರವಾದ ಮಾಹಿತಿಯನ್ನು ನೀಡಬೇಕು, ಒಬ್ಬ ರೋಗಿಗೆ ಒಬ್ಬ ನರ್ಸ್ ಇರಬೇಕು, ಅಗತ್ಯ ಸವಲತ್ತು, ಔಷಧಿಗಳಿರಬೇಕು,
ರೋಗಿಯ ಕುಟುಂಬದವರೊಂದಿಗೆ ಆಪ್ತ ಸಮಾಲೋಚನೆ ನಡೆಸಬೇಕು ಎನ್ನುತ್ತವೆ.
ವೈದ್ಯರು ರೋಗಿಯ ಕಡೆಯವರಿಗೆ ಹೆಚ್ಚು ದುರ್ಲಭವಾಗುವುದು ತಮ್ಮ ವೃತ್ತಿಯ ಹೆಚ್ಚುಗಾರಿಕೆ ಎಂಬಂತೆ ಭಾವಿಸಿಕೊಂಡಂತಿದೆ. ನರ್ಸ್‌ಗಳು ಒಮ್ಮೊಮ್ಮೆ ರೋಗಿಗಳನ್ನು ಬರೀ ಮಾಂಸದ ಮುದ್ದೆಗಳಂತೆ ಕಾಣುವುದು ತುಂಬಾ ವಿಷಾದನೀಯ. ಸರ್ಕಾರಿ ಆಸ್ಪತ್ರೆ ಯಲ್ಲಿ ಅಗತ್ಯ ಸವಲತ್ತು, ವೈದ್ಯರು ಲಭ್ಯವಿಲ್ಲವೆಂದು ಜನ ಪೈಸೆ ಪೈಸೆ ಕೂಡಿಸಿಕೊಂಡು ಖಾಸಗಿ ಆಸ್ಪತ್ರೆಗಳ ಬಾಗಿಲು ಬಡಿಯುತ್ತಾರೆ. ಕೆಲವು ಖಾಸಗಿ ಆಸ್ಪತ್ರೆಗಳು ರೋಗಿಯ ಕಡೆಯವರ ಇಂತಹ ಭಯವನ್ನೇ ಬಂಡವಾಳ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತವೆ.
ಮಕ್ಕಳ ಐಸಿಯು ನಿಯಮಾವಳಿಗಳಲ್ಲಿ ಬಹಳಷ್ಟು ಸುಧಾರಣೆ ಆಗಬೇಕಿದೆ. ನನ್ನ ಮಗಳ ಪಕ್ಕದ ಹಾಸಿಗೆಯಲ್ಲಿದ್ದ ಮಗುವೊಂದು ಅದರ ತಾಯಿಗೆ ‘ನನ್ನನ್ನು ಕರೆದುಕೊಂಡು ಹೋಗು, ಇಲ್ಲದಿದ್ದರೆ ಸತ್ತೇ ಹೋಗುತ್ತೇನೆ’ ಎಂದು ಬೇಡಿಕೊಳ್ಳುತ್ತಿತ್ತು. ಮಗು ಮಾನಸಿಕವಾಗಿ ಗೆಲುವಾಗಿದ್ದರೆ, ಕಾಯಿಲೆಯೊಂದಿಗೆ ಬಡಿದಾಡಬಹುದು. ಪುಟ್ಟ ಮಕ್ಕಳನ್ನು ಬಿಗಿಯಾಗಿ ಬಂಧಿಸಿ ಔಷಧಿ ಸುರುವಿದ ತಕ್ಷಣ ಅವರು ಗುಣಮುಖರಾಗುವರೇ? ವೀಕ್ಷಣಾ ಅವಧಿಗಳನ್ನು ಹೆಚ್ಚಿಸಬೇಕು. ಪೋಷಕರು ಕಡ್ಡಾಯವಾಗಿ ಮಾಸ್ಕ್, ಗೌನ್ ಧರಿಸಿ ಆಗಾಗ್ಗೆ ತಮ್ಮ ಮಕ್ಕಳನ್ನು ಭೇಟಿಯಾಗಲು ಅವಕಾಶ ಮಾಡಿಕೊಡಬೇಕು. ತುರ್ತಿದ್ದಾಗ ಮಾತ್ರ ವೈದ್ಯರು ಐಸಿಯುಗೆ ಓಡಿಬರುವುದಲ್ಲ. ಒಬ್ಬ ನುರಿತ ವೈದ್ಯ ಸದಾ ಐಸಿಯುನಲ್ಲಿ ಇರುವಂತೆ ವ್ಯವಸ್ಥೆ ಮಾಡಬೇಕು. ಪ್ರತಿದಿನ ನಡೆಸಿದ ಪರೀಕ್ಷೆಗಳು, ನೀಡಲಾದ ಔಷಧಿ, ರೋಗದ ಸ್ಥಿತಿಗತಿಯ ಮಾಹಿತಿಯನ್ನು ರೋಗಿಯ ಕುಟುಂಬದವರಿಗೆ ಒದಗಿಸಬೇಕು. ರೋಗದ ಬಗ್ಗೆ, ಚಿಕಿತ್ಸೆಯ ಬಗ್ಗೆ ಬೇರೊಂದು ಕಡೆ ಎರಡನೇ ಅಭಿಪ್ರಾಯ ಪಡೆದುಕೊಳ್ಳಲು ಅದರಿಂದ ಸಹಾಯಕವಾಗುತ್ತದೆ. ಇದು ರೋಗಿಯ ಹಕ್ಕು.
ರೋಗಿಯನ್ನು ವ್ಯಾವಹಾರಿಕ ದೃಷ್ಟಿಕೋನದಿಂದ ನೋಡುವ ಈ ಕಾಲಘಟ್ಟದಲ್ಲಿ ಕೆಲವೇ ಕೆಲವು ಉತ್ತಮ ವೈದ್ಯರು ಮತ್ತು ಆಸ್ಪತ್ರೆಗಳಿಂದ ಕೆಲವು ಜೀವಗಳು ಸಾವನ್ನು ಗೆದ್ದು ಬರುತ್ತಿವೆ. ಅಂತಹ ವೈದ್ಯರ ಸಂತತಿ ಹೆಚ್ಚಾಗಲಿ. ಜೀವಗಳು ಉಳಿಯಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.