ADVERTISEMENT

ಸಂಗತ | ಪರಭಾಷಿಕರ ಕನ್ನಡ ಕಲಿಕೆ: ಕನ್ನಡಿಗರೇ ಅಡ್ಡಿ

ಬೇರೆ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವ ಪರಭಾಷಿಕರಿಗೆ ಇಲ್ಲಿ ಕನ್ನಡದ ಅಗತ್ಯವೇ ಬೀಳುವುದಿಲ್ಲ. ಅವರು ಕನ್ನಡದಿಂದ ದೂರವಿರಲು ಕನ್ನಡಿಗರೇ ಕಾರಣಕರ್ತರು!

ಸಿದ್ದಯ್ಯ ಹಿರೇಮಠ
Published 12 ಅಕ್ಟೋಬರ್ 2025, 22:55 IST
Last Updated 12 ಅಕ್ಟೋಬರ್ 2025, 22:55 IST
   

ದಾವಣಗೆರೆಯಲ್ಲಿರುವ ಒಂದು ಖಾನಾವಳಿಗೆ ಊಟಕ್ಕೆ ಹೋದಾಗ, ಬಿಹಾರ ಮತ್ತು ಉತ್ತರಪ್ರದೇಶ ಮೂಲದ ಕಾರ್ಮಿಕರು ರೊಟ್ಟಿ ಊಟ ಉಣಬಡಿಸಿದರು.

ಸಾಮಾನ್ಯವಾಗಿ ಪಬ್‌ಗಳಲ್ಲಿ, ಬಾರ್‌ ಅಂಡ್‌ ರೆಸ್ಟೋರೆಂಟ್‌ಗಳಲ್ಲಿ, ತಳ್ಳುವಗಾಡಿಗಳಲ್ಲಿನ ಪಾನಿಪೂರಿ ಅಂಗಡಿಗಳಲ್ಲಿ, ಕಟ್ಟಡ ಮತ್ತು ಇತರ ನಿರ್ಮಾಣ ವಲಯದಲ್ಲಿ ಕಂಡುಬರುತ್ತಿದ್ದ ಉತ್ತರ ಭಾರತ ಮೂಲದ ಕಾರ್ಮಿಕರು ಈಗ ಖಾನಾವಳಿಯಲ್ಲೂ ಕೆಲಸಕ್ಕೆ ಸೇರಿರುವುದನ್ನು ಕಂಡು ಅಚ್ಚರಿಯಾಯಿತು.

‘ಮೊದಲು ನಾವು ಬಾರ್‌ ಮತ್ತಿತರ ಕಡೆಗಳಲ್ಲಿ ಕೆಲಸಕ್ಕಿದ್ದೆವು. ತಡರಾತ್ರಿವರೆಗಿನ ಕೆಲಸಕ್ಕೆ ಬೇಸತ್ತು ಈ ಕೆಲಸಕ್ಕೆ ಸೇರಿಕೊಂಡಿದ್ದೇವೆ. ಹೊಸ ಕೆಲಸದ ಜಾಗದಲ್ಲೂ ಅಷ್ಟೇ ಸಂಬಳ ಸಿಗುತ್ತಿದೆ. ಟಿಪ್ಸ್‌ ಸಿಗುವುದಿಲ್ಲ ಎಂಬ ಕೊರಗೊಂದನ್ನು ಬಿಟ್ಟರೆ ನೆಮ್ಮದಿ ಇದೆ. ರಾತ್ರಿ 10.30ರವರೆಗೆ ಕೆಲಸ ಇರುತ್ತದೆ. 11 ಗಂಟೆಗೆಲ್ಲ ಮಲಗಿಬಿಡುತ್ತೇವೆ. ಬಾರ್‌ಗಳಲ್ಲಾಗಿದ್ದರೆ ತಡರಾತ್ರಿ 1ರವರೆಗೂ ಕೆಲಸ ಇರುತ್ತಿತ್ತು. ರಾತ್ರಿ 12ರ ನಂತರ ನಶೆಯಲ್ಲಿ ಇರುವವರೊಂದಿಗೆ ಮಾತಿನ ಚಕಮಕಿ, ಜಗಳದಿಂದಾಗಿ ಕಿರಿಕಿರಿ ಆಗುತ್ತಿತ್ತು’ ಎಂದು ಆ ಕಾರ್ಮಿಕ ಹಿಂದಿಯಲ್ಲಿ ವಿವರಿಸಿದ.

ADVERTISEMENT

‘ಕರ್ನಾಟಕಕ್ಕೆ ಬಂದು ಎಷ್ಟು ವರ್ಷವಾಯಿತು?’ ಎಂದು ಪ್ರಶ್ನಿಸಿದೆ. ‘7 ವರ್ಷ ಕಳೆಯಿತು’ ಕಾರ್ಮಿಕ ಉತ್ತರಿಸಿದ. ‘ಇಷ್ಟು ವರ್ಷಗಳು ಕಳೆದರೂ ಕನ್ನಡ ಕಲಿತಿಲ್ಲವೇ?’ ಎಂದೆ. ‘ಸ್ವಲ್ಪಸ್ವಲ್ಪ ಕಲಿತಿದ್ದೇವೆ. ನಿಮ್ಮಂತೆಯೇ ಎಲ್ಲರೂ ನಮ್ಮೊಂದಿಗೆ ಹಿಂದಿಯಲ್ಲೇ ಮಾತಾಡುವುದರಿಂದ ಕಲಿಯುವ ಅನಿವಾರ್ಯತೆ ಎದುರಾಗಿಲ್ಲ’ ಎಂದಾತ ಮುಖಕ್ಕೆ ಹೊಡೆದಂತೆ ಉತ್ತರಿಸಿದ.

‘ಇಲ್ಲಿಗೆ ಬಂದ ಹೊಸತರಲ್ಲಿ ನಾನು ಬೆಂಗಳೂರಿನಲ್ಲಿ ಪಾನಿಪೂರಿ ಅಂಗಡಿಯಲ್ಲಿ ಕೆಲಸಕ್ಕಿದ್ದೆ. ಅಲ್ಲಿ ಬರುವ ಗ್ರಾಹಕರು ಅಲ್ಪಸ್ವಲ್ಪ ಅಥವಾ ಪೂರ್ಣ ಹಿಂದಿಯಲ್ಲೇ ವ್ಯವಹರಿಸುತ್ತಿದ್ದರು. ಅಪರೂಪಕ್ಕೆ ಕೆಲವರು ಕನ್ನಡದಲ್ಲಿ ಮಾತಾಡುತ್ತಿದ್ದರು. ಕೆಲವು ದಿನ ಉತ್ತರ ಭಾರತದ ಊಟ ಸಿಗುವ ದೊಡ್ಡ ಹೋಟೆಲ್‌ ಒಂದರಲ್ಲಿ ಕೆಲಸಕ್ಕಿದ್ದೆ. ಅಲ್ಲಿ ಶ್ರೀಮಂತರೇ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ಯಾರೊಬ್ಬರೂ ಕನ್ನಡದಲ್ಲಿ ವ್ಯವಹರಿಸಲೇ ಇಲ್ಲ. ಖಾನಾವಳಿಗೆ ಬರುವ ಅರ್ಧದಷ್ಟು ಜನ ಕನ್ನಡದಲ್ಲಿ ಮಾತು ಆರಂಭಿಸುತ್ತಾರೆ. ನಾವು ಹಿಂದಿಯವರು ಎಂದು ಗೊತ್ತಾಗುತ್ತಿದ್ದಂತೆಯೇ ಕೆಲವರು ಹಿಂದಿಯಲ್ಲೇ ಮಾತಿಗಿಳಿಯುತ್ತಾರೆ. ಹಾಗಾಗಿ ನಾವು ಕನ್ನಡ ಕಲಿಯುವ ಗೋಜಿಗೆ ಹೋಗಿಲ್ಲ’ ಎಂದಾತ ವಿವರಿಸಿದ.

‘ನಮ್ಮ ಕೆಲವು ಸಂಬಂಧಿಗಳು, ಸ್ನೇಹಿತರು ಮಹಾರಾಷ್ಟ್ರ, ತಮಿಳುನಾಡು, ಕೇರಳ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಗೋವಾದಲ್ಲಿದ್ದಾರೆ. ಮಹಾರಾಷ್ಟ್ರ ಮತ್ತು ಗೋವಾ ಹೊರತುಪಡಿಸಿ ಮಿಕ್ಕ ಕಡೆ ಇರುವವರೆಲ್ಲ ಆಯಾ ರಾಜ್ಯಭಾಷೆ ಕಲಿತಿದ್ದಾರೆ. ಕರ್ನಾಟಕದಲ್ಲಿರುವ ನಾವು ಬೆಂಗಳೂರು ಸೇರಿ ಯಾವುದೇ ಜಿಲ್ಲೆಗೆ ಹೋದರೂ ಅಲ್ಲಿನ ಜನ ಹಿಂದಿ ಮಾತನಾಡುತ್ತಾರೆ. ಹಾಗಾಗಿ ನಮಗೆ ಪೂರ್ಣ ಪ್ರಮಾಣದಲ್ಲಿ ಕನ್ನಡ ಕಲಿಯಲಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ.

‘ಕೆಜಿಎಫ್‌ ಸಿನಿಮಾ ನೋಡಿದ ನಂತರ ನಾವು ಯಶ್‌ ಅಭಿಮಾನಿಗಳಾಗಿದ್ದೇವೆ. ಪುನೀತ್‌ ರಾಜ್‌ಕುಮಾರ್‌ ಅವರ ಸಿನಿಮಾಗಳನ್ನೂ ನೋಡುತ್ತಿದ್ದೆವು. ಕನ್ನಡ ಸಿನಿಮಾಗಳನ್ನು ಅರ್ಥೈಸಿಕೊಳ್ಳಲು ಕನ್ನಡ ಕಲಿಯಬೇಕೆಂಬ ಆಸೆ ಇದೆ. ಆದರೆ, ಅವಕಾಶವೇ ಆಗುತ್ತಿಲ್ಲ. ದಕ್ಷಿಣದ ಬೇರೆ ರಾಜ್ಯಗಳಲ್ಲಿರುವ ನಮ್ಮವರು ತಿಳಿಸುವಂತೆ, ಅವರು ಆ ರಾಜ್ಯಭಾಷೆಯನ್ನು ಕಲಿಯದಿದ್ದರೆ ಸಂವಹನ ಸಮಸ್ಯೆ ತೀವ್ರವಾಗಿ ಕಾಡುತ್ತದೆಯಂತೆ. ಆಗ ಅಲ್ಲಿರುವುದು ದುಸ್ತರ ಎಂಬ ಸ್ಥಿತಿ ಇರುವುದರಿಂದ ಕಷ್ಟಪಟ್ಟು ಆಯಾ ಭಾಷೆ ಕಲಿಯುತ್ತಾರಂತೆ’ ಎಂದು ಆತ ಹೇಳಿದ್ದನ್ನು ಕೇಳಿದಾಗ, ‘ಕರ್ನಾಟಕಕ್ಕೆ ಉದ್ಯೋಗ ಅರಸಿ ಬರುವ ಅನ್ಯ ಭಾಷಿಕರು ಕನ್ನಡ ಕಲಿಯಲು ಇರುವ ತೊಡಕು ನಾವೇ’ ಅನ್ನಿಸಿತು.

ನಮ್ಮ ಗ್ರಾಮೀಣ ಭಾಗದಲ್ಲಿರುವ ಅನೇಕ ಬ್ಯಾಂಕ್‌ಗಳಲ್ಲಿ ಉತ್ತರ ಭಾರತದವರೂ, ಆಂಧ್ರ, ತೆಲಂಗಾಣ ಮೂಲದವರೂ ನೇಮಕಗೊಂಡಿದ್ದಾರೆ. ಗ್ರಾಮೀಣರು ಬ್ಯಾಂಕ್‌ ಸಿಬ್ಬಂದಿ ಬಳಸುವ ಹಿಂದಿ ಅಥವಾ ತೆಲುಗಿನಲ್ಲಿ ಮಾತನಾಡದೇ ಕನ್ನಡವನ್ನೇ ಬಳಸುತ್ತಾರೆ. ಅಂತೆಯೇ ಆ ಸಿಬ್ಬಂದಿ ಅನಿವಾರ್ಯತೆಗೆ ಒಳಗಾಗಿ ಕೆಲವು ದಿನಗಳಲ್ಲೇ ಕನ್ನಡ ಕಲಿತಿದ್ದಾರೆ. ಆದರೆ, ರಾಜ್ಯದ ಪಟ್ಟಣ ಮತ್ತು ನಗರ ಪ್ರದೇಶಗಳಿಗೆ ಕೆಲಸ ಅರಸಿ ಬರುವ ಅನ್ಯ ರಾಜ್ಯದವರಿಗೆ, ಬೆಂಗಳೂರಿನಲ್ಲಿ ಐ.ಟಿ.–ಬಿ.ಟಿ. ಕಂಪನಿಗಳಲ್ಲಿ ಕೆಲಸ ಮಾಡುವ ಉತ್ತರ ಭಾರತೀಯರೂ, ದಕ್ಷಿಣದ ಇತರ ರಾಜ್ಯಗಳವರಿಗೂ ನಾವು ಕನ್ನಡವನ್ನು ಪರಿಚಯಿಸದಿರುವುದು ತಲೆ ತಗ್ಗಿಸುವಂಥ ವಿಷಯ.

ತಮಿಳುನಾಡು, ಕೇರಳ, ತೆಲಂಗಾಣ ಅಥವಾ ಬೆಳಗಾವಿಯ ಗಡಿಯಲ್ಲಿರುವ ಮಹಾರಾಷ್ಟ್ರದ ಕೆಲವು ಊರುಗಳಿಗೆ ಹೋದಾಗ ಅಲ್ಲಿನವರು ನಮ್ಮೊಂದಿಗೆ ತಮ್ಮ ಭಾಷೆಯಲ್ಲೇ ಮಾತನಾಡುವುದನ್ನು ಕಂಡಿದ್ದೇನೆ. ದಾರಿ, ವಿಳಾಸ ಅಥವಾ ಇನ್ನೇನಾದರೂ ಮಾಹಿತಿ ಕೇಳಿದರೆ ಕನ್ನಡ ಗೊತ್ತಿದ್ದರೂ ಮಾತನಾಡದೇ ಸಂಜ್ಞೆಯ ಮೂಲಕ ಉತ್ತರಿಸುವುದನ್ನು ಕಂಡು ತಬ್ಬಿಬ್ಬಾಗಿದ್ದೇನೆ. ಆದರೆ, ಕರ್ನಾಟಕದಲ್ಲಿ ಬೇರೆ ರಾಜ್ಯದಿಂದ ಬರುವ ಪ್ರವಾಸಿಗರೊಂದಿಗೆ ಅವರ ಭಾಷೆಯಲ್ಲಿ ಮಾತಾಡುವುದೇ ಹೆಮ್ಮೆ ಎಂಬಂತೆ ನಾವು ಬೀಗುತ್ತೇವೆ. ಈ ಮೂಲಕ, ಅನ್ಯಭಾಷಿಕರು ಕನ್ನಡ ಕಲಿಯುವುದಕ್ಕೆ ಕನ್ನಡಿಗರಾದ ನಾವೇ ಅಡ್ಡಿಯಾಗಿದ್ದೇವೆ; ಅವರನ್ನು ಕನ್ನಡ ಕಲಿಯುವುದರಿಂದ ವಂಚಿತರಾಗುವಂತೆ ಮಾಡುತ್ತಿದ್ದೇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.