ADVERTISEMENT

ಸಂಗತ: ಕಿಶೋರಿಯರ ಕಾಯಲಿ ‘ಶುಚಿ’

ಕಿಶೋರಿಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್ ಒದಗಿಸುವ ಅತ್ಯುಪಯುಕ್ತವಾದ ಯೋಜನೆ ಸ್ಥಗಿತಗೊಂಡಿರುವುದು ವಿಷಾದನೀಯ

ದೀಪಾ ಹಿರೇಗುತ್ತಿ
Published 18 ಜನವರಿ 2022, 19:31 IST
Last Updated 18 ಜನವರಿ 2022, 19:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಹದಿಹರೆಯದ ಹೆಣ್ಣು ಮಕ್ಕಳಿಗೆ ಸ್ಯಾನಿಟರಿ ಪ್ಯಾಡ್‍ಗಳನ್ನು ವಿತರಿಸುವ, ಏಳು ವರ್ಷಗಳ ಹಿಂದೆ ಪ್ರಾರಂಭವಾಗಿದ್ದ ಯೋಜನೆಯೊಂದು ಸದ್ದೇ ಇಲ್ಲದೆ ಕೊನೆಯುಸಿರೆಳೆದು ವರ್ಷ ಮೂರಾಗುತ್ತ ಬಂತು. ಕಿಶೋರಿಯರ ಅದರಲ್ಲೂ ಗ್ರಾಮೀಣ ಭಾಗದ ಹೆಣ್ಣು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಅತ್ಯುತ್ತಮವಾಗಿದ್ದ ಈ ಯೋಜನೆಯು 2018ರ ಕೊನೆಯಿಂದಲೇ ಏದುಸಿರು ಬಿಡುತ್ತಿತ್ತು. 2019ರಲ್ಲಿ ಬಂದ ಕೊರೊನಾ ಅದನ್ನು ಅಧಿಕೃತವಾಗಿ ಕೊನೆಯಾಗಿಸಿತು.

ಇದು ‘ಶುಚಿ’ ಎಂಬ ಹೆಸರಿನ ಸರ್ಕಾರಿ ಕಾರ್ಯಕ್ರಮ. ಹತ್ತರಿಂದ ಹತ್ತೊಂಬತ್ತು ವಯಸ್ಸಿನ ಕಿಶೋರಿಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್ ಒದಗಿಸುವ ಅತ್ಯುಪಯುಕ್ತವಾದ ಯೋಜನೆ. ಎಲ್ಲ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳು, ಪದವಿಪೂರ್ವ ಕಾಲೇಜುಗಳು, ಹಾಸ್ಟೆಲ್‍ಗಳಲ್ಲಿನ ಹೆಣ್ಣು ಮಕ್ಕಳಿಗೆ ಪ್ರತೀ ತಿಂಗಳು ತಲಾ ಹತ್ತು ಸ್ಯಾನಿಟರಿ ಪ್ಯಾಡ್ ಒಳಗೊಂಡ ಹನ್ನೆರಡು ಪ್ಯಾಕ್‍ಗಳನ್ನು ಇಡೀ ವರ್ಷಕ್ಕಾಗಿ ನೀಡಲಾಗುತ್ತಿತ್ತು. ವಿತರಿಸಿ ಉಳಿದ ಪ್ಯಾಡ್‍ಗಳನ್ನು ಶಾಲಾ ಕಾಲೇಜುಗಳಲ್ಲಿ ಸಂಗ್ರಹಿಸಿಟ್ಟು ವಿದ್ಯಾರ್ಥಿನಿಯರಿಗೆ ಅವಶ್ಯಕತೆ ಬಿದ್ದಾಗ ನೀಡಲಾಗುತ್ತಿತ್ತು. ಅಷ್ಟೇ ಅಲ್ಲ, ಶಾಲೆ ಬಿಟ್ಟ ಹೆಣ್ಣು ಮಕ್ಕಳಿಗೂ ಅಂಗನವಾಡಿಗಳ ಮೂಲಕ ಪ್ಯಾಡ್ ವಿತರಿಸಲಾಗುತ್ತಿತ್ತು. ಇಂತಹ ಉಪಯುಕ್ತ ಯೋಜನೆಯನ್ನು ಪದವಿ ಮತ್ತು ಸ್ನಾತಕೋತ್ತರ ಪದವಿ ಓದುವ ಹೆಣ್ಣು ಮಕ್ಕಳಿಗೂ ವಿಸ್ತರಿಸಬೇಕೆಂಬ ಕೂಗು ಕೇಳಿಬಂದಿತ್ತು. ಅದನ್ನು ಬಿಟ್ಟು ಯೋಜನೆಯನ್ನೇ ಕೈ ಬಿಟ್ಟಿರುವುದು ನಿಜಕ್ಕೂ ವಿಷಾದನೀಯ.

ಋತುಸ್ರಾವದ ಸಮಯದಲ್ಲಿ ಅರಿವಿದ್ದೋ ಇಲ್ಲದೆಯೋ ಕಿಶೋರಿಯರು ನೈರ್ಮಲ್ಯದ ಬಗ್ಗೆ ಕಾಳಜಿ ತೆಗೆದುಕೊಳ್ಳುವುದರಲ್ಲಿ ಹಿಂದೆಯೇ ಇದ್ದಾರೆ. ದುಬಾರಿಯಾಗಿರುವ ಸ್ಯಾನಿಟರಿ ಪ್ಯಾಡ್‍ಗಳು ಎಲ್ಲರ ಕೈಗೂ ಎಟಕುವುದಿಲ್ಲ. ಹೀಗಾಗಿ ಬಟ್ಟೆಯನ್ನು ಉಪಯೋಗಿಸಿ ಅದನ್ನು ಮರುಬಳಕೆ ಮಾಡುವುದು ಸರ್ವೇ ಸಾಮಾನ್ಯ. ಮುಟ್ಟು ಎನ್ನುವ ಪದವನ್ನೇ ಉಪಯೋಗಿಸುವಲ್ಲಿ ಹಿಂಜರಿಕೆ ಇರುವ ನಮ್ಮ ಸಮಾಜದಲ್ಲಿ ಮುಟ್ಟಿನ ಬಟ್ಟೆಗಳನ್ನು ಎಷ್ಟು ಅನಾರೋಗ್ಯಕರ ರೀತಿಯಲ್ಲಿ ಒಣಗಿಸುತ್ತಾರೆಂಬುದು ಯಾರಿಗೂ ತಿಳಿಯದ ವಿಚಾರವೇನಲ್ಲ.

ADVERTISEMENT

ಬಟ್ಟೆಯ ಸ್ವಚ್ಛತೆಯಲ್ಲಿ ಎಡವಿದರೆ ಸೋಂಕು ತಗಲುವುದು ಖಂಡಿತ. ಜನನಾಂಗದ ಸೋಂಕಿನಿಂದ, ಅದರಿಂದ ಗರ್ಭಕೋಶದ ಗಂಭೀರ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ. ಕೊಪ್ಪ ತಾಲ್ಲೂಕು ವೈದ್ಯಾಧಿಕಾರಿಯಾಗಿರುವ ಡಾ. ಮಹೇಂದ್ರ ಕಿರೀಟಿ ಈ ಬಗ್ಗೆ ಮಾಹಿತಿ ನೀಡುತ್ತಾರೆ: ಶುದ್ಧ ಹತ್ತಿಯ ಬಟ್ಟೆಯನ್ನು ಸ್ವಚ್ಛವಾಗಿ ಉಪಯೋಗಿಸಿದರೆ ತೊಂದರೆಯಿಲ್ಲ. ಆದರೆ ವರ್ಷದ ಆರು ತಿಂಗಳು ಮಳೆಗಾಲವೇ ಇರುವ ಮಲೆನಾಡಿನಲ್ಲಿ ಇದು ಕಷ್ಟಸಾಧ್ಯ. ಅದೂ ಅಲ್ಲದೆ ಇತ್ತೀಚೆಗೆ ಶುದ್ಧ ಹತ್ತಿಯ ಬಟ್ಟೆಗಳನ್ನು ಬಳಸುವುದು ಕಡಿಮೆಯಾಗಿ ಪಾಲಿಯಸ್ಟರ್ ಮತ್ತಿತರ ಸಿಂಥೆಟಿಕ್ ಮಿಶ್ರಿತ ಹತ್ತಿ ಬಟ್ಟೆಗಳ ಉಪಯೋಗ ಜಾಸ್ತಿಯಾಗಿದೆ. ಈ ಬಟ್ಟೆಗಳನ್ನು ಮುಟ್ಟಿನ ಸಂದರ್ಭದಲ್ಲಿ ಉಪಯೋಗಿಸುವುದರಿಂದ ದದ್ದುಗಳು (ರ‍್ಯಾಶಸ್) ಉಂಟಾಗುತ್ತವೆ, ತುರಿಕೆ, ಚರ್ಮ ಕೆಂಪಾಗುವಂತಹ ಸಮಸ್ಯೆಗಳೂ ಉಂಟಾಗಬಹುದು. ಆದರೆ ಆ ಭಾಗಗಳಲ್ಲಿನ ತೊಂದರೆಗೆ ವೈದ್ಯರಲ್ಲಿಗೆ ಹೋಗಲು ಸಂಕೋಚಪಡುವ ಹುಡುಗಿಯರು ಅಂಗಡಿಯಲ್ಲಿ ಲಭ್ಯವಿರುವ ಕ್ರೀಮ್‍ಗಳನ್ನು ಹಚ್ಚುತ್ತಾರೆ.

ವೈದ್ಯರ ಹತ್ತಿರ ಹೋಗಿ ಪರೀಕ್ಷೆ ಮಾಡಿಸಿಕೊಂಡರೆ ಸೋಂಕು ಯಾವುದರಿಂದ ಆಗಿದೆ ಎಂದು ಪತ್ತೆ ಹಚ್ಚಿ ಅದಕ್ಕೆ ಬೇಕಾದ ರೀತಿಯ ಕ್ರೀಮ್ ಅನ್ನು ಸೂಚಿಸುತ್ತಾರೆ. ಆದರೆ ಮಾರುಕಟ್ಟೆಯಲ್ಲಿ ಸಿಗುವ ಕ್ರೀಮುಗಳಲ್ಲಿ ಸ್ಟಿರಾಯ್ಡ್ ಅಂಶ ಇದ್ದೇ ಇರುತ್ತದೆ. ಹಾಗಾಗಿ ದದ್ದುಗಳೇನೋ ಗುಣವಾಗುತ್ತವೆ. ಆದರೆ ಈ ಪರಿಹಾರ ತಾತ್ಕಾಲಿಕ. ಪದೇ ಪದೇ ಸ್ಟಿರಾಯ್ಡ್ ಇರುವ ಆಯಿಂಟ್‍ಮೆಂಟ್ ಹಚ್ಚುವುದರಿಂದ ಸೋಂಕು ಹೆಚ್ಚಾಗುತ್ತದೆ. ಕೊನೆಗೆ ವೈದ್ಯರಲ್ಲಿ ಹೋದರೆ ಪ್ರಯೋಜನವಾಗುವುದಿಲ್ಲ.

ವೈದ್ಯರು ಹೇಳಿದ ಈ ಅಂಶಗಳು ಬಹಳ ಮಂದಿಗೆ ಗೊತ್ತಿಲ್ಲದೇ ಇರುವುದರಿಂದ ಗಂಭೀರ ಸಮಸ್ಯೆಗಳಿಗೆ ಸಿಲುಕುತ್ತಾರೆ. ಹಾಗಾಗಿ ಶುಚಿ ಪ್ಯಾಡ್‍ಗಳು ಕಿಶೋರಿಯರ ಆರೋಗ್ಯ ಕಾಪಾಡುವಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತವೆ. ಈ ಪ್ಯಾಡ್‍ಗಳಿಂದ ಶುಚಿತ್ವ ಕಾಪಾಡಿಕೊಳ್ಳುವುದರ ಮೂಲಕ ಕಿಶೋರಿಯರು ತಮ್ಮ ಆರೋಗ್ಯವನ್ನೂ ಚೆನ್ನಾಗಿ ಇಟ್ಟುಕೊಳ್ಳುತ್ತಿದ್ದರು. ಈ ಯೋಜನೆಯಿಂದ ಕಿಶೋರಿಯರ ಸೋಂಕಿನ ಪ್ರಮಾಣದಲ್ಲೂ ಗಮನಾರ್ಹ ಇಳಿಕೆಯಾಗಿರುವುದು
ಸರ್ಕಾರಿ ದಾಖಲೆಗಳಿಂದಲೇ ತಿಳಿದುಬರುತ್ತದೆ. ಅಷ್ಟೇ ಅಲ್ಲ, ಶೈಕ್ಷಣಿಕವಾಗಿಯೂ ಹೆಣ್ಣು ಮಕ್ಕಳಿಗೆ ಇದು ಅನುಕೂಲಕರ. ಬಟ್ಟೆ ಉಪಯೋಗಿಸುವ ಮುಜುಗರದಿಂದ ತಪ್ಪಿಸಿಕೊಳ್ಳಲು ಎಷ್ಟೋ ಜನ ಶಾಲೆಗೇ ಗೈರುಹಾಜರಾಗುತ್ತಾರೆ. ಪ್ಯಾಡ್ ಧರಿಸುವುದರಿಂದ ಅವರು ಮುಜುಗರವಿಲ್ಲದೇ ದಿನನಿತ್ಯದ ಚಟುವಟಿಕೆಗಳನ್ನು ಮಾಡಲು ಅನುಕೂಲ
ವಾಗುತ್ತದೆ.

ಈ ಯೋಜನೆಗೆ ಬೇಕಾದ ಹಣವಾದರೂ ಎಷ್ಟು? ಪ್ರತೀ ತಾಲ್ಲೂಕಿಗೂ ಆರಂಕಿಯ ಮೊತ್ತ ಅಷ್ಟೇ. ನಮ್ಮ ಸರ್ಕಾರದ ಬೃಹತ್ ಆಯವ್ಯಯದಲ್ಲಿ ಇದೊಂದು ಲೆಕ್ಕಕ್ಕೇ ಸಿಗದಿರುವ ಹಣ. ಹಾಗಾಗಿ ಈ ಅತ್ಯುತ್ತಮ ಯೋಜನೆಗೆ ಶೀಘ್ರವಾಗಿ ಹಣ ಬಿಡುಗಡೆ ಮಾಡಬೇಕು. ಈ ಕುರಿತು ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಆರೋಗ್ಯ ಅಧಿಕಾರಿಗಳು ವೈಯಕ್ತಿಕ ಗಮನಹರಿಸಿ ಯೋಜನೆಯನ್ನು ಪುನರಾರಂಭಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.