
‘ಕನ್ನಡ ರಾಜ್ಯೋತ್ಸವ’, ‘ಮಕ್ಕಳ ದಿನಾಚರಣೆ’ ಮತ್ತು ‘ಗ್ರಂಥಾಲಯ ಸಪ್ತಾಹ’ ಮೂರೂ ಒಂದೇ ತಿಂಗಳಲ್ಲಿ ಬರುವುದು ಕಾಕತಾಳೀಯ ಹೌದಾದರೂ, ಈ ಮೂರು ಸಂಗತಿಗಳಿಗೆ ಸಾಂಸ್ಕೃತಿಕವಾಗಿ ಒಳಸಂಬಂಧವಿದೆ. ರಾಜ್ಯೋತ್ಸವ ನಾಡು–ನುಡಿ ಸಂಭ್ರಮವಾದರೆ, ಉಳಿದೆರಡು ಆ ಸಂಭ್ರಮ ನಿರಂತರವಾಗಿರಲು ಅಗತ್ಯವಾದ ಜೀವದ್ರವ್ಯಗಳು.
ನವೆಂಬರ್ 14ರ ‘ಮಕ್ಕಳ ದಿನಾಚರಣೆ’ಯಂದೇ ಆರಂಭವಾಗುವ ಗ್ರಂಥಾಲಯ ಸಪ್ತಾಹದ ಆಚರಣೆ ನವೆಂಬರ್ 20ರಂದು ಕೊನೆಗೊಳ್ಳುತ್ತದೆ. ಮಕ್ಕಳು ಮೊಬೈಲ್ ಫೋನ್ ವ್ಯಸನಿಗಳಾಗಿದ್ದು, ಅವರಲ್ಲಿ ಪುಸ್ತಕಗಳ ಓದಿನ ಹವ್ಯಾಸ ಕ್ಷೀಣಿಸುತ್ತಿದೆ ಎನ್ನುವ ಆರೋಪ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ, ‘ಗ್ರಂಥಾಲಯ ಸಪ್ತಾಹ’ವನ್ನು ಕಾಟಾಚಾರಕ್ಕೆಂದು ಆಚರಿಸದೆ, ಅರ್ಥಪೂರ್ಣವಾಗಿಸಬೇಕಿದೆ. ಪುಸ್ತಕಗಳ ಓದಿಗೆ ವಿಮುಖರಾಗುತ್ತಿರುವ ಮಕ್ಕಳನ್ನು ಮತ್ತೆ ಪುಸ್ತಕಗಳತ್ತ ಕರೆತರುವ ಆಚರಣೆ ಇದಾಗಬೇಕು.
ಕುವೆಂಪು ಅವರಿಂದ ಇಂದಿನ ಯುವ ಬರಹಗಾರರವರೆಗೆ ಅನೇಕ ಲೇಖಕರು ಮಕ್ಕಳಿಗೆಂದು ಬರೆದ ಪುಸ್ತಕಗಳು ಕನ್ನಡದಲ್ಲಿ ಹೇರಳವಾಗಿವೆ. ಸಂಪದ್ಭರಿತ ಮಕ್ಕಳ ಸಾಹಿತ್ಯ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಮಕ್ಕಳ ಓದಿಗೆ ಲಭ್ಯವಾಗಬೇಕು. ಗ್ರಂಥಾಲಯ ಸಪ್ತಾಹದ ಸಂದರ್ಭ ಲೈಬ್ರರಿಗಳಲ್ಲಿರುವ ಮಕ್ಕಳ ಸಾಹಿತ್ಯ ಕೃತಿಗಳನ್ನು ಪ್ರದರ್ಶಿಸುವ ಮೂಲಕ ಪಾಲಕರ ಹಾಗೂ ಮಕ್ಕಳ ಗಮನಕ್ಕೆ ತರುವುದು ಅಗತ್ಯ. ಆದರೆ, ಸಾರ್ವಜನಿಕ ಗ್ರಂಥಾಲಯಗಳಲ್ಲಿ ಮಕ್ಕಳ ಪುಸ್ತಕಗಳ ಕೊರತೆ ಇದೆ ಎನ್ನುವ ದೂರು ಕೇಳಿಬರುತ್ತಿದೆ. ಮಕ್ಕಳ ಪುಸ್ತಕಗಳಿದ್ದರೂ ಅವುಗಳನ್ನು ಪ್ರತ್ಯೇಕವಾಗಿ ವ್ಯವಸ್ಥೆಗೊಳಿಸದೆ ಇರುವುದು ಇನ್ನೊಂದು ಸಮಸ್ಯೆ.
ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಗ್ರಾಮೀಣ ಗ್ರಂಥಾಲಯಗಳಲ್ಲಿ ‘ಓದುವ ಬೆಳಕು’ ಕಾರ್ಯಕ್ರಮದ ಮೂಲಕ ಮಕ್ಕಳಲ್ಲಿ ಓದುವ ಆಸಕ್ತಿ ಬೆಳೆಸಲು ಯೋಜನೆ ರೂಪಿಸಲಾಯಿತು. ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲಾಗಿದೆಯೇ ಎನ್ನುವ ಪ್ರಶ್ನೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಉತ್ತರದಾಯಿಯಾಗಿದೆ. ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಪುಸ್ತಕಗಳ ಓದಿನ ಸೌಲಭ್ಯ ಒದಗಿಸಲು ಗ್ರಾಮೀಣ ಗ್ರಂಥಾಲಯಗಳಲ್ಲಿ ಸದಸ್ಯರೆಂದು ನೋಂದಣಿ ಮಾಡಿಕೊಳ್ಳಲಾಗಿದೆ. ನೋಂದಣಿಯಾದ ಮಕ್ಕಳಿಗೆ ಅಗತ್ಯವಾದ ಪುಸ್ತಕಗಳನ್ನು ಒದಗಿಸುವುದು ಇಲಾಖೆಯ ಜವಾಬ್ದಾರಿಯಾಗಿದೆ. ಯೋಜನೆಗಳು ಕೇವಲ ಕೈಪಿಡಿಗೆ ಮತ್ತು ಉದ್ಘಾಟನೆಗೆ ಸೀಮಿತವಾಗದೆ ಕಾರ್ಯರೂಪಕ್ಕೆ ಬರಬೇಕು. ಗ್ರಾಮೀಣ ಗ್ರಂಥಾಲಯಗಳನ್ನು ಮಕ್ಕಳ ಓದಿಗೆ ಅನುಕೂಲವಾಗುವಂತೆ ಅಭಿವೃದ್ಧಿಪಡಿಸಬೇಕಿದೆ.
ಮೂಲ ಸೌಕರ್ಯಗಳ ಕೊರತೆಯಿರುವ ಸರ್ಕಾರಿ ಶಾಲೆಗಳಲ್ಲಿ ಗ್ರಂಥಾಲಯಗಳನ್ನು ನಿರೀಕ್ಷಿಸುವಂತಿಲ್ಲ. ಖಾಸಗಿ ಶಾಲೆಗಳಲ್ಲೂ ಮಕ್ಕಳ ಗ್ರಂಥಾಲಯಗಳ ಸಂಖ್ಯೆ ನಿರೀಕ್ಷಿತ ಪ್ರಮಾಣದಷ್ಟಿಲ್ಲ. ಶಾಲೆಗಳಲ್ಲಿ ಪಠ್ಯಪುಸ್ತಕಗಳಾಚೆ ವಿದ್ಯಾರ್ಥಿಗಳು ಬೇರೆ ಪುಸ್ತಕಗಳನ್ನು ಓದಲು ಅವಕಾಶ ಇಲ್ಲವಾಗಿದೆ. ಸಾಹಿತ್ಯದ ಪುಸ್ತಕಗಳ ಓದಿನಿಂದ ವಿದ್ಯಾರ್ಥಿಗಳ ಸಮಯ ವ್ಯರ್ಥ ಎನ್ನುವ ಮನೋಭಾವ ಶಿಕ್ಷಕರು ಮತ್ತು ಪಾಲಕರಲ್ಲಿ ಮನೆಮಾಡಿದೆ. ಹಿಂದೆಲ್ಲ ಶಾಲೆಗಳ ವೇಳಾಪಟ್ಟಿಯಲ್ಲಿನ ಕೊನೆಯ ಅವಧಿ ನೈತಿಕ ಶಿಕ್ಷಣಕ್ಕೆ ಮೀಸಲಾಗಿರುತ್ತಿತ್ತು. ಶಿಕ್ಷಕರು ವಿದ್ಯಾರ್ಥಿಗಳಿಗೆ ನೀತಿಕಥೆಗಳನ್ನು ಬೋಧಿಸುತ್ತಿದ್ದರು. ಸದ್ಯದ ವಾತಾವರಣವನ್ನು ಗಮನಿಸಿದರೆ, ಪಾಲಕರು ಮಕ್ಕಳ ಶಿಕ್ಷಣ ಎನ್ನುವ ಸರಕಿನ ಮೇಲೆ ಬಂಡವಾಳ ಹೂಡುತ್ತಿರುವಂತೆ ಭಾಸವಾಗುತ್ತದೆ.
ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಮನೆಕಟ್ಟಿಸುವ ಪಾಲಕರು ತಮಗಾಗಿ ಮತ್ತು ಮಕ್ಕಳಿಗಾಗಿ ಮನೆಯಲ್ಲಿ ಪುಸ್ತಕಗಳ ಸಂಗ್ರಹಕ್ಕಾಗಿ ಪುಟ್ಟ ಕೋಣೆಯನ್ನು ನಿರ್ಮಿಸುತ್ತಿಲ್ಲ. ಸ್ನಾನಗೃಹದಿಂದ ದೇವರ ಕೋಣೆಯವರೆಗೆ ಪ್ರತಿ ಹಂತದಲ್ಲಿ ಅತ್ಯಂತ ಆಸಕ್ತಿ ಮತ್ತು ಮುತುವರ್ಜಿಯಿಂದ ಯೋಜನೆ ರೂಪಿಸಿ ಮನೆ ನಿರ್ಮಿಸುವವರಿಗೆ ಪುಸ್ತಕದ ಗೂಡು ಬೇಕೆನ್ನಿಸುತ್ತಿಲ್ಲ. ಪಾಠ ಮಾಡುವ ಶಿಕ್ಷಕರ ಮನೆಗಳಲ್ಲೂ ಓದಲು ಪುಸ್ತಕಗಳು ಸಿಗುತ್ತಿಲ್ಲ. ಮಕ್ಕಳಲ್ಲಿ ಪುಸ್ತಕಪ್ರೀತಿ ಒಂದು ಸಂಸ್ಕೃತಿಯಾಗಿ ರೂಪುಗೊಳ್ಳುವಲ್ಲಿ ಕುಟುಂಬದ ಹಿರಿಯರ ಓದುವ ಹವ್ಯಾಸ ಮುಖ್ಯ ಪಾತ್ರವಹಿಸುತ್ತದೆ.
ಮಕ್ಕಳ ಹಟ ಮತ್ತು ಗಲಾಟೆಯನ್ನು ನಿಯಂತ್ರಿಸಲು ಪಾಲಕರೇ ಮುಂದಾಗಿ ಮಕ್ಕಳ ಕೈಗೆ ಮೊಬೈಲ್ ಫೋನ್ ಕೊಡುತ್ತಿದ್ದಾರೆ. ಮೊಬೈಲ್ ಫೋನ್ ಬದಲು ಮಕ್ಕಳ ಕೈಗೆ ಪುಸ್ತಕಗಳನ್ನು ಕೊಡುವುದು ಅವರ ಆರೋಗ್ಯದ ದೃಷ್ಟಿಯಿಂದ ಉತ್ತಮವಾದದ್ದು.
ಇಂದು ವಿದ್ಯಾರ್ಥಿ ಸಮೂಹ ಸಂವಹನಕ್ಕಾಗಿ ಬಳಸುತ್ತಿರುವ ಭಾಷೆ ಗಾಬರಿ ಹುಟ್ಟಿಸುವಂತಿದೆ. ಮೊಬೈಲ್ ತಂತ್ರಜ್ಞಾನದ ಸಹಾಯದಿಂದ ಪದಗಳನ್ನು ತುಂಡರಿಸಿ ಸಂಕ್ಷಿಪ್ತ ರೂಪದಲ್ಲಿ ಬಳಸುತ್ತಿದ್ದಾರೆ. ಭಾವನೆಗಳು ಎಮೋಜಿ ರೂಪದಲ್ಲಿ ವ್ಯಕ್ತವಾಗುತ್ತಿವೆ. ಯುವಸಮೂಹದ ಈ ನಡೆ ಶಬ್ದಸೂತಕ ವಾತಾವರಣವನ್ನು ಸೃಷ್ಟಿಸುತ್ತಿದೆ. ಭವಿಷ್ಯದಲ್ಲಿ ಮನುಷ್ಯ ಮಾತನಾಡುವ ಕೌಶಲವನ್ನೇ ಕಳೆದುಕೊಳ್ಳಬಹುದೇನೋ ಎನ್ನುವ ಆತಂಕ ಎದುರಾಗಿದೆ. ಈ ಆತಂಕದ ನಿವಾರಣೆಗೆ ಪುಸ್ತಕಗಳ ಓದು ಪರ್ಯಾಯ ಮಾರ್ಗವಾಗಿದೆ.
ಪುಸ್ತಕಗಳ ಓದು ಶಬ್ದಗಳ ಮತ್ತು ಭಾಷೆಯ ಬಳಕೆಯನ್ನು ಹೆಚ್ಚಿಸುತ್ತದೆ. ಓದಿನಿಂದ ಕಲ್ಪನೆಯ ಸಾಮರ್ಥ್ಯ ವೃದ್ಧಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.