ADVERTISEMENT

ಚುರುಮುರಿ | ಐವತ್ತು ಐನೂರಾಯ್ತು!

ಬಿ.ಎನ್.ಮಲ್ಲೇಶ್
Published 21 ನವೆಂಬರ್ 2019, 17:25 IST
Last Updated 21 ನವೆಂಬರ್ 2019, 17:25 IST
ಚುರುಮುರಿ
ಚುರುಮುರಿ   

‘ಸಾರ್, ನಿಮ್ಮ ನಾಮಿನೇಶನ್ ಮೆರವಣಿಗೇಲಿ ಏನ್ ಜನಾ ಅಂತೀರಿ... ಹತ್ತು ಕಿಲೋ
ಮೀಟರ್‌ವರೆಗೂ ಬರೀ ತಲೆಗಳೇ ಕಾಣ್ತಿದ್ವು. ನೀವು ಗೆದ್ದಂಗೇ ಬಿಡಿ ಸಾ...’

‘ಮತ್ತೆ? ಗೆದ್ದೇ ಗೆಲ್ತೀನಿ ಕಣಯ್ಯ, ಬಿಡ್ತೀನಾ?’

‘ನಿಮಗೆ ಎದುರಾಳಿಗಳು ಯಾರು ಸಾ?’

ADVERTISEMENT

‘ಎದುರಾಳಿಗಳಾ? ಸಾಲಗಾರರು ಅನ್ನು. ಎಲ್ರೂ ನನ್ನತ್ರ ಸಾಲ ತಗಂಡಿದಾರೆ ಗೊತ್ತಾ?’

‘ಅಷ್ಟಾಕಂದು ದುಡ್ಡು ನಿಮ್ಮತ್ರ ಎಲ್ಲಿತ್ತು ಸಾ? ಆಪರೇಷನ್ ಕಮಲದೋರು ಏನಾದ್ರು ಕೊಟ್ಟಿದ್ರಾ?’

‘ಏಯ್, ನಾನೇ ಸಾವಿರ ಜನಕ್ಕೆ ಸಾಲ ಕೊಡಂಗಿದೀನಿ. ನಾನು ದುಡ್ಡು ಇಸ್ಕಂತೀನಾ?’

‘ಸಾರಿ ಸಾ... ನಾನೆಲ್ಲೋ ನೀವು ಎಂಪ್ಟಿ ಅಂದ್ಕಂಡಿದ್ದೆ. ನಾಮಿನೇಶನ್‍ನಲ್ಲಿ ಗೊತ್ತಾಯ್ತು ನಿಮ್ಮತ್ರ ಭರ್ಜರಿ ದುಡ್ಡಿದೆ ಅಂತ...’

‘ದುಡಿದಿದೀನಿ ಕಣಯ್ಯ, ರಕ್ತ ಬಸಿದಿದೀನಿ. ಹೋರಾಟ ಮಾಡಿ ಪಕ್ಷ ಕಟ್ಟಿದೀನಿ...’

‘ಅಲ್ಲ ಸಾ... ಒಂದೊಂದ್ ಎಲೆಕ್ಷನ್‍ನಲ್ಲೂ ಒಂದೊಂದ್ ಪಾರ್ಟಿ ನಿಮ್ದು. ಬೈ ಎಲೆಕ್ಷನ್‍ನಲ್ಲಿ ಈಗ ಹೊಸ ಪಾರ್ಟಿ ಸೇರ್ಕಂಡಿದೀರಿ. ಮತ್ತೆ ನೀವು ರಕ್ತ ಬಸಿದು ಕಟ್ಟಿದ ಪಕ್ಷ ಯಾವುದು?’

‘ಎಲ್ಲ ಪಕ್ಷಕ್ಕೂ ದುಡಿದಿದೀನಿ, ಸುಮ್ನಿರಪ್ಪ ನೀನು...’

‘ಅಲ್ಲ ಸಾ, ಹೋದ ಎಲೆಕ್ಷನ್‍ನಲ್ಲಿ ನೀವು ಐವತ್ತು ಕೋಟಿ ಆಸ್ತಿ ತೋರಿಸ್ಕಂಡಿದ್ರಿ. ಈ ಸಲ ಐನೂರು ಕೋಟಿ ಡಿಕ್ಲೇರ್ ಮಾಡ್ಕಂಡಿದೀರಿ. ಐದೇ ವರ್ಷಕ್ಕೆ ಹತ್ತು ಪಟ್ಟು ಹೆಂಗೆ ಸಾ? ಯಾವ ಬ್ಯಾಂಕಲ್ಲಿಟ್ಟಿದ್ರಿ?’

‘ಹೆಂಗೋ ದುಡಿದೆ ಬಿಡಪ್ಪ, ಕಷ್ಟ
ಪಟ್ಟಿದೀನಿ... ನಿಂಗ್ಯಾಕೆ ಅದೆಲ್ಲ?’

‘ಏನಿಲ್ಲ ಸಾ, ನಾನೂ ಒಂದಿಷ್ಟು ದುಡ್ಡು ತಂದಿದ್ದೆ...’

‘ದುಡ್ಡಾ? ನಂಗೆ ಎಲೆಕ್ಷನ್ ಖರ್ಚಿಗೆ ಕೊಡೋಕಾ?’

‘ಛೆ ಛೆ, ಅಲ್ಲ ಸಾ, ನೀವು ಐವತ್ತು ಕೋಟಿನ ಐನೂರು ಕೋಟಿ ಮಾಡ್ಕಂಡಂಗೆ ನಂಗೂ ಮಾಡಿ ಕೊಡಿ ಸಾ... ಸದ್ಯ ಐವತ್ತು ಸಾವಿರ ತಂದಿದೀನಿ, ಐದು ವರ್ಷಕ್ಕೆ ಹತ್ತು ಲಕ್ಷ ಮಾಡಿಕೊಟ್ರೆ ಸಾಯೋತಂಕ ನಿಮ್ಮನ್ನ ಮರೆಯಲ್ಲ ಸಾ...’!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.