2021ರಲ್ಲಿ ತೆರೆಕಂಡ ‘ಪುಷ್ಪ- ದಿ ರೈಸ್’ ಸಿನಿಮಾದ ನಟನೆಗಾಗಿ ನಾಯಕ ಅಲ್ಲು ಅರ್ಜುನ್ ಅವರಿಗೆ ಶ್ರೇಷ್ಠ ನಾಯಕನಟ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ನೀಡಲಾಯಿತು. ವಿಲಕ್ಷಣ ಹಾವಭಾವ, ಅವಗುಣಗಳಿಂದ ಇಡುಕಿರಿದ ಪ್ರತಿನಾಯಕನ ಗುಣಗಳು ಇರುವ ಅಂತಹ ಪಾತ್ರಕ್ಕೆ ಶ್ರೇಷ್ಠ ನಟ ಪ್ರಶಸ್ತಿ ಪ್ರಕಟಿಸಿದ ತೀರ್ಪುಗಾರರ ಅಭಿರುಚಿ ಆಗ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಒಳಪಟ್ಟಿತ್ತು. ಕರ್ನಾಟಕ ರಾಜ್ಯ ಸರ್ಕಾರ ಇತ್ತೀಚೆಗೆ 2019ನೇ ಸಾಲಿನ ಸಿನಿಮಾ ಪ್ರಶಸ್ತಿಗಳನ್ನು ಪ್ರಕಟಿಸಿದೆ. ‘ಪೈಲ್ವಾನ್’ ಸಿನಿಮಾ ಅಭಿನಯಕ್ಕೆ ಸುದೀಪ್ ಅವರನ್ನು ಶ್ರೇಷ್ಠ ನಟ ಎಂದು ಆಯ್ಕೆ ಸಮಿತಿಯು ಆರಿಸಿತು. ಅವರು ಪ್ರಶಸ್ತಿ ಸ್ವೀಕರಿಸು ವುದಿಲ್ಲ ಎಂದು ಹೇಳಿದ್ದು ಬೇರೆಯ ಮಾತು.
ಶ್ರೇಷ್ಠ ಅಭಿನಯಕ್ಕಾಗಿ ಜನಪ್ರಿಯ ನಟರಿಗೆ ಪ್ರಶಸ್ತಿ ಕೊಟ್ಟರೆ ಸಮಾರಂಭಕ್ಕೆ ಒಂದು ಕಳೆ ಬರುತ್ತದೆ ಎನ್ನುವ ಲೆಕ್ಕಾಚಾರ ಸುದೀಪ್ ಆಯ್ಕೆಯ ಹಿಂದೆ ಇರಬಹುದು ಎಂಬ ಜಿಜ್ಞಾಸೆ ಕೂಡ ಇದೆ.
ಪ್ರಶಸ್ತಿ ಪಟ್ಟಿಯಲ್ಲಿನ ಇನ್ನೊಂದು ಆಯ್ಕೆ- ‘ಇಂಡಿಯಾ Vs ಇಂಗ್ಲೆಂಡ್’. ಈ ಚಿತ್ರಕ್ಕೆ ಶ್ರೇಷ್ಠ ಜನಪ್ರಿಯ ಮನರಂಜನಾ ಚಿತ್ರ ಎಂಬ ವಿಭಾಗದಲ್ಲಿ ಪ್ರಶಸ್ತಿ ಘೋಷಿಸಲಾಗಿದೆ. ಪ್ರಶಸ್ತಿಗಳಿಗೆ ಪರಿಗಣಿಸಲಾದ, 2019ನೇ ಇಸವಿಯ ಸಿನಿಮಾಗಳ ಪಟ್ಟಿಯ ಮೇಲೆ ಒಮ್ಮೆ ಕಣ್ಣಾಡಿಸಿದರೆ, ಜನಪ್ರಿಯವಾದ ಅರ್ಧ ಡಜನ್ ಸಿನಿಮಾಗಳಾದರೂ ಕಣ್ಣಿಗೆ ಬೀಳುತ್ತವೆ. ‘ಬೆಲ್ ಬಾಟಮ್’, ‘ಕವಲುದಾರಿ’, ‘ಯಜಮಾನ’, ‘ದಿಯಾ’ ಆ ಪೈಕಿ ಕೆಲವು ಉದಾಹರಣೆಗಳು.
ಇನ್ನು, ಅತ್ಯುತ್ತಮ ಸಿನಿಮಾ ಪ್ರಶಸ್ತಿಗೆ ಆಯ್ಕೆಯಾದ ಎರಡು ಚಿತ್ರಗಳನ್ನು ಗಮನಿಸೋಣ. ಮೊದಲನೆಯ ಅತ್ಯುತ್ತಮ ಚಿತ್ರ ‘ಮೋಹನದಾಸ’. ಗಾಂಧಿ ರೂಪಕದ ಪ್ರಸ್ತುತತೆ ಕಾರಣಕ್ಕೆ ಈ ಆಯ್ಕೆಯನ್ನು ಒಪ್ಪಬಹುದು. ಎರಡನೆಯ ಅತ್ಯುತ್ತಮ ಚಿತ್ರ ಎಂದು ಆಯ್ಕೆಯಾಗಿರುವುದು ‘ಲವ್ ಮಾಕ್ಟೇಲ್’. ರಾಜ್‌ಕುಮಾರ್ ಅಭಿನಯದ ‘ಹಾಲುಜೇನು’ ಕನ್ನಡ ಸಿನಿಮಾದ ಆತ್ಮ ಇಟ್ಟುಕೊಂಡಿರುವ ಈ ಕಾಲದ ಚಿತ್ರವಿದು. ಇದು ಕೋವಿಡ್ ಸಂದರ್ಭದಲ್ಲಿ ಒಟಿಟಿ ವೇದಿಕೆಯಲ್ಲಿ ಜನಪ್ರಿಯತೆ ಪಡೆದುಕೊಂಡಿದ್ದ ಚಿತ್ರ. ಆ ದೃಷ್ಟಿಯಿಂದ ನೋಡಿದರೆ ಇದನ್ನೂ ಶ್ರೇಷ್ಠ ಜನಪ್ರಿಯ ಮನರಂಜನಾ ಸಿನಿಮಾ ವಿಭಾಗದ ಪ್ರಶಸ್ತಿಗೆ ಪರಿಗಣಿಸಬಹುದಾಗಿತ್ತು.
ಗಿರೀಶ ಕಾಸರವಳ್ಳಿ ನಿರ್ದೇಶನದ ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಚಿತ್ರದ ಮೊದಲ ಅರ್ಧವು ಸಿನಿಮಾ ವ್ಯಾಕರಣ ಕಲಿಯಲು ಬಯಸುವ ಅನೇಕರಿಗೆ ದೃಶ್ಯ ಪಾಠವನ್ನು ಅಡಗಿಸಿ ಇಟ್ಟುಕೊಂಡಿದೆ. ಬರಗೂರು ರಾಮಚಂದ್ರಪ್ಪ ಅವರ ‘ಅಮೃತಮತಿ’ ಕೂಡ ವಸ್ತುವಿಷಯದ ದೃಷ್ಟಿಯಿಂದ ಗಮನ ಸೆಳೆಯುವ ಚಿತ್ರಕೃತಿ. ಅವುಗಳಿಗೆ ನೆಪಮಾತ್ರಕ್ಕೆ ಎನ್ನುವಂತೆ ಶ್ರೇಷ್ಠ ಕತೆ ವಿಭಾಗದಲ್ಲಿ (ಜಯಂತ ಕಾಯ್ಕಿಣಿ- ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ) ಒಂದು ಪ್ರಶಸ್ತಿ, ಸಂಭಾಷಣೆಗೆ ಇನ್ನೊಂದು (ಅಮೃತಮತಿ- ಬರಗೂರು ರಾಮಚಂದ್ರಪ್ಪ) ಪ್ರಶಸ್ತಿ ನೀಡಲಾಗಿದೆ. ಅಮೃತಮತಿ ಚಿತ್ರಕ್ಕೆ ತೀರ್ಪುಗಾರರ ವಿಶೇಷ ಮೆಚ್ಚುಗೆ ಎಂಬ ಕಣ್ಣೊರೆಸುವ ಪ್ರಶಸ್ತಿಯೊಂದನ್ನೂ ನೀಡಲಾಗಿದೆ; ಅದೂ ಮತ್ತೊಂದು ಚಿತ್ರದ ಜೊತೆಗೆ ಹಂಚಲಾಗಿದೆ.
ಕೋವಿಡ್ ವ್ಯಾಪಕವಾಗಿದ್ದ ನಂತರ, ಸಿನಿಮಾ ಪ್ರಶಸ್ತಿಗಳನ್ನು ಇದುವರೆಗೆ ನೀಡಿಯೇ ಇರಲಿಲ್ಲ. ಈಗ ಹಳೆಯ ಕಂತಿನ ಪ್ರಶಸ್ತಿಗಳು ಪ್ರಕಟವಾಗಿವೆ. ಇಂತಹ ಸಂದರ್ಭದಲ್ಲಿ ಆಯ್ಕೆಗಳು ಹೆಚ್ಚು ತೂಕವಾಗಿ ಇರಬೇಕಿತ್ತು. ಯಾಕೆಂದರೆ, ಆರ್ಥಿಕ ಹಿನ್ನಡೆಯ ಹೊಡೆತದ ನಂತರ ಕನ್ನಡ ಚಿತ್ರರಂಗವು ಗುಣಮಟ್ಟದ ವಿಷಯದಲ್ಲಿ ಬಹಳಷ್ಟು ಕುಸಿದಿದೆ. ಸಂಖ್ಯಾಸಮೃದ್ಧಿ ಇದ್ದರೂ ಗುಣಮಟ್ಟದಲ್ಲಿ ಬಡತನ ಎನ್ನುವ ಸ್ಥಿತಿ. ಇಂತಹ ಹೊತ್ತಿನಲ್ಲಿ ರೋಮ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಸ್ಪರ್ಧಾ ವಿಭಾಗಕ್ಕೆ ಹೋಗಿದ್ದ ‘ಇಲ್ಲಿರಲಾರೆ...’ ಹಾಗೂ ಲಾಸ್ ಏಂಜಲೀಸ್ ಚಿತ್ರೋತ್ಸವದಲ್ಲಿ ಪ್ರಶಸ್ತಿಗೆ ಭಾಜನವಾದ ‘ಅಮೃತಮತಿ’ ಅಧ್ಯಯನದ ದೃಷ್ಟಿಯಿಂದ ಮಹತ್ವ ಪಡೆದುಕೊಳ್ಳುತ್ತವೆ. ಜನ್ನನ ಯಶೋಧರ ಚರಿತೆಯನ್ನು ಈ ದಿನಮಾನದಲ್ಲಿ ಹೇಳುವ ಬರಗೂರು ಅವರ ಪ್ರಯತ್ನ ಸಿನಿಮಾ ತಂತ್ರಜ್ಞಾನದ ಚೌಕಟ್ಟಿನಲ್ಲಿ ಸವಾಲೊಂದನ್ನು ಸ್ವೀಕರಿಸಿದಂತೆಯೇ ಸರಿ.
ಪರ್ಯಾಯ ಪ್ರಯತ್ನಗಳಿಗೆ ಹೊರತಾಗಿಯೂ ‘ಕವಲುದಾರಿ’ ಸಿನಿಮಾದ ಥ್ರಿಲ್ಲರ್ ರೂಹು, ‘ಬೆಲ್ ಬಾಟಮ್’ ಚಿತ್ರದಲ್ಲಿ ಇರುವ ರೊಮ್ಯಾಂಟಿಕ್ ಕಾಮಿಡಿ ಹಾಗೂ ಸಸ್ಪೆನ್ಸ್ ಬೆರೆಸಿದ ಗಟ್ಟಿತನ, ‘ದಿಯಾ’ ಚಿತ್ರದ ಹೊಸ ಮುಖಗಳ ಭರವಸೆಗೆ ಮನ್ನಣೆ ಸಿಗಬೇಕಿತ್ತು.
ಶ್ರೇಷ್ಠ ಸಂಗೀತ ನಿರ್ದೇಶನ ಪ್ರಶಸ್ತಿಯು ವಿ.ಹರಿಕೃಷ್ಣ ಅವರಿಗೆ ‘ಯಜಮಾನ’ ಚಿತ್ರದ ಹಾಡುಗಳಿಗಾಗಿ ದೊರೆತಿದೆ. ‘ಮುಂದಿನ ನಿಲ್ದಾಣ’ ಚಿತ್ರದಲ್ಲಿ ವಾಸುಕಿ ವೈಭವ್ ಹಿಂದೂಸ್ತಾನಿ ರಾಗ ಬಳಸಿ ಹಾಡೊಂದಕ್ಕೆ ಮಾಡಿದ್ದ ಸ್ವರ ಸಂಯೋಜನೆಯ ಪ್ರಯೋಗವು (ಹಾಡು: ಇನ್ನೂನು ಬೇಕಾಗಿದೆ) ಎಲ್ಲ ದೃಷ್ಟಿಯಿಂದಲೂ ಈ ಆಯ್ಕೆಗಿಂತ ಮೇಲೇಳುತ್ತದೆ. ಆ ಸಿನಿಮಾದ ಒಂದೊಂದು ಹಾಡಿಗೂ ಒಬ್ಬೊಬ್ಬ ಸಂಗೀತ ನಿರ್ದೇಶಕರಿಂದ ಮಟ್ಟು ಹಾಕಿಸುವ ಪ್ರಯೋಗವೂ ನಡೆದಿತ್ತು. ಇಂಥವನ್ನು ಗುರುತಿಸುವ ಸಾಧ್ಯತೆಯೂ ಪ್ರಶಸ್ತಿ ಆಯ್ಕೆ ಸಮಿತಿಗೆ ಇರುತ್ತದೆ.
ಸಿನಿಮಾ ಪ್ರಶಸ್ತಿಗಳಿಗೆ ಪರಿಗಣಿಸುವಾಗ ಈಗಾಗಲೇ ದೊಡ್ಡವರಿಗೆ ಪ್ರಶಸ್ತಿ ಬಂದಿದೆ, ಅವರನ್ನು ಮತ್ತೆ ಯಾಕೆ ಪರಿಗಣಿಸಬೇಕು ಎನ್ನುವ ಅವ್ಯಕ್ತ ಧೋರಣೆಯೊಂದು ಕೆಲಸ ಮಾಡುವುದು ಎದ್ದು ಕಾಣುತ್ತಿದೆ. ಕಾಸರವಳ್ಳಿ, ಬರಗೂರು ಅವರಂಥ ನಿರ್ದೇಶಕರು ಇದೇ ಕಾರಣಕ್ಕೆ ಈಗೀಗ ನಿರ್ಲಕ್ಷ್ಯಕ್ಕೆ ಗುರಿಯಾಗುತ್ತಿದ್ದಾರೇನೊ?
ಇನ್ನೂ ನಾಲ್ಕು ವರ್ಷಗಳ ಪ್ರಶಸ್ತಿಗಳ ಕಂತುಗಳು ಪ್ರಕಟವಾಗುವುದು ಬಾಕಿ ಇದೆ. ಗುಣಮಟ್ಟಕ್ಕೆ ಹೆಚ್ಚು ಮನ್ನಣೆ ಕೊಡುವ ಆಯ್ಕೆಗಳು ಆಗಲಾದರೂ ಹೊರಬರಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.