ADVERTISEMENT

ಜೀವವೈವಿಧ್ಯದ ಮ್ಯೂಸಿಯಂ

ಆರ್ಥಿಕ ಆಯಾಮಗಳಿಂದಾಗಿ ತರಿಭೂಮಿ ಇಂದು ಹೆಚ್ಚು ಅಪಾಯದಲ್ಲಿದೆ

ಶ್ರೀಗುರು
Published 1 ಫೆಬ್ರುವರಿ 2022, 19:27 IST
Last Updated 1 ಫೆಬ್ರುವರಿ 2022, 19:27 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ವಿಶ್ವದ ಕಾಲು ಭಾಗದಷ್ಟು ಸಸ್ಯ ಹಾಗೂ ಜೀವಿಪ್ರಭೇದಗಳಿಗೆ ನೆಲೆನೀಡಿ ನಿತ್ಯ ಹರಿದ್ವರ್ಣ ಕಾಡುಗಳಿಗಿಂತ ಹೆಚ್ಚಿನ ಜೀವಸಂಕುಲವನ್ನು ಸಲಹುವ ತರಿಭೂಮಿ (ಜೌಗು) ಪ್ರದೇಶಗಳನ್ನು ಜೀವವೈವಿಧ್ಯದ ಮ್ಯೂಸಿಯಂ ಎನ್ನುತ್ತೇವೆ. ವ್ಯವಸಾಯ, ಮೀನುಕೃಷಿ, ಪ್ರವಾಸೋದ್ಯಮ, ಶಕ್ತಿ ಉತ್ಪಾದನೆ, ನೀರು ಶೇಖರಣೆ– ಸರಬರಾಜು, ಜಲಸಾರಿಗೆ, ಮನರಂಜನೆಯಂತಹ ಅನೇಕ ಆರ್ಥಿಕ ಆಯಾಮಗಳಿಂದಾಗಿ ಹಿಂದೆಂದಿಗಿಂತ ಈ ಪ್ರದೇಶ ಇಂದು ಹೆಚ್ಚು ಅಪಾಯದಲ್ಲಿದೆ.

ಅರಣ್ಯಗಳಿಗಿಂತ ಹೆಚ್ಚಿನ ಸಂಕಷ್ಟಎದುರಿಸುತ್ತಿರುವ ಪ್ರಪಂಚದ 21 ಲಕ್ಷ ಚದರ ಕಿ.ಮೀ.ನಷ್ಟು ವ್ಯಾಪ್ತಿಯ ಜೌಗು ಪ್ರದೇಶಗಳನ್ನು ಉಳಿಸಲೆಂದೇ ಮೀಸಲಾದ ‘ವಿಶ್ವ ತರಿಭೂಮಿ ದಿನ’ (ಫೆ. 2) ಈ ಸಲ ‘ವೆಟ್‍ಲ್ಯಾಂಡ್ಸ್ ಆ್ಯಕ್ಷನ್ ಫಾರ್ ಪೀಪಲ್ ಆ್ಯಂಡ್ ನೇಚರ್’ ಎಂಬ ಧ್ಯೇಯವಾಕ್ಯದೊಂದಿಗೆ ಮತ್ತೆ ಬಂದಿದೆ.

ಸದಾ ನೀರಿನಿಂದ ಹಸಿಯಾಗಿರುವ, ನೀರು ಮತ್ತು ನೆಲ ಎರಡನ್ನೂ ಒಳಗೊಂಡ ಭೂಪ್ರದೇಶವನ್ನು ಜೌಗು ಅಥವಾ ತರಿಭೂಮಿ ಎನ್ನುತ್ತೇವೆ. ಇದು ಭೂಮಿಯ ಶೇ 6.4ರಷ್ಟು ಭೂಪ್ರದೇಶವನ್ನು ಆವರಿಸಿಕೊಂಡಿದೆ. ಅಸಂಖ್ಯ ಜಲಚರ, ಸರೀಸೃಪ, ಕೀಟ, ಸ್ತನಿ, ಶಿಲೀಂಧ್ರಗಳಿಗೆ ಆಶ್ರಯ ನೀಡುವ ತರಿಭೂಮಿ ಆಯಾ ಭೂಪ್ರದೇಶಗಳ ನೀರಿನ ಚಕ್ರ, ವಾಯುಗುಣ, ಕಾಡಿನ ಸಂರಚನೆ ಮತ್ತು ಮಣ್ಣಿನ ವೈವಿಧ್ಯಕ್ಕೆ ಅನುಗುಣವಾಗಿ ರೂಪುಗೊಳ್ಳುತ್ತದೆ. ನೈಸರ್ಗಿಕ ತರಿಭೂಮಿಗಳು ಮಳೆ ಪ್ರವಾಹವನ್ನು ತಡೆದು, ನೀರಿಂಗಿಸಿ, ಅಂತರ್ಜಲ ಹೆಚ್ಚಿಸಿ, ಹೆಚ್ಚಿನ ನೀರನ್ನು ಶೇಖರಿಸಿ ಇಟ್ಟುಕೊಂಡು ನದಿಗಳಿಗೆ ನೀರು ಹರಿಸುತ್ತಾ ಮಣ್ಣು ಮತ್ತು ಪೋಷಕಾಂಶ ಸವಕಳಿಯನ್ನು ತಡೆಯುತ್ತವೆ.ಹೊಲ-ಗದ್ದೆಗಳಿಂದ ಹರಿದು ಬರುವ ಭಾರವಾದ ಲೋಹ, ಕೆಸರು, ಸಾರಜನಕ, ರಂಜಕಗಳನ್ನು ಸೋಸಿ ತೆಗೆದು ನೀರನ್ನು ಶುದ್ಧೀಕರಿಸುತ್ತವೆ.

ADVERTISEMENT

ಒಟ್ಟು ಐದು ಬಗೆಯ ಜೌಗು ಪ್ರದೇಶಗಳನ್ನು ಗುರುತಿಸಲಾಗಿದ್ದು ಮಾನವನಿರ್ಮಿತ ಗದ್ದೆ, ಸರೋವರ, ಜಲಾಶಯ, ಅಣೆಕಟ್ಟು, ನೀರು ನಿಲ್ಲುವ ಗಣಿಗುಂಡಿ, ತೋಡುಗಳನ್ನು ಕೃತಕ ತರಿಭೂಮಿ ಎನ್ನುತ್ತಾರೆ. ನೈಸರ್ಗಿಕವಾಗಿ ರೂಪುಗೊಂಡ ತರಿಭೂಮಿಗಳನ್ನು ‘ರಾಮಸರ್’ ತಾಣ ಅಥವಾ ‘ರಾಮ್‍ಸರ್ ಸೈಟ್’ ಎಂದು ಗುರುತಿಸುತ್ತಾರೆ. ತರಿಭೂಮಿಗಳನ್ನು ಉಳಿಸಲು 1971ರ ಫೆಬ್ರುವರಿ 2ರಂದು ಇರಾನ್‍ನ ಕ್ಯಾಸ್ಪಿಯನ್ ಸಮುದ್ರ ತೀರದ ‘ರಾಮ್‍ಸರ್’ನಲ್ಲಿ ಪ್ರಥಮ ಬಾರಿಗೆ ಒಪ್ಪಂದವೇರ್ಪಟ್ಟಿದ್ದರಿಂದ ಆ ಹೆಸರು ಬಂದಿದೆ.

ನಮ್ಮಲ್ಲಿರುವ ಅರವತ್ತೈದು ಸಾವಿರ ಕೃತಕ ಮತ್ತು ಎರಡು ಸಾವಿರದ ಇನ್ನೂರು ನೈಸರ್ಗಿಕ ಜೌಗು ಪ್ರದೇಶಗಳ ಪೈಕಿ 44 ಅನ್ನು ರಾಮ್‍ಸರ್ ತಾಣಗಳೆಂದು ಗುರುತಿಸಲಾಗಿದೆ. ಒಡಿಶಾದ ಚಿಲ್ಕಾ ಲೇಕ್, ಬಂಗಾಳದ ಸುಂದರ್‌ಬನ್, ಆಂಧ್ರಪ್ರದೇಶದ ಕೊಲ್ಲೇರು, ಕೇರಳದ ಅಷ್ಟಮುಡಿ ಸರೋವರ ಪ್ರಮುಖವಾದವು. ಸಂರಕ್ಷಣೆ ಮತ್ತು ನಿರ್ವಹಣೆಗಾಗಿ ‘ಕೇಂದ್ರೀಯ ಜೌಗು ಭೂಮಿ ನಿಯಂತ್ರಣ ಪ್ರಾಧಿಕಾರ’ ರಚಿಸಲಾಗಿದ್ದು, ತರಿಭೂಮಿ ನಾಶ, ಒತ್ತುವರಿ ಮತ್ತು ದುರ್ಬಳಕೆ ತಡೆಯಲು ಹಲವು ಕಾನೂನುಗಳಿವೆ.

ದೇಶದ 20 ಕೋಟಿ ಜನ ಏಳೂವರೆ ಸಾವಿರ ಕಿ.ಮೀ. ಉದ್ದವಿರುವ ಕರಾವಳಿ ತೀರದಲ್ಲಿ ವಾಸವಿದ್ದು, ವಿವಿಧ ಬಗೆಯ ತರಿಭೂಮಿಯ ಮೇಲೆ ಅವಲಂಬಿತರಾಗಿದ್ದಾರೆ. ನೈಸರ್ಗಿಕ ತರಿಭೂಮಿಯಲ್ಲಿ ಮೀನು, ಸೀಗಡಿ ಕೃಷಿ ನಡೆದರೆ ಮಾನವ ನಿರ್ಮಿತ ಕೃತಕ ತರಿಭೂಮಿ ಪ್ರದೇಶವು ಪ್ರವಾಸೋದ್ಯಮ, ಕೆರೆ, ಉಪ್ಪುಕಟ್ಟೆಗಳಿಗೆ ಬಳಕೆಯಾಗುತ್ತಿದೆ. ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಮೀಕ್ಷೆಯ ಪ್ರಕಾರ, ಗಂಗಾನದಿ ಪಾತ್ರದ ಮುಕ್ಕಾಲು ಭಾಗ ಸಿಹಿ ನೀರಿನ ಜೌಗುಪ್ರದೇಶಗಳು ಕಳೆದ ಐವತ್ತು ವರ್ಷಗಳಲ್ಲಿ ನಾಶಗೊಂಡಿವೆ. ಭೂ ಸವಕಳಿ, ಹೂಳು, ನೀರಾವರಿ, ಬೇಟೆ, ಮಾನವ ವಾಸ್ತವ್ಯ, ಮೀನು-ಸೀಗಡಿ ಕೃಷಿ, ಜಲಾನಯನ ಪ್ರದೇಶದ ಹಸಿರು ನಾಶ, ಕಾಲುವೆ, ವಸತಿ ಸಮುಚ್ಚಯ, ಬಡಾವಣೆ, ಆಟದ ಮೈದಾನ, ಉದ್ಯಾನ ನಿರ್ಮಾಣ, ಕಾರ್ಖಾನೆ ಮಾಲಿನ್ಯಗಳಿಂದಾಗಿ ಅರ್ಧದಷ್ಟು ತರಿಭೂಮಿ ಪ್ರದೇಶಗಳು ಶಾಶ್ವತವಾಗಿ ಕಣ್ಮರೆಯಾಗಿವೆ.

ಕರ್ನಾಟಕದಲ್ಲಿ 682 ಜೌಗು ಪ್ರದೇಶಗಳನ್ನು ಗುರುತಿಸಲಾಗಿದ್ದು, ಅವು ಬಹುಜಾತಿಯ ಮೀನು ಮತ್ತು ವಲಸೆ ಹಕ್ಕಿಗಳ ತಾಣಗಳೆನಿಸಿವೆ. ಹನ್ನೊಂದಕ್ಕೆ ರಾಮ್‌ಸರ್‌ ಸೈಟ್ ಮಾನ್ಯತೆ ನೀಡುವಂತೆ ಸಂಬಂಧಿಸಿದ ಪ್ರಾಧಿಕಾರಕ್ಕೆ ಬೇಡಿಕೆ ಸಲ್ಲಿಸಿ ವರ್ಷಗಳೇ ಆಗಿವೆ. ಕರ್ನಾಟಕ ತನ್ನ ಜಲಮೂಲಗಳನ್ನು ರಕ್ಷಿಸುವಲ್ಲಿ ವಿಫಲವಾಗಿದೆ ಎಂದು ನೀತಿ ಆಯೋಗ ವರದಿ ನೀಡಿದೆ. ಬೆಂಗಳೂರಿನ ಹೊರವಲಯದ ಬಹುಸಂಖ್ಯೆಯ ಕೆರೆಗಳು ಘನತ್ಯಾಜ್ಯ ಮತ್ತು ಕೊಳಚೆ ನೀರಿನಿಂದ ಶುದ್ಧೀಕರಿಸಲಾರದಷ್ಟು ಹಾಳಾಗಿವೆ.

ತರಿಭೂಮಿಗಳು ನೀರಿಗೆ ಸಂಬಂಧಿಸಿದ ಏಳೆಂಟು ಇಲಾಖೆಗಳ ವ್ಯಾಪ್ತಿಗೆ ಬರುತ್ತವೆ. ನೋಡಿಕೊಳ್ಳಲು ಸಾವಿರಾರು ಅಧಿಕಾರಿಗಳು, ನೂರಾರು ಜನಪ್ರತಿನಿಧಿಗಳು ಇದ್ದಾರೆ. ಜಾಗೃತಿ ಮೂಡಿಸಲು ಬೇಕಾದ ದೊಡ್ಡ ಪಡೆಯೇ ಇದೆ. ವಾರ್ತಾ ಇಲಾಖೆಯೂ ಇದೆ. ಇಂದಿನವರೆಗೆ ತರಿಭೂಮಿ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಒಂದೇ ಒಂದು ಜಾಹೀರಾತು ಪತ್ರಿಕೆಗಳಲ್ಲಿ ಪ್ರಕಟವಾಗಿಲ್ಲ. ಕಾರ್ಯಕ್ರಮದ ಮಾಹಿತಿ ಇಲ್ಲ.

ಕನಿಷ್ಠಪಕ್ಷ ತರಿಭೂಮಿ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಪಠ್ಯಪುಸ್ತಕದ ಕೊನೆಯಲ್ಲಿ ರಾಷ್ಟ್ರಗೀತೆ ಮತ್ತು ನಾಡಗೀತೆಯ ಜೊತೆ ತರಿಭೂಮಿಯ ಮಹತ್ವದ ಬಗ್ಗೆ ಮಾಹಿತಿ ಹಾಕಬೇಕಿದೆ. ಯಾರಿಗೆ ಹೇಳುವುದು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.