ADVERTISEMENT

ಸಂಗತ| ಮೀಥೇನ್ ಮಾಲಿನ್ಯ ಮರೆಯುವಂತಿಲ್ಲ

ಇನ್ನು ಐವತ್ತು ವರ್ಷಗಳಲ್ಲಿ ಕಾರ್ಬನ್‌ಮುಕ್ತ ದೇಶವಾಗಲು ಇಂಗಾಲದ ಜೊತೆ ಮೀಥೇನ್‍ ಅನ್ನೂ ನಿಯಂತ್ರಿಸಬೇಕು

ಗುರುರಾಜ್ ಎಸ್.ದಾವಣಗೆರೆ
Published 31 ಮಾರ್ಚ್ 2022, 19:31 IST
Last Updated 31 ಮಾರ್ಚ್ 2022, 19:31 IST
.
.   

ಭೂಮಿಕ್ಷೇಮದ ಕುರಿತು ಕಳೆದ ವರ್ಷದ ಕೊನೆಯಲ್ಲಿ ಜರುಗಿದ ಗ್ಲಾಸ್ಗೊ ಶೃಂಗಸಭೆ ಯಾವುದೇ ತುರ್ತು ಸಕಾರಾತ್ಮಕ ನಿರ್ಣಯಗಳಿಲ್ಲದೆ ವೈಫಲ್ಯ ಕಂಡಿತಾದರೂ ಮೀಥೇನ್ ಹೊರಸೂಸುವಿಕೆಯ ಬಗ್ಗೆ 105 ದೇಶಗಳು ಕೈಗೊಂಡ ಸ್ವಯಂನಿರ್ಧಾರ ಮತ್ತು ಮಾಡಿದ ಪ್ರತಿಜ್ಞೆಯು ಭೂಮಿ ಬಿಸಿ ನಿಯಂತ್ರಣಕ್ಕೆ ವರವಾಗಿ ಪರಿಣಮಿಸಲಿವೆ.

ಈ ಹಿಂದೆ ನಡೆದ ವಾಯುಗುಣ ವೈಪರೀತ್ಯ ನಿಯಂತ್ರಣದ ವಿಶ್ವಸಭೆಗಳಲ್ಲೆಲ್ಲ ಇಂಗಾಲದ ಹೊರಸೂಸುವಿಕೆಯ ನಿಯಂತ್ರಣದ ಕುರಿತು ಚರ್ಚೆಯಾಗುತ್ತಿತ್ತು. ಅಚ್ಚರಿ ಎಂಬಂತೆ, ಗ್ಲಾಸ್ಗೊ ಸಭೆಯಲ್ಲಿ ಪ್ರಥಮ ಬಾರಿಗೆ ಮೀಥೇನ್ ಹೊರಸೂಸುವಿಕೆ ಕುರಿತು ಚರ್ಚೆಗಳಾಗಿವೆ. ನೂರಕ್ಕೂ ಹೆಚ್ಚು ದೇಶಗಳು 2030ರ ವೇಳೆಗೆ ಮೀಥೇನ್ ಹೊರಸೂಸುವಿಕೆಯ ಪ್ರಮಾಣವನ್ನು ಶೇ 30ರಷ್ಟು ಕಡಿಮೆ ಮಾಡುವುದಾಗಿಸ್ವಯಂಪ್ರೇರಿತವಾಗಿ ಪ್ರತಿಜ್ಞೆ ಮಾಡಿವೆ. ಇನ್ನು ಐವತ್ತು ವರ್ಷಗಳಲ್ಲಿ ಇಂಗಾಲ ಹೊರಸೂಸುವಿಕೆಯ ಪ್ರಮಾಣವನ್ನು ಶೂನ್ಯಕ್ಕೆ ಇಳಿಸುತ್ತೇವೆ ಎಂಬ ಒಪ್ಪಂದಕ್ಕೆ ಸಹಿ ಹಾಕಿರುವ ದೇಶಗಳು ಅದಕ್ಕಿಂತ ಮುಂಚೆ, ಶೀಘ್ರವಾಗಿ ಮಾಡಬಹುದಾದ ಕೆಲಸಗಳಲ್ಲಿ ಮೀಥೇನ್ ನಿಯಂತ್ರಣ ಅತ್ಯಂತ ಮುಖ್ಯವಾದುದು ಎಂದಿವೆ ಮತ್ತು ನಿಯಂತ್ರಿಸುವ ಆತ್ಮವಿಶ್ವಾಸವನ್ನು ಪ್ರದರ್ಶಿಸಿವೆ.

ಮೀಥೇನ್ ಅನಿಲವನ್ನು ‘ಶಾರ್ಟ್‌ಲಿವ್ಡ್‌ ಪೊಲ್ಯೂಟೆಂಟ್’ ಎಂದು ತಜ್ಞರು ಕರೆದಿದ್ದಾರೆ. ನೈಸರ್ಗಿಕವಾಗಿ ತರಿಭೂಮಿ, ಕೆರೆ ಕುಂಟೆ, ಜೊಂಡು ತುಂಬಿದ ಹೊಂಡ, ಹಸಿರು ಮೇಯುವ ಪ್ರಾಣಿ ಹಾಗೂ ಗೆದ್ದಲುಗಳಿಂದ, ತೈಲ- ಅನಿಲ ಬಾವಿ, ಕೃಷಿ ಮೂಲ ಗಳಿಂದ ಮೀಥೇನ್ ಹೊಮ್ಮುತ್ತದೆ. ವಾತಾವರಣ ದಲ್ಲಿರುವ ಮೀಥೇನ್‍ನ ಆಯಸ್ಸು ಕೇವಲ 12 ವರ್ಷ. ಇಂಗಾಲದ ಡೈ ಆಕ್ಸೈಡ್ (ಇಂಡೈ) 200 ವರ್ಷಗಳವರೆಗೂ ನಮ್ಮ ನಡುವೆಯೇ ಇದ್ದು ತೊಂದರೆ ಕೊಡುತ್ತದೆ. ಇಂಡೈಗಿಂತ ಮೀಥೇನ್ 84 ಪಟ್ಟು ಹೆಚ್ಚು ಭೂಮಿ ಬಿಸಿಯನ್ನು ಹಿಡಿದಿಡುವುದರಿಂದ ಅದನ್ನು ‘ಸೂಪರ್ ವಾರ್ಮರ್’ ಎಂದು ಕರೆಯುತ್ತಾರೆ.

ADVERTISEMENT

ಕೈಗಾರಿಕಾ ಕ್ರಾಂತಿಯ ನಂತರ ಹೆಚ್ಚಿರುವ ಭೂಮಿ ಬಿಸಿಯಲ್ಲಿ ಮೀಥೇನ್‍ನ ಪಾತ್ರ ಕಾಲು ಭಾಗಕ್ಕಿಂತ ಹೆಚ್ಚು. ಮೀಥೇನ್‍ನ ನಿಯಂತ್ರಣವಾದರೆ ಮುಂದಿನ 25 ವರ್ಷಗಳ ಕಾಲ ವಾಯುಗುಣ ವೈಪರೀತ್ಯಗಳು ಹತೋಟಿಯಲ್ಲಿರಲಿವೆ ಎಂದಿದ್ದಾರೆ ಯುಎನ್‍ಇಪಿ (ಯುನೈಟೆಡ್ ನೇಷನ್ಸ್ ಎನ್ವಿರಾನ್‍ಮೆಂಟ್ ಪ್ರೋಗ್ರಾಂ) ಕಾರ್ಯಕಾರಿ ನಿರ್ದೇಶಕ ಇಂಗರ್ ಆ್ಯಂಡರ್‍ಸನ್.

ನಿಯಂತ್ರಣಕ್ಕೆ ಮನಸ್ಸು ಮಾಡಿರುವ ದೇಶಗಳು ಯೋಜಿಸಿದಂತೆ ಕೆಲಸ ಮಾಡಿದರೆ 2050ರ ವೇಳೆಗೆ, ಮೀಥೇನ್‍ನಿಂದಾಗಿ ಏರುತ್ತಿರುವ ಗೋಳದ ಬಿಸಿಯನ್ನು 0.2 ಡಿಗ್ರಿ ಸೆಲ್ಸಿಯಸ್‍ನಷ್ಟು ಕಡಿಮೆ ಮಾಡಬಹುದು. ಉಷ್ಣತೆಯನ್ನು 1.5 ಡಿಗ್ರಿ ಸೆಲ್ಸಿಯಸ್‍ನಷ್ಟು ಅಥವಾ ಅದರ ಕೆಳಗಿರುವಂತೆ ತಡೆಯಲು ಮೀಥೇನ್ ವಾತಾವರಣ ಸೇರುವುದನ್ನು ತಡೆಯಲೇಬೇಕು ಎಂದಿದ್ದಾರೆ ಯುರೋಪಿನ ತಜ್ಞರು.

ಈಗ ಹೆಚ್ಚು ಮೀಥೇನ್‍ ಅನ್ನು ವಾತಾವರಣಕ್ಕೆ ಚೆಲ್ಲುವ ಬ್ರೆಜಿಲ್, ನೈಜೀರಿಯ, ಕೆನಡಾ ಮತ್ತು ಆಫ್ರಿಕಾದ ಅರ್ಧದಷ್ಟು ದೇಶಗಳು, ನಿಯಂತ್ರಣ ಒಪ್ಪಂದಕ್ಕೆ ಸಹಿ ಮಾಡಿವೆ. ಆದರೆ ವಿಶ್ವದ ಒಟ್ಟು ಮೀಥೇನ್‍ನಲ್ಲಿ ಶೇ 35ರಷ್ಟನ್ನು ಹೊಮ್ಮಿಸುತ್ತಿರುವ ಭಾರತ, ಚೀನಾ ಮತ್ತು ರಷ್ಯಾ ಒಪ್ಪಂದಕ್ಕೆ ಸಹಿ ಹಾಕಿಲ್ಲ. ಶುದ್ಧ ಗಾಳಿ ಮತ್ತು ವಾತಾವರಣಕ್ಕಾಗಿ 2012ರಲ್ಲೇ ಪ್ರತ್ಯೇಕ ಒಕ್ಕೂಟ ಸ್ಥಾಪಿಸಿಕೊಂಡಿರುವ ಅಮೆರಿಕ, ಮೆಕ್ಸಿಕೊ, ಘಾನಾ, ಕೆನಡಾ, ಬಾಂಗ್ಲಾದೇಶ ಮತ್ತು ಸ್ವೀಡನ್‍ ಈ ದೇಶಗಳು ಯುಎನ್‍ಇಪಿ ಜೊತೆಗೂಡಿ ಮಾಡಿರುವ ಅಧ್ಯಯನದಂತೆ, ಮಾನವ ಚಟುವಟಿಕೆಯಿಂದ ಹೊರಸೂಸುವ ಮೀಥೇನ್‍ ಅನ್ನು ಶೇ 45ರಷ್ಟು ನಿಯಂತ್ರಿಸಿದರೆ, ಭೂಮಿಬಿಸಿಯ ಏರಿಕೆಯನ್ನು ನಿಗದಿ ಮಾಡಿಕೊಂಡ ಸಂಖ್ಯೆಯ ಕೆಳಗೇ ಇರಿಸಬಹುದು. ಯುಎನ್‌ಇಪಿಯ ‘ವರ್ಲ್ಡ್‌ ಮೀಥೇನ್ ಅಸೆಸ್ಮೆಂಟ್’ ಪ್ರಕಾರ, ಕಲ್ಲಿದ್ದಲು ಗಣಿ, ತೈಲ ಮತ್ತು ಅನಿಲ ಬಾವಿಗಳಿಂದ ಸೋರುವ ಮೀಥೇನ್‍ ಅನ್ನು ಹಿಡಿದಿಟ್ಟುಕೊಂಡರೆ ಭಾರಿ ಪ್ರಮಾಣದ ಮೀಥೇನ್ ಮಾಲಿನ್ಯವನ್ನು ತಡೆಯಬಹುದು.

ರೈತರು ಅನುಸರಿಸುತ್ತಿರುವ ವ್ಯವಸಾಯ ಪದ್ಧತಿಗಳಿಂದ ಭೂಮಿ ಮತ್ತಷ್ಟು ಬಿಸಿಯಾಗುತ್ತಿದೆ ಮತ್ತು ದೇಶಗಳು ಸುಸ್ಥಿರ ಕೃಷಿಯಿಂದ ದೂರ ಸಾಗುತ್ತಿವೆ. ಕೃಷಿ, ಡೇರಿ ಮತ್ತು ಜಾನುವಾರು ಮಾಂಸದ ಘಟಕಗಳಿಂದ ವಾರ್ಷಿಕ ಶೇ 26ರಷ್ಟು ಶಾಖವರ್ಧಕ ಅನಿಲಗಳು ವಾತಾವರಣ ಸೇರುತ್ತಿವೆ. ಕೃಷಿಯಿಂದ ಹೊಮ್ಮುವ ಶಾಖವರ್ಧಕ ಅನಿಲಗಳನ್ನು ನಿಯಂತ್ರಿಸಿ ನೈಸರ್ಗಿಕ ಪ್ರದೇಶಗಳನ್ನು ಕಾಪಾಡಲು ವಿಶ್ವದಾದ್ಯಂತ ಇರುವ ರೈತರ ನೆರವಿಗೆ ನಿಲ್ಲಲೇಬೇಕಾದ ಅನಿವಾರ್ಯ ಇದೆ.

1992ರ ರಿಯೊ ಶೃಂಗಸಭೆಯಲ್ಲಿ ನೀತಿ ನಿರೂಪಕರೆಲ್ಲ, ಮುಂದುವರಿದ ರಾಷ್ಟ್ರಗಳು ತಮ್ಮ ಕಾರ್ಬನ್ ಹೊರಸೂಸುವಿಕೆ ಕಡಿತ ಮಾಡಿ, ಅಭಿವೃದ್ಧಿ ಬಯಸುತ್ತಿರುವ ದೇಶಗಳಿಗೆ ಅನುವು ಮಾಡಿಕೊಡಬೇಕು ಎಂದು ಸರ್ವಾನುಮತದಿಂದ ತೀರ್ಮಾನಿಸಿದರು. ಅಭಿವೃದ್ಧಿ ಸಾಧಿಸುತ್ತಲೇ ಭೂಮಿ ಬಿಸಿ ನಿಯಂತ್ರಿಸುವ ತಂತ್ರಜ್ಞಾನವನ್ನು ಮತ್ತು ಅದಕ್ಕೆ ಬೇಕಾದ ಬಂಡವಾಳವನ್ನೂ ಒದಗಿಸಬೇಕೆಂದು ನಿಕ್ಕಿಯಾಯಿತು. ಆದರೆ ಬೇಕಾದ ತಂತ್ರಜ್ಞಾನವಾಗಲೀ ಬಂಡವಾಳವಾಗಲೀ ನಮ್ಮಂಥ ದೇಶಗಳಿಗೆ ಸಿಗಲೇ ಇಲ್ಲ. ಇನ್ನು ಐವತ್ತು ವರ್ಷಗಳಲ್ಲಿ ಕಾರ್ಬನ್‌ಮುಕ್ತ ದೇಶವಾಗಲು ಇಂಗಾಲದ ಜೊತೆ ಮೀಥೇನ್‍ ಅನ್ನೂ ನಿಯಂತ್ರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.