ADVERTISEMENT

ಸಂಗತ: ಶಿಕ್ಷಣದಲ್ಲಿ ಮುಂದೆ, ಉದ್ಯೋಗದಲ್ಲಿ ಹಿಂದೆ

ಅತಿ ಹೆಚ್ಚಿನ ಸಂಖ್ಯೆಯಲ್ಲಿ ಉನ್ನತ ಶಿಕ್ಷಣ ಪಡೆಯುವ ಮಹಿಳೆಯರು ಉದ್ಯೋಗ ಕ್ಷೇತ್ರದಲ್ಲಿ ಮಾತ್ರ ಹಿಂದೆ ಇರುವುದನ್ನು ಅಧ್ಯಯನ ವರದಿ ಎತ್ತಿಹಿಡಿದಿದೆ

ಜೀವಾ ಜ್ಞಾನಜ್ಯೋತಿ
Published 3 ಡಿಸೆಂಬರ್ 2020, 21:00 IST
Last Updated 3 ಡಿಸೆಂಬರ್ 2020, 21:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇತ್ತೀಚಿನ ವರ್ಷಗಳಲ್ಲಿ ಉನ್ನತ ಶಿಕ್ಷಣದ ಹೆಚ್ಚು ಕಡಿಮೆ ಎಲ್ಲಾ ಜ್ಞಾನಶಾಖೆಗಳಲ್ಲಿ, ದಾಖಲಾಗುವ ವಿದ್ಯಾರ್ಥಿಗಳಿಗಿಂತ ವಿದ್ಯಾರ್ಥಿನಿಯರ ಸಂಖ್ಯೆಯೇ ಹೆಚ್ಚಾಗುತ್ತಿದೆ. ಇದೊಂದು ಉತ್ತಮ ಬೆಳವಣಿಗೆಯೇನೋ ಸರಿ. ಆದರೆ, ಇವರಲ್ಲಿ ಹೆಚ್ಚಿನವರು ಉದ್ಯೋಗ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ತದ್ವಿರುದ್ಧವಾಗಿ, ಉದ್ಯೋಗಸ್ಥ ಮಹಿಳೆಯರ ಸಂಖ್ಯೆ ಕುಸಿಯುತ್ತಿದೆಯೆಂದು ಅಧ್ಯಯನ ವರದಿಗಳು ಹೇಳುತ್ತಿವೆ.

ಉದಾರೀಕರಣ, ಮುಕ್ತ ಆರ್ಥಿಕ ವ್ಯವಸ್ಥೆಯ ಈ ಕಾಲದಲ್ಲಿ, ಕಡಿಮೆಯಾಗುತ್ತಿರುವ ಉದ್ಯೋಗಸ್ಥ ಮಹಿಳೆಯರ ಸಂಖ್ಯೆ ಆತಂಕಕಾರಿ. ಶಿಕ್ಷಣದಲ್ಲಿ ಸಮಾನತೆ ಸಾಧಿಸುತ್ತಿರುವ ಹೆಣ್ಣುಮಕ್ಕಳ ವೃತ್ತಿ ಜೀವನದ ಮಹತ್ವಾಕಾಂಕ್ಷೆಯ ಅಭಿವ್ಯಕ್ತಿಗೆ ಅಡ್ಡಿಗಳಾವುವು? ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಅಧ್ಯಯನ ವರದಿ ಪ್ರಕಾರ, ಪ್ರಸ್ತುತ ಜಾಗತಿಕ ಮಟ್ಟದಲ್ಲಿ, ಪುರುಷರಲ್ಲಿ ಶೇ 75ರಷ್ಟು ಮಂದಿ ಉದ್ಯೋಗಸ್ಥರಾಗಿದ್ದರೆ, ಮಹಿಳೆಯರಲ್ಲಿ ಕೇವಲ ಶೇ 49ರಷ್ಟು ಮಂದಿ ‘ಸಂಬಳ’ ಪಡೆಯುವ ಉದ್ಯೋಗದಲ್ಲಿದ್ದಾರೆ. ಇನ್ನು ಭಾರತದ ಮಟ್ಟಿಗೆ ಹೇಳುವುದಾದರೆ, ಪ್ರಸ್ತುತ ಕೇವಲ ಶೇ 27ರಷ್ಟು ಮಂದಿ ಉದ್ಯೋಗಸ್ಥರಾಗಿದ್ದಾರೆ. ಅದರಲ್ಲೂ ಹೆಚ್ಚಿನವರು ಅಸಂಘಟಿತ ವಲಯದಲ್ಲಿ ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದಾರೆ.

ಮಹಿಳೆಯ ಅಂತಃಸತ್ವ ಮೂಲತಃ ಎಲ್ಲಿದೆ, ಸಂಸಾರ ನಿರ್ವಹಣೆಯಲ್ಲಿಯೋ ಅಥವಾ ಉದ್ಯೋಗಸ್ಥಳಾಗಿ ಸ್ವಾವಲಂಬಿಯಾಗುವುದರಲ್ಲಿಯೋ ಎಂಬ ಪ್ರಶ್ನೆಗೆ ಉತ್ತರ ಹುಡುಕುವ ದಿಸೆಯಲ್ಲಿ ಸಂಘಟನೆ ಮಾಡಿದ ಜಾಗತಿಕ ಮಟ್ಟದ ಇನ್ನೊಂದು ಸಮೀಕ್ಷೆಯಲ್ಲಿ, ಶೇ 70ರಷ್ಟು ಮಹಿಳೆಯರು, ಸಂಬಳ ಕೊಡುವ ಯಾವುದಾದರೊಂದು ಉದ್ಯೋಗ ತಮ್ಮ ಆದ್ಯತೆ ಎನ್ನುತ್ತಾರೆ. ಈ ವೈಯಕ್ತಿಕ ಆದ್ಯತೆ ಮತ್ತು ಆಕಾಂಕ್ಷೆಗಳನ್ನು ಹತ್ತಿಕ್ಕುವ ಅಂಶಗಳೆಂದರೆ, ಪುರುಷಪ್ರಧಾನ ಸಾಮಾಜಿಕ ಮತ್ತು ಸಾಂಸ್ಕೃತಿಕ ನಿಲುವುಗಳು ಹಾಗೂ ಸಾಂಪ್ರದಾಯಿಕ ಕೌಟುಂಬಿಕ ಜವಾಬ್ದಾರಿಗಳು.

ADVERTISEMENT

ಸಾಮಾನ್ಯವಾಗಿ ಮಹಿಳೆ ಉದ್ಯೋಗಸ್ಥಳಾಗುವುದು, ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ. ಒಂದು ವೇಳೆ, ಗಂಡ ಒಳ್ಳೆಯ ಉದ್ಯೋಗದಲ್ಲಿದ್ದು, ಕುಟುಂಬದ ಆರ್ಥಿಕ ನಿರ್ವಹಣೆಯ ಜವಾಬ್ದಾರಿ ತೆಗೆದುಕೊಂಡಿದ್ದಲ್ಲಿ, ಹೆಂಡತಿ ಕೆಲಸ ಹುಡುಕುವ ಗೋಜಿಗೆ ಹೋಗುವುದಿಲ್ಲ. ಅದೇ ರೀತಿ, ಆರ್ಥಿಕ ಸಂಕಷ್ಟವಿದ್ದಲ್ಲಿ, ಹೆಂಡತಿ ಅನಿವಾರ್ಯವಾಗಿ ಕೆಲಸ ಹಿಡಿಯಬೇಕಾಗುತ್ತದೆ.

ಆಶ್ಚರ್ಯವೆಂದರೆ, ಮಹಿಳಾ ಸಬಲೀಕರಣದ ಈ ಕಾಲಘಟ್ಟದಲ್ಲಿಯೂ ಜಾಗತಿಕ ಮಟ್ಟದಲ್ಲಿ ಶೇ 20ರಷ್ಟು ಪುರುಷರು ಮತ್ತು ಶೇ 14ರಷ್ಟು ಮಹಿಳೆಯರು, ಮಹಿಳೆ ಹೊರಗೆ ದುಡಿಯಬಾರದೆನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ವಿಶ್ವಬ್ಯಾಂಕ್‌ನ 2018ರ ವರದಿ ಪ್ರಕಾರ, ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಸ್ಥ ಮಹಿಳೆಯರ ಸಂಖ್ಯೆ ಶೇ 11.5ರಷ್ಟು ಕುಸಿತ ಕಂಡಿದೆ ಮತ್ತು ನಗರ ಪ್ರದೇಶಗಳಲ್ಲಿ ಶೇ 5ರಷ್ಟು ಕಡಿಮೆಯಾಗಿದೆ. ಪದವೀಧರೆಯರಲ್ಲಿ ಗ್ರಾಮೀಣ ಪ್ರದೇಶದಲ್ಲಿ ಶೇ 67ರಷ್ಟು ಮಂದಿ ಹಾಗೂ ನಗರಗಳಲ್ಲಿ ಶೇ 68.3ರಷ್ಟು ಮಂದಿ ಉದ್ಯೋಗ ಹೊಂದಿಲ್ಲ.

ಸದ್ಯಕ್ಕೆ, ಮಹಿಳೆಯರು ಪುರುಷರಷ್ಟೇ ಸಮನಾಗಿ ಶಿಕ್ಷಣ ಪಡೆದರೂ ಅಕಸ್ಮಾತ್ ಉದ್ಯೋಗಕ್ಕೆ ಸೇರಿದರೂ ಒಂದು ಹಂತದ ಮೇಲೆ ಕೌಟುಂಬಿಕ ಜವಾಬ್ದಾರಿಯು ಉದ್ಯೋಗ ತ್ಯಜಿಸುವಂತೆ ಮಾಡುತ್ತದೆ. ಹಾಲುಣಿಸಲು ಮತ್ತು ಚಿಕ್ಕ ಮಕ್ಕಳನ್ನು ನೋಡಿಕೊಳ್ಳಲು ತಾಯಂದಿರಿಗೆ ಕೆಲಸದ ಸ್ಥಳದಲ್ಲಿ ಪೂರಕ ವ್ಯವಸ್ಥೆ ಮಾಡಿಕೊಡುವುದರಿಂದ, ಈ ಸಮಸ್ಯೆಯನ್ನು ಸ್ವಲ್ಪಮಟ್ಟಿಗೆ ಸರಿದೂಗಿಸಬಹುದು.

ಸಾಮಾನ್ಯವಾಗಿ ಎಲ್ಲರೂ ಒಪ್ಪಿಕೊಳ್ಳಬಹುದಾದ ಅಂಶವೆಂದರೆ, ಮಹಿಳೆಯರು ಕೆಲಸದ ಸ್ಥಳದಲ್ಲಿ ಹೆಚ್ಚು ಕಾರ್ಯಕ್ಷಮತೆ ತೋರುತ್ತಾರೆ, ಪುರುಷರಂತೆ ಹೆಚ್ಚು ಚಹಾ ವಿರಾಮಗಳನ್ನು ತೆಗೆದುಕೊಂಡು ಹರಟೆಯಲ್ಲಿ ಸಮಯ ವ್ಯರ್ಥಗೊಳಿಸುವುದಿಲ್ಲ ಎಂಬುದು. ಆದರೂ, ಅವರನ್ನು ಶಕ್ತಗೊಳಿಸಲು ಮೂಲ ಸೌಕರ್ಯ ಒದಗಿಸುವ ಮನಸ್ಸು ಮಾಡುತ್ತಿಲ್ಲ. ಚಿಕ್ಕಮಕ್ಕಳ ಆರೈಕೆ ಜವಾಬ್ದಾರಿ ಇರುವ ಮಹಿಳೆಯರನ್ನು ನೇಮಿಸಿಕೊಳ್ಳುವುದಕ್ಕೇ ಹಿಂದೇಟು ಹಾಕುತ್ತಾರೆ. ಇದರಿಂದಾಗಿ, ಮಹಿಳೆಯರು ತಮ್ಮ ವಿದ್ಯಾಭ್ಯಾಸದ ಹಿನ್ನೆಲೆ ಬದಿಗಿಟ್ಟು, ಸಾಂಪ್ರದಾಯಿಕ ಮಹಿಳಾಧಾರಿತ ಸೌಂದರ್ಯ ಮತ್ತು ಆರೋಗ್ಯ ರಕ್ಷಣಾ ಕ್ಷೇತ್ರಗಳಲ್ಲಿ ಅಥವಾ ಅರೆಕಾಲಿಕ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ. ಉದಾಹರಣೆಗೆ, ಮನೋವಿಜ್ಞಾನ ಅಥವಾ ಸಮಾಜಶಾಸ್ತ್ರ ಪದವೀಧರ ಪುರುಷರು ಮನಃಶಾಸ್ತ್ರಜ್ಞರಾದರೆ, ಮಹಿಳೆಯರು ಸಾಮಾಜಿಕ ಕಾರ್ಯಕರ್ತರು ಅಥವಾ ಸಲಹೆಗಾರರಾಗಿ ಉಳಿಯುತ್ತಾರೆ. ಅದರಂತೆಯೇ, ಉನ್ನತ ಶಿಕ್ಷಣದ ಶಿಕ್ಷಕ ವೃತ್ತಿಯಲ್ಲಿ ಪುರುಷರ ಸಂಖ್ಯೆ ಹೆಚ್ಚಿದ್ದರೆ, ಶಾಲಾ ಮಟ್ಟದಲ್ಲಿ ಶಿಕ್ಷಕಿಯರೇ ಅತ್ಯಧಿಕ. ಈ ಎರಡು ಸ್ತರದ ವೇತನ ತಾರತಮ್ಯವನ್ನು ಗಮನಿಸಬೇಕು.

ಮಹಿಳೆಯರು ಪುರುಷರಿಗೆ ಸಮಾನವಾಗಿ ಉದ್ಯೋಗಸ್ಥರಾದರೆ, 2025ರ ವೇಳೆಗೆ ಭಾರತದ ಜಿಡಿಪಿಯಲ್ಲಿ ಶೇ 60ರಷ್ಟು ಹೆಚ್ಚಳ ಕಾಣಬಹುದೆಂದು, ಮೆಕಿನ್ಸೆ ಗ್ಲೋಬಲ್ ಇನ್‌ಸ್ಟಿಟ್ಯೂಟ್ 2015ರಲ್ಲಿ ನಡೆಸಿದ ಅಧ್ಯಯನ ಹೇಳುತ್ತದೆ. ಪ್ರಸ್ತುತ, ಮಹಿಳೆಯರು ದೇಶದ ಜಿಡಿಪಿಗೆ ಕೇವಲ ಶೇ 17ರಷ್ಟು ಕೊಡುಗೆ ನೀಡುತ್ತಿದ್ದಾರೆ. ಇದು ಜಾಗತಿಕ ಸರಾಸರಿಯ ಶೇ 37ಕ್ಕಿಂತ ಕಡಿಮೆಯಿದೆ.

ಗಾಂಧೀಜಿ ಹೇಳಿದಂತೆ, ಪ್ರಪಂಚದಲ್ಲಿ ನಾವು ಕಾಣಬಯಸುವ ಬದಲಾವಣೆ ನಮ್ಮಿಂದಲೇ ಆರಂಭವಾಗಬೇಕಿದೆ. ಇದಕ್ಕಾಗಿ, ನಮ್ಮ ಸಾಮಾಜಿಕ ಮತ್ತು ಸಾಂಪ್ರದಾಯಿಕ ನಿಲುವುಗಳು ವಿಶಾಲ ವ್ಯಾಪ್ತಿ ಪಡೆದುಕೊಳ್ಳಬೇಕಾದ ಅಗತ್ಯವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.