ADVERTISEMENT

ಬಡ್ಡಿ ದರ ಕಡಿತ ಪರಿಹಾರವಲ್ಲ

ಡಾ.ಜಿ.ವಿ.ಜೋಶಿ
Published 9 ಜೂನ್ 2019, 18:30 IST
Last Updated 9 ಜೂನ್ 2019, 18:30 IST
   

ಕೇಂದ್ರೀಯ ಸಾಂಖ್ಯಿಕ ಕಚೇರಿಯ (ಸಿಎಸ್ಒ) ವರದಿ ತಿಳಿಸಿರುವಂತೆ, 2018-19ನೇ ವಿತ್ತೀಯ ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ದರ ಕೇವಲ ಶೇ 6.8ರಷ್ಟಾಗಿ, ಐದು ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಇದು ಆತಂಕಕಾರಿ ವಿದ್ಯಮಾನ. ನಿರುದ್ಯೋಗದ ಪ್ರಮಾಣ ಶೇ 6.1ರಷ್ಟಾಗಿ (ಕಳೆದ 45 ವರ್ಷಗಳಲ್ಲಿ ಅತಿಹೆಚ್ಚು) ಒಳಗೊಳ್ಳುವಿಕೆಯುಳ್ಳ ಆರ್ಥಿಕ ಅಭಿವೃದ್ಧಿಯ ಗುರಿ ಈಡೇರುವುದಾದರೂ ಹೇಗೆ ಎನ್ನುವ ಪ್ರಶ್ನೆ ದೇಶದ ಮುಂದಿದೆ. ಈಗಿರುವ ಸಮಸ್ಯೆಗಳಿಗೆ ಪರಿಹಾರೋಪಾಯ ಕಂಡುಕೊಳ್ಳಲು ರೂಪುಗೊಂಡ ಎರಡೂ ಕ್ಯಾಬಿನೆಟ್ ಸಮಿತಿಗಳಿಗೆ ಪ್ರಧಾನಿಯೇ ಅಧ್ಯಕ್ಷರಾಗಿರುವುದು, ಸಮಸ್ಯೆ ಎಷ್ಟು ತೀವ್ರವಾಗಿದೆ ಎಂಬುದಕ್ಕೆ ಸ್ಪಷ್ಟ ನಿದರ್ಶನ.

ವಿಶ್ವಬ್ಯಾಂಕಿನ ಜಾಗತಿಕ ಆರ್ಥಿಕತೆಯ ಭವಿಷ್ಯದ ವರದಿ ಇತ್ತೀಚೆಗೆ ಪ್ರಕಟವಾಯಿತು. ಮುಂದಿನ ಮೂರು ವರ್ಷಗಳಲ್ಲಿ ಭಾರತದ ವೃದ್ಧಿ ದರ ಶೇ 7.5ರಷ್ಟು ಇರಲಿದೆ ಎಂದು ಈ ವರದಿ ಅಂದಾಜಿಸಿ ಆಶಾವಾದ ವ್ಯಕ್ತಪಡಿಸಿದೆ. ಹಿಂದಿನ ಹಲವು ಅನುಭವಗಳು ತೋರಿಸುವಂತೆ, ಭಾರತದಲ್ಲಿ ಶೇ 7.5ರ ಅಂದಾಜಿಗಿಂತ ಕಡಿಮೆ ವೃದ್ಧಿ ದರ ಆಗಲಿದೆ ಎಂದು ಇದೇ ವಿಶ್ವಬ್ಯಾಂಕ್ ವರದಿ ಮುಂದಿನ ದಿನಗಳಲ್ಲಿ ತಿಳಿಸಬಹುದು! ಸದ್ಯ ಏಷ್ಯಾ ಖಂಡದಲ್ಲಿ ಮೂರನೆಯ ಅತಿದೊಡ್ಡ ಆರ್ಥಿಕತೆಯಲ್ಲಿ ಗೋಚರಿಸುತ್ತಿರುವ ಮಂದಗತಿಯು ನೆರೆಯ ರಾಷ್ಟ್ರಗಳ ಆರ್ಥಿಕತೆಗಳ ಮೇಲೂ ಅಹಿತಕಾರಿ ಪರಿಣಾಮ ಬೀರಬಹುದೆಂಬ ಶಂಕೆ ಇದೆ. ಪರಿಸ್ಥಿತಿ ಸುಧಾರಿಸದಿದ್ದರೆ ದೇಶದಲ್ಲಿ ವ್ಯಾಪಕವಾದ ಆರ್ಥಿಕ ಹಿಂಜರಿತ ಕಂಡುಬರುವ ಸಂಭವ ಇದೆ. ಹಾಗಾಗಿ ಈಗಿನ ಮಂದಗತಿಯ ಸ್ಥಿತಿಯಿಂದ ಹೊರಬರುವ ತುರ್ತು ಎದುರಾಗಿದೆ.

ಕೇಂದ್ರ ಸರ್ಕಾರದೊಂದಿಗೆ ಕೈಜೋಡಿಸಲು ಮುಂದಾದ ರಿಸರ್ವ್ ಬ್ಯಾಂಕ್‌, ತನ್ನ ನೀತಿ ದರಗಳನ್ನು ಜೂನ್ 6 ರಂದು ಕಡಿತಗೊಳಿಸಿದ್ದು ಮಹತ್ವದ ಬೆಳವಣಿಗೆಯಾಗಿದೆ. ರೆಪೊ ದರ ಮತ್ತು ರಿವರ್ಸ್ ರೆಪೊ ದರ ಅನುಕ್ರಮವಾಗಿ ಶೇ 5.75 ಮತ್ತು ಶೇ 5.50ಕ್ಕೆ ಇಳಿಕೆಯಾಗಿವೆ. ಇದರಿಂದ, ಹೊಸ ಮನೆ ನಿರ್ಮಿಸಲು ಅಥವಾ ಖರೀದಿಸಲು ಯೋಚಿಸುತ್ತಿರುವ ಗ್ರಾಹಕರಿಗೆ ಬಡ್ಡಿ ಭಾರ ಕಡಿಮೆಯಾಗಲಿದೆ. ಜತೆಗೆ ಗ್ರಾಹಕರ ವೈಯಕ್ತಿಕ ಸಾಲ ಮತ್ತು ವಾಹನ ಖರೀದಿ ಸಾಲವೂ ಅಗ್ಗವಾಗಲಿದೆ. ಇದರಿಂದ ಅರ್ಥವ್ಯವಸ್ಥೆಯಲ್ಲಿ ವಾಣಿಜ್ಯ ಬ್ಯಾಂಕ್‌ಗಳ ಸಾಲ ನೀಡಿಕೆ ಪ್ರಮಾಣದ ಏರಿಕೆಯಿಂದ ಹಣದ ಹರಿವು ಜಾಸ್ತಿಯಾಗಿ ಸರಕು–ಸೇವೆಗಳಿಗೆ ಬೇಡಿಕೆ ಹೆಚ್ಚಬಹುದು, ಮಾರುಕಟ್ಟೆಗೆ ಚೇತರಿಕೆ ಬರಬಹುದು, ಅಭಿವೃದ್ಧಿಯ ವೇಗಕ್ಕೆ ಚಾಲನೆ ಜತೆಗೆ ಉದ್ಯೋಗ ಸೃಷ್ಟಿ ಆಗಬಹುದೆನ್ನುವುದು ಕೇಂದ್ರದ ಲೆಕ್ಕಾಚಾರ.

ADVERTISEMENT

ಆರ್‌ಬಿಐ ಕ್ರಮ ಸಮಂಜಸವಾದರೂ ನಿರೀಕ್ಷೆಗಳ ಭರಾಟೆಯಲ್ಲಿ ಬಡ್ಡಿ ದರದ ನೀತಿಯ ಇತಿ-ಮಿತಿಗಳನ್ನು ಕಡೆಗಣಿಸುವಂತಿಲ್ಲ. ಕೇಂದ್ರ ವಿತ್ತ ಸಚಿವಾಲಯವು ರಿಸರ್ವ್ ಬ್ಯಾಂಕಿನ ಬಡ್ಡಿ ದರದಲ್ಲಿ ಆಗಾಗ ಕಡಿತವನ್ನು ಬಯಸಿದ್ದರಿಂದ ಉದ್ಭವಿಸಿದ ಘರ್ಷಣೆಯ ವಾತಾವರಣದಲ್ಲಿ (2016), ತಮ್ಮ ಬ್ಯಾಂಕ್ ತೀರ್ಪುಗಾರನೇ ಹೊರತು ಆಟಗಾರನಲ್ಲ ಎಂದುಆರ್‌ಬಿಐನ ಆಗಿನ ಗವರ್ನರ್ ರಘುರಾಂ ರಾಜನ್‌ ಮಾರ್ಮಿಕವಾಗಿ ಹೇಳಿದ್ದರು. ಈಗ ಆಗಿರುವ ಆರ್‌ಬಿಐನ ಬಡ್ಡಿ ದರದ ಬದಲಾವಣೆಯು ಆರ್ಥಿಕ ಮಂದಗತಿಗೆ ದೊಡ್ಡ ಪರಿಹಾರ ಅಲ್ಲವೆಂದು ಹೇಳುವಾಗ ರಾಜನ್ ಹೇಳಿಕೆ ನೆನಪಾಗುತ್ತದೆ.

ಈ ವರ್ಷದ ಜನವರಿಯಿಂದ ಈಚೆಗೆ ಸತತ ಮೂರು ಬಾರಿ ಒಟ್ಟು ಶೇ 0.75ರಷ್ಟು ಬಡ್ಡಿ ದರ ಕಡಿತ ಮಾಡಿ ರಿಸರ್ವ್ ಬ್ಯಾಂಕ್ ತಟಸ್ಥ ಹಣಕಾಸು ನೀತಿಯನ್ನು ಬಿಟ್ಟು ಹೊಂದಾಣಿಕೆಯ ಹಣಕಾಸು ನೀತಿಯ ಪಥದಲ್ಲಿ ಸಾಗಿದೆ. ಗವರ್ನರ್ ಶಕ್ತಿಕಾಂತ ದಾಸ್ ಅಧ್ಯಕ್ಷತೆಯಲ್ಲಿ ಹಣಕಾಸು ನೀತಿಯ ಸಮಿತಿ ತೆಗೆದುಕೊಂಡ ನಿರ್ಣಯದ ಪ್ರಕಾರ, ಇದೇ ಅವಧಿಯಲ್ಲಾದ ಹಿಂದಿನ ಎರಡು ಬಡ್ಡಿ ದರದ ಕಡಿತಗಳು ನಿರೀಕ್ಷಿತ ಫಲ ನೀಡಿಲ್ಲವೆಂದೇ ಅರ್ಥ. ಈ ಹಿಂದೆ ಅನೇಕ ಸಲ ವಾಣಿಜ್ಯ ಬ್ಯಾಂಕುಗಳು ಬಡ್ಡಿ ದರ ಕಡಿತದ ಲಾಭವನ್ನು ಗ್ರಾಹಕರಿಗೆ ಪೂರ್ಣ ಪ್ರಮಾಣದಲ್ಲಿ ವರ್ಗಾಯಿಸಲು ಹಿಂದೇಟು ಹಾಕಿವೆ. ಕೇಂದ್ರದಿಂದಲೇ ಆರ್‌ಬಿಐನ ಸ್ವಾಯತ್ತತೆಯನ್ನು ಮೊಟಕುಗೊಳಿಸುವ ಪ್ರಯತ್ನ ಆಗಾಗ ನಡೆದಿದ್ದರಿಂದ, ಸರ್ಕಾರಿ ಬ್ಯಾಂಕುಗಳು ಕೂಡ ಆರ್‌ಬಿಐ ನಾಯಕತ್ವವನ್ನು ಒಪ್ಪಿಕೊಂಡಿಲ್ಲ. ಹೀಗಾಗಿ ಬಡ್ಡಿ ದರದ ನೀತಿಗೆ ಒಂದಿಷ್ಟು ಆಪತ್ತು ಒದಗಿದೆ.

2018-19ನೇ ಸಾಲಿನಲ್ಲಿ ಬೆಳವಣಿಗೆ ದರ ಕುಸಿತಕ್ಕೆ ಅಸಂಘಟಿತ ವಲಯವೆಂದು ಪರಿಗಣಿಸಲಾದ ಕೃಷಿ ರಂಗದ ತೀರಾ ಮಂದಗತಿಯ ಬೆಳವಣಿಗೆ ದರ (ಶೇ 2.9) ದೊಡ್ಡ ಕಾರಣವಾಗಿದೆ. ಜಟಿಲ ಸಮಸ್ಯೆಗಳ ಗೂಡಾದ ಕೃಷಿ ರಂಗಕ್ಕೆ ಬಡ್ಡಿ ದರ ಕಡಿತದಿಂದ ಹೇಳಿಕೊಳ್ಳುವಂತಹ ಲಾಭವೇನೂ ಆಗುವುದಿಲ್ಲ. ಉದ್ಯೋಗ ಒದಗಿಸುವ ಎಷ್ಟೋ ಸಣ್ಣ ಕೈಗಾರಿಕೆಗಳು ಖಾಸಗಿ ಮೂಲಗಳಿಂದ ಸಾಲ ಪಡೆದು ಶೋಷಣೆಗೆ ಒಳಗಾಗಿವೆ. ಈ ಕೈಗಾರಿಕೆಗಳಿಗೆ ರೆಪೊ ದರದಲ್ಲಾದ ಕಡಿತದಿಂದ ಕಿಂಚಿತ್ತಾದರೂ ಹಿತಾನುಭವವಾದರೆ ಅದೇ ದೊಡ್ಡದು! ಬಡ್ಡಿ ದರ ನೀತಿ ರಿಸರ್ವ್ ಬ್ಯಾಂಕಿನ ಒಟ್ಟಾರೆ ಹಣಕಾಸು ನೀತಿಯ ಒಂದು ಭಾಗ. ಹಣಕಾಸು ನೀತಿಯ ಮೇಲೆ ಒತ್ತಡ ಹೇರದಂತೆ, ಮೋದಿ ನೇತೃತ್ವದ ಸರ್ಕಾರವೇ ರಚಿಸಿದ 15ನೇ ಹಣಕಾಸು ಆಯೋಗದ ಅಧ್ಯಕ್ಷ ಎನ್.ಕೆ.ಸಿಂಗ್ಕೆಲವೇ ದಿನಗಳ ಹಿಂದೆ ನೀಡಿದ ಎಚ್ಚರಿಕೆಗೆ ಬಹಳ ಮಹತ್ವವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.