ADVERTISEMENT

ಚುರುಮುರಿ | ಪುತ್ರಾರ್ಜಿತ

ಮಣ್ಣೆ ರಾಜು
Published 17 ಮಾರ್ಚ್ 2020, 16:03 IST
Last Updated 17 ಮಾರ್ಚ್ 2020, 16:03 IST
ಚುರುಮುರಿ
ಚುರುಮುರಿ   

‘ಶಾಸಕರೇ, ಯಾಕೆ ಕೋಪದಲ್ಲಿದ್ದೀರಿ?’

‘ಸರ್ಕಾರದಲ್ಲಿ ನನ್ನ ಕೆಲ್ಸ-ಕಾರ್ಯಗಳು ಆಗುತ್ತಿಲ್ಲ. ಸಿ.ಎಂ ವರ ಕೊಟ್ಟರೂ ಸೂಪರ್ ಸಿ.ಎಂ ಕೊಡ್ತಿಲ್ಲ. ಆಡಳಿತದಲ್ಲಿ ಸಿ.ಎಂ ಪುತ್ರನ ಹಸ್ತಕ್ಷೇಪ ಸರಿಯಲ್ಲ’.

‘ಆಡಳಿತ ಭಾರ ಹೊರಲು ಸಿ.ಎಂಗೆ ಪುತ್ರ ಹೆಗಲು ಕೊಟ್ಟು ನೆರವಾಗುವುದು ತಪ್ಪಾ?’

ADVERTISEMENT

‘ಹೊರೆ ಹೊರಲು ಮೂವರು ಡಿಸಿಎಂಗಳಿದ್ದಾರಲ್ಲ. ಬೇಕಾದ್ರೆ ಇನ್ನೂ ಮೂವರು ಡಿಸಿಎಂಗಳನ್ನು ಮಾಡಲಿ, ಸೂಪರ್ ಸಿ.ಎಂ ಬೇಡ ಅಂತ ಹೈಕಮಾಂಡ್‍ಗೆ ದೂರು ಕೊಡ್ತೀವಿ’ ಶಾಸಕರಿಗೆ ಸಿಟ್ಟು.

‘ಶಾಸಕರೇ, ನಿಮ್ಮ ಕ್ಷೇತ್ರದಲ್ಲಿ ನಿಮ್ಮ ಮಗನೇ ಸೂಪರ್ ಶಾಸಕ ಅಂತೆ. ಕ್ಷೇತ್ರದ ಆಡಳಿತದಲ್ಲಿ ಪುತ್ರ ಕೈ ಆಡಿಸುತ್ತಿದ್ದಾನೆ ಅಂತ ಕಾರ್ಯಕರ್ತರು ಕುದಿಯುತ್ತಿದ್ದಾರಲ್ಲ’.

‘ಮಗ ರಾಜಕಾರಣ ಕಲಿತು ಭವಿಷ್ಯ ರೂಪಿಸಿಕೊಳ್ಳುವುದು ಬೇಡ್ವೆ? ತಂದೆ ಕೆಲಸದಲ್ಲಿ ಮಗ ಕೈ ಜೋಡಿಸುವುದು ತಪ್ಪೇ?’ ಶಾಸಕರಿಗೆ ಮತ್ತೊಮ್ಮೆ ಸಿಟ್ಟು.

‘ಕ್ಷೇತ್ರದ ಅಧಿಕಾರಿಗಳ ವರ್ಗಾವಣೆ, ಕಾಮಗಾರಿ ವಿತರಣೆ, ಕಾರ್ಯಕರ್ತರ ಕಡೆಗಣನೆ ನಿಮ್ಮ ಮಗನಿಂದ ಆಗ್ತಿದೆ ಎಂಬ ವ್ಯಾಪಕ ದೂರುಗಳು ಇವೆಯಲ್ಲ’.

‘ಸುಳ್ಳು, ಇದೆಲ್ಲಾ ನನಗಾಗದವರ ಕಿತಾಪತಿ, ಅಪಪ್ರಚಾರ’ ಶಾಸಕರು ಟವೆಲ್ ಒದರಿದರು.

‘ನಿಮಗೆ ವಯಸ್ಸಾಗಿದೆ, ರಾಜಕಾರಣ ಸಾಕು, ಮೊಮ್ಮಕ್ಕಳನ್ನು ಆಟ ಆಡಿಸಿಕೊಂಡು ಮನೆಯಲ್ಲಿರಿ, ಮುಂದಿನ ಎಲೆಕ್ಷನ್ನಿಗೆ ಕ್ಷೇತ್ರ ನನಗೆ ಬಿಟ್ಟುಕೊಡಿ ಅಂತ ನಿಮ್ಮ ಮಗ ಒತ್ತಡ ಹಾಕುತ್ತಿರುವುದೂ ಸುಳ್ಳೆ?’

‘ಆ ವಿಚಾರ ನಿಮಗೂ ಗೊತ್ತಾಯ್ತೆ?! ಅದು ನಮ್ಮ ಫ್ಯಾಮಿಲಿ ಮ್ಯಾಟ್ರು’.

‘ಇಷ್ಟು ವರ್ಷ ದುಡಿದದ್ದು ಸಾಕು, ಮಗನಿಗೆ ಕ್ಷೇತ್ರ ಬಿಟ್ಟುಕೊಟ್ಟು ತೆಪ್ಪಗಿರಿ. ಬೇಕಾದ್ರೆ ನೀವು ಬೇರೆ ಕ್ಷೇತ್ರ ಹುಡುಕಿಕೊಳ್ಳಿ. ಸಾಯುವುದರೊಳಗೆ ಮಗ ಶಾಸಕ ಆಗೋದನ್ನು ನೋಡಬೇಕು ಅಂತ ನಿಮ್ಮ ಹೆಂಡ್ತಿ ಆಸೆಪಡುತ್ತಿದ್ದಾರಂತಲ್ಲ ಪಾಪ!’

‘ಹೌದುರೀ, ಮಗ ಅಂತ ತೊಡೆ ಮೇಲೆ ಕೂರಿಸಿಕೊಂಡೆ, ಅವನು ಈಗ ತಲೆ ಮೇಲೆ ಕೂತುಬಿಟ್ಟಿದ್ದಾನೆ. ಏನೂ ಮಾಡೊಕ್ಕಾಗೊಲ್ಲ. ಆಸ್ತಿ ಪಿತ್ರಾರ್ಜಿತ, ಅಧಿಕಾರ ಪುತ್ರಾರ್ಜಿತ...’ ಸಂಕಟಪಟ್ಟರು ಶಾಸಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.