ADVERTISEMENT

ಜೀವನ ಸಾಫಲ್ಯಕ್ಕಿದೆ ಅಸಂಖ್ಯ ಅವಕಾಶ

ಚನ್ನು ಅ.ಹಿರೇಮಠ ರಾಣಿಬೆನ್ನೂರು
Published 23 ಏಪ್ರಿಲ್ 2019, 20:00 IST
Last Updated 23 ಏಪ್ರಿಲ್ 2019, 20:00 IST
ಸಂಗತ
ಸಂಗತ   

ಪಿಯು ಫಲಿತಾಂಶ ಪ್ರಕಟವಾಗಿದೆ. ಯಥಾಪ್ರಕಾರ ‘ವಿದ್ಯಾರ್ಥಿನಿಯರ ಮೇಲುಗೈ’ ಎಂಬ ಸಂಗತಿ ಅಚ್ಚರಿಯಲ್ಲದಿದ್ದರೂ, ಏಕೆ ಹೀಗೆ ಎಂಬ ಪ್ರಶ್ನೆಯನ್ನಂತೂ ಉಳಿಸಿದೆ. ಇತ್ತೀಚಿನ ದಿನಗಳಲ್ಲಿ ಕಡೆಗಣಿಸಲ್ಪಟ್ಟಿರುವ ಕಲಾ ವಿಭಾಗದ ಮೊದಲ ಸ್ಥಾನಗಳಲ್ಲಿ ಹೆಚ್ಚಿನವರು ಬಾಲಕಿಯರೇ ಇದ್ದಾರೆ. ಅದರಲ್ಲೂ ಕಲಾ ವಿಭಾಗದಲ್ಲಿ, ಅತ್ಯಂತ ಹಿಂದುಳಿದ, ಮೂಲಸೌಕರ್ಯಗಳ ಕೊರತೆಯಿರುವ, ಕೆಂಡದಂಥ ಬಿಸಿಲಿನಿಂದ ಕಂಗೆಡುತ್ತಿರುವ ಕೊಟ್ಟೂರು ಪಟ್ಟಣದ ‘ಇಂದು ಪಿಯು ಕಾಲೇಜ್’ ಸತತ ಕೆಲ ವರ್ಷಗಳಿಂದ ಅತ್ಯುತ್ತಮ ಸಾಧನೆ ತೋರುತ್ತಿರುವುದು ಸೋಜಿಗದ ಸಂಗತಿ. ಈ ವರ್ಷದ ಕಲಾ ವಿಭಾಗದ ಮೊದಲಿಗರೆಲ್ಲರೂ ಬಡತನದಲ್ಲಿದ್ದರೂ ಪೋಷಕರಿಗೆ ಹೊರೆಯಾಗದೆ, ವಿದ್ಯಾರ್ಥಿ ದೆಸೆಯಲ್ಲಿಯೇ ತಮ್ಮ ಕಾಲ ಮೇಲೆ ತಾವು ನಿಂತು, ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಒಂದೆಡೆ ಹೀಗೆ ವಿದ್ಯಾರ್ಥಿಗಳ ಸಾಧನೆಗೆ ಸವಲತ್ತುಗಳು ಸಾಧನಗಳಲ್ಲ ಎಂಬುದನ್ನು ಈ ಸಮಾಜವು ಸಮ್ಮತಿಸುತ್ತಲೇ, ಮತ್ತೊಂದೆಡೆ ವಿಜ್ಞಾನ ವಿಭಾಗವೇ ಸರ್ವಶ್ರೇಷ್ಠ ಎಂಬಂತೆ ಕೆಲವು ಶಿಕ್ಷಣ ಸಂಸ್ಥೆಗಳು, ಪೋಷಕರು ವರ್ತಿಸುತ್ತಿರುವುದು ವಿಷಾದನೀಯ. ಅತ್ಯಾಧುನಿಕ ವಾತಾನುಕೂಲಿತ ಕಟ್ಟಡಗಳು, ನುರಿತ ಶಿಕ್ಷಕರು, ಉತ್ತಮ ವಸತಿ ವ್ಯವಸ್ಥೆ ಇತ್ಯಾದಿ ಉತ್ಪ್ರೇಕ್ಷಿತ, ವರ್ಣರಂಜಿತ ಜಾಹೀರಾತುಗಳನ್ನು ನೀಡಿ, ಪೋಷಕರನ್ನು ಆಕರ್ಷಿಸಿ, ಪಿಯುಗೇ ಲಕ್ಷಾಂತರ ರೂಪಾಯಿ ಶುಲ್ಕ ಪೀಕಿಸುವ ಶಿಕ್ಷಣ ಸಂಸ್ಥೆಗಳು ಕೊಟ್ಟೂರಿನಂತಹ ಕಾಲೇಜುಗಳನ್ನು ನೋಡಿ ಕಲಿಯುವ ಜರೂರತ್ತು ಇದೆ.

ಈ ‘ಸಾಹುಕಾರಿ’ ಪದ್ಧತಿಯ ಕಾಲೇಜುಗಳು ಕಡುಬಡವರನ್ನು ಮತ್ತು ದಡ್ಡ ವಿದ್ಯಾರ್ಥಿಗಳನ್ನು ಹತ್ತಿರಕ್ಕೆ ಬಿಟ್ಟುಕೊಳ್ಳುವುದಿಲ್ಲ. ಎಸ್‍ಎಸ್‍ಎಲ್‍ಸಿಯಲ್ಲಿ ಶೇ 90ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದವರಿಗಷ್ಟೇ ಪ್ರವೇಶ ನೀಡುತ್ತವೆ. ನಂತರ ಪಿಯುನಲ್ಲಿ ‘ನಮ್ಮ ಕಾಲೇಜು 100% ಫಲಿತಾಂಶ ಪಡೆದಿದೆ’ ಎಂದು ಬೀಗುತ್ತವೆ! ವಿಚಿತ್ರವೆಂದರೆ, ಇಂಥ ಪ್ರತಿಷ್ಠಿತ ಕಾಲೇಜುಗಳ ಶೇ 70ರಷ್ಟು ವಿದ್ಯಾರ್ಥಿಗಳು ಸಿಇಟಿ ಮತ್ತು ನೀಟ್‍ನಲ್ಲಿ ವಿಫಲರಾಗುತ್ತಾರೆ. ಕಲಿಕೆಯಲ್ಲಿ ಹಿಂದುಳಿದ, ಬಡತನದ ಬೇಗುದಿಯಲ್ಲಿ ಬೇಯುತ್ತಿರುವ, ಸಮಾಜದ ನಿರ್ಲಕ್ಷಿತ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿ, ಭಿನ್ನ ಸಾಧನೆ ತೋರಿದ ಪ್ರತಿಷ್ಠಿತ ಕಾಲೇಜುಗಳು ನಮ್ಮ ರಾಜ್ಯದಲ್ಲಿ ಎಷ್ಟಿವೆ?‌

ADVERTISEMENT

ಶಿಕ್ಷಣದ ಮೂಲ ಉದ್ದೇಶವೇ ಹಿಂದುಳಿದವರನ್ನು ಮುಂದೆ ತರುವುದು, ತಿಳಿದಿರದವರಿಗೆ ತಿಳಿಸಿಕೊಡುವುದು. ಹೀಗಿರುವಾಗ, ಶೈಕ್ಷಣಿಕವಾಗಿ ಮುಂದುವರಿದ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ನೀಡಿ, ‘ಬುದ್ಧಿವಂತ ಮಕ್ಕಳ ಶಾಲೆ’ ಎಂದು ಹಣೆಪಟ್ಟಿ ಹಚ್ಚಿಕೊಳ್ಳುವುದು ಎಷ್ಟು ಸಮರ್ಥನೀಯ? ಎ.ಸಿ. ತರಗತಿಗಳು, ಅಂದಚೆಂದದ ಬಸ್ಸುಗಳು, ದೊಡ್ಡ ದೊಡ್ಡ ಕಟ್ಟಡಗಳು ಮಾತ್ರವೇ ಉತ್ತಮ ಶಿಕ್ಷಣ ನೀಡುತ್ತವೆ ಎನ್ನುವ ಭ್ರಮೆಯಿಂದ ನಮ್ಮ ಪೋಷಕರು ಮೊದಲು ಹೊರಬರಬೇಕಿದೆ. ಯಾವ ಮಗುವಿಗೆ ಅರ್ಹತೆ, ಭವಿಷ್ಯದ ಬಗ್ಗೆ ಕಲ್ಪನೆ, ಓದಬೇಕೆಂಬ ಛಲ ಇರುತ್ತದೆಯೋ ಅಂಥ ಮಗು ಎಂತಹ ಶಾಲೆಯಲ್ಲಿಯಾದರೂ ಓದಿ, ಸಾಧನೆ ಮಾಡುತ್ತದೆ. ಸಾಧನೆಗೆ ಜಾತಿ-ವರ್ಗ-ಲಿಂಗಭೇದವೇ ಇಲ್ಲ.

ಪಿಯುಸಿ ಮುಗಿದ ನಂತರ ಮಕ್ಕಳಿಗೆ ತಮ್ಮ ಮುಂದಿನ ದಾರಿ ಯಾವುದು ಎಂದು ತೀರ್ಮಾನಿಸುವಷ್ಟು ಪ್ರಬುದ್ಧತೆ ಬಹುಶಃ ಬಂದಿರುತ್ತದೆ. ಹೀಗಾಗಿ, ಮಕ್ಕಳ ನಿರ್ಧಾರದಲ್ಲಿ ಪೋಷಕರು ಸೀಮಿತ ಪಾತ್ರ ವಹಿಸುವುದು ಒಳ್ಳೆಯದು. ಏಕೆಂದರೆ ನಮ್ಮಲ್ಲಿ ಬಹಳ ಜನರು ತಮ್ಮ ಮಕ್ಕಳು ಏನಾಗಬೇಕು ಎಂಬುದನ್ನು ಪಕ್ಕದ ಮನೆಯವರ, ಇಲ್ಲವೇ ಬಂಧುಮಿತ್ರರ ಮಕ್ಕಳನ್ನು ನೋಡಿ ನಿರ್ಧರಿಸುತ್ತಾರೆ! ಐಟಿಐ ಓದಿಸಬೇಕಾದ ವಿದ್ಯಾರ್ಥಿಯನ್ನು ಐಐಟಿಯಲ್ಲಿ ಓದಿಸುತ್ತೇನೆಂದು ‘ಹೋರಾಡುವ’ ಪೋಷಕರು ಮಕ್ಕಳ ಆಸಕ್ತಿ, ಅರ್ಹತೆ, ಗ್ರಹಣಶಕ್ತಿಯನ್ನು ಅವಲೋಕಿಸಿ, ವಿವೇಚನೆಯಿಂದ ತರ್ಕಿಸಿ, ಶೈಕ್ಷಣಿಕ ಯೋಜನೆಗಳ ಕುರಿತು ನಿರ್ಣಯ ಕೈಗೊಳ್ಳಬೇಕು.

ಬಹಳಷ್ಟು ವಿದ್ಯಾರ್ಥಿಗಳು ಪೋಷಕರ ಒತ್ತಾಸೆಗೆ ಕಟ್ಟುಬಿದ್ದು, ಯಾವುದೋ ಒಂದು ಕೋರ್ಸಿಗೆ ಸೇರಿಕೊಳ್ಳುತ್ತಾರೆ. ಬಳಿಕ, ಅದನ್ನು ಮುಂದುವರಿಸಲಾಗದೆ ಪರಿತಪಿಸುತ್ತಾರೆ. ಇದರಿಂದ ಪೋಷಕರಿಗಷ್ಟೇ ತೊಂದರೆಯಲ್ಲ, ಮಕ್ಕಳಿಗೆ ಸೂಕ್ತ ಸಮಯದಲ್ಲಿ ಸಮಂಜಸವಾದ ಮಾರ್ಗದರ್ಶನ ದೊರೆಯದಿದ್ದಲ್ಲಿ ಅವರು ಸಮಾಜಘಾತುಕ ಶಕ್ತಿಗಳಾಗಿ ಪರಿವರ್ತನೆಯಾಗುವ ಸಂಭವನೀಯತೆಯನ್ನೂ ತಳ್ಳಿಹಾಕುವಂತಿಲ್ಲ. ಇಲ್ಲವೇ ಆತ್ಮಹತ್ಯೆಯಂತಹ ಕಠಿಣ ನಿರ್ಧಾರಕ್ಕೆ ಕಾರಣವಾಗುವುದನ್ನೂ ಅಲಕ್ಷಿಸುವಂತಿಲ್ಲ.

ಪ್ರಸ್ತುತ ದಿನಮಾನಗಳಲ್ಲಿ ದುಡಿಮೆಯ ಅವಕಾಶಗಳಿಗೆ ಕೊರತೆಯಿಲ್ಲ. ಬದುಕು ಸಾಗಿಸಲು ಇಂಥದ್ದೇ ವಿದ್ಯೆ ಬೇಕು ಅಂತಿಲ್ಲ. ನನ್ನ ಸ್ನೇಹಿತನೊಬ್ಬ ಎಂ.ಡಿ. ಮಾಡಿ ವೈದ್ಯಕೀಯ ಕ್ಷೇತ್ರವನ್ನೇ ಬಿಟ್ಟು, ಯಾವು ಯಾವುದೋ ಕಂಪ್ಯೂಟರ್ ಕೋರ್ಸ್‌ಗಳನ್ನು ಮಾಡಿ, ಇಂದು ಆಸ್ಟ್ರೇಲಿಯಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾನೆ! ದುಡಿದು ಉಣ್ಣಲು ಬದ್ಧತೆ, ಪರಿಶ್ರಮ, ಆಸಕ್ತಿ ಇರಬೇಕು. ಆಗ ಯಾವ ಕ್ಷೇತ್ರದಲ್ಲಿಯಾದರೂ ಸಾಧನೆ ಮಾಡಲು ಸಾಧ್ಯವಿದೆ. ಹೀಗಾಗಿ, ಈಗ ಇಂಥದ್ದೇ ಕೋರ್ಸ್‌ಗೆ ಸೇರಿದರೆ ಮಾತ್ರ ಭವಿಷ್ಯವಿದೆ, ಅದು ಬಿಟ್ಟರೆ ಬೇರೆ ಬದುಕೇ ಇಲ್ಲ ಎನ್ನುವಂಥ ಸನ್ನಿವೇಶಗಳಿಲ್ಲದ ಕಾರಣ, ಯಾರೂ ನಿರಾಶರಾಗುವ ಪ್ರಮೇಯವೇ ಇಲ್ಲ. ಅಸಂಖ್ಯ ಅವಕಾಶಗಳು ಇಂದು ಲಭ್ಯವಿರುವುದರಿಂದ, ಜೀವನ ಸಾಫಲ್ಯ ನಿಸ್ಸಂದೇಹವಾಗಿ ಸಾಧ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.