ADVERTISEMENT

‘ಧರ್ಮ ಶ್ರೇಷ್ಠತೆ’ ಎಂಬ ಗುಮ್ಮ

ನಾವೇ ಶ್ರೇಷ್ಠರು ಎಂಬ ಭಾವನೆ ಅದೆಷ್ಟು ಸಂಬಂಧಗಳನ್ನು ಹರಿದು ಮುಕ್ಕಿಲ್ಲ?

ಸಂತೋಷ್ ಅನಂತಪುರ
Published 19 ಫೆಬ್ರುವರಿ 2020, 19:45 IST
Last Updated 19 ಫೆಬ್ರುವರಿ 2020, 19:45 IST
   

ನಂಬಿಕೆ- ವಿಶ್ವಾಸವೇ ಬದುಕಿನ ಜೀವಾಳ. ಭಾರತದಂತಹ ಬಹುಧರ್ಮೀಯರ ನಾಡಿನಲ್ಲಿ ನಂಬಿಕೆಗಳಿಗೆ ಬರವಿಲ್ಲ. ಆ ನಂಬಿಕೆಯು ತುಸು ಗಾಸಿಗೊಂಡರೂ ಬದುಕಿನ ಪಾಯ ಆಲುಗಾಡಲಾರಂಭಿಸುತ್ತದೆ. ಭಾರತೀಯ ಜಾತ್ಯತೀತ ಮನಸ್ಸೆನ್ನುವುದು ಸಹಿಷ್ಣುತೆಯಿಂದ ಕೂಡಿದ್ದಾಗಿದೆ. ‘ದಿವಾಲಿ’ಯಲ್ಲಿ ‘ಆಲಿ’ಯನ್ನೂ, ‘ರಾಂದಾನ್’ನಲ್ಲಿ ‘ರಾಮ’ನನ್ನೂ ಕಂಡ ನಾಡಿದು.

ಗಣೇಶ- ಗುರುನಾನಕನಿಗೆ ನಮಿಸುವ ಕೈಗಳು, ಬಾಗುವ ಶಿರಗಳು, ಅಹುರ, ಅಲ್ಲಾಹು ಮತ್ತು ಸಂತ ಆಂಟನಿಗೂ ನಮಿಸಿ ಬಾಗುತ್ತವೆ. ಭಾರತೀಯರಿಗೆ ವಿವಿಧ ಕೋನಗಳಿಂದ ಚಿಂತಿಸುವ, ತರ್ಕಿಸುವ, ಕಾರ್ಯಪ್ರವೃತ್ತರಾಗುವ ಅದ್ಭುತದ ಜೊತೆಗೆ, ವಿವಿಧ ಧರ್ಮಗಳಲ್ಲಿ ನಂಬಿಕೆಯನ್ನು ಇರಿಸಿಕೊಳ್ಳುವ ಅವಕಾಶ, ಸಾಮರ್ಥ್ಯವೂ ಇದೆ.

ಒಂದು ಧರ್ಮದಲ್ಲಿ ಹುಟ್ಟಿದ ಮಾತ್ರಕ್ಕೆ ಮತ್ತೊಂದು ಧರ್ಮವನ್ನು ನಂಬಬಾರದೆಂಬ ನಿಬಂಧನೆ ಇಲ್ಲಿಲ್ಲ. ಅಲ್ಲಾಹುವಿನಲ್ಲಿ ನಂಬಿಕೆ ಇಟ್ಟವನು ಬಾಲಾಜಿಯಲ್ಲೂ ಗಣೇಶನನ್ನು ಪೂಜಿಸುವವನು ಖ್ವಾಜಾ ಮೊಯಿನುದ್ದೀನ್ಚಿಸ್ತಿಯಲ್ಲೂ ನಂಬಿಕೆ ಇಡಬಹುದು. ಸಂತ ಆಂಟನಿಗೆ ಮೇಣದಬತ್ತಿ ಹಚ್ಚುವವನು ಕೃಷ್ಣನಿಗೆ ಆರತಿಯನ್ನೂ ಬೆಳಗಬಹುದು. ಇದು, ಸೌಹಾರ್ದದ ಬದುಕಿಗಿರುವ ದಾರಿಯಷ್ಟೆ. ಬೆಳೆದಂತೆಲ್ಲಾ ಚಿಂತನೆ ಬೆಳೆಯಬೇಕು ಮತ್ತು ತಾರ್ಕಿಕವಾಗಿ ಯೋಚಿಸುವತ್ತಲೂ ವಾಲಬೇಕು. ಒಂದಲ್ಲ ಒಂದು ವಿಧದಲ್ಲಿ ನಾವೆಲ್ಲರೂ ಚೌಕಟ್ಟು, ಸಂಪ್ರದಾಯಗಳಿಗೆ ಕಟ್ಟುಬಿದ್ದಿದ್ದೇವೆ ನಿಜ. ಇವು ನಮ್ಮನ್ನು ತಾರ್ಕಿಕವಾಗಿ ಬೆಳೆಸುವಂತಿರಬೇಕು. ಕಾಲಾನುಕಾಲಕ್ಕೆ ಒಂದಿಷ್ಟು ಬದಲಾವಣೆಯನ್ನೂ ತರಬೇಕು. ಚೌಕಟ್ಟುಗಳು ಬಂಧಿಸಿದರೆ, ಚೌಕಟ್ಟಿನಿಂದ ಹೊರಕ್ಕೆ ಚಾಚಿಕೊಳ್ಳುವಂತಹ ಶಕ್ತಿ ನಮ್ಮಲ್ಲಿರಬೇಕು. ಆರೋಗ್ಯಕರ ಬದಲಾವಣೆ ಆಗಬೇಕಾದುದು ಪ್ರಸಕ್ತ ಕಾಲಧರ್ಮದ ಅಗತ್ಯ.

ADVERTISEMENT

ಮೊದಲು ನಮ್ಮ ಸುತ್ತಮುತ್ತ ಎಲ್ಲ ವರ್ಗ, ಧರ್ಮದ ಜನರಿರುತ್ತಿದ್ದರು. ಕಷ್ಟ-ಸುಖಗಳಲ್ಲಿ ಒಬ್ಬರಿಗೊಬ್ಬರು ಭಾಗಿಯಾಗುತ್ತಿದ್ದರು. ಯಾರೂ ಮೇಲು-ಕೀಳೆಂದು, ಆ ಧರ್ಮ ಈ ಧರ್ಮವೆಂದು ನಂಬಿಕೊಂಡೇ ಬದುಕನ್ನು ಕಟ್ಟುತ್ತಿರಲಿಲ್ಲ. ನಮ್ಮ ಧರ್ಮಕಾರ್ಯಕ್ಕೆ ಅವರು ಹೊರೆ
ತರುವುದು, ಅವರ ಧರ್ಮಕಾರ್ಯಕ್ಕೆ ನಾವು ಕಾಣಿಕೆ ಹಾಕುವ ನಂಬಿಕೆ ಬಹಳ ನೈಜವಾಗಿ ನಡೆಯುತ್ತಿದ್ದವು.

ಭಾನುವಾರ ಚರ್ಚ್‌ಗೆ ಯಾಕೆ ಹೋಗಿಲ್ಲವೆಂದು ಉಸ್ಮಾನ್ಸಾಬರು ಯುವಕ ಕಾರ್ಲೋಸ್‌ನನ್ನು ಸಹಜವಾಗಿ ಕೇಳುತ್ತಿದ್ದರೆ, ಅಷ್ಟೇ ಸಹಜವಾಗಿ ರಾಮಣ್ಣ ರೈಗಳು ಹಮೀದ್‌ನನ್ನು ಶುಕ್ರವಾರ ಮಸೀದಿಗೆ ಯಾಕೆ ಹೋಗಲಿಲ್ಲವೆಂದು ಗದರಿಸುತ್ತಿದ್ದರು. ಫರ್ನಾಂಡಿಸರು ಅನಂತನಿಗೆ ನಿತ್ಯಪೂಜೆ ಮಾಡೆಂದು ಹೇಳಿ ಅವರವರ ನಂಬಿಕೆಯನ್ನು ಪರಸ್ಪರ ಪೋಷಿಸಿಕೊಂಡು ಬರುತ್ತಿದ್ದರು. ಶ್ರೇಷ್ಠತೆಯ ಅಮಲು ತಲೆಗೇರಿರಲಿಲ್ಲ. ಇಂದು ನಮ್ಮದೇ ಶ್ರೇಷ್ಠವೆಂಬ ಒಂದೇ ಒಂದು ಭಾವನೆಯು ಅದೆಷ್ಟು ಸಂಬಂಧಗಳನ್ನು ಹರಿದು ಮುಕ್ಕಿಲ್ಲ?

ಧರ್ಮವಿಂದು ವ್ಯಾಪಾರ, ಅಧಿಕಾರದ ಅಸ್ತ್ರವಾಗಿ ಪರಿವರ್ತನೆಗೊಂಡಿದೆ. ನದಿ- ಋಷಿ- ಸ್ತ್ರೀ ಮೂಲವನ್ನು ಹುಡುಕಬಾರದಂತೆ. ಆದರೆ, ಇಂದು ಮೂಲವನ್ನು ಕೆದಕಿ-ಬೆದಕಿ ಮೈ ಎಲ್ಲ ಕಜ್ಜಿಯಾಗಿಸಿಕೊಂಡು ನಾಳಿನ ಪೀಳಿಗೆಗೂ ಅದೇ ತುರಿಕೆಯನ್ನು ಅಂಟಿಸಿ ಹೋಗುವ ನಿಟ್ಟಿನಲ್ಲಿದ್ದೇವೆ! ಅಷ್ಟಕ್ಕೂ ಈ ‘ಧರ್ಮ ಶ್ರೇಷ್ಠತೆ’ಯೆಂಬ ಗುಮ್ಮವು ಬದುಕಿಗೆ ಪೂರಕವಾಗಿ, ಸಮಾಜಮುಖಿಯಾಗಿ ಸ್ಪಂದಿಸಿ, ಸಾಮರಸ್ಯವನ್ನು ಕೊಡುವಲ್ಲಿ ಸ್ಪರ್ಧೆಗಿಳಿದಿದ್ದರೆ ಮೆಚ್ಚಬಹುದಿತ್ತು. ಈ ಹೊತ್ತಿನ ನಮ್ಮ ನಡುವಿನ ಸಂಕುಚಿತ ಮನಸ್ಸುಗಳು ತಮ್ಮ ಅಸ್ತಿತ್ವಕ್ಕಾಗಿ ಧಾರ್ಮಿಕ ಅಫೀಮನ್ನು ನೆತ್ತಿಗೇರಿಸಿಕೊಂಡು ಸೃಷ್ಟಿಸುವ ಅವಾಂತರಗಳತ್ತ ನೋಡಿದರೆ ಅರ್ಥವಾದೀತು ‘ನಂಬಿಕೆ’ ಎಂಬ ಬೆಣ್ಣೆ ಅದು ಹೇಗೆ ಅನಾಯಾಸವಾಗಿ ಧರ್ಮರಾಜಕಾರಣ ಎಂಬ ತೋಳದ ಬಾಯಿಗೆ ಜಾರಿ ಬಿದ್ದಿದೆಯೆಂದು! ನಂಬಿಕೆಯನ್ನು ಅಸ್ತ್ರವಾಗಿಸಿಕೊಂಡೇ ರಾಜಕೀಯ ಚದುರಂಗವಾಡುವ ರಾಜಕಾರಣಿಗಳು ಒಂದೆಡೆಯಾದರೆ, ಅದಕ್ಕೆ ಧಾರ್ಮಿಕ ಬಣ್ಣ ಹಚ್ಚಿ ಭಯೋತ್ಪಾದನೆಯಂಥ ಕೃತ್ಯವನ್ನೆಸಗುವ ಮತಾಂಧರಿಂದಾಗಿ ನಂಬಿಕೆಯ ಅರ್ಥವೇ ಕಳೆದುಹೋಗಿದೆ.

ಅಧಿಕಾರದ ಹಪಹಪಿ ಯಾವ ಮಟ್ಟಕ್ಕೆ ಹೋಗುತ್ತದೆಂದರೆ, ಮತದಾರರೇ ಕಂಗಾಲಾಗಿಬಿಡಬೇಕು. ಧರ್ಮ-ಜಾತಿ, ಪೀಠ-ಮಠಗಳು ಪಕ್ಷವನ್ನು ಬೆಂಬಲಿಸುವುದು ಹಾಗೂ ವಿರೋಧಿಸುವುದು, ಪಕ್ಷಗಳು ಅವುಗಳ ಆಶ್ರಯ ಪಡೆಯುವುದು ಕೂಡ ಪ್ರಜಾಪ್ರಭುತ್ವಕ್ಕೆ ಮಾರಕ. ಗಣಿತಕ್ಕಿಂತಲೂ ಮಿಗಿಲಾದ ಕೆಮಿಸ್ಟ್ರಿಯೊಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಏರ್ಪಟ್ಟರೆ ದಾಳ-ಪ್ರತಿದಾಳ, ಜಾತಿ-ಮತ-ಧರ್ಮಗಳನ್ನೊಳಗೊಂಡ ವ್ಯೂಹಗಳು, ನಂಬಿಕೆಗಳೆಲ್ಲಾ ತಲೆಕೆಳಗಾಗಿಬಿಡುತ್ತವೆ. ಅಂತಹ ಅಚ್ಚರಿಯ ಕೆಮಿಸ್ಟ್ರಿಯು ಜರುಗಬೇಕಿದೆ.

ನಮ್ಮ ಸುತ್ತ ನಮ್ಮದೇ ಚಿತ್ತ ಹುತ್ತಗಟ್ಟಬೇಕು. ನಮ್ಮದೆನ್ನುವ ಸಮಗ್ರ ಅಸ್ಮಿತೆ, ಗೌರವ, ಹೆಮ್ಮೆ ನಮ್ಮೆಲ್ಲರದ್ದಾಗಬೇಕು. ಮನೆಯೊಳಗೇ ಗೆದ್ದಲು ಮನೆಮಾಡಿದೆ. ಅಕ್ಕ-ಪಕ್ಕ ಸಂಶಯದ ಹುತ್ತಗಳು. ಅಡಿಗಡಿಗೆ ಖೆಡ್ಡಾಗಳು. ಟೋಪಿ, ಶಿಲುಬೆ, ಕುಂಕುಮವನ್ನು ಕಂಡರೆ ಅದೇನೋ ತಳಮಳ. ನಂಬಿ ಕೆಟ್ಟೆವೇನೋ ಎಂಬ ಭಯ! ನಂಬಿಕೆ ಎಂಬುದು ಭಾವುಕತೆಯಿಂದ ಕೂಡಿರಬಾರದು. ಅದು ಮನಸ್ಸುಹೃದಯಗಳೆರಡನ್ನೂ ಬೆಸದುಕೊಂಡಿರಬೇಕು. ತನ್ನ ಉದ್ಧಾರ ತನ್ನಿಂದಲೇ ಎಂಬ ಸತ್ಯವನ್ನು ಅರಿತಿರಬೇಕು.

ಇದ್ದುದನ್ನು ಕೆಡವಿದಾಗಲೇ ಹೊಸದನ್ನು ಕಟ್ಟಲು ಸಾಧ್ಯ. ಸಾಗರವುಕ್ಕಿ ಭೇದವಿಲ್ಲದೆ ಎಲ್ಲವನ್ನೂ ಗರ್ಭದೊಳಗೆ ಸೆಳೆದುಕೊಳ್ಳುವಂತಹ ಮಂಥನದ ತುರ್ತಿದೆ. ಆಗಲೇ ಹೊಸತೊಂದು ಹುಟ್ಟಲು, ಮತ್ತದನ್ನು ಕಟ್ಟಲು, ಜೊತೆಗೆ ಬೆಳಕೊಂದನ್ನು ಹಚ್ಚಲೂ ಸಾಧ್ಯವಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.