ADVERTISEMENT

ಗಂಗೆಯನ್ನು ಕಟ್ಟಿ ಹಾಕುವಿರೇಕೆ?

ಗಂಗಾ ನದಿಯ ನೀರಿನ ಪ್ರಾಕೃತಿಕ ಗುಣಗಳ ಬಗ್ಗೆ ನಾವು ಗಮನ ಕೊಡಬೇಕೆ ವಿನಾ ಗಂಗೆಯ ಕುರಿತಾದ ಪುರಾಣದ ಕಥೆಗಳ ಬಗ್ಗೆ ಅಲ್ಲ

ಎಸ್.ರವಿಪ್ರಕಾಶ್
Published 7 ಅಕ್ಟೋಬರ್ 2018, 20:00 IST
Last Updated 7 ಅಕ್ಟೋಬರ್ 2018, 20:00 IST
   

ಉತ್ತರ ಭಾರತದ ಜೀವನದಿ ಗಂಗೆಯನ್ನು ಶುದ್ಧೀಕರಿಸುವುದರ ಜೊತೆಗೆ ಅದರ ಮಾಲಿನ್ಯಕ್ಕೆ ಕಡಿವಾಣ ಹಾಕಬೇಕು, ನದಿಗೆ ಅಣೆಕಟ್ಟುಗಳನ್ನು ನಿರ್ಮಿಸಬಾರದು ಎಂದು ಪರಿಸರ ಪ್ರೇಮಿಗಳು ಹಲವು ದಶಕಗಳಿಂದ ಹೋರಾಟ ನಡೆಸುತ್ತಲೇ ಬಂದಿದ್ದಾರೆ.

ರಾಜೀವ್‌ ಗಾಂಧಿ ಪ್ರಧಾನಿ ಆಗಿದ್ದಾಗ ಗಂಗೆಯ ಶುದ್ಧೀಕರಣಕ್ಕೆ ಕೈಹಾಕಿದ್ದರು. ಆದರೆ, ಯಶಸ್ವಿ ಆಗಲಿಲ್ಲ. ಮೋದಿ ಪ್ರಧಾನಿ ಆದ ಬಳಿಕ ಮತ್ತೆ ಗಂಗೆಯ ಶುದ್ಧಿಕರಣಕ್ಕೆ ಕೈಹಾಕಿದ್ದಾರೆ. ಶುದ್ಧೀಕರಣ ಎಷ್ಟರಮಟ್ಟಿಗೆ ಆಗಿದೆ ಎಂಬ ಬಗ್ಗೆ ರಾಜಕೀಯ ಕೆಸರೆರಚಾಟ ನಡೆಯುತ್ತಿದೆ. ಇನ್ನೊಂದೆಡೆ ಹೋರಾಟಗಾರರೂ ತಮ್ಮ ಹೋರಾಟವನ್ನು ಇನ್ನಷ್ಟು ಪ್ರಖರಗೊಳಿಸಿದ್ದಾರೆ.

ಅಲಕನಂದಾ ನದಿಯು ನಂದಾದೇವಿ ಪರ್ವತದ ನೀರ್ಗಲ್ಲು ಪ್ರದೇಶದಲ್ಲಿ ಹುಟ್ಟಿ ಪರ್ವತದಿಂದ ಇಳಿಯುತ್ತದೆ. ಭಾಗೀರಥಿ ನದಿಯು ಗೋಮುಖದ ಬಳಿ ಗಂಗೋತ್ರಿ ನೀರ್ಗಲ್ಲಿನಿಂದ ಹುಟ್ಟುತ್ತದೆ. ಈ ಎರಡೂ ನದಿಗಳು ದೇವಪ್ರಯಾಗದಲ್ಲಿ ಸಂಗಮವಾಗುತ್ತವೆ. ದೇವಪ್ರಯಾಗಕ್ಕೂ ಮೊದಲೇ ದೌಲಿಗಂಗಾ, ನಂದಾಕಿನಿ, ಪಿಂಡಾರ, ಮಂದಾಕಿನಿ ನದಿಗಳೂ ಅಲಕನಂದಾ ನದಿಗೆ ಸೇರಿಕೊಳ್ಳುತ್ತವೆ.
ಅಲಕನಂದಾ ಮತ್ತು ಭಾಗೀರಥಿ ಒಟ್ಟಿಗೆ ಸೇರಿದ ಬಳಿಕವೇ ‘ಗಂಗಾನದಿ’ ಎಂದು ಕರೆಸಿಕೊಳ್ಳುತ್ತದೆ.

ADVERTISEMENT

ಗಂಗೆಯು ಹಿಮಾಲಯ ಪರ್ವತ ಶ್ರೇಣಿ ಮುಗಿಸಿ ಬಯಲು ಪ್ರದೇಶವನ್ನು ಪ್ರವೇಶಿಸುವುದಕ್ಕೆ ಮೊದಲು ಅಂದರೆ, ಹರಿದ್ವಾರದವರೆಗೆ ಬಹುತೇಕ ಸ್ವಚ್ಛವಾಗಿಯೇ ಹರಿಯುತ್ತದೆ. ಉತ್ತರ ಪ್ರದೇಶ ಪ್ರವೇಶಿಸಿದ ಬಳಿಕವೇ ಅದು ಮಲಿನಗೊಳ್ಳುತ್ತದೆ.

ಹರಿದ್ವಾರ ಅಥವಾ ಹೃಷಿಕೇಶದಲ್ಲಿ ಜನ ಪ್ರವಾಹವನ್ನು ಕಾಣಬಹುದೇ ಹೊರತು, ಗಂಗೆ ತುಂಬಿ ಹರಿಯುವ ದೃಶ್ಯ ಸದಾ ಕಾಲ ಕಾಣಲು ಸಾಧ್ಯವಿಲ್ಲ. ಮಳೆಗಾಲ ಹೊರತುಪಡಿಸಿದರೆ, ಉಳಿದ ಸಂದರ್ಭದಲ್ಲಿ ನೀರನ್ನು ಎಷ್ಟು ಬೇಕೋ ಅಷ್ಟೇ ಬಿಡಲಾಗುತ್ತದೆ. ಅಂದರೆ, ಉತ್ತರಾಖಂಡದ ಪರ್ವತ ಪಂಕ್ತಿಗಳಲ್ಲಿರುವ ಅಣೆಕಟ್ಟುಗಳಿಂದ ಸ್ವಲ್ಪ ಸ್ವಲ್ಪವೇ ನೀರನ್ನು ನದಿಗೆ ಬಿಡಲಾಗುತ್ತದೆ. ಉದ್ದಕ್ಕೂ ಗಂಗೆಗೆ ಎಲ್ಲೆಂದರಲ್ಲಿ ಅಣೆಕಟ್ಟುಗಳನ್ನು ನಿರ್ಮಿಸುವ ಮೂಲಕ ಗಂಗಾ ನದಿಯ ಸಹಜ ಹರಿವಿಗೆ ಅಡ್ಡಿ ಮಾಡಲಾಗಿದೆ.

ಬೇಕಾಬಿಟ್ಟಿ ಅಣೆಕಟ್ಟುಗಳನ್ನು ನಿರ್ಮಿಸುವ ಸರ್ಕಾರದ ಕ್ರಮವನ್ನು ವಿರೋಧಿಸಿ, ಶ್ರೀಜ್ಞಾನ ಸ್ವರೂಪ ಸಾನಂದ ಸ್ವಾಮೀಜಿ ಜೂನ್‌ 22ರಿಂದ ಹರಿದ್ವಾರದ ಮಾತೃ ಸದನದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಆ ಸತ್ಯಾಗ್ರಹ 100 ದಿನ ಪೂರೈಸಿದೆ. ಸಾನಂದ ಅವರ ದೈಹಿಕ ಸ್ಥಿತಿ ಗಂಭೀರವಾಗಿದೆ. ಇವರೊಬ್ಬ ಮಾಮೂಲಿ ಕಾವಿಧಾರಿ ಸ್ವಾಮೀಜಿಯಲ್ಲ. ಅವರ ಪೂರ್ವಾಶ್ರಮದ ಹೆಸರು ಪ್ರೊ. ಜಿ. ಡಿ. ಅಗರ್ವಾಲ್‌. ಐಐಟಿ ಕಾನ್ಪುರದಲ್ಲಿ ಪ್ರೊಫೆಸರ್‌ ಆಗಿ, ಕೇಂದ್ರ ಸರ್ಕಾರದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಥಮ ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದವರು. ಸನ್ಯಾಸ ಸ್ವೀಕರಿಸಿದ ಬಳಿಕ ತಮ್ಮ ಬದುಕನ್ನೇ ಗಂಗೆಯ ಉಳಿವಿಗಾಗಿ ಮೀಸಲಿಟ್ಟರು.

ಅಣೆಕಟ್ಟುಗಳಿಂದಾಗಿ ಗಂಗೆಯ ನಿರಂತರ ಹರಿವಿಗೆ ಅಡ್ಡಿಯಾಗಿರುವುದು ಮಾತ್ರವಲ್ಲದೆ, ಗಂಗಾ ನದಿಯ ನೈಸರ್ಗಿಕ ಗುಣಗಳೇ ನಾಶವಾಗುತ್ತಿವೆ. ಈ ವಿಷಯವಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಫೆಬ್ರುವರಿ 24, ಜೂನ್‌ 13 ಮತ್ತು ಆಗಸ್ಟ್‌ 5ರಂದು ಒಟ್ಟು ಮೂರು ಪತ್ರಗಳನ್ನು ಸ್ವಾಮೀಜಿ ಬರೆದಿದ್ದಾರೆ. ಆದರೆ, ಪ್ರಯೋಜನ ಆಗಿಲ್ಲ. ‘ಅಣೆಕಟ್ಟುಗಳ ನಿರ್ಮಾಣ ನಿಲ್ಲಿಸುತ್ತೇವೆ ಎಂಬ ಸ್ಪಷ್ಟ ಭರವಸೆ ಸರ್ಕಾರದಿಂದ ಬರುವ ತನಕ ಉಪವಾಸ ನಿಲ್ಲಿಸುವುದಿಲ್ಲ. ಪ್ರಾಣ ಹೋದರೂ ಚಿಂತೆ ಇಲ್ಲ’ ಎಂಬ ಕಠೋರ ನಿಲುವು ತಳೆದಿದ್ದಾರೆ.

ಸಾನಂದ ಅವರ ವಿಚಾರ, ನಿಲುವುಗಳನ್ನು ಸೂಕ್ಷ್ಮ ಮನಸ್ಸಿನ ಯಾವ ವ್ಯಕ್ತಿಯೂ ನಿರಾಕರಿಸಲು ಸಾಧ್ಯವಿಲ್ಲ. ಏಕೆಂದರೆ, ಮಾನವ ನಾಗರಿಕತೆಗಳು ಹುಟ್ಟಿದ್ದು ನದಿ ಕಣಿವೆಗಳಲ್ಲಿ. ಅಂದಿನ ದಿನಗಳಲ್ಲಿ ಪ್ರಮುಖ ಕಸುಬು ಬೇಸಾಯ ಮತ್ತು ಪಶುಪಾಲನೆ. ಅದಕ್ಕೆ ಪೂರಕವಾಗಿ ನದಿಗಳ ಬಳಕೆ ಆಗುತ್ತಿತ್ತು. ಕುಡಿಯಲು ಶುದ್ಧ ನೀರು, ವ್ಯವಸಾಯಕ್ಕೆ ಮಣ್ಣಿನ ಫಲವತ್ತತೆ, ಅಂತರ್ಜಲ ವೃದ್ಧಿ ಹೀಗೆ ಒಂದಕ್ಕೊಂದು ಸರಪಳಿಯಂತೆ ಇತ್ತು. ಆ ಮೂಲ ತತ್ವ ಇಂದಿಗೂ ಬದಲಾಗಿಲ್ಲ. ಬದಲಾಗಿರುವುದು ಚಿಂತನಾ ಕ್ರಮ. ಹೀಗಾಗಿ ಎಲ್ಲ ನದಿಗಳೂ ಇಂದು ಅಪಾಯದಲ್ಲಿವೆ.

ಗಂಗಾ ನದಿ ವಿಶ್ವದಲ್ಲೇ ವಿಶಿಷ್ಟವಾದುದು ಎಂಬುದು ಸಾನಂದ ಸ್ವಾಮೀಜಿ ಖಚಿತ ನಿಲುವು. ಹಿಮಾಲಯದ ಹಿಮ ನದಿಗಳು ಮತ್ತು ಪರ್ವತ ಶ್ರೇಣಿಗಳಿಂದ ಧುಮ್ಮಿಕ್ಕುವ ಜಲಪಾತಗಳಿಂದ ತುಂಬುವ ನೀರಾಗಿರುವುದರಿಂದ ಗಂಗೆ ಸ್ವಾಭಾವಿಕವಾಗಿಯೇ ವರ್ಷಪೂರ್ತಿ ಹರಿಯುತ್ತದೆ. ಪರ್ವತಗಳ ಪ್ರಾಕೃತಿಕ ಝರಿ, ನದಿ, ಹಳ್ಳಗಳ ನೀರಿನಲ್ಲಿ ಒಂದು ವಿಶೇಷ ಗುಣವಿದೆ. ಅದೇನೆಂದರೆ, ನದಿಯು ವಾಯುಮಂಡಲ ಮತ್ತು ನದಿಗಳ ದಡಗಳ ಜತೆ ಸದಾ ಸಂಪರ್ಕದಲ್ಲಿರುತ್ತದೆ. ಇದರಿಂದ ನದಿಗೆ ವಿಶಿಷ್ಟ ಗುಣ ಪ್ರಾಪ್ತವಾಗುತ್ತದೆ ಎಂದು ಸ್ವಾಮೀಜಿ ಪ್ರತಿಪಾದಿಸಿದ್ದಾರೆ.

ಗಂಗಾ ನದಿಯಲ್ಲಿ ಅಪರೂಪದ ಜಲಚರ ಜೀವಿಗಳಿವೆ. ಹಿಲಾಸ ಮೀನು, ಡಾಲ್ಫಿನ್‌, ಘಡಿಯಾಲ, ಆಮೆ, ವೈವಿಧ್ಯಮಯ ಮತ್ಸ್ಯಗಳು, ಕಪ್ಪೆಗಳು... ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಈ ನದಿಯ ಜಲಕ್ಕೆ ರೋಗನಿರೋಧಕ ಗುಣ ಇದೆ. ಹಲವು ತಿಂಗಳುಗಳ ಕಾಲ ಇದು ಕೆಡುವುದಿಲ್ಲ. ಆ ಕಾರಣಕ್ಕೆ ಹಿಂದೆ ಬ್ರಿಟಿಷರೂ ಸಮುದ್ರಯಾನದ ಸಂದರ್ಭದಲ್ಲಿ ಗಂಗಾ ನೀರನ್ನೇ ಒಯ್ಯುತ್ತಿದ್ದರು. ಇಂಥ ಗುಣವುಳ್ಳ ನೀರಿನ ವೈಜ್ಞಾನಿಕ ಅಧ್ಯಯನ ಆಗಬೇಕು.

ಯಾವುದೇ ಶುದ್ಧ ನೀರು ಗಂಗೆಯ ನೀರಾಗಲಾರದು. ಗಂಗಾ ಜಲದ ಗುಣಗಳು ಬರಿ ನಿರ್ಮಲತೆಗಿಂತ ತುಂಬ ವಿಭಿನ್ನ ಮತ್ತು ಮೇಲ್ಮಟ್ಟದ್ದು. ನೀರಿನ ಪ್ರಾಕೃತಿಕ ಗುಣಗಳ ಬಗ್ಗೆ ನಾವು ಗಮನ ಕೊಡಬೇಕೇ ಹೊರತು, ಗಂಗೆಯ ಕುರಿತಾದ ಪುರಾಣದ ಕಥೆಗಳ ಬಗ್ಗೆ ಅಲ್ಲ. ಪುರಾಣದ ಕಥೆಗಳನ್ನು ಕೇಳುತ್ತಲೇ ಗಂಗೆಯನ್ನು ಸಾಯಿಸುತ್ತಾ ಹೋದರೇನು ಫಲ ಎಂದು ಸ್ವಾಮೀಜಿ ಪ್ರಶ್ನಿಸುತ್ತಾರೆ.

ವಿದ್ಯುತ್‌ ಉತ್ಪಾದನೆಗೆ ಸೌರಶಕ್ತಿ, ಪವನಶಕ್ತಿ, ಸಮುದ್ರ ತರಂಗಗಳ ಶಕ್ತಿ ಮುಂತಾದ ಹಲವು ಮಾರ್ಗಗಳಿವೆ. ಹೀಗಿದ್ದ ಮೇಲೆ ಜಲ ವಿದ್ಯುತ್ತಿಗಾಗಿ ಗಂಗಾಮಾತೆಯ ಬಲಿ ಆಗಬೇಕೇ? ಗಂಗೆಯ ಉಳಿವಿಗಾಗಿ ನಶ್ವರವಾದ ಈ ಜೀವನವನ್ನು ಒತ್ತೆ ಇಡುವುದು ದೊಡ್ಡ ವಿಷಯವಲ್ಲ ಎಂಬುದು ಅವರ ಖಚಿತ ನಿಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.