‘ಆರ್‌ಎಸ್‌ಎಸ್‌ಗೆ ನೂರು ವರ್ಷಗಳಂತೆ! ಹೌದಾ?’ (ಅ. 3) ಎನ್ನುವ ನನ್ನ ಲೇಖನಕ್ಕೆ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರು ಪ್ರತಿಕ್ರಿಯಿಸುತ್ತಾ ‘ದೇವನೂರರಿಗೊಂದು ದಾಳಿಂಬೆ ಕೊಡಿ’ (ಅ. 11) ಎಂದು ಕರೆ ನೀಡಿದ್ದಾರೆ. ಇವರ ಕರೆಗೆ ಓಗೊಟ್ಟು ಆರ್‌ಎಸ್‌ಎಸ್, ಬಿಜೆಪಿ, ಸಂಘಪರಿವಾರಗಳ ಕಾರ್ಯಕರ್ತರ ಸಮೂಹದಿಂದ ದಾಳಿಂಬೆ ಬಂದರೆ ನಾನೊಂದು ಗೋಡೌನ್ ಕಟ್ಟಿಸಬೇಕಾಗುತ್ತದೆ. ಇಲ್ಲ, ನಾನು ಗೋಡೌನ್ ಕಟ್ಟಿಸುವುದಿಲ್ಲ. ಬದಲಿಗೆ ಬರುವ ದಾಳಿಂಬೆಯಲ್ಲಿ ನಾನೂ ಒಂದು ಸೇವಿಸುತ್ತೇನೆ. ಪೂಜಾರಿಯವರಿಗೂ ಎರಡು ಕೊಡುತ್ತೇನೆ. ಹಾಗೇ ಎಲ್ಲಾ ಸಂಘಟನೆಗಳಿಗೂ ಹಂಚುವೆ. ವಿಶೇಷವಾಗಿ, ಸಮ್ಮೋಹನಕ್ಕೆ ಒಳಗಾಗಿ ಪ್ರಜ್ಞಾಹೀನರಾಗಿ ಹುಸಿ ದೇಶಪ್ರೇಮ, ಹುಸಿ ಧರ್ಮಪ್ರೇಮ ಗೀಳಿನ ಮತಾಂಧ ಅತಿರೇಕದ ಸಂಘಟನೆಗಳಿಗೂ ಹೆಚ್ಚು ಪಾಲು ನೀಡುವೆ. ಸಮಾನತಾವಾದಿ ನ್ಯಾಯಮೂರ್ತಿಗೆ ಚಪ್ಪಲಿ ಎಸೆಯಲು ಯತ್ನಿಸಿದ ಸನಾತನವಾದಿ ಭೂತಕಾಲದ ಪಳೆಯುಳಿಕೆ ರಾಕೇಶ್ ಕಿಶೋರ್ ಅಂಥವರಿಗೂ ಎಲ್ಲರಿಗಿಂತ ಹೆಚ್ಚೇ ನೀಡುವೆ.
ಆಯ್ತು, ಪೂಜಾರಿಯವರ ಲೇಖನಕ್ಕೆ ಈಗ ಬರುವೆ. 1939ರ ಮೇ 12ರಂದು ಪುಣೆಯ ಆರ್‌ಎಸ್‌ಎಸ್ ಶಿಬಿರಕ್ಕೆ ಅಂಬೇಡ್ಕರ್ ಭೇಟಿ ನೀಡಿ ಆರ್‌ಎಸ್‌ಎಸ್ ಬಗ್ಗೆ ಮೆಚ್ಚುಗೆ ಮಾತನಾಡಿದ್ದರು ಎಂದು ಬರೆದಿದ್ದಾರೆ. ಈ ಸುಳ್ಳಿನ ಹಿಂದಿರುವ ಸತ್ಯ ಹೀಗಿದೆ: ಆಯುಸ್ ನದೀಂಪಳ್ಳಿ ಮತ್ತು ರಾಹುಲ್ ಶಾಸ್ತ್ರಿ ಬರೆದಿರುವ ‘The Founder of RSS: Dr. Hedgewar Seer Patriot and Nation Builder’ ಪುಸ್ತಕದಲ್ಲಿ ಈ ಸುಳ್ಳನ್ನು ಬಿತ್ತರಿಸಲಾಗಿದೆ. ಇದಕ್ಕೆ ಯಾವುದೇ ಮಾಹಿತಿ ಮೂಲಗಳನ್ನು ತಿಳಿಸಿಲ್ಲ; ಪತ್ರಿಕಾ ವರದಿ, ಫೋಟೊ ಇತ್ಯಾದಿ ಸಾಕ್ಷಿಗಳನ್ನೂ ತಿಳಿಸಿಲ್ಲ. ಇಂತಹ ಕಟ್ಟುಕತೆಯ ಆಧಾರಗಳನ್ನೇ ನಮ್ಮ ಸಂಸದರು ತಮ್ಮ ಲೇಖನಕ್ಕೆ ಬಳಸಿಕೊಂಡಿದ್ದಾರೆ. ದಯವಿಟ್ಟು ಗಮನಿಸಿ, ಅಂಬೇಡ್ಕರ್ ಆರ್‌ಎಸ್‌ಎಸ್ ಬಗ್ಗೆ ಹೀಗೆ ಹೇಳುತ್ತಾರೆ: ‘ಹಿಂದೂ ಮಹಾಸಭಾ ಅಥವಾ ಆರ್‌ಎಸ್‌ಎಸ್‌ನಂತಹ ಪ್ರತಿಗಾಮಿ ಗುಂಪುಗಳೊಂದಿಗೆ ಯಾವುದೇ ಹೊಂದಾಣಿಕೆಗಳನ್ನು ಮಾಡಿಕೊಳ್ಳುವಂತಿಲ್ಲ’ (ಬಾಬಾ ಸಾಹೇಬ್ ಅವರ ಬರಹಗಳು ಮತ್ತು ಭಾಷಣಗಳು, ಸಂಪುಟ 17, ಪುಟ 359), ‘ಆರ್‌ಎಸ್‌ಎಸ್ ಒಂದು ಅಪಾಯಕಾರಿ ಸಂಘಟನೆ’ (ಇಂಗ್ಲಿಷ್ ಸಂಪುಟ 15, ಪುಟ 560) – ಹೀಗೆಲ್ಲಾ ಎಚ್ಚರಿಸಿದ್ದಾರೆ.
ಪೂಜಾರಿಯವರು ಬರೆದಿರುವ ಇನ್ನೊಂದು ಉಲ್ಲೇಖ ಹೀಗಿದೆ: 1962ರ ಭಾರತ–ಚೀನಾ ಯುದ್ಧದ ಉದ್ವಿಗ್ನತೆಯಲ್ಲಿ ಅಂದಿನ ಪ್ರಧಾನಿ ನೆಹರೂ ಏರ್ಪಡಿಸಿದ್ದ ದುಂಡುಮೇಜಿನ ಸಭೆಯಲ್ಲಿ ಗೋಲ್ವಲ್ಕರ್ ಆಹ್ವಾನದ ಮೇಲೆ ಭಾಗವಹಿಸಿದ್ದಾರೆಂದೂ, ಆ ಸಭೆಯಲ್ಲಿ ವಿಪಕ್ಷಗಳು ನೆಹರೂ ಸರ್ಕಾರವನ್ನು ಟೀಕಿಸುತ್ತ, ‘ಚೀನಿ’ ಸರ್ಕಾರ ಭಾರತದ ಭೂಭಾಗ ಆವರಿಸಿಕೊಳ್ಳುವಾಗ ನಿಮ್ಮ ಸೇನೆ ಏನು ಮಾಡುತ್ತಿತ್ತು’ ಎಂದು ಪ್ರಶ್ನಿಸಿದರೆಂದೂ, ಆಗ ಗೋಲ್ವಲ್ಕರ್ ‘ನಿಮ್ಮ ಸೇನೆ ಎನ್ನುವ ಬದಲು ನಮ್ಮ ಸೇನೆ ಎಂಬ ಶಬ್ದ ಪ್ರಯೋಗ ಮಾಡಬಹುದೆ?’ ಎಂದು ತಿದ್ದಿ ಹೇಳಿದರೆಂದೂ, ಗೋಲ್ವಲ್ಕರ್ ಮಾತಿಗೆ ನೆಹರೂ ಕಣ್ಣಲ್ಲೇ ಕೃತಜ್ಞತೆ ಅರ್ಪಿಸಿದ್ದರೆಂದೂ ಬರೆದಿದ್ದಾರೆ. ಈ ವಾಕ್ಯಗಳನ್ನು, ಅಲ್ಲೇ ಇದ್ದು ಕಣ್ಣಾರೆ ಕಂಡಂತೆ ಪೂಜಾರಿಯವರು ವಿವರಿಸಿದ್ದಾರೆ. ಆದರೆ ಈ ಬಗ್ಗೆ ಆರ್ಕೈವ್ಸ್ ಪರಿಶೀಲಿಸಿದರೆ, ಅವರು ಹೇಳುವ ಯಾವ ದಾಖಲೆಗಳೂ ಇಲ್ಲ! ಇದೇನು ಕಥೆ? ಈ ಕಟ್ಟುಕಥೆಯನ್ನು ಕಟ್ಟಿ ವಾಸ್ತವ ಎಂಬಂತೆ ಆರ್‌ಎಸ್‌ಎಸ್‌ನ ರತನ್ ಶ್ರದ್ಧಾ ಅವರು 2018ರಲ್ಲಿ ಬರೆದ ‘ಆರ್‌ಎಸ್‌ಎಸ್ 360’ ಪುಸ್ತಕದಲ್ಲಿ ಹುಟ್ಟಿಸಿದ್ದು, ಇದನ್ನೇ ಆರ್‌ಎಸ್‌ಎಸ್‌ನಿಂದ ತರಬೇತಿ ಪಡೆದವರು ಜಪಿಸುತ್ತಾ ತಿರುಗುತ್ತಿದ್ದಾರೆ. ಈ ಕಥನಶೈಲಿಯ ಮಾಯಾಜಾಲವು ಮುಸುಕುಧಾರಿ ಸಂಘಟನೆಗಳಿಗೆ ಉಸಿರಾಟದಂತಾಗಿ ಬಿಟ್ಟಿದೆ.
ಎಷ್ಟೆಂದರೆ, ಮುಂದೆ ಪೂಜಾರಿಯವರು ಬರೆದಿರುವಂತೆ ಎಡಪಂಥೀಯ ವಿಚಾರಧಾರೆಯ ಲೇಖಕರೊಬ್ಬರು ಬರೆದಿದ್ದ ‘ಆರ್‌ಎಸ್‌ಎಸ್ ಆಳ ಮತ್ತು ಅಗಲ’ ಎಂಬ ಕಿರುಪುಸ್ತಕಕ್ಕೆ ಪೂರಕ ಪ್ರಾಸ್ತಾವಿಕ ನುಡಿ ಬರೆದ ಗಣ್ಯರೊಬ್ಬರು ‘ಈ ಕಿರುಪುಸ್ತಕ ಆರ್‌ಎಸ್‌ಎಸ್‌ನ ನಿಜಸ್ವರೂಪವನ್ನು ತಿಳಿಸಿ, ಭಾರತದ ಸಂವಿಧಾನದ ಮತ್ತು ದೇಶದ ಏಕತೆಯನ್ನು ಗಟ್ಟಿಗೊಳಿಸಲು ಶಕ್ತಿ ನೀಡುತ್ತದೆ ಎಂದು ಘೋಷಿಸಿದ್ದರು’ ಎಂದು ಬರೆದಿದ್ದಾರೆ. ‘ಆರ್‌ಎಸ್‌ಎಸ್ ಆಳ ಮತ್ತು ಅಗಲ’ ಎಂಬ ಕಿರುಪುಸ್ತಕ ಬರೆದವನು ನಾನೇ ಅಲ್ಲವೆ? ಪೂರಕ ಪ್ರಾಸ್ತಾವಿಕ ನುಡಿಯ ಪ್ರಸ್ತಾಪ ನನಗೇ ಗೊತ್ತೇ ಇಲ್ಲವಲ್ಲ! ಇದೆಂಥ ಬಾಯಿಚಳಕ?
ಸರ್, ಪೂಜಾರಿಯವರೇ, ತಾವು ಸರಳ ಸಜ್ಜನರೆಂದು ಕೇಳಿದ್ದೇನೆ, ಜನರ ಕಷ್ಟ ಸುಖಕ್ಕೆ ಸ್ಪಂದಿಸುವ ವ್ಯಕ್ತಿತ್ವದವರೆಂದೂ ಕೇಳಿದ್ದೇನೆ. ಈ ವಿಶ್ವಾಸದಿಂದ ಸದ್ಯಕ್ಕೆ ಒಂದೆರೆಡು ವಿಚಾರಗಳನ್ನು ತಮ್ಮ ಮುಂದಿಡುವೆ.
ಸನಾತನ(ಶಾಶ್ವತ)ಗಳೆಂದು ಹೇಳಿಕೊಳ್ಳುವವರಿಗೆ ಪರಮಪೂಜ್ಯರೆನ್ನಿಸಿಕೊಂಡ ಗೋಲ್ವಲ್ಕರ್, ಸಾವರ್ಕರ್ ಅವರ ಎದೆಯೊಳಗಿನ ಎರಡು ಮಾತುಗಳನ್ನು ಇಲ್ಲಿ ಉಲ್ಲೇಖಿಸುವೆ. ತಾವು ಈಗಾಗಲೇ ಓದಿರುವ ನನ್ನ ಲೇಖನ ‘ಆರ್‌ಎಸ್‌ಎಸ್‌ಗೆ ನೂರು ವರ್ಷಗಳಂತೆ! ಹೌದಾ?’ದಲ್ಲಿ ಇದನ್ನು ವಿವರವಾಗಿ ಬರೆದಿರುವೆ. ನನ್ನ ಪ್ರಶ್ನೆ ಇಷ್ಟೆ: ಗೋಲ್ವಲ್ಕರ್ ಅವರು– ‘ಈ ಚತುರ್ವಿಧ (ಚಾತುರ್ವರ್ಣ) ವ್ಯವಸ್ಥೆ ಹೊಂದಿದವರು ಎಂದರೆ ಹಿಂದೂ ಜನಾಂಗ, ಇದೇ ನಮ್ಮ ದೇವರು’ ಎಂದರೆ, ಸಾವರ್ಕರ್ ಅವರು ‘ಇವತ್ತು ಮನುಸ್ಮೃತಿಯೇ ಹಿಂದೂ ಕಾಯ್ದೆ’ ಎಂದಿದ್ದಾರೆ.
ಈಗ ನಾನು ತಮ್ಮಲ್ಲಿ ವಿನಂತಿಸುವುದು ಇಷ್ಟೇ:
1. ದೇವನೂರರು ಉಲ್ಲೇಖಿಸಿರುವ ಗೋಲ್ವಲ್ಕರ್, ಸಾವರ್ಕರ್ ಹೇಳಿಕೆಗಳನ್ನು ಸುಳ್ಳು ಎಂದಾದರೂ ಹೇಳಿರಿ,
2. ಆ ಉಲ್ಲೇಖಗಳನ್ನು ಗೋಲ್ವಲ್ಕರ್, ಸಾವರ್ಕರ್ ಹೇಳಿದ್ದಾರೆ, ಅದನ್ನು ಸಮ್ಮತಿಸುತ್ತೇನೆ ಎಂದಾದರೂ ಹೇಳಿರಿ, 3. ಗೋಲ್ವಲ್ಕರ್, ಸಾವರ್ಕರ್ ಹೇಳಿರುವ ಉಲ್ಲೇಖಗಳನ್ನು ನಾನು ಸಮ್ಮತಿಸುವುದಿಲ್ಲ ಎಂದಾದರೂ ಹೇಳಿರಿ. ದಯವಿಟ್ಟು ಯಾವುದಾದರೂ ಒಂದನ್ನು ತಿಳಿಸುವಿರಾ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.