ADVERTISEMENT

ಪೊರೆಯುವ ಮನಕ್ಕೇಕೆ ಅಕ್ಷರದ ಹಂಗು?

ಅಕ್ಷರಕ್ಕಿಂತ ಎದೆಯಾಳದ ಮಾತನ್ನೇ ನಂಬಿ ಯೋಚಿಸಿದವರು ಮತ್ತು ಅದರಂತೆ ಬದುಕಿದವರೇ ಈ ದೇಶದ ನಿಜವಾದ ಆಧಾರಸ್ತಂಭಗಳು

ಡಾ.ಎಚ್.ಡಿ.ಉಮಾಶಂಕರ್
Published 25 ಡಿಸೆಂಬರ್ 2019, 20:30 IST
Last Updated 25 ಡಿಸೆಂಬರ್ 2019, 20:30 IST
   

ಕೆಲವು ದಿನಗಳ ಹಿಂದೆ ರೈಲಿನಲ್ಲಿ ನಾನು ಮತ್ತು ಸ್ನೇಹಿತ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದೆವು. ಪ್ರಯಾಣದ ಉದ್ದಕ್ಕೂ ದೇಶ, ಧರ್ಮ, ರಾಜಕೀಯ, ಸಾಮಾಜಿಕ ಸ್ಥಿತಿಗತಿ, ದೇಶಾಭಿಮಾನ ಕುರಿತು ಮಾತನಾಡುತ್ತಿದ್ದೆವು. ಅದುವರೆಗೆ ನಮ್ಮ ಮಾತುಗಳನ್ನು ಕೇಳಿಸಿಕೊಂಡು ಕೂತಿದ್ದ ಹಿರಿಯರೊಬ್ಬರು, ಅರ್ಧ ಪ್ರಯಾಣಕ್ಕೆ ನಮ್ಮ ಜೊತೆ ಮಾತಿಗಿಳಿದರು. ಅವರು ಬೇರೆಲ್ಲಾ ವಿಷಯಗಳಿಗಿಂತ ದೇಶಪ್ರೇಮದ ಬಗ್ಗೆ ಮಾತನಾಡುವ ಉತ್ಸಾಹ ತೋರಿದರು. ಇದಕ್ಕೆ ಅವರು ಹಲವು ರಾಜಕಾರಣಿಗಳು ಮತ್ತು ಸೈನಿಕರನ್ನು ಉಲ್ಲೇಖಿಸುತ್ತಾ ‘ಇವರಷ್ಟೇ ದೇಶಪ್ರೇಮಿಗಳು’ ಎಂದರು. ಅವರು ಹೇಳಿದ ಸೈನಿಕರ ಬಗ್ಗೆ ನಮಗೂ ಅದೇ ಅಭಿಪ್ರಾಯವಿದ್ದ ಕಾರಣ ಒಪ್ಪಿಕೊಂಡೆವು. ಆದರೆ ಅವರು ಉಲ್ಲೇಖಿಸಿದ ರಾಜಕಾರಣಿಗಳ ಬಗ್ಗೆ ಒಪ್ಪಿಗೆಯಿಲ್ಲದೆ ನಮ್ಮದೇ ಆದ ತಕರಾರನ್ನು ಮಂಡಿಸಿದೆವು. ಆದರೂ ಅವರಿಗೆ ದೇಶಪ್ರೇಮವನ್ನು ಕೆಲವರ ಸುತ್ತ ಕಟ್ಟುವ ಉತ್ಸಾಹ ಹೆಚ್ಚೇ ಇತ್ತು.

ಕೊನೆಗೆ ದೇಶಪ್ರೇಮದ ಆಯಾಮವನ್ನು ವಿಸ್ತರಿಸಿದ ನನ್ನ ಸ್ನೇಹಿತ, ‘ನೋಡಿ ಸಾರ್, ನಮ್ಮ ತಂದೆಗೆ ಈಗ ವಯಸ್ಸಾಗಿದೆ. ನಾವು ಐದು ಜನ ಮಕ್ಕಳಿದ್ದೇವೆ. ನಮ್ಮ ತಂದೆ ತನ್ನ ಹೆಣ್ಣು ಮಕ್ಕಳಿಗೆಲ್ಲ ಮದುವೆ ಮಾಡಿದರು. ತನ್ನ ಕಷ್ಟದ ನಡುವೆಯೂ ನಮಗೆಲ್ಲ ಓದು– ಬರಹ ಕಲಿಸಿ ದೊಡ್ಡವರನ್ನಾಗಿ ಮಾಡಿದರು. ಒಂದು ದಿನವೂ ವಿಶ್ರಮಿಸದ ಅವರು ದುಡಿಮೆಯೇ ದೇವರೆಂದು ನಂಬಿದ್ದಾರೆ. ಈ ವಯಸ್ಸಿನಲ್ಲಿಯೂ ಕೆಲಸ ಮಾಡದೆ ಅವರ ದಿನ ಮುಂದೋಗುವುದೇ ಇಲ್ಲ. ನಾನು ಚಿಕ್ಕಂದಿನಿಂದಲೂ ಗಮನಿಸಿದ್ದೇನೆ, ಯಾರ ಮನೆಗೂ ನಮ್ಮ ತಂದೆ ಕೇಡು ಬಯಸಿದವರಲ್ಲ. ಯಾರನ್ನೂ ದ್ವೇಷಿಸಿದವರಲ್ಲ.

ಎಲ್ಲ ಜಾತಿಯವರನ್ನೂ ಪ್ರೀತಿ, ಆದರದಿಂದಲೇ ಮಾತನಾಡಿಸುತ್ತಿದ್ದರು. ನಮಗೆಲ್ಲ ಒಂದು ದಿನವೂ ಕೈಯೆತ್ತಿ ಹೊಡೆದವರಲ್ಲ. ನಮಗೆಂದಿಗೂ ಕೆಡುಕು, ಹೊಟ್ಟೆಕಿಚ್ಚು, ದ್ವೇಷ, ಅಸೂಯೆ ಬರದಂತೆಯೇ ನೋಡಿಕೊಂಡು ಬೆಳೆಸಿದರು. ಹೊಡಿಬಡಿ ಅನ್ನುವುದನ್ನು ಹೇಳಿಕೊಡಲೇ ಇಲ್ಲ. ಬೈಗುಳವಂತೂ ನಮ್ಮಿಂದ ಹೊರಹೊಮ್ಮದಿರುವುದಕ್ಕೆ ಅವರೇ ಕಾರಣ. ಮೇಲಾಗಿ ಅವರು ಅನಕ್ಷರಸ್ಥ. ಈಗ ಹೇಳಿ ನಮ್ಮ ತಂದೆ ನೀವು ಹೇಳುವ ದೇಶಪ್ರೇಮದ ಚೌಕಟ್ಟಿನಲ್ಲಿ ಬರುತ್ತಾರೋ ಇಲ್ಲವೋ’ ಎನ್ನುವ ವಾದವನ್ನು ಮುಂದಿಟ್ಟರು.

ADVERTISEMENT

ಆಗ ಯೋಚಿಸುವ ಸರದಿ ಆ ಹಿರಿಯರದಾಗಿತ್ತು. ಇಷ್ಟೆಲ್ಲ ಮಾತಿನ ನಡುವೆ ಬೆಂಗಳೂರಿನ ನಿಲ್ದಾಣ ಬಂದಾಗಿತ್ತು. ಇಳಿಯುವ ಮುನ್ನ ಆ ಹಿರಿಯರು ‘ಸಾರ್, ನಿಮ್ಮಿಂದ ನನಗೆ ಇನ್ನೊಂದು ಲೋಕ ಸಿಕ್ಕಿತು’ ಎನ್ನುವ ರೀತಿಯ ಮಾತನ್ನು ಹೇಳಿ ಇಳಿದುಹೋದರು. ನಮಗೂ ಸಮಾಧಾನ ಆಗಿತ್ತು.

ಈ ವಿಷಯ ಬಹಳ ದಿನಗಳಿಂದ ನನ್ನನ್ನು ಕಾಡುತ್ತಲೇ ಇತ್ತು. ಇದರೊಂದಿಗೆ, ಅನಕ್ಷರಸ್ಥೆಯಾದ ನನ್ನವ್ವನೂ ನನ್ನನ್ನು ಹೆಚ್ಚು ಕಾಡಿಸುತ್ತಲೇ ಸಾಗಿದಳು. ಚಿಕ್ಕಂದಿನಲ್ಲಿ ಒಮ್ಮೆ ನಾನು ಪಕ್ಕದ ಮನೆಯವನೊಬ್ಬನ ಎರಡು ರೂಪಾಯಿಯನ್ನು ಕದ್ದು ಬಿಟ್ಟಿದ್ದೆ. ಅವ್ವನಿಗೆ ಸಂಶಯ ಬಂದು ನನ್ನನ್ನೇ ನೇರವಾಗಿ ವಿಚಾರಿಸಿದಳು. ಬಾಯಿ ಬಿಟ್ಟರೆ ಬಣ್ಣಗೇಡು ಎನ್ನುವಂತೆ, ಎಷ್ಟು ಕೇಳಿದರೂ ನಾನು ಹೇಳಲೇ ಇಲ್ಲ. ಕೊನೆಗೆ ಅವ್ವ ‘ಕಳ್ಳತನ ಮಾಡಿದರೆ ನಮ್ಮ ಮನೆಗಳು ಹಾಳಾಗುತ್ತವೆ ಮಗ. ಇವತ್ತು ಅವರು ನೋವುಂಡರೆ ನಾಳೆ ಅದೇ ನೋವು ನಮಗೆ ಬರುತ್ತದೆ. ದೇವರು ನೋಡ್ತಿರ್ತಾನೆ... ಒಳ್ಳೆಯದು ಮಾಡಲ್ಲ’ ಎಂದು ಹೇಳಿ ‘ಬಾಳೆಹಣ್ಣು ಮತ್ತು ಅಜ್ಜಿ’ಯ ಕತೆಯನ್ನು ನೆನಪಿಸಿದಳು. ಅವಳು ಅಷ್ಟು ಹೇಳುವುದರೊಳಗೆ ನನ್ನ ಜೇಬಿನಿಂದ ಎರಡು ರೂಪಾಯಿ ಹೊರಬಂದಾಗಿತ್ತು. ‘ಇನ್ಮುಂದೆ ಹಿಂಗೆಲ್ಲ ಮಾಡಬ್ಯಾಡ’ ಎಂದು ಹೇಳಿ ನನ್ನ ಕೈಯಿಂದಲೇ ಪಕ್ಕದ ಮನೆಗೆ ಆ ನಾಣ್ಯವನ್ನು ಹಿಂದಿರುಗಿ ಕೊಡುವಂತೆ ಮಾಡಿದಳು. ಇವೆರಡೂ ನನ್ನ ಪಾಲಿಗೆ ಮರೆಯಲಾಗದ ಸಂಗತಿಗಳು.

ಈ ಪ್ರಸಂಗಗಳು ಈ ಸಂದರ್ಭದಲ್ಲಿ ಯಾಕೋ ಮತ್ತೆ ನನ್ನನ್ನು ಕಾಡುತ್ತಿವೆ. ‘ಎದೆ ಸೀಳಿದರೆ ಒಂದೂ ಅಕ್ಷರ ಇಲ್ಲದವರು’ ಎನ್ನುವ ಅಸಹನೆಯ ಮಾತನ್ನು ಕೇಳಿದ ಮೇಲಂತೂ ಎದೆಯಾಳಕ್ಕೆ ಹೆಚ್ಚಾಗಿ ಇಳಿಯುತ್ತಿವೆ. ದೇಶ, ಭಾಷೆ, ಸ್ವಾಭಿಮಾನ, ಗಡಿ, ಭೂಪಟ ಯಾವುವೂ ಗೊತ್ತಿಲ್ಲದ ಎಷ್ಟೋ ಜನ ಇಲ್ಲಿ ಅರಳಿ ನಿಂತಿದ್ದಾರೆ. ಇವರಲ್ಲಿ ಬಹುಪಾಲು ಅನಕ್ಷರಸ್ಥರಿದ್ದಾರೆ. ಅಕ್ಷರಕ್ಕಿಂತ ಎದೆಯಾಳದ ಮಾತುಗಳನ್ನೇ ನಂಬಿ ಆಲೋಚಿಸುವವರು ಇಲ್ಲಿದ್ದಾರೆ. ಇವರೇ ಈ ದೇಶದ ನಿಜವಾದ ಭದ್ರಬುನಾದಿಗಳು ಎನ್ನುವುದು, ಇಂತಹ ಮಾತುಗಳನ್ನು ಕೇಳಿದ ಮೇಲೆ ನನಗೆ ಇನ್ನಷ್ಟು ಖಾತರಿಯಾಗುತ್ತಿದೆ.

ನನ್ನವ್ವನಂತೂ ಕೂಲಿ ಮಾಡಿ ಹೊಟ್ಟೆ ಹೊರೆಯುತ್ತಿದ್ದಾಗಲೂ ಎಂದೂ ಕೆಡುಕಿನ ನಡೆಯನ್ನು ಹೇಳಿಕೊಟ್ಟವಳೇ ಅಲ್ಲ. ಅವಳ ಆ ನಡೆಯೇ ಇಂದು ನಾವು ಎಲ್ಲರ ನಡುವೆ ಬದುಕಿ, ಆ ಬದುಕನ್ನು ಪ್ರೀತಿಸುವಂತೆ ಮಾಡಿದೆ. ಇದು ಎಲ್ಲ ಅವ್ವಂದಿರ ಕಾಳಜಿಯೂ ಹೌದು. ಇದೇ ಜಗತ್ತನ್ನು ಪೊರೆಯುವ ರೀತಿಯೂ ಅಲ್ಲವೇ! ಇಂತಹ ಪೊರೆಯುವ ಮನಸ್ಸುಗಳನ್ನು ಅರ್ಥಮಾಡಿಕೊಂಡು ಗೌರವಿಸಲಿಕ್ಕೆ ಅಕ್ಷರ, ಜಾತಿ, ಧರ್ಮ, ಮತ, ಪ್ರದೇಶ, ವರ್ಗದಂತಹ ಯಾವ ಅಡೆತಡೆಯೂ ಬೇಕಿಲ್ಲ.

ಲೇಖಕ: ಸಹಾಯಕ ಪ್ರಾಧ್ಯಾಪಕ,

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೆ.ಆರ್‌.ಪೇಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.