ADVERTISEMENT

ಸಂಗತ: ಬದುಕಬೇಕು ಹೆಜ್ಜೇನು, ಜೊತೆಗೆ ಮಾನವನೂ

ಕೆ.ಟಿ.ವಿಜಯಕುಮಾರ್
Published 7 ಡಿಸೆಂಬರ್ 2023, 23:33 IST
Last Updated 7 ಡಿಸೆಂಬರ್ 2023, 23:33 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ರಾಜ್ಯದಲ್ಲಿ ಹೆಜ್ಜೇನು ದಾಳಿ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿವೆ. ಮೇಲುಕೋಟೆ ಜಾತ್ರೆಗೆ ಬಂದಿದ್ದ 80ಕ್ಕೂ ಹೆಚ್ಚು ಭಕ್ತರು ಹಾಗೂ ಹೂವಿನಹಡಗಲಿಯ ಶಾಲೆಯೊಂದರ ವಿದ್ಯಾರ್ಥಿಗಳು ಹೆಜ್ಜೇನು ದಾಳಿಯಿಂದ ಆಸ್ಪತ್ರೆ ಸೇರಬೇಕಾಯಿತು. ಚನ್ನಗಿರಿ ಮತ್ತು ಗುಬ್ಬಿ ತಾಲ್ಲೂಕುಗಳಲ್ಲಿ ತಲಾ ಒಬ್ಬರು ಹೆಜ್ಜೇನು ದಾಳಿಗೆ ಬಲಿಯಾಗಿದ್ದು, ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಹೆಜ್ಜೇನುಗಳಿಂದ ರಕ್ಷಿಸಿಕೊಳ್ಳುವ ಮಾರ್ಗಗಳ ಬಗ್ಗೆ ಯೋಚಿಸುವಂತೆ ಮಾಡಿದೆ.

ಜೇನು ಸಂತತಿಯಲ್ಲಿ ಹೆಜ್ಜೇನು, ಕಡ್ಡಿಜೇನು, ತುಡುವೆ, ಮೆಲ್ಲಿಫೆರಾ, ಮುಜಂಟಿ ಎಂಬ ಐದು ಬಗೆಯ ಪ್ರಭೇದಗಳಿವೆ. ತುಡುವೆ, ಮೆಲ್ಲಿಫೆರಾ ಮತ್ತು ಮುಜಂಟಿ ಜೇನು ಕುಟುಂಬಗಳನ್ನು ಪೆಟ್ಟಿಗೆಗಳಲ್ಲಿಟ್ಟು ಸಾಕಬಹುದು. ಆದರೆ ಹೆಜ್ಜೇನು ಮತ್ತು ಕಡ್ಡಿಜೇನುಗಳು ಅಲೆಮಾರಿಗಳಾಗಿದ್ದು, ಇವುಗಳನ್ನು ಸಾಕುವುದು ಅಸಾಧ್ಯ. ಜೇನುಹುಳುಗಳು ನಡೆಸುವ ಪರಾಗಸ್ಪರ್ಶ ದಿಂದ ಸಸ್ಯಗಳ ವಂಶಾಭಿವೃದ್ಧಿಗೆ ಅನುಕೂಲ ಆಗುತ್ತದೆ ಮತ್ತು ಬೆಳೆಗಳ ಇಳುವರಿ ವೃದ್ಧಿಗೂ ಸಹಕಾರಿ. ಹೆಜ್ಜೇನು ಕುಟುಂಬಗಳು ಮರದ ರೆಂಬೆ, ಟೆಲಿಫೋನ್ ಟವರ್‌, ಮನೆಗಳ ಸಜ್ಜಾ, ಸೇತುವೆಗಳ ಮೇಲೆ ಹೆಚ್ಚಾಗಿ ಗೂಡುಗಳನ್ನು ಕಟ್ಟಿ ಮೂರ್ನಾಲ್ಕು ತಿಂಗಳು ನೆಲೆಯೂರುತ್ತವೆ. ಒಂದು ಗೂಡಿನಿಂದ 15 ಕೆ.ಜಿ.ಗೂ ಹೆಚ್ಚು ಜೇನುತುಪ್ಪವನ್ನು ಕೊಯ್ಲು ಮಾಡುವ ಸೋಲಿಗ, ಜೇನುಕುರುಬ, ಕಾಡುಕುರುಬ, ಬೇಡ, ಸಿದ್ಧಿ ಜನಾಂಗದವರಿಗೆ ಹೆಜ್ಜೇನು ತುಪ್ಪ ಸಂಗ್ರಹಿಸುವಿಕೆ ಪರ್ಯಾಯ ಜೀವನೋಪಾಯದ ಮಾರ್ಗ. ಹೆಜ್ಜೇನಿನ ತುಪ್ಪ ಅಷ್ಟೇ ರುಚಿಕರ ಮತ್ತು ಆರೋಗ್ಯಕರ.

ADVERTISEMENT

ಹೆಜ್ಜೇನುಗಳು ವಿನಾಕಾರಣ ಯಾರ ಮೇಲೂ ದಾಳಿ ಮಾಡುವುದಿಲ್ಲ. ಗೂಡಿಗೆ ಕಲ್ಲು ಎಸೆದರೆ, ಹಕ್ಕಿಗಳು ತಾಕಿದರೆ, ಸಣ್ಣ ಮಟ್ಟದ ಹೊಗೆಯಾಡಿದರೆ ಅವು ದಾಳಿಗೆ ಸಜ್ಜಾಗುತ್ತವೆ. ಅವು ಕುಟುಕಿದಾಗ ಬರುವ ವಿಷವು ಮಾನವನ ದೇಹ ಸೇರಿದಾಗ ಅಲರ್ಜಿಯಿಂದ ಕೆಂಪಾಗುವುದು, ಕೆರೆತ ಮತ್ತು ಊತ ಸಾಮಾನ್ಯ. ತಲೆ ಸುತ್ತುವುದು, ಉಸಿರಾಟದಲ್ಲಿ ತೊಂದರೆ, ಎದೆಬಡಿತದಲ್ಲಿ ಏರಿಕೆ, ರಕ್ತದೊತ್ತಡ ದಲ್ಲಿ ಏರುಪೇರಿನಂತಹ ಲಕ್ಷಣಗಳು ಕೆಲವರಲ್ಲಿ ಕಾಣಬಹುದು. ಹೆಜ್ಜೇನು ದಾಳಿ ಮಾಡಿದಾಗ ಜೋರಾಗಿ ಹೊಗೆ ಹಾಕಿದರೆ ಅವು ಹೆದರಿ ಜಾಗ ಖಾಲಿ ಮಾಡುತ್ತವೆ. ಭಯದಿಂದ ಓಡುವ ಬದಲು, ನಿಂತ ಜಾಗದಲ್ಲೇ ಬೋರಲಾಗಿ ಅಲುಗಾಡದಂತೆ ಮಲಗಬೇಕು. ಜೇನುಹುಳು ಕುಟುಕಿದರೆ, ಮೊದಲಿಗೆ ಆ ಮುಳ್ಳನ್ನು ತೆಗೆಯಬೇಕು. ಇಲ್ಲದಿದ್ದರೆ ಆ ಮುಳ್ಳು ಮತ್ತು ಅದಕ್ಕಂಟಿದ ವಿಷವು ಬೇರೆ ನೂರಾರು ಹುಳುಗಳು ಕುಟುಕುವಂತೆ ಪ್ರೇರೇಪಿಸುತ್ತವೆ. ಜೇನು ಕುಟುಕಿದ ಜಾಗವನ್ನು ಯಾವುದಾದರೂ ಸಸ್ಯದ ಎಲೆಯ ರಸ, ನೀರು ಅಥವಾ ಎಂಜಲಿನಿಂದ ಉಜ್ಜಿದಾಗ ಬೇರೆ ಹುಳುಗಳನ್ನು ಆಕರ್ಷಿಸುವು
ದನ್ನು ತಡೆಯಬಹುದು. ನಂತರ ಮಂಜುಗಡ್ಡೆ ಅಥವಾ ಕ್ಯಾಲಮೈನ್ ಕ್ರೀಂ ಲೇಪಿಸುವುದರಿಂದ ಊತ ಶಮನ ಆಗುತ್ತದೆ. ದಾಳಿಯ ಪ್ರಮಾಣ ತೀವ್ರವಾಗಿದ್ದಾಗ ತ್ವರಿತವಾಗಿ ವೈದ್ಯರನ್ನು ಸಂಪರ್ಕಿಸಬೇಕು.

ಹೆಜ್ಜೇನು ವಾಸಸ್ಥಾನದಲ್ಲಿ ಹೆಚ್ಚು ನಿಗಾ ವಹಿಸಬೇಕು. ಸುಗಂಧದ್ರವ್ಯ ಬಳಸಿದಾಗ ಹೆಜ್ಜೇನು ಗೂಡುಗಳ ಸಮೀಪ ತೆರಳಬಾರದು. ಸುತ್ತಮುತ್ತ ಸಭೆ ಸಮಾರಂಭ ಹಮ್ಮಿಕೊಳ್ಳುವುದಿದ್ದರೆ ಜೇನುಕೃಷಿಕರಿಂದ ಆ ಗೂಡುಗಳನ್ನು ಸ್ಥಳಾಂತರಿ ಸಬೇಕು. ಗೂಡುಗಳಿಗೆ ಕೀಟನಾಶಕ ಸಿಂಪಡಿಸಬಾರದು, ಬೆಂಕಿ ಹಚ್ಚಬಾರದು. ಹೆಜ್ಜೇನಿನ ಸ್ಥಳಾಂತರಕ್ಕೆ ಮೂರು ಮಾರ್ಗಗಳಿವೆ. ಅವುಗಳ ಗೂಡನ್ನು (ರಾಡೆ) ಕತ್ತರಿಸಿ ಹೊಗೆ ಕೊಟ್ಟರೆ ಹೆಜ್ಜೇನುಗಳು ಜಾಗ ಖಾಲಿ ಮಾಡುತ್ತವೆ. ಎರಡನೆಯದಾಗಿ, ರಾಡೆಯನ್ನು ಕತ್ತರಿಸಿ ಮರದ ಹಲಗೆಗೆ ಕಟ್ಟಿ ಮೂಲ ಸ್ಥಳದಲ್ಲಿಟ್ಟರೆ, ಜೇನುಹುಳುಗಳು ಅದರ ಮೇಲೆ ಕೂತಾಗ ಸುರಕ್ಷಿತ ಪ್ರದೇಶಗಳಿಗೆ ವರ್ಗಾಯಿಸಬಹುದು. ಕೊನೆಯದಾಗಿ, ರಾತ್ರಿ ಸಣ್ಣ ರಂಧ್ರದ ಚೀಲದಿಂದ ಜೇನುಹುಳುಗಳನ್ನು ಹಿಡಿದು ದೂರದ ಸ್ಥಳಕ್ಕೆ ಬಿಡಬಹುದು. ಜೇನುಗೂಡು ಬಿಡಿಸುವಾಗ ರಕ್ಷಣಾ ಕವಚ, ಹೊಗೆ ತಿದಿ, ಪ್ರಥಮ ಚಿಕಿತ್ಸಾ ಸಾಮಗ್ರಿಗಳನ್ನು ತಪ್ಪದೇ ಕೊಂಡೊಯ್ಯಬೇಕು. ಗೂಡು ಕಿತ್ತ ಖಾಲಿ ಜಾಗಕ್ಕೆ ಯಾವುದಾದರೂ ರಾಸಾಯನಿಕ ಸಿಂಪಡಣೆ ಅಥವಾ ಗೋಡೆ ಬಣ್ಣ ಹಚ್ಚುವುದರಿಂದ ಮತ್ತೆ ಜೇನುಗಳು ಅಲ್ಲಿಗೆ ಬರುವುದನ್ನು ತಡೆಯಬಹುದು.

ನವೆಂಬರ್‌ನಿಂದ ಏಪ್ರಿಲ್‌ವರೆಗಿನ ಅವಧಿಯಲ್ಲಿ ಹೆಜ್ಜೇನುಗಳು ನಗರಗಳತ್ತ ಹೆಚ್ಚು ವಲಸೆ ಬರುತ್ತವೆ. ಕಟ್ಟಡಗಳ ಸಜ್ಜಾಗಳಿಗೆ ಮುಳ್ಳುಗಳ ಬಲೆ ಅಥವಾ ಮೆಶ್‍ಗಳನ್ನು ಹಾಕಿದ್ದರೆ ಗೂಡುಗಳನ್ನು ಕಟ್ಟಲು ಸ್ಥಳಾವಕಾಶವಿಲ್ಲದೆ ಮರಗಳನ್ನು ಆಶ್ರಯಿಸುತ್ತವೆ. ಕೀಟಗಳು ಒಳನುಸುಳದಂತೆ ಕಿಟಕಿಗಳಿಗೆ ಮೆಶ್ ಹಾಕಿಸುವುದು, ವಿದ್ಯುತ್ ಬೆಳಕು ನೇರವಾಗಿ ಗೂಡಿನ ಮೇಲೆ ಬೀಳದಂತೆ ನೋಡಿಕೊಳ್ಳುವುದು ಸೂಕ್ತ. ಕಾಡುಮೇಡು ನಾಶವಾದಾಗ ಹೆಜ್ಜೇನುಗಳು ಎತ್ತರದ ಕಟ್ಟಡ
ಗಳನ್ನು ಆಶ್ರಯಿಸಲು ನಗರಗಳಿಗೆ ವಲಸೆ ಬರುವುದು ಅನಿವಾರ್ಯ. ಮಾನವ ಮತ್ತು ಹೆಜ್ಜೇನಿನ ನಡುವಿನ ಸಂಘರ್ಷ ವಿಪರೀತಗೊಂಡಿದೆ. ಆದರೆ ನೆನಪಿರಲಿ, ಜೇನುಹುಳುಗಳು ಭೂಮಿಯಿಂದ ನಿರ್ಗಮಿಸಿದರೆ ಅವು ಸಸ್ಯಗಳಲ್ಲಿ ನಡೆಸುವ ಪರಾಗಸ್ಪರ್ಶ ಕ್ರಿಯೆ ಕುಂಠಿತಗೊಂಡು ಆಹಾರ ಪದಾರ್ಥಗಳ ಉತ್ಪಾದನೆ ಗಣನೀಯವಾಗಿ ಇಳಿಮುಖವಾಗುತ್ತದೆ.

ಜೇನುಹುಳುಗಳನ್ನು ಕೊಲ್ಲದೆ ಸ್ಥಳಾಂತರಿಸುವ ಮೂಲಕ ಅವುಗಳನ್ನು ಸಂರಕ್ಷಿಸುವುದರ ಜೊತೆಗೆ ಅವುಗಳಿಂದಾಗುವ ದಾಳಿಯನ್ನೂ ತಡೆಗಟ್ಟಬಹುದು. ಪ್ರಕೃತಿಯೊಂದಿಗಿನ ಸಹಬಾಳ್ವೆಯ ತತ್ವವನ್ನು ನಾವು ಅಳವಡಿಸಿಕೊಂಡು ಸಾಗುವ ಸೂತ್ರದಲ್ಲಿ, ಭೂಮಿಯ ಮೇಲೆ ಸರ್ವ ಜೀವಿಗಳೂ ಉಳಿಯುವ ಮಾರ್ಗವಿದೆ.

ಲೇಖಕ: ಸಹಾಯಕ ಪ್ರಾಧ್ಯಾಪಕ, ಕೃಷಿ ವಿಶ್ವವಿದ್ಯಾಲಯ ಜಿಕೆವಿಕೆ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.