ADVERTISEMENT

ಸಂಗತ: ಬದಲಾಗುತ್ತಿವೆ ನಿರೀಕ್ಷೆಗಳು...

ನಿರಂಜನ್‌
Published 31 ಅಕ್ಟೋಬರ್ 2022, 20:00 IST
Last Updated 31 ಅಕ್ಟೋಬರ್ 2022, 20:00 IST
ಸಂಗತ: ಬದಲಾಗುತ್ತಿವೆ ನಿರೀಕ್ಷೆಗಳು...
ಸಂಗತ: ಬದಲಾಗುತ್ತಿವೆ ನಿರೀಕ್ಷೆಗಳು...   

ಆ ಯುವಕನನ್ನು ಅನೇಕ ವರ್ಷಗಳಿಂದ ಬಲ್ಲೆ. ದಿನನಿತ್ಯ ತಳ್ಳುಗಾಡಿಯಲ್ಲಿ ನಮ್ಮ ಬಡಾವಣೆಯಲ್ಲಿ ಸೊಪ್ಪು ಮಾರುತ್ತಾನೆ. ‘ಸೊಪ್ಪೂ’ ಎಂಬ ಅವನ ಕೂಗು ಮಾಮೂಲಿಯಾಗಿದ್ದು, ಒಂದು ದಿನ ಅವನು ಬಾರದಿದ್ದರೆ ಗೊತ್ತಾಗುತ್ತದೆ.

ಈಚೆಗೆ ಮನೆ ಮುಂದೆ ನಿಂತ ಅವನು, ‘ನನಗೆ ಸರ್ಕಾರಿ ಕಚೇರಿಯಲ್ಲಿ ಎಲ್ಲಿಯಾದರೂ ಒಂದು ಟೆಂಪರರಿ ಕೆಲಸ ಕೊಡಿಸಿ ಸಾರ್’ ಎಂದ. ಅವನ ಈ ಬೇಡಿಕೆ ನನಗೆ ಅನಿರೀಕ್ಷಿತವಾಗಿತ್ತು. ‘ಇಷ್ಟು ಚೆನ್ನಾಗಿ ಸೊಪ್ಪು ಮಾರುತ್ತೀಯ. ಇದೊಂದು ಸ್ವತಂತ್ರ ಉದ್ಯೋಗ. ಪ್ರತಿದಿನ ಮನೆಗೆ ಹೋಗುವಾಗ ಕೈಯಲ್ಲಿ ಖರ್ಚಿಗೆ ಕಾಸಿರುತ್ತದೆ. ನಿನಗೆ ಬೇಕಾದಷ್ಟು ದುಡಿಯಬಹುದು. ಇದನ್ನು ಬಿಟ್ಟು ಸರ್ಕಾರಿ ಜೀತಕ್ಕೆ ಅದರಲ್ಲೂ ಟೆಂಪರರಿ ಕೆಲಸಕ್ಕೆ ಬರ್ತೇನೆ ಅಂತೀಯಲ್ಲ, ಅಲ್ಲಿ ನಿನಗೆ ಸ್ವಾತಂತ್ರ್ಯ ಇರುತ್ತಾ, ನಾಳೆಯ ಬಗ್ಗೆ ವಿಶ್ವಾಸ ಇರುತ್ತಾ, ನೆಮ್ಮದಿಯಿಂದ ಜೀವನ ಕಟ್ಟಿಕೊಳ್ಳಲು ಸಾಧ್ಯವಾ’ ಎಂದು ದೀರ್ಘ ಉಪನ್ಯಾಸ ನೀಡಿದೆ. ಅದನ್ನು ತುಂಡರಿಸುವ ಹಾಗೆ ಅವನು ಹೇಳಿದ. ‘ಅದೆಲ್ಲ ಸರಿ ಸಾರ್, ಆದರೆ ಸೊಪ್ಪು ಮಾರುವವನಿಗೆ ಹೆಣ್ಣು ಕೊಡೋರು ಯಾರೂ ಇಲ್ವಲ್ಲಾ ಸಾರ್, ಎಲ್ಲ ಹೆಣ್ಣುಮಕ್ಕಳೂ ಸರ್ಕಾರಿ ಉದ್ಯೋಗಿಯನ್ನೇ ಬಯಸುತ್ತಾರೆ. ತಾತ್ಕಾಲಿಕವೋ ಕಾಯಂ ಕೆಲಸವೋ ಅಂತೂ ಸರ್ಕಾರಿ ನೌಕರಿ ಇಲ್ಲದವರಿಗೆ ಈಗ ಹೆಣ್ಣು ಸಿಗ್ತಿಲ್ಲ ಸಾರ್’ ಎಂದು ಅಲವತ್ತುಕೊಂಡ.

ಇಂಥದ್ದೇ ಇನ್ನೊಂದು ಪ್ರಸಂಗವನ್ನು ಎದುರಿಸಿದ್ದೇನೆ. ವಿಶ್ವವಿದ್ಯಾಲಯವೊಂದರಲ್ಲಿ ತಾತ್ಕಾಲಿಕ ನೌಕರಿಗೆ ಕಷ್ಟುಪಟ್ಟು ಒಬ್ಬ ಸೇರಿಕೊಂಡಿದ್ದ. ಅದಕ್ಕೆ ಯಾರಿಗೋ ಲಕ್ಷಾಂತರ ರೂಪಾಯಿ ಕೈಬಿಸಿ ಮಾಡಿದ್ದಾಗಿಯೂ ಹೇಳಿಕೊಂಡಿದ್ದ. ಇಲ್ಲಿಗೆ ಸೇರುವ ಮೊದಲು ಆತ ಖಾಸಗಿ ಷೋರೂಂ ಒಂದರಲ್ಲಿ ಒಳ್ಳೆಯ ಕೆಲಸದಲ್ಲಿ ಇದ್ದ. ‘ಯಾಕಪ್ಪಾ ಅದನ್ನು ಬಿಟ್ಟು ಈ ಕಾರಕೂನಿಕೆಗೆ ಸೇರಿಕೊಂಡೆ? ಇಲ್ಲಿ ಕಾಯಂ ಆಗುವುದು ಇನ್ನು ಎಷ್ಟು ವರ್ಷಕ್ಕೋ! ಅದೂ ಗ್ಯಾರಂಟಿ ಯೇನಿಲ್ಲ. ಅಲ್ಲಿಯವರೆಗೂ ಭವಿಷ್ಯದ ನಂಬಿಕೆಯೇ ಇಲ್ಲದೆ ಜೀತದಾಳುಗಳಂತೆ ಕೆಲಸ ಮಾಡಬೇಕಲ್ವಾ’ ಅಂದೆ. ‘ನಿಜ ಸಾರ್, ಆಗಲೇ ನನಗೆ ಇಲ್ಲಿಗಿಂತ ಹೆಚ್ಚು ಸಂಬಳ-ಸಾರಿಗೆ ಅಲ್ಲಿತ್ತು. ಆದರೂ ಪಾಲಕರ ಒತ್ತಾಯದ ಮೇಲೆ ಸರ್ಕಾರಿ ವ್ಯವಸ್ಥೆಗೆ ಬರಬೇಕಾಯ್ತು. ಯಾಕೆಂದರೆ ನನಗೆ ಮೂವತ್ತರ ಮೇಲಾದರೂ ಇನ್ನೂ ಮದುವೆಯಿಲ್ಲ. ನಮ್ಮಲ್ಲಿ ಯಾವ ಹುಡುಗಿಯೂ ಖಾಸಗಿ ಕಂಪನಿ ಎಂದರೆ ಒಪ್ಪುತ್ತಿಲ್ಲ. ತಾತ್ಕಾಲಿಕ
ವಾದರೂ ಸರಿ ಸರ್ಕಾರಿ ಸೇವೆಗೆ ಸೇರು ಅಂತ ಪಾಲಕರು ಗಂಟು ಬಿದ್ದರು. ಇಲ್ಲಿಯ ತಾತ್ಕಾಲಿಕ ಸಂಬಳ ನನಗೆ ಯಾತಕ್ಕೂ ಸಾಲುತ್ತಿಲ್ಲ. ಮದುವೆಯೊಂದು ಆದರೆ ಮತ್ತೆ ನಾನು ಕಂಪನಿಗೇ ಹೋಗುತ್ತೇನೆ’ ಎಂದ. ‘ಹಾಗೆ ಮಾಡಿದರೆ ಹುಡುಗಿಗೆ ಮೋಸ ಮಾಡಿದಂತೆ ಅಲ್ವಾ’ ಎಂಬ ನನ್ನ ಪ್ರಶ್ನೆಗೆ ಅವನ ಬಳಿ ಉತ್ತರವಿರಲಿಲ್ಲ.

ADVERTISEMENT

ಸರ್ಕಾರಿ ಸೇವೆಯಲ್ಲಿರುವ ಇನ್ನೊಬ್ಬ ತಾತ್ಕಾಲಿಕ ನೌಕರ ಇತ್ತೀಚೆಗೆ ಮನವಿ ಹಿಡಿದು ಬಂದ. ಅವನ ಒತ್ತಾಯ– ‘ಸರ್ ನನಗೆ ವಯಸ್ಸಾಗುತ್ತಿದೆ. ಹುಡುಗಿಯನ್ನು ನೋಡಲು ಹೋದರೆ ನೌಕರಿ ಕಾಯಂ ಆಗಿದೆಯಾ ಅಂತ ಕೇಳುತ್ತಾರೆ. ತಾತ್ಕಾಲಿಕ ಎಂದರೆ ಮುಖ ತಿರುಗಿಸಿ ನಡೆಯುತ್ತಾರೆ. ನನಗೆ ಒಂದು ಮದುವೆ ಆಗಬೇಕಾದರೆ ಕಾಯಂ ಮಾಡಿ ಪುಣ್ಯ ಕಟ್ಟಿಕೊಳ್ಳಿ’.

ನನಗೆ ಗೊತ್ತಿರುವಂತೆ ಬೆಂಗಳೂರು, ಮೈಸೂರು ಸೇರಿದಂತೆ ಕರ್ನಾಟಕದ ಅನೇಕ ನಗರಗಳಲ್ಲಿ ದೇವಸ್ಥಾನಗಳಲ್ಲಿ ಪೂಜೆ ಮಾಡುವ ಮಲೆನಾಡಿನ ಸಹಸ್ರಾರು ಹುಡುಗರಿದ್ದಾರೆ. ಅವರು ವೇದ-ಮಂತ್ರ ಕಲಿತು ಬಂದವರು. ವಿದ್ಯಾವಂತರು ಹೆಚ್ಚಿದಷ್ಟೂ ಸಮಾಜದಲ್ಲಿ ಅವರ ಅಗತ್ಯ ಹೆಚ್ಚುತ್ತಿರುವುದರಿಂದ ವೈದಿಕ ಕಾರ್ಯಗಳನ್ನು ಸಾಗಿಸಲು ಅವರಿಗೆ ದಿನಂಪ್ರತಿ ಕೆಲಸವಿರುತ್ತದೆ. ಒಂದು ದಿನವೂ ಖಾಲಿ ಕೂರಬೇಕಾದ ಪ್ರಮೇಯವಿಲ್ಲ. ಜುಯ್‌ ಅಂತ ಕಾರು- ಬೈಕುಗಳಲ್ಲಿ ಬರುತ್ತಾರೆ. ನೀವು ಹೇಳಿದ ದೇವರ ಕಾರ್ಯ ಮಾಡಿಸುತ್ತಾರೆ, ನಿಗದಿತ ದಕ್ಷಿಣೆ ಪಡೆದು ತೆರಳುತ್ತಾರೆ. ಯಾರ ಹಂಗೂ ಇಲ್ಲ. ಯಾರಿಗೂ ಜೀಯಾ ಎನ್ನಬೇಕಿಲ್ಲ. ದೊಡ್ಡ ನಗರದಲ್ಲಿ ಗೌರವದ ಸಂಪಾದನೆ ಅವರದಾಗಿದೆ. ಅವರಿಗೆ ಜೀವನಕ್ಕೆ ಯಾವುದೇ ಕೊರತೆಯಿಲ್ಲ. ಆದರೆ ಬಹಳಷ್ಟು ಯುವಕರಿಗೆ ಮದುವೆಯಿಲ್ಲ! ಯಾಕೆಂದರೆ ಪುರೋಹಿತರಿಗೆ ಹುಡುಗಿ ಸಿಗುತ್ತಿಲ್ಲ!

ಇನ್ನು ಹಳ್ಳಿಗಳಿಗೆ ಹೋದರೆ ಪರಂಪರಾಗತ ಕೃಷಿಯನ್ನು ನಂಬಿ ಬದುಕು ಮಾಡುವ ಸಹಸ್ರಾರು ಯುವಕರು ಇದ್ದಾರೆ. ಇವರಿಗೆ ನಗರದ ಜಂಜಾಟ ಬೇಡ. ‘ಕಷ್ಟವೋ ನಷ್ಟವೋ ಕೃಷಿಯನ್ನೇ ನಂಬಿ ಜೀವನ ಮಾಡುತ್ತೇನೆ, ಸ್ವತಂತ್ರವಾಗಿ ಬದುಕು ಮಾಡುತ್ತೇನೆ’ ಎಂಬ ಹಟ ಅವರಿಗಿದೆ. ಕೋವಿಡ್ ಬಳಿಕವಂತೂ ಅನೇಕ ವಿದ್ಯಾವಂತರಿಗೆ ಹಳ್ಳಿಯ ಬದುಕಿನ ಮೌಲ್ಯ ಅರ್ಥವಾಗಿದೆ. ಸಾಫ್ಟ್‌ವೇರ್ ಕೆಲಸವನ್ನು ತೊರೆದು ಹಳ್ಳಿಗಳಿಗೆ ಮರಳಿ ಬದುಕು ಕಟ್ಟಿಕೊಳ್ಳಲು ಶ್ರಮಿಸುತ್ತಿರುವ ಅನೇಕ ಯುವಕರು ಇದ್ದಾರೆ. ಆದರೆ ಕೃಷಿಯನ್ನೇ ನಂಬಿ ಹಳ್ಳಿಯಲ್ಲಿ ಉಳಿದ ಹುಡುಗರ ಸಮಸ್ಯೆಯೆಂದರೆ ಅವರಿಗೆ ಹೆಣ್ಣು ಕೊಡುವವರಿಲ್ಲ! ಹುಡುಗಿಯರಿಗೆ ಹಳ್ಳಿಗಳಲ್ಲಿ ಇರುವವರು ಬೇಡವಂತೆ!

ಅಂತೂ ಸಮಕಾಲೀನ ಸಮಾಜದಲ್ಲಿ ಹೆಣ್ಣು ಮಕ್ಕಳ ನಿರೀಕ್ಷೆಗಳು ಬದಲಾಗುತ್ತಿವೆ. ಮುಂದೇನು ದಾರಿ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.