ADVERTISEMENT

ಸಂಗತ | ಯಾಕೀ ಭ್ರಷ್ಟಾಚಾರದ ಬುಡುಬುಡಿಕೆ?

ಇಡೀ ಚುನಾವಣಾ ವ್ಯವಸ್ಥೆಯೇ ಅಧಿಕಾರ ಹಿಡಿಯಲು ಕೊಪ್ಪರಿಗೆಗಟ್ಟಲೆ ಹಣ ಚೆಲ್ಲುವ, ಚೆಲ್ಲಿದ ಹತ್ತರಷ್ಟನ್ನು ವಾಪಸು ದುಡಿಯಲು ಅಧಿಕಾರವನ್ನೇ ಬಳಸುವ ಭ್ರಷ್ಟ ವರ್ತುಲ ಸೃಷ್ಟಿಯಾಗಿದೆ

ಎನ್.ಎಸ್.ಶಂಕರ್
Published 3 ಮೇ 2023, 18:38 IST
Last Updated 3 ಮೇ 2023, 18:38 IST
   

ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ‘ಭ್ರಷ್ಟಾಚಾರಮುಕ್ತ’ ಮಾಡುವ ಭರವಸೆಯೊಂದಿಗೆ ಈ ಬಾರಿಯ ಚುನಾವಣೆಯಲ್ಲಿ ಪ್ರಚಾರಕಣಕ್ಕೆ ಇಳಿದಿದ್ದಾರೆ. ಸಂತೋಷದ ವಿಷಯವೇ. ಲಂಚಗುಳಿತನ ಎಂಬುದು, ದೇಶದ ಆರ್ಥಿಕ ಚಕ್ರವನ್ನೇ ಹಳಿ ತಪ್ಪಿಸಿ ಕಳ್ಳರಿಗೂ ಪೊಲೀಸರಿಗೂ ನಡುವಣ ಗೆರೆಯನ್ನೇ ಅಳಿಸಿ ಹಾಕುವ ಪೆಡಂಭೂತ. ಆದರೆ ಈ ಆರೋಪಲಹರಿಯ ವಿಪರ್ಯಾಸವನ್ನು ಯಾರೂ ಗಮನಿಸಿಲ್ಲ- ಭ್ರಷ್ಟಾಚಾರದ ಆಪಾದನೆ ಮಾಡುತ್ತಿರುವುದು ಆಡಳಿತ ಪಕ್ಷ. ಅಂದರೆ ಭ್ರಷ್ಟರಾಗಲು ಸುವರ್ಣಾವಕಾಶ ಪಡೆದ ಅಧಿಕಾರದ ಶಕ್ತಿಕೇಂದ್ರ. ಆರೋಪ ಹೊರೆಸುತ್ತಿರುವುದು ವಿರೋಧ ಪಕ್ಷಗಳ ವಿರುದ್ಧ! ಅಂತೂ ಚುನಾವಣೆ ಸಂದರ್ಭ ಎಂದ ಮೇಲೆ ಇಂಥ ಅಸಂಗತ ಪ್ರಹಸನಗಳು ಕಾಣಲೇಬೇಕಲ್ಲ?!

ಚೋದ್ಯದ ಸಂಗತಿಯೆಂದರೆ, ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ಮಾಡುತ್ತ ಭ್ರಷ್ಟಾಚಾರದ ವಿರುದ್ಧ ಪ್ರಧಾನಿ ಸೊಲ್ಲೆತ್ತಿದ ದಿನವೇ ಇಲ್ಲಿ ಮಾಡಾಳ್‌ ಪ್ರಶಾಂತ್‌ ₹ 40 ಲಕ್ಷ ಲಂಚದ ಹಣದೊಂದಿಗೆ ಸಿಕ್ಕಿಬಿದ್ದರೆ, ಮರುದಿನ ಅವರ ತಂದೆ, ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ  ಮನೆಯಲ್ಲಿ ₹ 6 ಕೋಟಿಗೂ ಹೆಚ್ಚು ಹಣವು ಭ್ರಷ್ಟಾಚಾರ ವಿರೋಧಿ ದಳದ ಕೈವಶವಾಯಿತು!

ಅದು ಹೇಗಾದರೂ ಇರಲಿ, ಇಲ್ಲಿ ಕೆಲವು ಅಂಕಿಅಂಶಗಳು ಪರಿಶೀಲನೆಗೆ ಯೋಗ್ಯವಾಗಿವೆ:
2019ರಲ್ಲಿ ದೇಶದ 543 ಲೋಕಸಭಾ ಕ್ಷೇತ್ರಗಳ ಪೈಕಿ 542ರಲ್ಲಿ ಮತದಾನ ನಡೆಯಿತು. ಬಿಜೆಪಿಯನ್ನು ಅಭೂತಪೂರ್ವ ಬಹುಮತದೊಂದಿಗೆ ಅಧಿಕಾರಕ್ಕೆ ತಂದ ಆ ಚುನಾವಣೆಯಲ್ಲಿ ಎಲ್ಲ ಪಕ್ಷಗಳು ಸೇರಿ ವೆಚ್ಚ ಮಾಡಿದ ಒಟ್ಟು ಹಣ ಸುಮಾರು ₹ 55 ಸಾವಿರ ಕೋಟಿ ಎಂದು ದೆಹಲಿಯ ‘ಸೆಂಟರ್ ಫಾರ್ ಮೀಡಿಯಾ’ ಸಂಸ್ಥೆ ಅಂದಾಜು ಮಾಡಿದೆ. ಇದಿಷ್ಟೂ ಲೆಕ್ಕಕ್ಕೆ ಸಿಗುವ ವೆಚ್ಚವೆಂದೂ, ವಾಸ್ತವದಲ್ಲಿ ಖರ್ಚುವೆಚ್ಚ ಇದಕ್ಕಿಂತಲೂ ಹೆಚ್ಚೆಂದೂ ಆ ಸಂಸ್ಥೆ ವಿವರಿಸಿತ್ತು. ಆ ಪೈಕಿ ಸುಮಾರು ಅರ್ಧದಷ್ಟು ಮೊತ್ತ ಆಳುವ ಬಿಜೆಪಿ ಪಕ್ಷವೊಂದೇ ಭರಿಸಿದ್ದು! ಅಂದರೆ ಬಿಜೆಪಿಯೊಂದೇ 542 ಕ್ಷೇತ್ರಗಳಿಗಾಗಿ ₹ 27 ಸಾವಿರ ಕೋಟಿಗೂ ಹೆಚ್ಚು ವ್ಯಯಿಸಿದೆ. ಒಂದು ಕ್ಷೇತ್ರಕ್ಕೆ ಸರಾಸರಿ 50 ಕೋಟಿ ರೂಪಾಯಿಗೂ ಹೆಚ್ಚು! ಈ ಮೊತ್ತ ಎಲ್ಲಿಂದ ಬಂತು? ಇದು, ಆ ಪಕ್ಷದ ಧುರೀಣರು ಹೊಲದಲ್ಲಿ ಉತ್ತು ಬಿತ್ತು ಕಳೆ ಕಿತ್ತು ಸಂಪಾದಿಸಿದ ಹಣವೇ? ಜೊತೆಗೆ ಇತರ ಪಕ್ಷಗಳು ಕೂಡ, ಇಷ್ಟಲ್ಲವಾದರೂ ಕೋಟಿ ಕೋಟಿ ಸುರಿದಿದ್ದಂತೂ ನಿಜವಲ್ಲವೇ? ಅದೆಲ್ಲಿಂದ ಬಂತು?

ADVERTISEMENT

ಇದಾದ ಮೇಲೆ ಬೇರೆ ಬೇರೆ ರಾಜ್ಯಗಳಲ್ಲಿ ಯಾವುದೇ ಪಕ್ಷ ಆರಿಸಿ ಬಂದಿರಲಿ, ಬಿಜೆಪಿ ತನ್ನ ಕುಖ್ಯಾತ ‘ಆಪರೇಷನ್ ಕಮಲ’ದ ಮೂಲಕ ಶಾಸಕರನ್ನು ಕೊಂಡುಕೊಂಡು ತನ್ನದೇ ನೇತೃತ್ವದ ಸರ್ಕಾರ ಸ್ಥಾಪಿಸಿದ್ದನ್ನು ದೇಶ ಕಣ್ಣು ಬಾಯಿ ಬಿಟ್ಟುಕೊಂಡು ನೋಡಲಿಲ್ಲವೇ? ಈವರೆಗೆ ದೇಶದಾದ್ಯಂತ ಅಂಥ ಆಪರೇಷನ್ನುಗಳಿಗಾಗಿ ಆ ಪಕ್ಷ ₹ 6,000 ಕೋಟಿಗೂ ಹೆಚ್ಚು ಹಣ ವಿನಿಯೋಗಿಸಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಲೆಕ್ಕ ಕೊಟ್ಟರು.

ಇಷ್ಟರ ಮೇಲೆ ರಾಜಕೀಯ ಪಕ್ಷಗಳು ಯಾವುದೇ ಲೆಕ್ಕಪತ್ರವಿಲ್ಲದೆ ಚುನಾವಣಾ ಬಾಂಡ್‍ಗಳ ಮೂಲಕ ದೇಣಿಗೆ ಸಂಗ್ರಹಿಸಬಹುದೆಂಬ ಕಾನೂನು ತರಲಾಯಿತು. ಆ ಮೂಲಕ 17 ಪಕ್ಷಗಳು 2022ರವರೆಗೆ ಸಂಗ್ರಹಿಸಿದ ಒಟ್ಟು ಮೊತ್ತ ₹ 9,208 ಕೋಟಿಯಷ್ಟಾದರೆ, ಆ ಪೈಕಿ ಬಿಜೆಪಿಯೊಂದಕ್ಕೇ ₹ 5,270 ಕೋಟಿ ಸಂದಿದೆ ಎಂದು ವರದಿಯಾಗಿದೆ. ಅದಷ್ಟೂ ‘ಬೇನಾಮಿ’ ಹಣ. ಅಂದರೆ ಲೆಕ್ಕವಿಲ್ಲ, ಪತ್ರವಿಲ್ಲ. ಹಣ ಕೊಟ್ಟಿದ್ದು ಯಾರು, ಅದರ ಮೂಲವೇನು, ಯಾಕೆ ಕೊಟ್ಟರು, ಕೊಟ್ಟಿದ್ದಕ್ಕೆ ಯಾವ ಪ್ರತಿಫಲದ ಭರವಸೆ ಸಿಕ್ಕಿದೆ, ಯಾರೂ ಕೇಳುವಂತಿಲ್ಲ! ಚುನಾವಣಾ ಬಾಂಡ್ ಮೂಲಕ ಸಂಗ್ರಹವಾದದ್ದಷ್ಟೂ ದುಡ್ಡು ವಿನಿಯೋಗವಾಗುವುದು ಚುನಾವಣೆಗಾಗಿಯೇ! ಅಂದರೆ ಇಡೀ ಚುನಾವಣಾ ವ್ಯವಸ್ಥೆಯೇ ಅಧಿಕಾರ ಹಿಡಿಯಲು ಕೊಪ್ಪರಿಗೆಗಟ್ಟಲೆ ಹಣ ಚೆಲ್ಲುವ, ಚೆಲ್ಲಿದ ಹತ್ತರಷ್ಟನ್ನು ವಾಪಸು ದುಡಿಯಲು ಅಧಿಕಾರವನ್ನೇ ಬಳಸುವ ಭ್ರಷ್ಟ ವರ್ತುಲ. ಹೇಳುವುದೇನು? ಭ್ರಷ್ಟಾಚಾರದ ಬಟಾಬಯಲು ನಂಗಾನಾಚ್ ಇದು. ಯಾರೇನೇ ಹೇಳಲಿ, ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಸುರಿಯುವ ಈ ದುಡ್ಡು ಅಂತಿಮವಾಗಿ ಯಾರದು?

ಉತ್ತರ ಸರಳವಾಗಿದೆ. ಇದಿಷ್ಟೂ ಜನರ ದುಡ್ಡು. ಅಂದರೆ ತೆರಿಗೆದಾರರ ಶ್ರಮದ ದುಡಿಮೆಯ ಫಲ. ರಾಜಕೀಯ ಪಕ್ಷಗಳು ಸೂರೆ ಮಾಡುವ ಹಣ ಇದು. ಅಂದರೆ ನೇರಾನೇರ ಭ್ರಷ್ಟಾಚಾರದ ಹಣ. ಆದರೆ ವೋಟಿಗೆ ಇಂತಿಷ್ಟು ಹಣ, ಕುಕ್ಕರ್, ಸೀರೆಯಂಥ ಲಂಚ ಸ್ವೀಕರಿಸುವ ನಮ್ಮ ನತದೃಷ್ಟ ದೇಶದ ಮತದಾರರಿಗೂ ಭ್ರಷ್ಟಾಚಾರದ ಬಗ್ಗೆ ಗಂಭೀರ ಆಕ್ಷೇಪಗಳು ಇದ್ದಂತಿಲ್ಲ. ಹೇಗೂ ದುಡ್ಡಿಲ್ಲದೆ ಚುನಾವಣೆ ನಡೆಯುವುದನ್ನು ಇಲ್ಲಿ ಊಹಿಸುವುದೂ ಸಾಧ್ಯವಿಲ್ಲದಂಥ ಸ್ಥಿತಿ ತಲುಪಿದ್ದೇವೆ.

ಮತ್ತೆ ಈ ಭ್ರಷ್ಟಾಚಾರದ ಬುಡುಬುಡಿಕೆ ಯಾಕೆ? ಆ ಒಣ ಮಾತುಗಳ, ವೀರಾವೇಶದ ಘೋಷಣೆಗಳ ಬಡಿವಾರವೇಕೆ? ಯಾರನ್ನು ಯಾಮಾರಿಸಲು ಆ ಉಗ್ರಪ್ರತಾಪ? ಇವರಿಗೆ ನಸುವಾದರೂ ಲಜ್ಜೆಯಿದ್ದರೆ ಕೊನೆಪಕ್ಷ ತಮ್ಮ ಪ್ರಚಾರದಲ್ಲಿ ಲಂಚ, ರುಷುವತ್ತಿನ ಪ್ರಸ್ತಾಪವನ್ನೇ ನಿಲ್ಲಿಸಲಿ. ಮಿಕ್ಕಂತೆ ಬೇರೆ ಏನನ್ನಾದರೂ ಹೇಳಿಕೊಳ್ಳಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.