ADVERTISEMENT

ಸಂಗತ: ಮಹಿಳೆಯರ ಸಾಧನೆಗೆ ವಿಜ್ಞಾನರಂಗ ಮಣೆ ಹಾಕುತ್ತಿಲ್ಲವೇ? ನಿಮಗೆಷ್ಟು ಗೊತ್ತು?

ಮಹಿಳೆಯರ ಸಾಧನೆಗೆ ವಿಜ್ಞಾನರಂಗ ಮಣೆ ಹಾಕುತ್ತಿಲ್ಲ ಎಂಬ ಆರೋಪವಿದೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2022, 20:45 IST
Last Updated 10 ಫೆಬ್ರುವರಿ 2022, 20:45 IST
   

ಯಾವುದೇ ಶಾಲೆ ಕಾಲೇಜಿನ ಮಕ್ಕಳನ್ನು ಅವರಿಗೆ ಗೊತ್ತಿರುವ ನಾಲ್ಕೈದು ವಿಜ್ಞಾನಿಗಳ ಹೆಸರು ಹೇಳಿ ಎಂದು ಕೇಳಿನೋಡಿ. ಬಹುತೇಕರು ನ್ಯೂಟನ್, ಡಾರ್ವಿನ್, ರಾಮನ್, ಐನ್‍ಸ್ಟೀನ್, ಎಡಿಸನ್‍ರ ಹೆಸರುಗಳನ್ನು ತಡಮಾಡದೇ ಹೇಳುತ್ತಾರೆ. ಅಪರೂಪಕ್ಕೆಂಬಂತೆ ಮೇಡಂ ಕ್ಯೂರಿ ಅವರ ಹೆಸರೂ ಕೇಳಿಬರುತ್ತದೆ. ಹೆಚ್ಚೆಂದರೆ ಕ್ಯೂರಿ ಅವರ ಮಗಳು ಐರೀನ್ ಬಗ್ಗೆಯೂ ಮಾತು ಬರಬಹುದು. ಅಲ್ಲಿಂದಾಚೆಗೆ ಮಕ್ಕಳಿಗೆ ಯಾವ ಮಹಿಳಾ ವಿಜ್ಞಾನಿಯ ಹೆಸರೂ ತಿಳಿದಿರುವುದಿಲ್ಲ.

ಪದ್ಮಶ್ರೀ ಪ್ರಶಸ್ತಿ ಪಡೆದ ಮೊದಲ ಭಾರತೀಯ ಸಸ್ಯಶಾಸ್ತ್ರಜ್ಞೆ ಜಾನಕಿ ಅಮ್ಮಾಳ್, ಮೂರ್ಛೆರೋಗಕ್ಕೆ ಮದ್ದು ಕಂಡುಹಿಡಿದ ಅಸೀಮಾ ಚಟರ್ಜಿ, ನರ ವಿಜ್ಞಾನಕ್ಕೆ ಕೊಡುಗೆ ನೀಡಿದ ಶುಭಾ ತೊಲೆ, ಎಲ್ಲ ಋತುಮಾನಗಳಿಗೂ ಸಲ್ಲುವ ಬೀಜ ಸಂಸ್ಕರಿಸಿದ ಪರಮ್‍ಜೀತ್ ಖುರಾನ, ಡಾರ್ಕ್‌ ಲೇಡಿ ಆಫ್ ಡಿಎನ್‍ಎ ಎಂದು ಖ್ಯಾತರಾದ ಚೀನಾದ ಚಿಯೆನ್ ಶಿಂಗ್‍ವು, ನೊಬೆಲ್ ಪ್ರಶಸ್ತಿ ವಿಜೇತೆ ಡೊರೋಥಿ ಹಾಡ್‍ಕಿನ್, ಯುರೋಪಿನ ಮೇರಿ ಕ್ಯೂರಿ ಲೈಸ್ ಮಿಟ್ನರ್, ಗಣಿತಜ್ಞೆ ಮಂಗಳಾ ನಾರಳೀಕರ್, ಅನೀಮಿಯಾಕ್ಕೆ ಮದ್ದು ಹುಡುಕಿದ ವೈದ್ಯೆ ಫ್ರೀಡಾ ರಾಬಿನ್ಸ್, ನ್ಯೂಕ್ಲಿಯರ್ ಕವಚ ರಚಿಸಿ ನೊಬೆಲ್ ಪ್ರಶಸ್ತಿ ಪಡೆದ ಮಾರಿಯಾ ಜಾಪರ್ಟ್, ಅಮೆರಿಕಕ್ಕೆ ನೊಬೆಲ್‍ ಪ್ರಶಸ್ತಿ ಗಳಿಸಿಕೊಟ್ಟ ಮೊದಲ ಮಹಿಳೆ ಗೆರ್ಟಿಕೋರಿ, ಭಾರತದ ಮಿಸೈಲ್‍ ವುಮನ್ ಟೆಸ್ಸಿ ಥಾಮಸ್, ಅಬೆಲ್ ಪ್ರಶಸ್ತಿ ಪಡೆದ ಮೊದಲ ಮಹಿಳೆ ಕರೆನ್ ಲೆಹನ್‍ಬೆಕ್‍ ಅವರ‍್ಯಾರೂ ನಮ್ಮ ಮಕ್ಕಳಿಗೆ ಗೊತ್ತಿರುವುದಿಲ್ಲ. ಮಾಧ್ಯಮಗಳೂ ಇದಕ್ಕೆ ಹೊರತಲ್ಲ. ಇದೇ ಹೊತ್ತಿನಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯರ ಸಾಧನೆ ಗುರುತಿಸುವ ‘ಇಂಟರ್‌ನ್ಯಾಷನಲ್ ಡೇ ಆಫ್‌ ವಿಮೆನ್ ಆ್ಯಂಡ್‌ ಗರ್ಲ್ಸ್‌ ಇನ್‍ ಸೈನ್ಸ್’ (ಫೆ. 11) ಮತ್ತೆ ಬಂದಿದೆ.

ಪ್ರಶಸ್ತಿಗಳ ವಿಷಯದಲ್ಲೂ ಅಷ್ಟೆ. ನೊಬೆಲ್, ಅಬೆಲ್, ಫೀಲ್ಡ್ಸ್ ಮೆಡಲ್ ಯಾವುದೇ ಇರಲಿ, ಅಲ್ಲಿ ಪುರುಷರ ಹೆಸರುಗಳೇ ಹೆಚ್ಚು. ಈವರೆಗೆ ನೀಡಲಾಗಿರುವ ವಿಜ್ಞಾನ ವಿಭಾಗದ 624 ನೊಬೆಲ್ ಪ್ರಶಸ್ತಿಗಳ ಪೈಕಿ ಮಹಿಳೆಯರ ಪಾಲು ಬರೀ 23. ಗಗನಯಾನದ ವಿಷಯದಲ್ಲೂ ಮಹಿಳೆಯರನ್ನು ಎರಡನೇ ಆಯ್ಕೆಯಂತೆ ನೋಡಲಾಗುತ್ತಿದೆ. ಇದುವರೆಗೂ ಅಂತರಿಕ್ಷಯಾನ ಕೈಗೊಂಡಿರುವ ಸುಮಾರು 600 ಗಗನಯಾತ್ರಿಗಳಲ್ಲಿ ಮಹಿಳೆಯರ ಸಂಖ್ಯೆ ಬರೀ 71. ಬಾಹ್ಯಾಕಾಶಯಾನ ಮತ್ತು ವಾಸ್ತವ್ಯ ಎರಡಕ್ಕೂ ಮಹಿಳೆಯರು ಪುರುಷರಿಗಿಂತ ಬಹುಬೇಗ ಮತ್ತು ಉತ್ತಮವಾಗಿ ಹೊಂದಿಕೊಳ್ಳುತ್ತಾರೆ ಎಂಬುದು ಸಂಶೋಧನೆಗಳಿಂದ ಬೆಳಕಿಗೆ ಬಂದಿದೆಯಾದರೂ ಸ್ಪೇಸ್ ಏಜೆನ್ಸಿ ಮತ್ತು ಸರ್ಕಾರಗಳು ಮಹಿಳೆಯರನ್ನು ಆಯ್ಕೆ ಮಾಡುವಲ್ಲಿ ಹಿಂದೇಟು ಹಾಕುತ್ತಿರುವುದು ಕಳವಳಕಾರಿಯಾಗಿದೆ.

ADVERTISEMENT

ವಿಶ್ವದ ಒಟ್ಟು ಸಂಶೋಧಕರಲ್ಲಿ ಮಹಿಳೆಯರ ಪ್ರಮಾಣ ಶೇ 28ರಷ್ಟಿದೆ. ಸಂಶೋಧನೆ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿರುವ ಮಹಿಳೆ ಮತ್ತು ಪುರುಷರಿಬ್ಬರೂ ಸಮಾನವಾಗಿ ತಂತ್ರಜ್ಞಾನ ಕೌಶಲ ಸಂಪಾದಿಸುತ್ತಾರೆ. ಆದರೆ ಸೈನ್ಸ್, ಟೆಕ್ನಾಲಜಿ, ಎಂಜಿನಿಯರಿಂಗ್ ಮತ್ತು ಮ್ಯಾಥಮ್ಯಾಟಿಕ್ಸ್‌ (STEM) ಕ್ಷೇತ್ರಗಳಲ್ಲಿ ಕೆಲಸ ಮಾಡುವ ಸಂಶೋಧಕಿಯರಿಗೆ ಕಡಿಮೆ ಸಂಬಳ, ಕಡಿಮೆ ಬಡ್ತಿ ನೀಡಲಾಗುತ್ತಿದೆ ಮತ್ತು ಮಂಡಿಸಿರುವ ಪ್ರಬಂಧಗಳನ್ನು ಪರಿಶೀಲಿಸಲು ಬೇಕೆಂದೇ ದೀರ್ಘ ಸಮಯ ತೆಗೆದುಕೊಳ್ಳ
ಲಾಗುತ್ತದೆ ಎಂಬ ಆರೋಪಗಳಿವೆ. ಸಂಶೋಧನಾ ಕೆಲಸಗಳಿಗೆ ಕಡಿಮೆ ಅನುದಾನ ನೀಡುತ್ತಿರುವುದು ಬೆಳಕಿಗೆ ಬಂದಿದೆ. ವಿಜ್ಞಾನ ಸಮ್ಮೇಳನಗಳನ್ನು ಉದ್ಘಾಟಿಸಲು ಪುರುಷ ವಿಜ್ಞಾನಿಗಳನ್ನೇ ಹೆಚ್ಚಾಗಿ ಆಯ್ಕೆ ಮಾಡಲಾಗುತ್ತದೆ.

ಈಗ್ಗೆ 20 ವರ್ಷಗಳ ಹಿಂದೆ ಸಂಶೋಧನೆ ಕೈಗೊಂಡಿದ್ದ ಸ್ವೀಡನ್ನಿನ ವೈದ್ಯಕೀಯ ಸಂಶೋಧನಾ ಘಟಕ, ಪುರುಷರಿಗಿಂತ ಮಹಿಳೆಯರು ಎರಡರಷ್ಟು ಹೆಚ್ಚು ಸಂಶೋಧನಾ ಪ್ರವೃತ್ತಿಯುಳ್ಳವರು ಎಂದು ವರದಿ ನೀಡಿತ್ತು. ‘ಅಮೆರಿಕನ್ ಅಸೋಸಿಯೇಷನ್ ಆಫ್ ಯೂನಿವರ್ಸಿಟಿ ವಿಮೆನ್’ ಸಂಘಟನೆಯು ಪರಿಸರ ಮತ್ತು ಸಾಮಾಜಿಕ ಕಟ್ಟುಪಾಡುಗಳಿಂದಾಗಿಯೂ ಹಲವು ಹೆಣ್ಣು ಮಕ್ಕಳು ವಿಜ್ಞಾನ ಕ್ಷೇತ್ರದಿಂದ ದೂರುವುಳಿದಿದ್ದಾರೆ ಎಂದಿತ್ತು. ‘ಕ್ಯಾಂಪಸ್ ರೆಕ್ರೂಟ್‍ಮೆಂಟ್ ಡ್ರೈವ್’ಗಳಲ್ಲೂ ಮಹಿಳೆಯರ ಆಯ್ಕೆಯು ಪುರುಷರಿಗೆ ಹೋಲಿಸಿದರೆ ನಾಲ್ಕು ಪಟ್ಟು ಕಡಿಮೆ ಇದೆ. ಮನೆ ಮತ್ತು ಹೊರಗೆ ಎರಡು ಕಡೆಯಲ್ಲೂ ದುಡಿಯಬೇಕಾದ ಅನಿವಾರ್ಯ, ಕೆಲಸ ಮಾಡುವ ಸ್ಥಳಗಳಲ್ಲಿ ಸಹೋದ್ಯೋಗಿ ಮಹಿಳೆಯರ ಕೊರತೆಯಿಂದ ಉದ್ಭವಿಸುವ ಒಂಟಿತನ, ಶೋಷಣೆ, ಕೆಲಸದ ಸಮಯದ ನಂತರ ನಡೆಯುವ ನೆಟ್‍ವರ್ಕಿಂಗ್ ಕೂಟಗಳಲ್ಲಿ ಭಾಗವಹಿಸಲು ಆಗದಿರುವುದರಿಂದ ಮಹಿಳೆಯರು ಪುರುಷರಷ್ಟು ಸುಲಭವಾಗಿ ಸಂಶೋಧನೆಗಳಲ್ಲಿ ತೊಡಗಿಕೊಳ್ಳಲಾಗುವುದಿಲ್ಲ.

ಆದರೂ ಸಮಾಜ-ಸಂಸ್ಥೆಗಳು ಮತ್ತು ವ್ಯಕ್ತಿಗಳು ಒಡ್ಡಿದ ಅಡ್ಡಿ, ಅಪಮಾನ, ತಿರಸ್ಕಾರಗಳನ್ನು ಯಶಸ್ವಿಯಾಗಿ ಎದುರಿಸಿ ತಮ್ಮ ಸಂಶೋಧನಾ ಪ್ರವೃತ್ತಿ, ಕಠಿಣ ಶ್ರಮದಿಂದ ವಿಜ್ಞಾನ ಕ್ಷೇತ್ರದಲ್ಲಿ ಮಹತ್ವದ ಸಂಶೋಧನೆ ಮಾಡಿ, ದೊಡ್ಡ ಹೆಸರು ಸಂಪಾದಿಸಿರುವ ಅನೇಕರು ನಮ್ಮ ನಡುವೆ ಇದ್ದಾರೆ. ಎರಡೆರಡು ನೊಬೆಲ್ ಪ್ರಶಸ್ತಿಗಳನ್ನು ಗಳಿಸಿ ಮೇಲ್ಪಂಕ್ತಿ ಹಾಕಿದ ಮೇರಿ ಕ್ಯೂರಿ, ಗಣಿತದ ಅಬೆಲ್ ಬಹುಮಾನ ಪಡೆದ ಕರೆನ್ ಲೆಹನ್‍ಬೆಕ್, ಮಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಐದು ಎಂಜಿನಿಯರಿಂಗ್ ವಿಭಾಗಗಳಿಗೆ ಮಹಿಳೆಯರೇ ಮುಖ್ಯಸ್ಥರಾಗಿರುವುದು... ಮಹಿಳಾ ಸಾಧನೆಗೆ ನಿದರ್ಶನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.