ADVERTISEMENT

ಸಂಗತ | ನದಿ ಜೋಡಣೆ: ಅರಿವಿದೆಯೇ ಪರಿಣಾಮ?

ನದಿ ಜೋಡಣೆ ಯೋಜನೆಗಳ ಬಗ್ಗೆ ವ್ಯಾಪಕ ವಿಚಾರ ವಿನಿಮಯ ನಡೆಯಬೇಕಾಗಿದೆ

ಎಚ್.ಎಸ್.ಮಂಜುನಾಥ
Published 13 ಜನವರಿ 2025, 0:30 IST
Last Updated 13 ಜನವರಿ 2025, 0:30 IST
   

ಮಧ್ಯಪ್ರದೇಶ– ಉತ್ತರಪ್ರದೇಶದಲ್ಲಿ ಹರಿಯುವ ಕೆನ್‌ ಹಾಗೂ ಬೆಟ್ವಾ ನದಿಗಳನ್ನು ಜೋಡಿಸುವ ಮೆಗಾ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರದೇಶದ ಖಜುರಾಹೊದಲ್ಲಿ ಇತ್ತೀಚೆಗೆ ಉದ್ಘಾಟಿಸಿದ್ದಾರೆ. ಬುಂದೇಲ್‌ಖಂಡ ಪ್ರದೇಶದಲ್ಲಿನ ನೀರಿನ ಕೊರತೆ ನೀಗುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. ನದಿ ಜೋಡಣೆಯ ಚಿಂತನೆ ಹೊಸದೇನಲ್ಲ. ದೇಶದ ನದಿಗಳಿಗೆ ಪರಸ್ಪರ ಸಂಪರ್ಕ ಕಲ್ಪಿಸುವ ಉದ್ದೇಶದ ಗಾರ್ಲಾಂಡ್ ಕೆನಾಲ್ ಯೋಜನೆಯನ್ನು ಎಪ್ಪತ್ತರ ದಶಕದಲ್ಲಿಯೇ ಪ್ರಸ್ತಾಪಿಸಲಾಗಿತ್ತು. ಮುಂದಿನ ದಶಕಗಳಲ್ಲೂ ಇಂತಹ ಹಲವು ಬೃಹತ್ ಯೋಜನೆಗಳು ಚರ್ಚೆಗೆ ಬಂದವು.

ಕೆನ್- ಬೆಟ್ವಾ ಯೋಜನೆಯು 1995ರಷ್ಟು ಹಿಂದಿನ ವಿಚಾರ. ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಯ (ಎನ್‌ಡಬ್ಲ್ಯುಡಿಎ) ಬಳಿ‌ ಒಟ್ಟು 30 ನದಿ ಸಂಪರ್ಕ ಯೋಜನೆಗಳಿವೆ. ಇವುಗಳನ್ನು ಕಾರ್ಯಗತಗೊಳಿಸಲು ಸಾವಿರಾರು ಕೋಟಿ ರೂಪಾಯಿ ಬೇಕಾಗಬಹುದು.

ಬರದ ನಾಡಿಗೆ ವರದಾನ, ಶಾಶ್ವತ ನೀರಾವರಿ‌ ವ್ಯವಸ್ಥೆ ಎನ್ನುವಂತಹ ಮಾತುಗಳನ್ನು ಆಗಾಗ ಕೇಳು
ತ್ತಿರುತ್ತೇವೆ. ಆದರೆ ವಿಷಯ ಅಷ್ಟು ಸರಳವೂ ಅಲ್ಲ, ಸಲೀಸೂ ಅಲ್ಲ. ಉದಾಹರಣೆಗೆ, ಕರ್ನಾಟಕಕ್ಕೆ ಸಂಬಂಧಿಸಿದ ಕೃಷ್ಣಾ- ಆಲಮಟ್ಟಿ- ಪೆನ್ನಾರ್ ನದಿ ಜೋಡಣೆಯ ಸಾಧ್ಯತಾ ವರದಿ‌ ಸಲ್ಲಿಕೆಯಾಗಿದೆ. ಕೋಲಾರ, ಚಿಕ್ಕಬಳ್ಳಾಪುರ ಸಂಸದರು‌ ಹಿಂದಿನ ಜುಲೈನಲ್ಲಿ ಕೃಷ್ಣಾ ನದಿ ನೀರಿಗೆ ಬೇಡಿಕೆ ಸಲ್ಲಿಸಿದರು. ‘ಅಂತಹ ಪ್ರಸ್ತಾವ ಇಲ್ಲ’ ಎಂಬ ಉತ್ತರವು ಕೇಂದ್ರ ಜಲಶಕ್ತಿ ಸಚಿವರಿಂದ ಬಂದಿತು. ಒಂದೇ ರಾಜ್ಯದ ಎರಡು ಪ್ರದೇಶಗಳ‌ ನಡುವೆಯೇ ಇಂತಹ ವಿಷಯಗಳಲ್ಲಿ ಒಮ್ಮತ ಮೂಡುವುದು‌ ಕಷ್ಟ. ಆ ಭಾಗದವರಾದ ರಾಜ್ಯ ಸಂಪುಟ ಸಚಿವರೊಬ್ಬರೇ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು! ಪಕ್ಕದ ಆಂಧ್ರಪ್ರದೇಶದ ಗಡಿಯಲ್ಲಿನ ಹಳ್ಳಿಗಳಿಗೆ ಕೃಷ್ಣಾ ನದಿ ನೀರು‌ ಬಂದಿದೆ ಎಂಬುದು ನಮ್ಮ‌ ಗಡಿಯೊಳಕ್ಕೆ ಆ ನದಿಯ ನೀರು ಬರಲು ಸಹಾಯಕವಾಗುವ ಅಂಶ ಆಗದು!

ADVERTISEMENT

ಕೆನ್- ಬೆಟ್ವಾ ಯೋಜನೆಯ ಅಂದಾಜು ವೆಚ್ಚ ಈಗ ₹ 44,605 ಕೋಟಿ, ಅವಧಿ‌ ಎಂಟು‌ ವರ್ಷ. ಮುಖ್ಯ ಸಮಸ್ಯೆಯೆಂದರೆ, ಪನ್ನಾ ರಾಷ್ಟ್ರೀಯ ಉದ್ಯಾನದ ಮೀಸಲು ಅರಣ್ಯದ ಶೇ 10ರಷ್ಟು ಭಾಗ ಇದಕ್ಕಾಗಿ ಮುಳುಗಡೆ ಆಗಬೇಕಾಗುತ್ತದೆ. ಎಪ್ಪತ್ತೇಳು ಮೀಟರ್ ಎತ್ತರದ ಅಣೆಕಟ್ಟು, 231 ಕಿ.ಮೀ. ಉದ್ದದ ಕಾಲುವೆ, ವಿದ್ಯುತ್ ಉತ್ಪಾದನೆ (ಹೈಡ್ರೊ, ಸೋಲಾರ್ ಎರಡೂ), ಹದಿಮೂರು ಜಿಲ್ಲೆಗಳಿಗೆ ನೀರಾವರಿ... ಇವೆಲ್ಲಾ ಓದಲು ಚೆನ್ನ. ಆದರೆ ಪ್ರಾದೇಶಿಕ‌ ಪರಿಸರದ ಮೇಲೆ ಆಗುವ ಪರಿಣಾಮಗಳ‌ ಬಗೆಗೆ ಮೊದಲಿನಿಂದಲೂ ಆತಂಕ ವ್ಯಕ್ತವಾಗಿದೆ.

ಹುಲಿ ರಕ್ಷಿತಾರಣ್ಯಕ್ಕೆ ಭೇಟಿಯಿತ್ತ ಪ್ರವಾಸಿಗರ ಸಂಖ್ಯೆಯನ್ನು ಉಲ್ಲೇಖಿಸಿ, ‘ರಕ್ಷಿತಾರಣ್ಯಕ್ಕೆ ತೊಂದರೆ ಆಗದು’ ಎಂದು ಪ್ರಧಾನಿ ಹೇಳಿದ್ದಾರೆ. ಆದರೆ, ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯೇ (ಸಿಇಸಿ) ಯೋಜನೆಯ ಅನುಷ್ಠಾನಕ್ಕೆ ಮುನ್ನ ಎಚ್ಚರಿಕೆ ವಹಿಸಬೇಕೆಂಬ ಅಭಿಪ್ರಾಯ ನೀಡಿದೆ. ಸದ್ಯಕ್ಕೆ ಉತ್ತರಪ್ರದೇಶ, ಮಧ್ಯಪ್ರದೇಶ ಸರ್ಕಾರಗಳ ನಡುವೆ ಸಹಮತ ಮೂಡಿರಬಹುದು. ಆದರೆ ಪರಿಸರ, ವನ್ಯಜೀವಿ ಆಸಕ್ತರು ಉದ್ದೇಶಿತ ಯೋಜನೆಯ ವಿವರಗಳ ಬಗೆಗೆ ಆಕ್ಷೇಪಗಳನ್ನು ಎತ್ತುವ ಸಾಧ್ಯತೆ ಇದೆ.

ನದಿ ಸಂಪರ್ಕ ಯೋಜನೆಗಳ ಕುರಿತು ಕರ್ನಾಟಕವೂ ಸೇರಿದಂತೆ ನಾಲ್ಕು ರಾಜ್ಯಗಳು ಈಚೆಗೆ ಅಸಮ್ಮತಿ ಸೂಚಿಸಿವೆ. ತಮಿಳುನಾಡಿನ ನಿಲುವು ಬೇರೆ ಇದೆ. ಒಟ್ಟಾರೆ, ನದಿ ಜೋಡಣೆಯು ವಿದ್ಯುತ್ ಅಥವಾ ಆಹಾರಧಾನ್ಯ ಹಂಚಿಕೆಗಿಂತಲೂ ಕಠಿಣವಾದ ಸವಾಲು.

ಬರ ಪರಿಹಾರ, ಪ್ರವಾಹ ನಿಯಂತ್ರಣ, ಉತ್ತಮ ನೀರಾವರಿ ಸೌಲಭ್ಯ ಹೊಂದಬಹುದು ಎಂಬುವು ನದಿ ಜೋಡಣೆ ಯೋಜನೆಗಳ ಬಗೆಗಿನ ಸಾಮಾನ್ಯ ನಿರೀಕ್ಷೆಗಳು. ಬುಂದೇಲ್‌ಖಂಡ ಪ್ರದೇಶವು ಉತ್ತರಪ್ರದೇಶದ ಏಳು ಹಾಗೂ ಮಧ್ಯಪ್ರದೇಶದ ಆರು ಜಿಲ್ಲೆಗಳನ್ನು ಒಳಗೊಂಡಿದೆ. ಮಧ್ಯಪ್ರದೇಶದ ಭಾಗದಲ್ಲಿ ಹಲವು ನೈಸರ್ಗಿಕ ಸಂಪನ್ಮೂಲಗಳು ಇದ್ದರೂ (ಉದಾಹರಣೆಗೆ, ಪನ್ನಾ ವಜ್ರಗಳಿಗೆ ಪ್ರಸಿದ್ಧ), ನೀರಿನ ಕೊರತೆ ಇದೆ. ತೊರೆಗಳಿಂದ ನೀರಾವರಿ ಆಗದು. ವರ್ಷದಲ್ಲಿ ಸರಾಸರಿ 52 ಮಳೆದಿನಗಳಿದ್ದರೂ ಹಲವು ವರ್ಷ ಇದಕ್ಕಿಂತ ಕಡಿಮೆ ಮಳೆ ಆಗುವುದು ಸಾಮಾನ್ಯ. ಬೆಟ್ಟ ಗುಡ್ಡಗಳು ಬೋಳಾಗಿವೆ, ಸಸ್ಯವರ್ಗ ಕಡಿಮೆ, ಮಣ್ಣು ಅಷ್ಟು ಫಲವತ್ತಾಗಿಲ್ಲ, ಬೆಳೆ ಇಳುವರಿ ಕಡಿಮೆ. ಆದರೆ ಬೇರೆ ಜಲಾನಯನ ಪ್ರದೇಶದಿಂದ ನೀರು ತರುವುದು ಸ್ಥಾನಿಕ ಪರಿಸರದ ಸಮತೋಲನವನ್ನು ಕದಡಬಹುದು.

ನದಿ ಜೋಡಣೆ ಯೋಜನೆಗೆ ರಾಜಕೀಯ ಸಹಮತ ಇದೆ, ಕೇಂದ್ರ ಸರ್ಕಾರ ಎರಡೂ ರಾಜ್ಯಗಳ ಜತೆ ಸಮನ್ವಯ ಸಾಧಿಸಿದೆ, ನಿಜ. ಆದರೆ ಯೋಜನೆಯ ದೂರಗಾಮಿ ಪರಿಣಾಮಗಳ ಬಗೆಗೆ ಎಚ್ಚರ ವಹಿಸಬೇಕಾಗುತ್ತದೆ.

ಅಣೆಕಟ್ಟು ಸುರಕ್ಷತಾ ಕಾಯ್ದೆ– 2021 ಜಾರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಈವರೆಗೆ
ರಾಷ್ಟ್ರೀಯ ಸಮಿತಿಯನ್ನು ಕೂಡ ರಚಿಸದೇ ಇರುವುದರ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಪೋಲವರಂ ನೀರಾವರಿ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿದ್ದರೂ ಅದರ ಪ್ರಗತಿ ಕಾರ್ಯ ನಿರೀಕ್ಷಿತ ಮಟ್ಟದಲ್ಲಿ ಇಲ್ಲ.

ನದಿಯೊಂದು ಎಷ್ಟೇ ಬೃಹತ್ ಆಗಿರಲಿ, ಎಷ್ಟೇ ಉದ್ದವಿದ್ದು ವಿವಿಧ ರಾಜ್ಯಗಳ ಮೂಲಕ ಹರಿಯಲಿ ಅದನ್ನು ರಾಷ್ಟ್ರೀಕರಿಸಲಾಗದು. ಅಂತರರಾಜ್ಯ ನದಿ ವಿವಾದಗಳಲ್ಲಿ ಕೇಂದ್ರ ಏನೂ ಮಾಡಲಾಗದು. ಉದಾ
ಹರಣೆಗೆ, ಮುಲ್ಲಪೆರಿಯಾರ್ ಅಣೆಕಟ್ಟು ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಹಲವು ವರ್ಷ
ಗಳಿಂದ ವಿಚಾರಣೆ ನಡೆಸುತ್ತಲೇ ಇದೆ. ಈ ಸನ್ನಿವೇಶದಲ್ಲಿ ನದಿ ಜೋಡಣೆಯ ಎಲ್ಲ ಯೋಜನೆಗಳ ಬಗೆಗೆ ವ್ಯಾಪಕ ವಿಚಾರ ವಿನಿಮಯ, ಚರ್ಚೆ ನಡೆಸಬೇಕಾದುದು ಮತ್ತು ಪಾರದರ್ಶಕತೆ ಕಾಯ್ದುಕೊಳ್ಳಬೇಕಾದುದು ಇಂದಿನ ಅಗತ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.