ADVERTISEMENT

ಸಂಗತ: ಶಿಕ್ಷಣ ಮತ್ತು ಕೌಶಲದ ಮಹತ್ವ

ಪ್ರಮಾಣಪತ್ರವನ್ನು ಒದಗಿಸುವ ಈಗಿನ ಶಿಕ್ಷಣ, ಸದ್ಯದ ಸಮಾಜವನ್ನು ಹೇಗೆ ಕಟ್ಟುತ್ತಿದೆ ಎಂದು ಯೋಚಿಸಬೇಕು

ಸದಾಶಿವ ಸೊರಟೂರು
Published 28 ಜೂನ್ 2022, 19:41 IST
Last Updated 28 ಜೂನ್ 2022, 19:41 IST
ಸಂಗತ
ಸಂಗತ   

ಎಸ್‌ಎಸ್‌ಎಲ್‌ಸಿಯಲ್ಲಿ ತಕ್ಕಮಟ್ಟಿಗೆ ಒಳ್ಳೆ ಅಂಕ ಪಡೆದಿದ್ದ ನನ್ನ ವಿದ್ಯಾರ್ಥಿಯೊಬ್ಬ ಕಾಲೇಜು ಸೇರಿರಲಿಲ್ಲ. ಆ ಕುರಿತು ಮಾತನಾಡಲು ಅವನ ತಂದೆಯನ್ನು ಭೇಟಿಯಾದೆ. ಅನಿರೀಕ್ಷಿತ ಉತ್ತರ ಅವರಿಂದ ಬಂತು. ‘ಮಗ ಮುಂದೆ ಎರಡು ವರ್ಷ ಪಿಯುಸಿ ಓದ್ಬೇಕು, ನಂತರ ಮೂರು ವರ್ಷ ‌ಪದವಿ. ಆಮೇಲೆ ಏನು? ಮತ್ತೆ ನೌಕರಿಗೆ ಆ ಪರೀಕ್ಷೆ, ಈ ಪರೀಕ್ಷೆ. ಸಿಕ್ಕರೆ ಸಿಕ್ತು ಇಲ್ಲ ಅಂದ್ರೆ ಇಲ್ಲ.‌ ಆರೇಳು ವರ್ಷ ವ್ಯರ್ಥ. ಅಷ್ಟರಲ್ಲವನು ಮನೆ ಕೆಲಸ ಮಾಡೋದೆ ಮರೀತಾನೆ. ಹೊಲದ ಕೆಲಸ ಮನಸ್ಸಿಂದಲೇ‌ ದೂರ. ತಲೆಗೆ ಪದವಿ ತುಂಬಿರುತ್ತೆ.‌ ಅತ್ತ ನೌಕರಿ ಇಲ್ಲ, ಇತ್ತ ಮನೆಗೆ ಆಸ್ತಿಯೂ ಅಲ್ಲ. ಹೇಳಿ ಸರ್, ನನ್ನ ಮಗನ್ನ ಈ‌ ಓದಿನ ಕೈಗೆ ಕೊಟ್ಟು ಹಾಳು ಮಾಡ್ಲಾ?’ ಅಂದುಬಿಟ್ಟರು.

‘ಒಬ್ಬ ತಂದೆಯಾಗಿ ನೀವು ಹೀಗೆ ಮಾತಾಡೋದು ಸರಿಯಿಲ್ಲ. ಮಗನ ಭವಿಷ್ಯ ಮುಖ್ಯ’ ಅಂದೆ. ‘ಎಲ್ಲಾ ತಂದೆ-ತಾಯಂದಿರು ಇದೇ ಆಸೆಯಲ್ಲಿ‌ ಕಳಿಸ್ತಾರೆ. ಎಲ್ಲಾ ಮುಗಿದ ಮೇಲೆ ತಿಳಿಯುತ್ತೆ ನಾವೆಲ್ಲೋ ತಪ್ಪು ಮಾಡಿದ್ವಿ ಅಂತ.‌ ಆಗ ಕಾಲ ಮಿಂಚಿರುತ್ತೆ’ ಅಂದರು.

‘ಶಿಕ್ಷಣ ಇರೋದು ಬರೀ ನೌಕರಿಗಲ್ಲ ಯಜಮಾನ್ರೆ, ಬದುಕಿಗೆ ಬೇಕು’ ಅಂದೆ. ಅವರು ನಕ್ಕರು. ‘ಮಗನಿಗೆ ಕನ್ನಡ ಚೆನ್ನಾಗಿ ಬರುತ್ತೆ. ಇಂಗ್ಲಿಷ್ ಕೂಡ ತಕ್ಕಮಟ್ಟಿಗೆ ಓಕೆ. ಗಣಿತ ಅಡ್ಡಿಯಿಲ್ಲ. ಶಾಲೆಯಲ್ಲಿ ಒಳ್ಳೆಯದನ್ನೇ ಕಲಿಸಲಾಗುತ್ತಿದೆ. ಆದರೆ ಎಷ್ಟೋ ಜನ ಒಳ್ಳೆಯವರಾಗಿಲ್ಲ. ಓದಿದವರೇ ಸಮಾಜಕ್ಕೆ ಹೆಚ್ಚು ಸವಾಲಾಗಿರೋದು‌ ಹೊಸ ವಿಚಾರನಾ ಸರ್?’ ಎಂದು ಹೇಳಿ ಹೊರಟುಹೋದರು.

ADVERTISEMENT

‘ಮಕ್ಕಳನ್ನು ಭತ್ತ ಬೆಳೆಯುವ ಗದ್ದೆಗಳನ್ನಾಗಿ
ಮಾಡಿ; ಭತ್ತ ತುಂಬುವ ಗೋಣಿಚೀಲಗಳನ್ನಾಗಿ
ಅಲ್ಲ’ ಅಂದಿದ್ದರು‌ ಕುವೆಂಪು. ಆದರೆ ಈಗ ಪ್ರತೀ ಮಗು ಒಂದೊಂದು ಗೋಣಿಚೀಲ. ಶಿಕ್ಷಣ ಎಂದರೇನು ಎಂಬ ಪ್ರಶ್ನೆಗೆ ಉತ್ತರಿಸಲು ಹೆಚ್ಚು ತಲೆಕೆಡಿಸಿ
ಕೊಳ್ಳಬೇಕಾಗಿಲ್ಲ. ‘ಒಂದು ಹಂತದವರೆಗೆ ಮಕ್ಕಳ ಮೇಲೆ ಬಂಡವಾಳ ಹೂಡಿ ನಂತರ ಬಡ್ಡಿ ಸಮೇತ ಬಂಡವಾಳ ವಾಪಸು ತೆಗೆಯುವ ಕ್ರಮವೇ ಶಿಕ್ಷಣ’ ಎಂದು ಉತ್ತರಿಸಿದರೆ ಸಾಕು! ಬಂಡವಾಳ ಇದ್ದವರು ಹೂಡುತ್ತಾರೆ, ಗೆಲ್ಲುತ್ತಾರೆ.‌ ಇಲ್ಲದವರು ಬರೀ ಪದವಿ ಪತ್ರ ಹಿಡಿದುಕೊಂಡು ಬದುಕು ಸವೆಸುತ್ತಾರೆ. ಶುದ್ಧ ಮಾರುಕಟ್ಟೆಯಾಗಿರುವ ‘ಪ್ರಮಾಣಪತ್ರ’ ಒದಗಿಸುವ ಈಗಿನ ಶಿಕ್ಷಣ ಸದ್ಯದ ಸಮಾಜವನ್ನು ಹೇಗೆ ಕಟ್ಟುತ್ತಿದೆ ಎಂದು ಯೋಚಿಸಬೇಕು.

ಕಲಿಯುತ್ತಾ ಗಳಿಸುವ ಕೌಶಲ ಹೇಳಿಕೊಡುವ ಮೂಲ ಶಿಕ್ಷಣ ಬೇಕು ಎಂದಿದ್ದರು ಗಾಂಧೀಜಿ. ಪ್ರತಿಯೊಬ್ಬ ವಿದ್ಯಾರ್ಥಿಯೂ ಶಿಕ್ಷಣದ ಜೊತೆಗೆ ಕೌಶಲವನ್ನು ಬೆಳೆಸಿಕೊಳ್ಳುವುದು ಮುಖ್ಯ. ಕೌಶಲವಿಲ್ಲದ ಶಿಕ್ಷಣ ಯಾವುದಕ್ಕೂ ಪ್ರಯೋಜನವಿಲ್ಲ ಎಂಬ ಸಂದರ್ಭ ಉಂಟಾಗಿದೆ. ಬರೀ ಕೌಶಲವಿದ್ದರೆ ಜೀವನ ಸಾಗಿಸಬಹುದು. ಆದರೆ ಕೌಶಲದೊಂದಿಗೆ ಶಿಕ್ಷಣವಿದ್ದರೆ ಜೀವನದಲ್ಲಿ ಎತ್ತರಕ್ಕೆ ಹೋಗಬಹುದು, ಬಹು ಎತ್ತರದ ಅದ್ಭುತವನ್ನು ಸಾಧಿಸಬಹುದು. ಬಿ.ಎಸ್ಸಿ ಅಗ್ರಿ ಓದುವವನಿಗಿಂತ ಓದದ ರೈತ ಬುದ್ಧಿವಂತ ನಾಗಿರಬಹುದು, ಎಂಬಿಎ ಮಾಡಿದವನು ಒಂದು ಅಂಗಿ ಮಾರಲು ಅರ್ಧ ದಿನ ತೆಗೆದುಕೊಂಡರೆ, ಬಟ್ಟೆ ಅಂಗಡಿಯಲ್ಲಿರುವ ಹುಡುಗ ಅರ್ಧದಿನಕ್ಕೆ ಹತ್ತು ಅಂಗಿ ಮಾರಬಹುದು. ಕಾಲೇಜು ಏನು ಕಲಿಸುತ್ತಿದೆ ಎಂಬ ಪ್ರಶ್ನೆ ಯಾರಿಗಾದರೂ ಮೂಡದೇ ಇರದು.

ನಮ್ಮ ದೇಶ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಗಳನ್ನು ಇನ್ನು ಹತ್ತು ವರ್ಷ ನಿರಂತರವಾಗಿ ಸೃಷ್ಟಿಸ
ದಿದ್ದರೆ ಒಂದು ಮಧ್ಯಮ ಆದಾಯದ ದೇಶವಾಗುವುದು ಸಾಧ್ಯವಿಲ್ಲ. ಈಗಿರುವ ಯುವಜನರ ಬಲ ಒಂದು ತೊಂದರೆಯಾಗದೇ ಶಕ್ತಿಯಾಗಬೇಕು ಅಂದರೆ ಅವರು ಕೌಶಲಭರಿತರಾಗಬೇಕು. ಪದವಿ
ಪತ್ರವುಳ್ಳವರಷ್ಟೇ ಆದರೆ ಸಾಲದು. ಪದವಿ ಪಡೆದವನಿಗೆ ಒಂದೂ ತಪ್ಪಿಲ್ಲದೆ ಅರ್ಜಿ ಕೂಡ ಬರೆಯಲು ಬರುವುದಿಲ್ಲ ಎಂಬುದನ್ನು ನಾವು ನೆನಪಿಡಬೇಕು. ಕೌಶಲ ಕಲಿಸಬೇಕು, ಅದಕ್ಕೆ ಸಂಬಂಧಿಸಿದಂತೆ ದೊಡ್ಡ ಪ್ರಮಾಣದ ಉದ್ಯೋಗ ಸೃಷ್ಟಿಯಾಗಲೇಬೇಕು.
ಹೀಗೆ ಉದ್ಯೋಗ ಸೃಷ್ಟಿಸುವಂತಹ ವಾತಾವರಣ ಕಟ್ಟಲು ಭಾರತದಂತಹ ದೇಶಕ್ಕೆ ಜ್ಞಾನ ವಿಜ್ಞಾನದ ಬಲವೊಂದರಿಂದಲೇ ಸಾಧ್ಯ ಮತ್ತು ಅದಾಗಲು ಸೂಕ್ತ ಕಲಿಕೆ ಬೇಕು.ಈಗಿರುವ ನಮ್ಮ ಶಿಕ್ಷಣಕ್ರಮದಿಂದ ಅದನ್ನು ಸಾಧ್ಯವಾಗಿಸಬಹುದೇ? ಯೋಚಿಸಬೇಕು.

ಬರೀ ಕೌಶಲ ಕಲಿಸಿದರೆ ಮುಗಿಯಿತೇ? ಸಾಲದು. ಅದಷ್ಟೇ ಶಿಕ್ಷಣವಲ್ಲ. ಒಂದೊಳ್ಳೆ ಶಿಕ್ಷಣ ನಮಗೆ ಸಿಕ್ಕಿದ್ದರೆ ಅಂಬೇಡ್ಕರ್ ಕಂಡ ಪ್ರಜಾಪ್ರಭುತ್ವದ ಪೂರ್ಣ ಕನಸು ನನಸಾಗದೆ ಉಳಿಯುತ್ತಿತ್ತೇ? ಮನುಷ್ಯರನ್ನು ಧರ್ಮದ ಹಿನ್ನೆಲೆಯಲ್ಲಿ, ಜಾತಿಯ ನೆಲೆಯಲ್ಲಿ, ಅಂತಸ್ತಿನ ಹಿನ್ನೆಲೆಯಲ್ಲಿ, ರಾಜಕೀಯ ಬಲದಲ್ಲಿ ಅಳೆಯುವ ಸ್ಥಿತಿ ಜೀವಂತವಾಗಿ ಇರುತ್ತಿತ್ತೇ? ಮನುಷ್ಯರನ್ನು ಮನುಷ್ಯ
ರನ್ನಾಗಿ ನೋಡದೆ ಶೋಷಿಸುವ ಕಾಲ ಉಳಿಯುತ್ತಿತ್ತೇ? ನಮ್ಮ ಶಿಕ್ಷಣ ಎಲ್ಲೋ ಎಡವಿದೆ ಅನಿಸುತ್ತಿಲ್ಲವೇ?

ಶಿವರಾಮ ಕಾರಂತರು ತಮ್ಮ ಮಗುವನ್ನು ಸಾಂಪ್ರದಾಯಿಕ ಶಿಕ್ಷಣದ ಶಾಲೆಗೆ ಸೇರಿಸಲು ಮನಸ್ಸು ಮಾಡಲಿಲ್ಲ. ಅವರೇಕೆ ಹಾಗೆ ಮಾಡಿದರು ಎಂಬುದು ವಿವರಿಸಲಾಗದಷ್ಟು ನಿಗೂಢವೇನಲ್ಲ. ಸ್ವಾತಂತ್ರ್ಯ ಬಂದ ನಂತರ ಅನೇಕ ರಾಷ್ಟ್ರೀಯ ಶಿಕ್ಷಣ ನೀತಿಗಳು ಬಂದು ಹೋಗಿವೆ. ಎಷ್ಟೊಂದು ಯೋಜನೆಗಳು ಜಾರಿಯಾಗಿವೆ. ಶಿಕ್ಷಣದಲ್ಲಿ ಕ್ರಾಂತಿ ಆಗಲೇ ಇಲ್ಲ. ಈಗ ಮತ್ತೊಂದು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗುತ್ತಿದೆ. ಅದರ ಕಡೆ ಆಸೆಗಣ್ಣನಿಡಬಹುದೇ? ಕಾಲವೇ ಉತ್ತರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.