ಸಂಗತ
ಡಾ. ಮುರಳೀಧರ ಕಿರಣಕೆರೆ
ನನ್ನ ಪರಿಚಯದ ಆ ಸೈಬರ್ ಪೊಲೀಸ್ ಅಧಿಕಾರಿ ಆಗಾಗ್ಗೆ ಕರೆ ಮಾಡಿ ‘ಯಾವುದಾದರೂ ಸಭೆ ಇದ್ದರೆ ತಿಳಿಸಿ. ಆ ಸಂದರ್ಭದಲ್ಲಿ, ಸೈಬರ್ ವಂಚನೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಏರ್ಪಡಿಸೋಣ’ ಎನ್ನುತ್ತಿದ್ದರು. ಡಿಜಿಟಲ್ ವಂಚನೆಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕೆಂಬ ಅವರ ಕಾಳಜಿ ಅಭಿಮಾನ ಮೂಡಿಸುವಂತಿತ್ತು. ಹೀಗಾಗಿ, ಪಶುಸಂಗೋಪನಾ ಇಲಾಖೆಯ ಮಾಸಿಕ ಸಭೆಗೆ ಅವರನ್ನು ಆಮಂತ್ರಿಸಿದ್ದೆವು.
ಆಶ್ಚರ್ಯವೆಂದರೆ, ಇಂತಹ ಅಪರಾಧಗಳು ನಡೆದಾಗ ಎಲ್ಲಿ ದೂರು ಕೊಡಬೇಕೆಂಬುದು ಸಭೆಯಲ್ಲಿದ್ದ ಅನೇಕರಿಗೆ ಗೊತ್ತಿರಲಿಲ್ಲ. ವಂಚಕರನ್ನು ಪತ್ತೆ ಹಚ್ಚಲು ಜಿಲ್ಲಾ ಕೇಂದ್ರಗಳಲ್ಲಿ ಸೈಬರ್ ಪೊಲೀಸ್ ಠಾಣೆಗಳಿರುವ ವಿಚಾರವೂ ತಿಳಿದಿರಲಿಲ್ಲ!
ದಿನನಿತ್ಯ ಈ ಠಾಣೆಗಳಲ್ಲಿ ದಾಖಲಾಗುವ ಸೈಬರ್ ಅಪರಾಧಗಳ ವಿವಿಧ ನಮೂನೆಗಳನ್ನು ಆ ಅಧಿಕಾರಿ ತೆರೆದಿಟ್ಟಾಗ ಎಲ್ಲರೂ ಅಕ್ಷರಶಃ ನಡುಗಿ ಹೋಗಿದ್ದರು. ಮೊಬೈಲ್ ಫೋನ್ ಬಳಸುವ ನಾವ್ಯಾರೂ ಸುರಕ್ಷಿತರಲ್ಲ,
ಸದಾ ಅಪಾಯದ ಕೆಂಪು ವಲಯದಲ್ಲಿಯೇ ಇರುತ್ತೇವೆ ಎಂಬುದು ಖಾತರಿಯಾಗಿತ್ತು!
ನನ್ನ ಸಮೀಪದ ಬಂಧುವೊಬ್ಬರ ಮೊಬೈಲ್ ಫೋನ್‌ಗೆ ‘ಕರ್ನಾಟಕ ಪೊಲೀಸ್’ ಎಂಬ ಹೆಸರಿನಲ್ಲಿ ಸಂದೇಶವೊಂದು ಬಂದಿತ್ತು. ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಲಾಯಿಸಿ ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕಾಗಿ ₹ 500 ದಂಡ ವಿಧಿಸಲಾಗಿದೆ ಎಂಬ ವಿವರ ಅದರಲ್ಲಿತ್ತು. ಅವರ ದ್ವಿಚಕ್ರ ವಾಹನದ ಸಂಖ್ಯೆ, ಮೊಬೈಲ್ ಫೋನ್ ಸಂಖ್ಯೆ ಎಲ್ಲವೂ ಸರಿಯಿದ್ದವು. ಆದರೆ, ಆ ಸಂದೇಶದಲ್ಲಿ ಉಲ್ಲೇಖಿಸಿದ್ದ ದಿನಾಂಕದಂದು ಅವರು ತಮ್ಮ ಬೈಕನ್ನು ಹೊರಗೆ ತೆಗೆದೇ ಇರಲಿಲ್ಲ!
ಹಿಂದೆ ಈ ರೀತಿಯ ಉಲ್ಲಂಘನೆಗಾಗಿ ಒಂದೆರಡು ಬಾರಿ ಅವರು ದಂಡವನ್ನು ಕಟ್ಟಿದ್ದರು. ಆದರೆ ಈ ಸಲದ್ದು ಮಾತ್ರ ಸುಳ್ಳು ಆಪಾದನೆ ಆಗಿದ್ದುದು ಅವರ ಬೇಸರಕ್ಕೆ ಕಾರಣವಾಗಿತ್ತು. ಹೇಗೂ ಮೊತ್ತ ಸಣ್ಣದು, ದೂರು ಕೊಡುವುದು, ಆಮೇಲೆ ಪೊಲೀಸ್ ಠಾಣೆಗೆ ಅಲೆದಾಡುವುದು ಏಕೆ, ಬಂದಿದ್ದ ಸಂದೇಶದಲ್ಲೇ ಇ-ಚಲನ್ ಕೊಂಡಿ ಕೊಟ್ಟಿದ್ದಾರೆ, ಕಟ್ಟಿ ಮುಗಿಸುವುದೇ ಒಳ್ಳೆಯದು ಎಂಬ ಆಲೋಚನೆಯಲ್ಲಿ ಇದ್ದವರನ್ನು ತಡೆದಿದ್ದೆ. ವಾರದ ಹಿಂದಷ್ಟೇ ‘ಸೈಬರ್ ವಂಚನೆ ಅರಿವು’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರಿಂದ ನನ್ನ ಮನಸ್ಸು ಆ ದಿಸೆಯಲ್ಲೇ ಯೋಚಿಸುತ್ತಿತ್ತು. ಆ ಮೆಸೇಜನ್ನು ಸೈಬರ್ ಅಧಿಕಾರಿಗೆ ಕಳುಹಿಸಿ ಅಭಿಪ್ರಾಯ ಕೇಳಿದಾಗ, ಅದು ನಕಲಿ ಎಂಬುದು ದೃಢಪಟ್ಟಿತ್ತು. ಅಕಸ್ಮಾತ್ ಹಣ ಕಟ್ಟಲು ಆ ಸಂದೇಶದಲ್ಲಿದ್ದ ಕೊಂಡಿಯನ್ನೇನಾದರೂ ಕ್ಲಿಕ್ಕಿಸಿದ್ದಿದ್ದರೆ ಅವರ ಖಾತೆಯ ಮಾಹಿತಿ ಕಳವಾಗಿ ತೊಂದರೆಗೆ ಸಿಲುಕುತ್ತಿದ್ದರು!
ಹೌದು, ಸೈಬರ್ ಅಪರಾಧಗಳ ಸಂಖ್ಯೆ ತೀವ್ರವಾಗಿ ಏರುತ್ತಿದೆ. ಆನ್‌ಲೈನ್ ವಂಚನೆಯ ಬೇರುಗಳು ತುಂಬಾ ಆಳಕ್ಕೆ ಇಳಿದಿರುವುದರಿಂದ, ಕಳೆದುಕೊಂಡದ್ದನ್ನು
ಮರಳಿ ಪಡೆಯುವ ಸಂಭವ ಕಡಿಮೆ. ಹಾಗಾಗಿ, ಸೈಬರ್ ವಂಚನೆಗಳ ಕುರಿತು ಅರಿವು ಮೂಡಿಸಿಕೊಳ್ಳುವುದು ಅತಿ ಅಗತ್ಯ. ಪ್ರತಿಯೊಬ್ಬರೂ ಸ್ವರಕ್ಷಣೆಯ ಮಾರ್ಗೋಪಾಯಗಳನ್ನು ಅಳವಡಿಸಿಕೊಳ್ಳಬೇಕು. ಆಧಾರ್ ಕಾರ್ಡ್‌ನ ದುರ್ಬಳಕೆ ತಪ್ಪಿಸಲು, ಆಧಾರ್‌ಗೆ ಸಂಬಂಧಿಸಿದ ಅಧಿಕೃತ ಆ್ಯಪ್ ಆದ ‘ಎಂಆಧಾರ್’ನಲ್ಲಿ ಬಯೊಮೆಟ್ರಿಕ್ ಲಾಕ್ ಮಾಡಿಕೊಳ್ಳುವುದು, ‘ಸಂಚಾರ್‌ಸಾಥಿ’ ತಾಣದಲ್ಲಿ ನಮ್ಮ ಹೆಸರಿನಲ್ಲಿರುವ ಸಿಮ್ ಕಾರ್ಡ್‌ಗಳ ಸಂಖ್ಯೆಯನ್ನು ಪರಿಶೀಲಿಸುವುದು, ಮೊಬೈಲ್ ಫೋನ್‌ನಲ್ಲಿ ನಮಗೆ ಗೊತ್ತೇ ಆಗದಂತೆ ಇನ್‌ಸ್ಟಾಲ್ ಆಗಿರಬಹುದಾದ ಆ್ಯಪ್‌ಗಳನ್ನು ತೆಗೆದುಹಾಕುವುದು, ಅಪರಿಚಿತ ಕೊಂಡಿಗಳನ್ನು ಕ್ಲಿಕ್ಕಿಸದಿ
ರುವುದು, ಒಟಿಪಿ, ಪಾಸ್‌ವರ್ಡ್, ಆಧಾರ್, ಬ್ಯಾಂಕ್ ಖಾತೆಯ ಮಾಹಿತಿ ಹಂಚಿಕೊಳ್ಳದಂತಹ ಕ್ರಮಗಳು ನಮ್ಮನ್ನು ಸುರಕ್ಷಿತವಾಗಿ ಇಡಬಲ್ಲವು.
ರಾಜ್ಯದಲ್ಲಿ ಸೈಬರ್ ವಂಚನೆ, ಆರ್ಥಿಕ ಅಪರಾಧ ಮತ್ತು ಮಾದಕವಸ್ತುಗಳ ನಿಯಂತ್ರಣಕ್ಕಾಗಿಜಿಲ್ಲಾ ಕೇಂದ್ರಗಳು ಸೇರಿದಂತೆ ಸುಮಾರು 46 ಸೆನ್ (ಸೈಬರ್, ಎಕನಾಮಿಕ್, ನಾರ್ಕೋಟಿಕ್) ಪೊಲೀಸ್ ಠಾಣೆಗಳಿವೆ. ವಂಚನೆ ನಡೆದಾಗ ಇಲ್ಲಿ ದೂರು ದಾಖಲಿಸಬೇಕು. ಸಹಾಯವಾಣಿ 1930ಕ್ಕೆ ಕರೆ ಮಾಡಿ ಇಲ್ಲವೇ www.cybercrime.gov.in ತಾಣದಲ್ಲಿ ಮಾಹಿತಿ ನೀಡಬಹುದು. ಕೆಲವರು ಮಾನಕ್ಕೆ ಹೆದರಿಯೋ ಕಳೆದುಕೊಂಡದ್ದು ಮತ್ತೆ ಸಿಕ್ಕದು ಎಂಬ ಹತಾಶೆಯಿಂದಲೋ ದೂರು ಕೊಡಲು ಮುಂದಾಗುವುದಿಲ್ಲ. ವಂಚನೆಗೆ ಒಳಗಾದವರು ತಕ್ಷಣ ದೂರು ದಾಖಲಿಸಿದರೆ ಮಾತ್ರ ಕಳೆದುಕೊಂಡದ್ದನ್ನು ಮರಳಿ ಪಡೆಯುವ ಅವಕಾಶ ಹೆಚ್ಚು. ಸೆನ್ ಠಾಣೆಗಳ ನಡುವೆ ಪೂರ್ಣ ಸಮನ್ವಯ ಸಾಧಿಸಿ ಪ್ರಕರಣಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಭೇದಿಸಲು ಸಹಾಯವಾಗುವಂತೆ ಸೈಬರ್ ಕಮಾಂಡ್ ಘಟಕದ ಸ್ಥಾಪನೆಗೆ ಸರ್ಕಾರ ಮುಂದಾಗಿರುವುದು ಪ್ರಶಂಸಾರ್ಹ.
ಈ ಡಿಜಿಟಲ್ ಕಾಲಘಟ್ಟದಲ್ಲಿ ಹಣಕಾಸು ಸೇರಿದಂತೆ ನಮ್ಮ ಬಹುತೇಕ ವ್ಯವಹಾರಗಳನ್ನು ಆನ್‌ಲೈನ್ ಮೂಲಕ ನಡೆಸುವುದು ಅನಿವಾರ್ಯ. ದಿನದಿಂದ ದಿನಕ್ಕೆ ವಂಚಕರು ಹೊಸ ಹೊಸ ವಿಧಾನಗಳನ್ನು ಕಂಡುಕೊಳ್ಳುತ್ತಿರುವುದರಿಂದ ನಮ್ಮ ಅರಿವಿನ ಪರಿಧಿಯನ್ನು ವಿಸ್ತರಿಸಿಕೊಳ್ಳಬೇಕಾದದ್ದು ಅತಿ ಅಗತ್ಯ. ಹಾಗಾಗಿ, ಸೈಬರ್ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲು ಪೊಲೀಸರಿಗೆ ಜನ ಸಹಕರಿಸಬೇಕು. ಶಾಲಾ–ಕಾಲೇಜು, ಸಂಘ–ಸಂಸ್ಥೆಗಳು ನಿಯಮಿತವಾಗಿ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಆಗ ಮಾತ್ರ ಇಂತಹ ಪ್ರಕರಣಗಳ ಸಂಖ್ಯೆ ತಗ್ಗಲು ಸಾಧ್ಯ.
ಲೇಖಕ: ಮುಖ್ಯ ಪಶುವೈದ್ಯಾಧಿಕಾರಿ
ಪಶುಆಸ್ಪತ್ರೆ, ತೀರ್ಥಹಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.