ADVERTISEMENT

ಸಂಗತ: ವ್ಯಂಗ್ಯಚಿತ್ರ ಎಂಬ ಅಪ್ರಿಯ ಸತ್ಯ

ಆಡಳಿತಾರೂಢರು– ಹಾಸ್ಯಕಲಾವಿದರ ಮಧ್ಯೆ ಉತ್ತಮ ಸಂಬಂಧ ಸಾಧ್ಯವಿಲ್ಲವೇಕೆ?

​ಪ್ರೊ.ಬಿ.ಕೆ.ಚಂದ್ರಶೇಖರ್ ಬೆಂಗಳೂರು
Published 22 ಫೆಬ್ರುವರಿ 2021, 19:26 IST
Last Updated 22 ಫೆಬ್ರುವರಿ 2021, 19:26 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಹೊಸ ಕೃಷಿ ಕಾಯ್ದೆಗಳ ವಿರುದ್ಧ ದೆಹಲಿ ದ್ವಾರಗಳಲ್ಲಿ ಪ್ರತಿಭಟಿಸುತ್ತಿರುವ ರೈತರ ಪರವಾಗಿ ದನಿ ಎತ್ತಿದ ಹಲವರ ವಿರುದ್ಧ ಕೇಂದ್ರ ಸರ್ಕಾರ ಮುಗಿಬಿದ್ದಿದೆ. ರೈತರನ್ನು ಬೆಂಬಲಿಸಿ ಟ್ವೀಟ್‌ ಮಾಡಿದ ಕೆಲವರ ಮೇಲೆ ‘ದೇಶದ್ರೋಹ’ದ ಪ್ರಕರಣ ದಾಖಲಾಗಿದೆ!‌

ಏಳು ದಶಕಗಳಿಂದ ಬೆಳೆದು ಬಲಿಷ್ಠವಾದ ‘ಆತ್ಮವಿಶ್ವಾಸ’ದಿಂದಿರುವ ನಮ್ಮ ದೇಶಕ್ಕೆ ಕೇವಲ ಕೆಲವರ ಹೇಳಿಕೆಯಿಂದ ಥಟ್ಟನೆ ಚೈತನ್ಯ ಇಲ್ಲದಂತೆ ಆಗಿದೆಯೇ ಅಥವಾ ಬಹುಮತ ಹೊಂದಿದ್ದರೂ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಯಾವುದೋ ಅಮೂರ್ತ ಭೀತಿ ಕಾಡುತ್ತಿರಬಹುದೇ? ಅದಕ್ಕಾಗಿ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರದ ಪ್ರಯೋಗ ಬೇಕಿತ್ತೇ? ‘ದೇಶದ್ರೋಹ’, ‘ಸರ್ಕಾರವನ್ನು ಅಸ್ಥಿರಗೊಳಿಸುವ ಸಂಚು’ ಎಂಬಂತಹ ಅಪಾಯಕಾರಿ ಬ್ರಹ್ಮಾಸ್ತ್ರ ಪ್ರಯೋಗವು ಸರ್ಕಾರಗಳಿಗೆ ಅನುಕೂಲಕರವಾಗಿದೆ. ಇದರಿಂದ ಆಪಾದಿತರನ್ನು ಸಾಕುಬೇಕಾದಷ್ಟು ಬಾರಿ ಕೋರ್ಟಿಗೆ ಅಲೆಯುವಂತೆ ಮಾಡಬಹುದು.

ಸರ್ಕಾರಗಳ ನೀತಿ ನಿರ್ಧಾರಗಳನ್ನು ಟೀಕಿಸುವವರ ವಿರುದ್ಧ ಪ್ರಯೋಗಿಸುತ್ತಿರುವ ಈ ಅಸ್ತ್ರವನ್ನೇ ವ್ಯಂಗ್ಯಚಿತ್ರಕಾರರು ಮತ್ತು ಹಾಸ್ಯಕಲಾವಿದರ ವಿರುದ್ಧವೂ ಪ್ರಯೋಗಿಸುವುದು ಸಾಮಾನ್ಯವಾಗಿ ಬಿಟ್ಟಿದೆ. ಅಸೀಮ್ ತ್ರಿವೇದಿ ಭ್ರಷ್ಟಾಚಾರ ವಿರೋಧಿ ಕಾರ್ಟೂನ್‍ಗಳಿಗೆ ಜನಪ್ರಿಯರಾದವರು. 2012ರಲ್ಲಿ ಮಹಾರಾಷ್ಟ್ರದ ಸರ್ಕಾರ ಅವರ ಕಾರ್ಟೂನೊಂದರ ವಿರುದ್ಧ ದೇಶದ್ರೋಹದ ಕೇಸ್ ದಾಖಲಿಸಿತ್ತು. ‘ಭಾರತೀಯ ದಂಡಸಂಹಿತೆಯ ಪ್ರಕಾರ, ತ್ರಿವೇದಿಯವರ ಚಿತ್ರದಲ್ಲಿ ಪ್ರಭುತ್ವದ ವಿರುದ್ಧ ಪ್ರಚೋದನೆ, ಹಿಂಸೆಗೆ ಪ್ರೇರೇಪಣೆ ಕುರಿತ ಆಪಾದನೆ ಕಿಂಚಿತ್ತೂ ಇಲ್ಲವಾದ್ದರಿಂದ ದೇಶದ್ರೋಹದ ಪ್ರಶ್ನೆಯಿಲ್ಲ’ ಎಂದು ಬಾಂಬೆ ಹೈಕೋರ್ಟ್ ತೀರ್ಪಿತ್ತಿತ್ತು.

ADVERTISEMENT

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮನ್ನು ವಿಡಂಬನೆ ಮಾಡಿದ್ದ
ವ್ಯಂಗ್ಯಚಿತ್ರಕಾರರನ್ನು ಅರೆಸ್ಟ್ ಮಾಡಿಸಿದ್ದರು. ಸೃಜನಶೀಲ ಕಲೆಗಳನ್ನೇ ಸಂಕೋಲೆಯಲ್ಲಿ ಇಟ್ಟಂತಹ ಇಂತಹ ಬಂಧನಗಳ ವಿರುದ್ಧ ದೇಶದ ನೂರಕ್ಕೂ ಹೆಚ್ಚು ಕಲಾವಿದರು ಹೇಳಿಕೆಯನ್ನು ಕೊಟ್ಟಿದ್ದರು. ಕಾರ್ಟೂನಿಸ್ಟ್‌ಗಳೇ ಇಲ್ಲದಂತಹ ದೇಶವಿದೆಯೇ?

ನಮಗೆ ದೇಶದ್ರೋಹ ಕಾಯ್ದೆಯನ್ನು ಕೊಟ್ಟ ಬ್ರಿಟನ್‍ನಲ್ಲಿ ತೀವ್ರ ಟೀಕೆಗೆ ಒಳಪಡುವ ಜನಪ್ರತಿನಿಧಿಗಳಿಗೆ ದೇಶದ್ರೋಹದ ಆಪಾದನೆ ಮಾಡಲು ಅವಕಾಶವಿಲ್ಲ. ಅಮೆರಿಕದಲ್ಲಿ ಬಹುಪಾಲು ಯಾವ ಅಡಚಣೆಯೂ ಇಲ್ಲದೆ ವ್ಯಂಗ್ಯಚಿತ್ರಗಳು, ಅಣಕು ವಿಡಿಯೊಗಳು, ಪತ್ರಿಕಾ ವರದಿಗಳು ಬರುತ್ತಿವೆ. ನಮ್ಮ ರಾಜಕಾರಣಿಗಳಂತೆ ಅಲ್ಲಿ ಆಕ್ಷೇಪ ಬರುವುದಿಲ್ಲ. ಇದು ಆ ದೇಶಗಳ ಜನ ಮತ್ತು ನಾಯಕರು ಸೃಜನಶೀಲತೆಗೆ, ಕಲೆಗೆ ತೋರುವ ಗೌರವವಲ್ಲವೇ? ನಮ್ಮಲ್ಲೇಕೆ ಇದು ಸಾಧ್ಯವಾಗಬಾರದು?

ಜವಾಹರಲಾಲ್ ನೆಹರೂ ಪ್ರಧಾನಿಯಾಗಿದ್ದಾಗ ವ್ಯಂಗ್ಯಚಿತ್ರಕಾರ ಇ.ಪಿ.ಉಣ್ಣಿಯವರು ‘ಶಂಕರ್ಸ್ ವೀಕ್ಲಿ’ ಪತ್ರಿಕೆಯಲ್ಲಿ ಅವರನ್ನು ರಚನಾತ್ಮಕವಾಗಿ ಟೀಕಿಸುತ್ತಿದ್ದರು. ಹೀಗಿದ್ದರೂ ಪತ್ರಿಕೆಯ ಸಂಸ್ಥಾಪಕ ಶಂಕರ್ ಅವರ ದೊಡ್ಡ ಅಭಿಮಾನಿಯಾಗಿದ್ದ ನೆಹರೂ ‘ನನಗೆ ಯಾವುದೇ ರಿಯಾಯಿತಿ ಬೇಡ’ ಎಂದಿದ್ದುದು ಅವರ ಪ್ರಜಾಪ್ರಭುತ್ವದ ಮನೋಧೋರಣೆ, ಸಹನೆಗೆ ನಿದರ್ಶನವಾಗಿತ್ತು.

ಆ ಬಗೆಯ ಹಾಸ್ಯಪ್ರಜ್ಞೆಯ ಕೊರತೆ ಇಂದಿನ ಬಹುತೇಕ ಧುರೀಣರಲ್ಲಿ ಎದ್ದು ಕಾಣುತ್ತದೆ. ಅದಕ್ಕೆ ಅಪವಾದ ಎಂಬಂತಹ ಎರಡು ಸಂಗತಿಗಳನ್ನು ಇಲ್ಲಿ ಹೇಳಲೇಬೇಕು. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಸಚಿವರಾಗಿದ್ದ ಜಸ್ವಂತ್‌ ಸಿಂಗ್, ಇಂಡಿಯನ್ ಏರ್‌ಲೈನ್ಸ್ ವಿಮಾನವನ್ನು ಅಪಹರಿಸಿದ್ದ ತಾಲಿಬಾನ್ ಭಯೋತ್ಪಾದಕರೊಡನೆ ಸಂಧಾನ ನಡೆಸಿದ ನಂತರ ಪ್ರಯಾಣಿಕರೊಡನೆ ಭಾರತಕ್ಕೆ ಹಿಂದಿರುಗಿದ್ದರು. ಮಾರನೆಯ ದಿನವೇ ವ್ಯಂಗ್ಯಚಿತ್ರ ಕಲಾವಿದ ಸುಧೀರ್ ತೈಲಂಗ್ ಅವರು ಜಸ್ವಂತ್ ಸಿಂಗ್ ಬಂದೂಕಿನೊಡನೆ ತಾಲಿಬಾನ್ ದಿರಿಸಿನಲ್ಲಿರುವ ಚಿತ್ರವನ್ನು ರಚಿಸಿದ್ದರು. ಅದು ಪತ್ರಿಕೆಯೊಂದರಲ್ಲಿ ಪ್ರಕಟವಾಗಿತ್ತು. ಜಸ್ವಂತ್‌ ಅವರು ತೈಲಂಗ್‍ ಅವರಿಗೆ ಫೋನ್ ಮಾಡಿ ‘ವ್ಯಂಗ್ಯಚಿತ್ರದ ಅಸಲು ಪ್ರತಿ ಕೊಡುವಿರಾ? ಕಟ್ಟು ಹಾಕಿಸಿ ನನ್ನ ಕಚೇರಿಯಲ್ಲಿಡುತ್ತೇನೆ’ ಎಂದು ತರಿಸಿಕೊಂಡರು!

ಸಚಿವರಾಗಿದ್ದ ಮುರಳಿ ಮನೋಹರ ಜೋಷಿಯವರು ‘ನನಗೆ ನಿಮ್ಮ ಮೇಲೆ ಸಿಟ್ಟು ಬಂದಿದೆ. ಆರು ತಿಂಗಳಿಂದ ನನ್ನನ್ನು ನಿರ್ಲಕ್ಷಿಸಿದ್ದೀರಿ. ನನ್ನ ಕುರಿತು ವ್ಯಂಗ್ಯಚಿತ್ರವನ್ನು ಬರೆದಿಲ್ಲವೇಕೆ? ರಾಜಕಾರಣದಲ್ಲಿ ಅಷ್ಟು ಅಪ್ರಸ್ತುತನಾಗಿದ್ದೇನೆಯೇ?’ ಎಂದಿದ್ದನ್ನು ತೈಲಂಗ್ ಅವರೇ ದಾಖಲಿಸಿದ್ದಾರೆ. ಕಲೆಯ ಬಗ್ಗೆ ಆಸಕ್ತಿ ಹೊಂದಿದ್ದ ಇವರಿಬ್ಬರೂ ಅಟಲ್ ಬಿಹಾರಿ ವಾಜಪೇಯಿ ಅವರಿಂದ ಪ್ರಭಾವಿತರಾಗಿದ್ದರು.

ಭಾರತದ ಸಂಸ್ಕೃತಿಯಲ್ಲಿ ವೈಚಾರಿಕತೆಗೆ, ಹಾಸ್ಯಪ್ರಜ್ಞೆಗೆ, ರಚನಾತ್ಮಕ ವಿಮರ್ಶೆಗೆ ಎಂದಿನಿಂದಲೂ ಸ್ಥಾನವಿತ್ತು. ಕಾಳಿದಾಸ, ಶೂದ್ರಕ ಅವರ ನಾಟಕಗಳಲ್ಲಿ ಬರುವ ವಿದೂಷಕರು, ವಿಜಯನಗರದ ದೊರೆ ಕೃಷ್ಣದೇವರಾಯನ ಆಸ್ಥಾನದಲ್ಲಿದ್ದ ತೆನಾಲಿ ರಾಮಕೃಷ್ಣ, ಅಕ್ಬರನ ಆಸ್ಥಾನದಲ್ಲಿದ್ದ ಬೀರ್‌ಬಲ್ ಅವರನ್ನು ಉದಾಹರಿಸಬಹುದು. ಅಪ್ರಿಯವಾದ, ಮುಜುಗರ ಉಂಟುಮಾಡುವ ಸತ್ಯವನ್ನು ಅಂದಿನ ಹಾಸ್ಯಕಲಾವಿದರು ತಮ್ಮನ್ನಾಳುವವರ ಮುಂದಿರಿಸುತ್ತಿದ್ದರು. ಇಂದಿನ ಆಡಳಿತಾರೂಢರು ಮತ್ತು ಹಾಸ್ಯಕಲಾವಿದರ ನಡುವೆಯೂ ಇಂತಹ ಸಂಬಂಧ ಸಾಧ್ಯವಿಲ್ಲವೇಕೆ?

ಪ್ರಜಾಪ್ರಭುತ್ವ ಎಂದು ಹೇಳಿಕೊಳ್ಳುವ ವ್ಯವಸ್ಥೆಗೆ ಅಸಮ್ಮತಿ ಹಾಗೂ ಭಿನ್ನಾಭಿಪ್ರಾಯ ಎಂಬುವು ಮೂಲಭೂತ ತತ್ವಗಳು. ಅವು ರಾಜಕೀಯದಲ್ಲಿ ಮಾತ್ರವಲ್ಲ, ಸಂಸ್ಕೃತಿಗೂ ಅತ್ಯವಶ್ಯಕ. ಪ್ರಭುತ್ವದ ಬೆಂಬಲದಿಂದಲೇ ರಾಜಕೀಯವು ಧರ್ಮಾಧಾರಿತವಾದಾಗ ಹಾಸ್ಯ, ವಿಡಂಬನೆ, ಟೀಕೆ ಎಲ್ಲವೂ ಅದರ ಕರ್ತೃಗಳಿಗೆ ಅಪಾಯಕಾರಿಯೇ!

ಲೇಖಕ: ಕಾಂಗ್ರೆಸ್‌ ಮುಖಂಡ, ವಿಧಾನಪರಿಷತ್ತಿನ ಮಾಜಿ ಸಭಾಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.