ADVERTISEMENT

ಸಂಗತ | ಈ ಅಜ್ಞಾತ ವೈರಸ್‌ ಹೊಸದಲ್ಲ!

ಊಟ, ವಸತಿಯಂತಹ ಮೂಲ ಅಗತ್ಯಗಳಿಗೆ ಕೊರತೆ ಇಲ್ಲದಿದ್ದರೂ ವ್ಯಕ್ತಿಯನ್ನು ಗಲಿಬಿಲಿಗೊಳ್ಳುವಂತೆ ಮಾಡಿರುವ ಆ ‘ವೈರಸ್’ ಯಾವುದು?

​ಪ್ರಜಾವಾಣಿ ವಾರ್ತೆ
Published 9 ಜುಲೈ 2020, 19:31 IST
Last Updated 9 ಜುಲೈ 2020, 19:31 IST
ಸಂಗತ
ಸಂಗತ   

ನಿಸರ್ಗದಲ್ಲಿ ಯಾವ ಜೀವಿಯೂ ಸ್ವಾವಲಂಬಿಯಲ್ಲ, ಪ್ರತೀ ಜೀವಿ ಅವಲಂಬನೆಯ ಸರಪಳಿಯಲ್ಲೇ ಇದೆ. ಮನುಷ್ಯನೂ ಅದಕ್ಕೆ ಹೊರತಲ್ಲ. ಹಾಗಾದರೆ ಮಾನವ ಹಿತಚಿಂತಕರು ‘ಸ್ವಾವಲಂಬಿಗಳಾಗಿ’ ಎಂದು ನೀಡಿದ ಕರೆಯ ರಹಸ್ಯವೇನು?

ಇದು, ಪ್ರಕೃತಿಯಿಂದ ಸ್ವಾವಲಂಬಿಗಳಾಗಿ ಎಂಬ ಕರೆಯಲ್ಲ. ಆಂತರಿಕವಾಗಿ ಪ್ರಕೃತಿಯಿಂದ ಸ್ವಾವಲಂಬನೆ ಎಂಬುದು ಸಾವಿನಲ್ಲೂ ಇಲ್ಲ. ಆದರೆ ಹೊರಮೈಯಲ್ಲಿ ಪ್ರಕೃತಿಯಿಂದ ಮನುಷ್ಯ ಬಿಡುಗಡೆಗೊಳ್ಳುತ್ತಾ ಬಂದಿದ್ದಾನೆ. ಅದನ್ನೇ ‘ನಾಗರಿಕತೆ’ ಎನ್ನುವುದು.

ನಾಗರಿಕತೆಯ ಸುಖದ ಹಾದಿಯಲ್ಲಿ ಸಂಕೀರ್ಣ ವ್ಯವಸ್ಥೆಯೊಂದನ್ನು ಸೃಷ್ಟಿಸಿ ಹಲವು ಸಮಸ್ಯೆಗಳನ್ನುಎದುರಿಸಲಾರದೆ ಒದ್ದಾಡಿದಾಗ, ಸಮಾಜದ ಹಿತಚಿಂತಕರು ನೀಡಿದ ಕರೆಯೇ ‘ಸ್ವಾವಲಂಬಿಗಳಾಗಿ’ ಎಂಬುದು. ಈ ಸಂದೇಶಕ್ಕೆ ಬಹುವಿಧದ ಅರ್ಥಗಳು ಇರಬಹುದು. ಆದರೆ ಬಹುತೇಕರ ಆಶಯವು ಆರ್ಥಿಕ ಸ್ವಾವಲಂಬನೆಯದೇ ಆಗಿದೆ. ಆರ್ಥಿಕ ಸ್ವಾವಲಂಬನೆಯು ಸಾಮಾಜಿಕ ಸಮಸ್ಯೆಗೂ ಪರಿಹಾರದ ದಾರಿ ಎಂಬುದು ಅವರ ಚಿಂತನೆ.

ADVERTISEMENT

ಕಾಣದ ವೈರಸ್‍ವೊಂದು ಕೆಲವು ತಿಂಗಳುಗಳಿಂದ ಜಗತ್ತನ್ನು ತಲ್ಲಣಗೊಳಿಸಿದೆ. ಹಲವು ಉದ್ಯೋಗ-ಉದ್ದಿಮೆಗಳ ಭವಿಷ್ಯ ಅತಂತ್ರವಾಗುತ್ತಿದೆ. ಆದರೆ ಸ್ವಾವಲಂಬನೆಯ ಬಾಳನ್ನು ನಡೆಸುತ್ತಿದ್ದವರೂ ಈ ಬಗೆಯಲ್ಲಿ ಗಲಿಬಿಲಿಗೊಳ್ಳಲು ಈ ವೈರಸ್‍ವೊಂದೇ ಕಾರಣವಲ್ಲ. ಎರಡು ದಶಕಗಳಿಂದ ಮಾನವ ಮನಸ್ಸಿನ ಮೇಲೆ ಪ್ರಭಾವ ಬೀರಿದ ಜಾಗತೀಕರಣವೂ ಕಾರಣ. ಜಾಗತೀಕರಣಕ್ಕೆ ವಿಶಾಲ ಆಶಯವಿದ್ದರೂ ಅದು ಮನುಷ್ಯನನ್ನು ಕೊಳ್ಳುಬಾಕನನ್ನಾಗಿಸಿದ್ದೇ ಹೆಚ್ಚು. ಸಂಪಾದನೆ ಮತ್ತು ಕೊಂಡುಕೊಳ್ಳುವಿಕೆಯನ್ನೇ ಜೀವನದ ಪರಮ ಧ್ಯೇಯವನ್ನಾಗಿಸಿತು. ಎಷ್ಟಿದ್ದರೂ ಅಭದ್ರ ಭಾವ, ಅತೃಪ್ತಿಯ ಮನಃಸ್ಥಿತಿಯನ್ನು ಮೂಡಿಸಿತು. ಸ್ವರ್ಗದೆಡೆಗೆ ಸಾಗುತ್ತೇವೆಂದು ಭ್ರಮಿಸಿ ತ್ರಿಶಂಕು ಸ್ವರ್ಗ ಸೃಷ್ಟಿಸುವಲ್ಲಿ ಮಾರುಕಟ್ಟೆ ಪ್ರೇರಿತ ಮನಸ್ಸು ದೊಡ್ಡ ಕೊಡುಗೆ ನೀಡಿದೆ.

ಸತ್ತ, ಶಂಕಿತ, ಸೋಂಕಿತರ ಲೆಕ್ಕ ದಿನ ದಿನವೂ ಸಿಗುತ್ತಿದೆ. ಆದರೆ ಜನಜೀವನದಲ್ಲಿ ಉಂಟಾದ ತಲ್ಲಣದ ಸೋಂಕು ದೊಡ್ಡ ಪ್ರಮಾಣದಲ್ಲಿ ಇದೆ. ಕಂಪನಿಯಲ್ಲಿ ವೇತನ ಅರ್ಧಕ್ಕೆ ಕುಸಿಯಿತೆಂದು ಚಿಂತಿತರಾಗಿ ಮಾನಸಿಕವಾಗಿ ಕುಸಿದ ಮುಖಗಳು ಕಾಣಸಿಗುತ್ತಿವೆ. ಹಸಿವನ್ನು ಮೆಟ್ಟಿ ನಿಂತು ಬಾಳಿ ತೋರಿಸಿದ ಅನಕ್ಷರಸ್ಥರ ಇತಿಹಾಸ ನಮ್ಮೆದುರು ಇರುವಾಗ, ಹೊಟ್ಟೆ ಬಟ್ಟೆಗೆ ಯಾವ ಕೊರತೆಯೂ ಇಲ್ಲದಿದ್ದರೂ ಈ ವಿದ್ಯಾವಂತನನ್ನು ಕುಸಿಯವಂತೆ ಮಾಡಿದ ವೈರಸ್ ಯಾವುದು?

ಮಾರುಕಟ್ಟೆ ಎಂಬ ವೈರಸ್ ಕೊಂಡುಕೊಳ್ಳುವಂತೆ ಪ್ರೇರೇಪಿಸುತ್ತಾ, ಅತೃಪ್ತಿಪಡಿಸುತ್ತಾ, ಹೋಲಿಸುತ್ತಾ, ತನ್ನ ಶಕ್ತಿ ಮೀರಿ ವ್ಯಯಿಸುವಂತೆ ಮಾಡುತ್ತಾ ವಸ್ತು ಸಾಮ್ರಾಜ್ಯದ ಮಧ್ಯೆ ಮನುಷ್ಯನನ್ನು ಬರಿದುಗೊಳಿಸುತ್ತಾ ಬಂತು. ಈ ಕಾಲದ ಈ ಮಹಾಮಾರಿಯು ಸುತ್ತಲಿನ ದಿನಗೂಲಿಯವನನ್ನೂ ಬಿಡಲಿಲ್ಲ. ಮಾರುಕಟ್ಟೆಯ ಒಳಸುಳಿಗೆ ಅವನೂ ಬಾಧಿತನಾದವನೆ.

ಅನೇಕರದ್ದು ಮನೆ ಮತ್ತು ಮದುವೆಯ ಅನುತ್ಪಾದಕ ಅಧಿಕ ವೆಚ್ಚ. ತಾನು ಇರುವ ಸ್ಥಿತಿಗಿಂತ ಹೆಚ್ಚು ಕಾಣಬೇಕೆಂಬ ಒಳತುಡಿತವೇ ಅವರನ್ನು ಸೋಲಿಸಿದೆ. ಸರ್ಕಾರದ ಸಹಾಯದಿಂದ ಮನೆ ಪಡೆದವ ಆ ಮೊತ್ತಕ್ಕನುಸಾರ ಮನೆ ಕಟ್ಟುವುದಿಲ್ಲ. ಅವನ ಕನಸು ದೊಡ್ಡದಾಗಿರುತ್ತದೆ. ಅರ್ಧದಲ್ಲಿ ನಿಂತ ಮನೆಯನ್ನು ಸ್ವಸಹಾಯ ಸಂಘದ ಸಾಲ ಒಂದಿಷ್ಟು ಮುಂದೆ ಕೊಂಡುಹೋಗುತ್ತದೆ. ಅದೂ ಸಾಕಾಗುವುದಿಲ್ಲ. ಸಿಕ್ಕಲ್ಲೆಲ್ಲಾ ಪಡೆದು ಮನೆ ಕಟ್ಟಿ ದಿನಾಲೂ ಆ ಮನೆಯಲ್ಲಿ ಬೇಯುತ್ತಿರುತ್ತಾನೆ. ಮಾರುಕಟ್ಟೆಯ ಈ ಮಾಯಾಜಾಲ ಕೇವಲ ಸರಕುಗಳ ವಿಕ್ರಯಕ್ಕೆ ಸೀಮಿತಗೊಂಡಿಲ್ಲ. ಶಿಕ್ಷಣ, ಆರೋಗ್ಯ ಕ್ಷೇತ್ರವನ್ನೂ ಆವರಿಸುತ್ತಲೇ ಬಂದಿದೆ. ಇಂತಹ ಮಾರುಕಟ್ಟೆಯ ವಿಷಜಾಲದಿಂದ ಪಾರಾಗಲು ಮನುಷ್ಯನಿಗೆ ಉದ್ಯೋಗ - ಉದ್ದಿಮೆಯ ಸ್ವಾವಲಂಬನೆ ಮಾತ್ರ ಸಾಲದು ಎಂಬುದು ಮನವರಿಕೆಯಾಗಿದೆ.

ಇದನ್ನು ಕಲಿಸಿಕೊಡಬೇಕಾದ ಶಿಕ್ಷಣ ವ್ಯವಸ್ಥೆಯೂ ದುರದೃಷ್ಟವಶಾತ್ ತನ್ನನ್ನು ಸೀಮಿತಗೊಳಿಸಿಕೊಂಡಿದೆ.ಅಧ್ಯಾತ್ಮ ಕೇಂದ್ರಗಳಾಗಬೇಕಾದ ದೇಗುಲಗಳೂ ಮಾರುಕಟ್ಟೆಯ ಪ್ರಭಾವದಿಂದ ಮುಕ್ತವಾಗಿಲ್ಲದಿರುವುದು ದುರಂತ. ಅಧ್ಯಾತ್ಮಕ್ಕಿಂತ ಅಲ್ಲಿಯೂ ಸ್ಥಾವರ, ಉತ್ಸವಗಳು ಹೆಚ್ಚುತ್ತಿರುವುದು ವಿಪರ್ಯಾಸ. ದೇಗುಲದ ಬಾಗಿಲು ಮುಚ್ಚಿದ್ದನ್ನು ಕಾಣುವಾಗ, ನಿಸರ್ಗದ ಕಲ್ಲು, ಮರ ಕಿತ್ತು ರೂಪಿಸಿದ ಮಂದಿರ ತನಗೆ ಬೇಡ ಎಂಬ ಸಂದೇಶವನ್ನು ದೇವರು ರವಾನಿಸಿದಂತೆ ಭಾಸವಾಗುತ್ತಿದೆ. ರಾಜಕಾರಣ ಎಂಬುದು ಸಮಾಜ ಸೇವೆಯಾಗಿ ಉಳಿದಿಲ್ಲ. ಅದು ಸಾಮಾಜಿಕ ಗೌರವ ಹಾಗೂ ಸಂಪತ್ತು ಏಕಕಾಲದಲ್ಲಿ ಬರುವ ಸುಲಭದ ದಾರಿಯಾಗಿದೆ. ಪ್ರಜಾಪ್ರಭುತ್ವದ ಆಶಯವೂ ಮಂಕಾಗುತ್ತಿದೆ.

ಇಂತಹ ವಿಪರೀತ ವಾತಾವರಣದಿಂದ ಪಾರಾಗಲು ಆರ್ಥಿಕ ಸ್ವಾವಲಂಬನೆಯಷ್ಟೇ ಸಾಲದು. ಸ್ವಾಯತ್ತಪ್ರಜ್ಞೆಯೂ ಬೇಕು. ಮಾರುಕಟ್ಟೆಯ ಬಹುರೂಪದಂತಿರುವ ಯಾವ ವ್ಯವಸ್ಥೆಯಿಂದಲೂ ಅದನ್ನು ನಿರೀಕ್ಷಿಸುವುದು ಅಸಾಧ್ಯ. ಸ್ವಾಯತ್ತಪ್ರಜ್ಞೆಯೊಂದೇ ಪಾರಾಗುವ ದಾರಿ. ಆ ದಾರಿ ಗ್ರಹಿಸಿದಷ್ಟು ಸುಲಭವಲ್ಲ. ಮಾರುಕಟ್ಟೆಯ ಬಹುರೂಪಗಳು ವಿಚಲಿತಗೊಳಿಸುತ್ತಲೇ ಇರುತ್ತವೆ, ಆ ದಾರಿಯಲ್ಲಿ ಸಾಗದಂತೆ ಮಾಡುತ್ತವೆ. ದುರ್ಬಲ ಮನಸ್ಕರ ಜೊತೆಗೂಡಿಯೇ ಸಾಗಬೇಕಾದ ಸವಾಲು ಇದೆ. ಆದರೂ ಸ್ವಾವಲಂಬನೆಯೊಂದಿಗೆ ಸ್ವಾಯತ್ತಪ್ರಜ್ಞೆಯು ವ್ಯಕ್ತಿಯನ್ನು, ಮಾನವ ಜಗತ್ತನ್ನು ಕಾಪಾಡಬಹುದು. ಇಲ್ಲದೇ ಇದ್ದರೆ ಮಾನವನೇ ಸೃಷ್ಟಿಸಿದ ‘ಕಾಣದ ವೈರಸ್‍’ಗಳು ನಮ್ಮನ್ನು ಕೊಂದು ಇಲ್ಲವೇ ಕೊಲ್ಲದೆಯೂ ತಿನ್ನುತ್ತಲೇ ಇರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.