ADVERTISEMENT

ಸಂಗತ | ವಾಸ್ತು ದೋಷ: ಕೊಟ್ಟಿಗೆಯನ್ನೂ ಬಿಟ್ಟಿಲ್ಲ!

ಡಾ.ಮುರಳೀಧರ ಕಿರಣಕೆರೆ
Published 16 ಮಾರ್ಚ್ 2023, 22:50 IST
Last Updated 16 ಮಾರ್ಚ್ 2023, 22:50 IST
   

ಆ ರೈತರ ದನದ ಕೊಟ್ಟಿಗೆ ನೋಡುತ್ತಿದ್ದಂತೆಯೇ ಅಚ್ಚರಿಯಾಗಿತ್ತು. ಹೋದ ವರ್ಷವಷ್ಟೆ ವಾಸದ ಮನೆಯ ಜೊತೆಯಲ್ಲಿ ಹೊಸ ಕೊಟ್ಟಿಗೆಯನ್ನೂ ಕಟ್ಟಿಸಿಕೊಂಡಿದ್ದರು. ಮನೆಯ ಒಂದು ಪಕ್ಕದಲ್ಲಿದ್ದ ಹಟ್ಟಿ ಈಗ ಹಠಾತ್ತನೆ ಹಿಂಭಾಗಕ್ಕೆ ಸ್ಥಳಾಂತರಗೊಂಡಿದೆ!

ಗಾಳಿ, ಬೆಳಕು ಧಾರಾಳವಿರುವಂತೆ ಅಷ್ಟು ಅಚ್ಚುಕಟ್ಟಾಗಿ ಕಟ್ಟಿದ್ದ ಕೊಟ್ಟಿಗೆಯನ್ನು ಕಿತ್ತಿದ್ದೇಕೆ ಎಂಬ ನನ್ನ ಕುತೂಹಲದ ಪ್ರಶ್ನೆಗೆ ಅವರು ಕೊಟ್ಟ ವಿವರಣೆ ಕೇಳಿ, ಆ ಮೌಢ್ಯಕ್ಕೆ ಮನಸ್ಸು ಅದುರಿತ್ತು.

‘ಹೊಸ ಕೊಟ್ಗೆ ಕಟ್ಟಿದ್ಮೇಲೆ ಏಳ್ಗೆನೇ ಇಲ್ಲ. ಪೆಟ್ಟಿನ ಮೇಲೆ ಪೆಟ್ಟು. ದನ ಕರುಗಳೆಲ್ಲಾ ಸೋಲ್ತನೇ ಇವೆ. ಒಂದೆರಡು ದನಗಳು ಒಣ್ಗಿ ಒಣ್ಗಿ ಹೋಗೇ ಬಿಟ್ವು. ಜೊತೆಗೆ ವಿಪ್ರೀತ ವಣಗಿನ ಕಾಟ. ಆಮೇಲೆ ಗಂಟು ರೋಗನೂ ಬಂತು. ತಡ್ಯಕ್ಕೆ ಆಗ್ದೆ ಗಣದ ಹತ್ರ ಕೇಳ್ಸಿದ್ರೆ, ಕೊಟ್ಗೆ ಜಾಗನೇ ಆಗಿ ಬರಲ್ಲಂತೆ! ಹೀಗೇ ಇದ್ರೆ ಗೋ ಸಂತಾನನೇ ಉಳ್ಯಲ್ಲ ಅಂತು. ಅದಕ್ಕೇ ತಿಂಗಳ ಹಿಂದೆ ಆ ಕೊಟ್ಗೆ ಕಿತ್ತು ಹಿಂದಕ್ಕೆ ಹಾಕಿಸ್ದೆ. ಖರ್ಚಿನ ಮೇಲೆ ಖರ್ಚು. ಕೈಯೆಲ್ಲಾ ಖಾಲಿ’ ಎಂದರು ನೋವಿನಿಂದ ಆ ಕೃಷಿಕರು.

ADVERTISEMENT

‘ಯಜಮಾನ್ರೆ, ಪ್ರಶ್ನೆ ಕೇಳ್ಸಿ ಕೊಟ್ಗೆ ಬದಲಾಯಿಸಿದ್ರೂ ಮತ್ತೆ ನಿಮ್ ದನಕ್ಕೆ ಹುಷಾರಿಲ್ವಲ್ಲಾ’ ಎಂಬ ನನ್ನ ಲಘು ಉದ್ಗಾರಕ್ಕೆ ‘ಎಂಥ ಮಾಡದು ಸ್ಸಾ? ಎಲ್ಲಾ ನಮ್ ಗ್ರಾಚಾರ’ ಎನ್ನುತ್ತಾ ಮುಖ ಸಣ್ಣಗೆ ಮಾಡಿಕೊಂಡರು!

ಆ ರೈತರ ಸಮಸ್ಯೆಗೆ ಕಾರಣ ಹುಡುಕಲು ದೊಡ್ಡ ತನಿಖೆಯೇನೂ ಬೇಕಿರಲಿಲ್ಲ. ಹಿಂದೆ ಕೊಟ್ಟಿಗೆಯ ಜವಾಬ್ದಾರಿಯನ್ನು ಪೂರಾ ನಿಭಾಯಿಸುತ್ತಿದ್ದುದು ಅವರ ಹೆಂಡತಿ. ಹಸಿ ಹುಲ್ಲು ಕೊಯ್ದು ಹಾಕೋದು, ಕಲಗಚ್ಚು ಕೊಡೋದು, ಮೈ ತೊಳೆಯೋದು ಅಂತೆಲ್ಲಾ ತಮ್ಮ ಏಳೆಂಟು ಹಸುಗಳ ಆರೈಕೆಯನ್ನು ತುಂಬಾ ಮುತುವರ್ಜಿಯಿಂದ ಮಾಡುತ್ತಿದ್ದರು. ಒಂದು ವರ್ಷದಿಂದ ಅವರ ಆರೋಗ್ಯದಲ್ಲಿ ಏರುಪೇರಾಗಿ ಕೊಟ್ಟಿಗೆ ಕೆಲಸ ನಿಲ್ಲಿಸಿದ್ದರು. ಹೊತ್ತು ಹೊತ್ತಿಗೆ ಸರಿಯಾಗಿ ನೀರು, ಮೇವಿಲ್ಲದ ರಾಸುಗಳು ಸಹಜವಾಗಿಯೇ ಸೊರಗಿದ್ದವು. ಹೀಗೆ ನಿರ್ವಹಣೆಯಲ್ಲಿದ್ದ ದೋಷವು ಮೌಢ್ಯದ ಕಾರಣದಿಂದಾಗಿ ಜಾಗದ ಮೇಲೆ ತಿರುಗಿ ಮಾನಸಿಕವಾಗಿ, ಆರ್ಥಿಕವಾಗಿ ಮತ್ತಷ್ಟು ಪೆಟ್ಟು ಕೊಟ್ಟಿತ್ತು!

ಹೌದು, ವೈಚಾರಿಕತೆ, ವೈಜ್ಞಾನಿಕ ಮನೋಭಾವಕ್ಕಿಂತ ಗೊಡ್ಡು ನಂಬಿಕೆಗಳಿಗೆ ಜೋತು ಬಿದ್ದಿರುವ ಗೋಪಾಲಕರ ಸಂಖ್ಯೆಯೇ ಅಧಿಕ. ಪಾಲನೆ- ಪೋಷಣೆಯಲ್ಲಿನ ನ್ಯೂನತೆಗಳು, ಹವಾಮಾನ ವೈಪರೀತ್ಯ, ಸಾಂಕ್ರಾಮಿಕ ರೋಗಗಳ ಕಾರಣದಿಂದ ತಲೆದೋರುವ ಆರೋಗ್ಯ ಸಮಸ್ಯೆಗಳನ್ನು ಜಾಗದ ತೊಂದರೆಯೆಂದು ಬಗೆದು ಹೈರಾಣಾಗುವವರು ಹಲವರು. ನಾಗನೆಡೆ, ವಾಸ್ತು ದೋಷ, ಮಾಟ-ಮಂತ್ರ, ರಣದ ಕಾಟ, ದೈವದ ಶಾಪ ಎಂಬಂತಹ ಹಣೆಪಟ್ಟಿಯಿಂದಾಗಿ ಮತ್ತಷ್ಟು ಹೆದರುವ ಈ ದುರ್ಬಲ ಮನಸಿಗರು ಪರಿಹಾರಕ್ಕಾಗಿ ಎಡತಾಕುವುದು ಇಂತಹ ಕಂದಾಚಾರಗಳ ಜನಕರು, ಪ್ರಚಾರಕರು, ಪ್ರಾಯೋಜಕರನ್ನು!

ಪೂಜೆ, ಶಾಂತಿ, ಹೋಮ, ಹರಕೆ, ದಿಗ್ಬಂಧನ, ಮನೆ ಕೊಟ್ಟಿಗೆಗಳ ಗೋಡೆ, ಬಾಗಿಲು ಒಡೆಯುವುದು, ಪೂರ್ಣವಾಗಿ ಬೀಳಿಸಿ ಮತ್ತೊಂದು ದಿಕ್ಕಿನಲ್ಲಿ ಕಟ್ಟುವುದು... ಹೀಗೆ ಸಮಸ್ಯೆಯಿಂದ ಮುಕ್ತರಾಗಲು ಹೇರಲ್ಪಡುವ ಪರಿಹಾರಗಳು ಹಲವು. ಯಾವುದೂ ಫಲಿತಾಂಶ ಕೊಡದಾಗ ತಮ್ಮ ಗ್ರಹಚಾರವೇ ನೆಟ್ಟಗಿಲ್ಲ ಎಂದು ಖಿನ್ನತೆಗೆ ಜಾರುತ್ತಾರೆ. ಆರ್ಥಿಕವಾಗಿಯೂ ಇನ್ನಷ್ಟು ಸಂಕಷ್ಟಕ್ಕೆ ಸಿಕ್ಕಿ ನಲುಗುತ್ತಾರೆ.

ವಾಸ್ತವವಾಗಿ ವಾಸ್ತುವೆಂಬುದು ಪ್ರಕೃತಿಯೊಂದಿಗೆ ಸಾಮರಸ್ಯ ಸಾಧಿಸುವ ರೀತಿಯಲ್ಲಿ ಕಟ್ಟಡಗಳನ್ನು ನಿರ್ಮಿಸುವ ವಿಜ್ಞಾನ. ವಾಸಸ್ಥಳಗಳನ್ನು ಪ್ರಯೋಜನ ಕಾರಿಯಾಗಿ ಕಟ್ಟಿಕೊಳ್ಳಲು ಸಹಾಯ ಮಾಡುವ ಕಲೆ. ಹಾಗಾಗಿ ಮನೆ-ಕೊಟ್ಟಿಗೆಗಳನ್ನು ಕಟ್ಟುವಾಗ ನಿಸರ್ಗದ ನಿಯಮಗಳನ್ನು ಅರಿತು ಅಳವಡಿಸಿಕೊಳ್ಳುವುದು ಅವಶ್ಯ. ಗಾಳಿ, ಬೆಳಕು ಉತ್ತಮವಿರುವಲ್ಲಿ ರೋಗಾಣು, ಕೀಟಗಳ ಬಾಧೆ ಕಮ್ಮಿ. ಇಂತಹ ವಾತಾವರಣವಿದ್ದಾಗ ಜನ, ಜಾನುವಾರುಗಳ ಮನಃಸ್ಥಿತಿಯೂ ಚೆನ್ನಾಗಿರುತ್ತದೆ. ಕಟ್ಟಡ ನಿರ್ಮಿಸುವಾಗ ಪರಿಗಣಿಸಬೇಕಿರುವುದು ಬಿಸಿಲು, ತಂಪು, ಗಾಳಿಯ ಚಲನೆಯ ದಿಕ್ಕು, ಮಳೆ ನೀರಿನ ಹೊಡೆತ, ಹರಿವಿನಂತಹ ಅಂಶಗಳನ್ನು. ಸೂರ್ಯರಶ್ಮಿ, ಶಾಖವು ಹಸುಗಳ ಸ್ವಾಸ್ಥ್ಯಕ್ಕೆ ಅತ್ಯಗತ್ಯವಾದ್ದರಿಂದ ಕೊಟ್ಟಿಗೆಯ ಉದ್ದ ಭಾಗವು ಉತ್ತರ-ದಕ್ಷಿಣ ದಿಕ್ಕಿನಲ್ಲಿ ಇರಬೇಕಿರುವುದು ಸರಳ ವಾಸ್ತುವಿನ ಒಂದು ಅಂಶ. ಅದೇ ಕೋಳಿಗಳು ಬಿಸಿಲಿನ ತಾಪವನ್ನು ಸಹಿಸದ ಕಾರಣ ಕೋಳಿಮನೆಗಳು ಪೂರ್ವ- ಪಶ್ಚಿಮವಾಗಿ ಚಾಚಿಕೊಂಡಿರಬೇಕು.

ನಮ್ಮ ಸಾಂಪ್ರದಾಯಿಕ ಕೊಟ್ಟಿಗೆಗಳಲ್ಲಿ ಹೆಚ್ಚಿನವು ಕತ್ತಲ ಕೂಪಗಳು. ಇಂತಹ ಪರಿಸರವು ರೋಗಾಣು, ಉಣ್ಣೆಯಂತಹ ಪೀಡೆಗಳ ಸಂತಾನೋತ್ಪತ್ತಿಗೆ ಹೇಳಿ ಮಾಡಿಸಿದಂತಹ ಸ್ಥಳ. ಮಾನಸಿಕವಾಗಿಯೂ ಒತ್ತಡಕಾರಿ. ಹಾಗಾಗಿ ರೋಗ ಬಾಧೆಗಳೂ ಹೆಚ್ಚು. ಸುತ್ತ ಕೊಚ್ಚೆ, ನೀರು ನಿಲ್ಲದಂತೆ ಕೊಟ್ಟಿಗೆ ತುಸು ಎತ್ತರದ ಜಾಗದಲ್ಲಿದ್ದರೆ ಸೊಳ್ಳೆಗಳ ಕಾಟಕ್ಕೂ ಕಡಿವಾಣ ಸಾಧ್ಯ.

ವೈಯಕ್ತಿಕ, ಕೌಟುಂಬಿಕ, ಸಾಮಾಜಿಕ, ವೃತ್ತಿ ಬದುಕಿನಲ್ಲಿ ಸಮಸ್ಯೆಗಳು ಬರುವುದು ಸಹಜ. ನಿಜ ಕಾರಣಗಳನ್ನು ಅರಿಯದೆ ಇದಕ್ಕೆಲ್ಲಾ ವಾಸ್ತು ದೋಷ, ಜಾತಕ ಕಂಟಕ ಎಂದೆಲ್ಲಾ ಪರಿಹಾರ ಹುಡುಕುತ್ತಾ ಹೊರಟರೆ ಬವಣೆ ಖಂಡಿತಾ ತೀರದು. ಮಾನಸಿಕವಾಗಿ ಕುಗ್ಗುವುದು ದೈಹಿಕ ತೊಂದರೆಗಳಿಗೂ ಮೂಲ. ಜೊತೆಗಾಗುವ ಆರ್ಥಿಕ ಹೊಡೆತ. ಹಾಗಾಗಿ ಕಂದಾಚಾರಗಳ ಸುಳಿಯಲ್ಲಿ ಸಿಕ್ಕಿಬೀಳದಂತೆ ಎಚ್ಚರ ವಹಿಸುವುದು ಮೇಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.